Hurry up! before its gone. Grab the BESTSELLERS now.
Hurry up! before its gone. Grab the BESTSELLERS now.

Revati Patil

Classics Inspirational Others


3  

Revati Patil

Classics Inspirational Others


ಮಮತಾಮಯಿ 6

ಮಮತಾಮಯಿ 6

2 mins 143 2 mins 143


ಶಾರದೆಯ ಬಾಯಿಯಿಂದ ಅನಿರೀಕ್ಷಿತವಾಗಿ ಬಂದ ಸೀತೆಯ ಹೆಸರು ಸೋಮಣ್ಣನನ್ನು ಕ್ಷಣಕಾಲ ವಿಚಲಿತನಾಗುವಂತೆ ಮಾಡಿತು. ಸೋಮಣ್ಣ ಅಲ್ಲಿದ್ದ ಸಮಯ, ಸಂಧರ್ಭ ಎಲ್ಲವನ್ನೂ ಮರೆತು ಸೀತೆಯ ಹುಡುಕಾಟದಲ್ಲಿ ಕಳೆದುಹೋದ.


ಸೀತೆ, ಈ ಮಮತಾಮಯಿ ಕಥೆಯ ನಿಜವಾದ ಕಥಾನಾಯಕಿ. ಸೋಮಣ್ಣನ ಮೊದಲ ಪತ್ನಿ ಸೀತಾ. ಹಿರಿಯರೊಪ್ಪಿ ನೋಡಿ ಮಾಡಿದ ಮದುವೆ ಇದಾಗಿತ್ತು. ಸೋಮಣ್ಣನಿಗೂ ಸೀತಾ ಇಷ್ಟವಾಗಿದ್ದಳು. ಎರಡು ಕುಟುಂಬದವರು ಸಂಪೂರ್ಣ ಮನಸ್ಸಿನಿಂದ ಮದುವೆಗೆ ಸಾಕ್ಷಿಯಾಗಿದ್ದರು.


ಒಬ್ಬಳೇ ಮಗಳು ಸೀತಾ. ಮದುವೆಯಾಗಿ ಖುಷಿಯಿಂದಲೇ ಗಂಡನ ಮನೆಗೆ ಬಲಗಾಲಿಟ್ಟು ಬಂದಿದ್ದಳು. ಸೋಮಣ್ಣ ಕೂಡ ಆ ಮನೆಗೆ ಒಬ್ಬನೇ ಮಗನಾದ್ದರಿಂದ ಅತ್ತೆ, ಮಾವ, ಸಂಬಂಧಿಕರೆಲ್ಲ ಸೀತಾಳಿಂದ ವಂಶೋದ್ಧಾರಕನ ನಿರೀಕ್ಷೆಯಲ್ಲಿದ್ದರು. ಸೀತಾ ಕೂಡ ಮಕ್ಕಳು ತಡವಾಗಿ ಆಗಲಿ ಎನ್ನುವ ಯೋಚನೆಯಲ್ಲಿ ಇರಲಿಲ್ಲ, ಬಂದ ಹಾಗೆ ಜೀವನ ಸ್ವೀಕರಿಸುವುದು ಅವಳ ಸ್ವಭಾವ.


ಸೀತಾ ಗಂಡನ ಮನೆಗೆ ಬಂದು ಒಂದೇ ವಾರಕ್ಕೆಲ್ಲ ಮನೆಯವರೊಂದಿಗೆ ಹೊಂದಿಕೊಂಡಳು. ಬೆಳಿಗ್ಗೆ ಎಲ್ಲರಿಗೂ ಮೊದಲೇ ಎದ್ದು ಮನೆಯನ್ನೆಲ್ಲ ಒಪ್ಪ ಓರಣವಾಗಿಟ್ಟು, ಬಾಗಿಲಿಗೆ ರಂಗೋಲಿಯಿಟ್ಟು, ಪೂಜಾದಿಗಳನ್ನು ಮುಗಿಸಿ ರುಚಿಕಟ್ಟಾದ ಅಡುಗೆ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದಳು. ಹೀಗೆ ವರುಷ ಉರುಳಿತು. ಸಹಜವಾಗಿ ಎಲ್ಲರ ಚಿತ್ತ ಸೀತಾ, ಸೋಮಣ್ಣನ ಕಂದನತ್ತ ಇತ್ತು. ಆದರೆ ಸೀತೆಗೇಕೋ ಸಂತಾನ ಭಾಗ್ಯ ದೊರಕಲಿಲ್ಲ. ಸೀತಾ ಮಾತ್ರ ನೊಂದುಕೊಂಡಿರಲಿಲ್ಲ, ಇಂದಲ್ಲ ನಾಳೆ ಮಕ್ಕಳಾಗಬಹುದು, ಆಗದೇ ಇದ್ದರೂ ಅದಕ್ಕೂ ಮಾನಸಿಕವಾಗಿ ಗಟ್ಟಿಯಿರಲು ತನ್ನನ್ನು ತಾನು ಸಿದ್ಧಮಾಡಿಕೊಂಡಿದ್ದ ಪ್ರಬುದ್ಧ ಮಹಿಳೆ ಸೀತಾ.


ಹೀಗೆ ಎರಡು ವರ್ಷ ಮುಗಿದಿತ್ತು. ಸೀತೆಯನ್ನು ಮೆಚ್ಚಿದ್ದವರೆಲ್ಲ ಈಗ ಅವಳನ್ನು ತಾತ್ಸಾರ ಮಾಡತೊಡಗಿದರು. ಸ್ವತಃ ಗಂಡನಾಗಿ ಸೋಮಣ್ಣನೇ ಹೆಂಡತಿಯ ಭಾವನೆಗಳನ್ನು ಅರಿಯುವಲ್ಲಿ ವಿಫಲನಾದ. ಮನೆತನ ಮುಂದುವರೆಸಲು ಒಬ್ಬ ವಾರಸುದಾರ ಬೇಕೆನ್ನುವುದು ಸೋಮಣ್ಣನ ವಾದ. ಪ್ರಯತ್ನಿಸಿದರೂ ಮಕ್ಕಳಾಗದ್ದಕ್ಕೆ ತನ್ನೊಬ್ಬಳನ್ನೇ ಹೊಣೆ ಮಾಡುವುದೇಕೆ ಎನ್ನುವುದು ಸೀತಾಳ ಪ್ರಶ್ನೆ.


ಇಂತಹ ವಾದ -ವಿವಾದಗಳಿಂದ ದಿನವೂ ಮನೆಯಲ್ಲಿ ನೆಮ್ಮದಿ ಇಲ್ಲದಂತಾಯಿತು. ಬೋರಮ್ಮಜ್ಜಿಯ ಸಲಹೆಯತೆ ಅದೆಷ್ಟೋ ಪೂಜೆ, ವೃತಗಳನ್ನು ಮಾಡಿ ಎಷ್ಟೆಷ್ಟೋ ಗುಡಿಗಳನ್ನು ಸುತ್ತಿ, ಎಷ್ಟೆಷ್ಟೋ ಮರಗಳಿಗೆ ತೊಟ್ಟಿಲು ಕಟ್ಟಿ ತೂಗಿಯಾಗಿತ್ತು. ಆದರೂ!

ವೈದ್ಯಕೀಯ ಚಿಕಿತ್ಸೆಗಳನ್ನು ಆ ಮನೆಯೆಂದೂ ನಂಬಿರಲೇ ಇಲ್ಲ ಅದಕ್ಕೂ ಮುಖ್ಯ ಕಾರಣ ಇತ್ತು. ಅದೇನೆಂದರೆ ತಮ್ಮ ಮಗನಿಗೇನಾದರೂ ಸಮಸ್ಯೆ ಇದೆ ಎಂದು ರಿಪೋರ್ಟ್ ಬಂದರೆ ಊರಲ್ಲಿ ತಮ್ಮ ಮರ್ಯಾದೆ ಹೋಗುವುದು ಎನ್ನುವ ಭಯವೂ ಅವರನ್ನು ಕಾಡಿತ್ತು. ಅದಕ್ಕಾಗಿ ಅವರ ನಂಬಿಕೆಗಳು ಗುಡಿ ಗೋಪುರಗಳಿಗಷ್ಟೇ ಸೀಮಿತಗೊಳಿಸಿದ್ದರು.


ಆದರೆ ಕೊನೆಗೆ ತನ್ನನ್ನು ಬಂಜೆ ಎಂದಾಗ ಸೀತಾ ನೋಡುವವರೆಗೂ ನೋಡಿ ಸಿಡಿದೆದ್ದಿದ್ದಳು. ಒಂದುವೇಳೆ ವರದಿಯಲ್ಲಿ ಈ ಮನೆಯ ಘನತೆ ಕಡಿಮೆಯಾಗುವ ಅಂಶಗಳಿದ್ದರೆ ತಾನು ತನ್ನ ಗಂಡನ ಮರ್ಯಾದೆಗೆ ಬದ್ಧಳಾಗಿ ನಿಲ್ಲುತ್ತೆನೆ ಎಂದು ವಚನ ಕೊಟ್ಟ ಮೇಲೆಯೇ ಸೋಮಣ್ಣ ಸೀತಾಳನ್ನು ನಂಬಿ ಅವಳೊಂದಿಗೆ ಆಸ್ಪತ್ರೆಗೆ ಹೋಗಿದ್ದ.


ಹೀಗೆ ಹಲವು ಭೇಟಿಗಳ ಫಲವಾಗಿ ಅಂತೂ ಸೀತಾ ಗರ್ಭಿಣಿ ಆಗಿದ್ದಳು. ಮನೆಯವರಿಗೆ ಸಮಸ್ಯೆ ಯಾರದ್ದು ಎನ್ನುವ ಚಿಕ್ಕ ಸುಳಿವು ಸಹ ಸೋಮಣ್ಣ, ಸೀತಾ ಬಿಟ್ಟು ಕೊಟ್ಟಿರಲಿಲ್ಲ.


ಸೀತಾಳ ಪ್ರತೀ ತ್ರೈಮಾಸಿಕಗಳು ಜಾಗರೂಕತೆಯಿಂದ ನಡೆಯಿತು. ಮನೆಯವರೆಲ್ಲರೂ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಸೋಮಣ್ಣ ಕೂಡ ತನಗೆ ಹುಟ್ಟುವುದು ಗಂಡು ಮಗುವೆಂದೆ ಭಾವಿಸಿದ್ದ. ಆದರೆ ಸೀತಾ ಮಾತ್ರ ಬಹಳ ದಿನಗಳ ನಂತರ ಗರ್ಭ ಧರಿಸಿದ್ದರಿಂದ ಆ ತಾಯ್ತನದ ಮಹತ್ವ ಅರಿತಿದ್ದಳು. ಹುಟ್ಟುವ ಮಗು ಹೆಣ್ಣಾಗಲಿ, ಗಂಡಾಗಲಿ ಆರೋಗ್ಯವಂತ ಮಗುವೊಂದು ಮಡಿಲು ಸೇರಲಿ ಎಂದು ಪ್ರಸವಕ್ಕೆ ಸಿದ್ಧವಾಗಿದ್ದಳು. ಮನೆದೇವರಿಗೆಲ್ಲ ನಮಿಸಿ, ಹಿರಿಯರ ಆಶೀರ್ವಾದ ಪಡೆದು ಆಸ್ಪತ್ರೆಗೆ ದಾಖಲಾದಳು ಸೀತಾ.


ಸೀತಾ ಹೆತ್ತಿದ್ದು ಗಂಡು ಮಗುವನ್ನೊ? ಹೆಣ್ಣು ಮಗುವನ್ನೊ?


(ಮುಂದಿನ ಭಾಗದಲ್ಲಿ ನಿರೀಕ್ಷಿಸಿ )


Rate this content
Log in

More kannada story from Revati Patil

Similar kannada story from Classics