Revati Patil

Classics Inspirational Others

3  

Revati Patil

Classics Inspirational Others

ಮಮತಾಮಯಿ 5

ಮಮತಾಮಯಿ 5

2 mins
174


ಸೋಮಣ್ಣ- ಶಾರದಾ ದಂಪತಿಗಳ ಜೀವನದಲ್ಲಿ ಬಿರುಗಾಳಿಯೊಂದು ಸದ್ದಿಲ್ಲದೇ ಬೀಸಿತ್ತು. ಮೀನು ಹಿಡಿಯಲು ಗೆಳೆಯರೊಂದಿಗೆ ನದಿಗೆ ಹೋಗಿದ್ದ ಹಿತೇಶ ಮರಳಿ ಮನೆಗೆ ಬಂದಿದ್ದು ಹೆಣವಾಗಿ!

ಅಪ್ಪನ ಅತಿಯಾದ ಮುದ್ದಿನಿಂದ ಅಮ್ಮನ ಒಪ್ಪಿಗೆ ಪಡೆದು ಹೊರ ಹೋಗುವ ಅಭ್ಯಾಸ ಹಿತೇಶನಿಗೆ ಇರಲೇ ಇಲ್ಲ. ಅಪ್ಪ ಸಂತೆಗೆ ಹೋದಾಗ ಗೆಳೆಯರೊಂದಿಗೆ ಆಚೆ ಜಿಗಿದಿದ್ದ ಹಿತೇಶ.

‌ಇತ್ತ ಮಗನಿನ್ನು ಮನೆಗೆ ಬಂದಿಲ್ಲ ಎಂದು ಶಾರದಾ ಗೊತ್ತಿರುವ ಕಡೆಯಲ್ಲೆಲ್ಲ ಹೋಗಿ ಮಗನಿಗಾಗಿ ಹುಡುಕಾಡಿದಳು. ಏನೂ ಪ್ರಯೋಜನವಾಗದೆ ಬರಿಗೈಯಲ್ಲಿ ಮನೆಗೆ ವಾಪಸ್ಸಾದಳು.

‌ಸಂಜೆ ಸಂತೆ ಮುಗಿಸಿಕೊಂಡು ಮನೆಗೆ ಬಂದ ಸೋಮಣ್ಣ ಎರಡು ನಿಮಿಷ ಹಿತೇಶ ಕಣ್ಣಿಗೆ ಬೀಳದಿದ್ದಾಗ ವಿಚಾರಿಸಿದ. ಹಿತೇಶನಿನ್ನು ಮನೆಗೆ ಬಂದಿಲ್ಲ ಎಂಬ ಉತ್ತರ ಹೆಂಡತಿಯ ಮಾತು ಬಾಯಿಯಿಂದ ಹೊರ ಬರುವ ಮೊದಲೇ ಹೆಂಡತಿಯ ಕೆನ್ನೆಯ ಮೇಲೆ ಸೋಮಣ್ಣನ ಕೈಬೆರಳಿನ ಗುರುತು ಮೂಡಿತ್ತು!

‌ರಾತ್ರಿವರೆಗೂ ಸೋಮಣ್ಣ ತನ್ನ ಮಗನಿಗಾಗಿ ಹುಡುಕಾಡಿದಾಗ ನದಿಯ ತಟದಲ್ಲಿ ಅವನ ಒಂದು ಚಪ್ಪಲಿ, ಅವನ ಟೋಪಿ ಬಿದ್ದಿತ್ತು. ಬೆಳಗಿನವರೆಗೂ ಮಗನಿಗಾಗಿ ಹುಚ್ಚನಂತೆ ಹುಡುಕಾಡಿದಾಗ ಬೆಳಿಗ್ಗೆ ತೇಲಿ ಬಂದ ಮಗನ ಶವ ಕಂಡು ಸೋಮಣ್ಣ ಕಲ್ಲಾಗಿ ಹೋಗಿದ್ದ.

‌ಸೋಮಣ್ಣ ಅದೆಷ್ಟು ಜೋರಾಗಿ ಗೋಳಿಟ್ಟನೆಂದರೆ ಕ್ಷಣಕಾಲ ನದಿಯೂ ಭಯಗೊಂಡು ತನ್ನ ಪಾತ್ರ ಬದಲಿಸುವಂತೆ, ಹಕ್ಕಿಗಳು ಹಾರುವುದನ್ನೇ ಮರೆತು ಸೋಮಣ್ಣನ ಕೂಗಿಗೆ ಮೌನವಾದಂತೆ.

‌ಅಲ್ಲಿದ್ದ ಮೀನು ಹಿಡಿಯುವ ಮೀನುಗಾರರೆಲ್ಲ ಸೋಮಣ್ಣನಿಗೆ ಎಷ್ಟೇ ಸಮಾಧಾನ ಮಾಡಿದರೂ ಸೋಮಣ್ಣ ತನ್ನ ಮಗ ಸತ್ತಿದ್ದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.

ಎಷ್ಟೋ ದೇವರಿಗೆ ಗಂಡುಮಗುವನ್ನೇ ನೀಡೆಂದು ಹರಸಿಕೊಂಡು ಪಡೆದಿದ್ದ ಮಗುವನ್ನು ಇನ್ನೂ ಮುಂದೆ ಮರೆತು ಬದುಕುವುದು ಸೋಮಣ್ಣನಿಗೆ ಅಸಾಧ್ಯವೇ ಹೌದು. ಇರುವ ಒಬ್ಬ ಮಗ ಹುಚ್ಚ. ಅವನಿಂದ ಏನನ್ನಾದರೂ ನಿರೀಕ್ಷಿಸುವುದು ಮೂರ್ಖತನವೆಂದು ಸೋಮಣ್ಣ ತಿಳಿದಿದ್ದ.


ಈಗ ಸೋಮಣ್ಣನ ಕೋಪವೆಲ್ಲ ಹೆಂಡತಿಯ ಮೇಲೆ ವರ್ಗಾವಣೆಯಾಗಿತ್ತು. ಮಗುವಿನ ಶವವನ್ನು ಹೆಗಲ ಮೇಲೆತ್ತಿಕೊಂಡು ಸರ್ರನೇ ಮನೆಯತ್ತ ಹೆಜ್ಜೆ ಹಾಕಿದ. ಮನೆಯ ಅಂಗಳದಲ್ಲೇ ಆಗಲೇ ಐವತ್ತಕ್ಕೂ ಹೆಚ್ಚು ಜನ ಸೇರಿಯಾಗಿತ್ತು. ಹೆಂಡತಿಯನ್ನು ಹೊಡೆಯಲು ಬಂದವನಿಗೆ ಹೆಂಡತಿ ಪ್ರಜ್ಞೆ ತಪ್ಪಿ ಬಿದ್ದಿದ್ದು ನೋಡಿ ಸಂಕಟವಾಯಿತು. ಯಾರೋ ಅವಳ ಅಂಗಾಲನ್ನು ಉಜ್ಜುತ್ತಿದ್ದರು, ಬೋರಮ್ಮಜ್ಜಿ ಅವಳಿಗೆ ನೀರು ಚಿಮುಕಿಸಿ ಎಬ್ಬಿಸಲು ಪ್ರಯತ್ನಿಸುತ್ತಿದರು.

ಇತ್ತ ಲೋಕದ ಅರಿವೇ ಇಲ್ಲದಂತೆ ಲೋಕೇಶ್ ಮಲ, ಮೂತ್ರ ಮಾಡಿಕೊಂಡು ಅದರಲ್ಲೇ ಮಲಗಿದ್ದ.


ಲೊಕೇಶನನ್ನು ನೋಡಿದ ಕೂಡಲೇ ಮತ್ತೊಮ್ಮೆ ಸೋಮಣ್ಣನ ಕೋಪ ನೆತ್ತಿಗೆರಿತು. ಜನರಿದ್ದದ್ದನು ಮರೆತು ಜೋರಾಗಿ ಹೆಂಡತಿಯೆಡೆಗೆ

"ಲೇ, ಶಾರದಾ, ಈ ಹಿತೇಶ ಸಾಯೋ ಬದಲು ಆ ಅನಿಷ್ಟ ಆದ್ರೂ ಸತ್ತಿದ್ದಿದ್ರೆ ಎಷ್ಟೋ ನೆಮ್ಮದಿ ಆದ್ರೂ ಸಿಕ್ಕಿರೋದು. ಈ ಅನಿಷ್ಟ ನೋಡ್ಕೊಳೋ ಭರದಲ್ಲಿ ನನ್ನ ಮಗನ್ನೇ ನೀನು ಅಲಕ್ಷ್ಯ ಮಾಡ್ಬಿಟ್ಟೆ, ಹಿತೇಶನ ಕೊಂದಿದ್ದು ನೀನೇ " ಎಂದು ಕೂಗಾಡಿದ.


ಸೋಮಣ್ಣನ ಕೋಪವನ್ನು ಅಲ್ಲಿದ್ದ ಜನರೆಲ್ಲ ಸೇರಿ ತಣ್ಣಗೆ ಮಾಡಲು ಪ್ರಯತ್ನಿಸಿದರು. ಅಷ್ಟೂ ಹೊತ್ತು ಸುಮ್ಮನೆ ಇದ್ದ ಶಾರದೆ ಈಗ ಸಿಡಿದೆದ್ದಳು.


"ಯಾರು ಹಿತೇಶನನ್ನು ಕೊಂದಿದ್ದು ಅಂದ್ರಿ? ನಾನ್ಯಾರನ್ನ ಅಲಕ್ಷ್ಯ ಮಾಡಿದೆ? ಹೆತ್ತ ಮೂರೂ ಮಕ್ಕಳನ್ನು ನಾನು ತಾಯಿಯಾಗಿ ಸಮಾನವಾಗಿ ಪ್ರೀತಿ ಮಾಡಿದೆ. ತಂದೆಯಾಗಿ ನೀವೇನ್ ಮಾಡಿದ್ರಿ? ರತ್ನಾಳನ್ನು ಕಾಲ ಕಸಕ್ಕಿಂತ ಕಡೆಯಾಗಿ ನೋಡಿದ್ರಿ, ಹಿತೇಶ ಓದ್ಲಿ ಅಂತ ರತ್ನಾಳ ಶಾಲೆ ಬಂದ್ ಮಾಡ್ಸಿದ್ರಿ, ಗುರುತು ಪರಿಚಯ ಇಲ್ದಿರೋ ಹೆಡ್ಡನಿಗೆ ನನ್ನ ಮಗಳನ್ನು ಕೊಟ್ಟು ಮದ್ವೆ ಮಾಡ್ಸಿದ್ರಿ. ಸಾಲದ್ದಕ್ಕೆ ಗಂಡು ಮಗು ಗಂಡು ಮಗು ಅಂತ ನನ್ನ ದೇಹ ತಿಂದು ಮುಕ್ಕಿದ್ರಿ. ಮಗಳು ಬಸುರಿ ಆಗೋ ಹೊತ್ತಲ್ಲಿ ನಾನು ಮತ್ತೊಮ್ಮೆ ಬಸುರಿಯಾದೆ. ನೀವ್ ಅನ್ಕೊಂಡಂಗೆ ಗಂಡು ಮಗು ಹುಟ್ಟಿತು ಅಂತ ಊರಿಗೆಲ್ಲ ಸಿಹಿ ಹಂಚಿದ್ರಿ. ಆದ್ರೆ ಯಾವಾಗ ನನ್ನ ಮಗ ಮಾನಸಿಕವಾಗಿ ಹಿಂದೆ ಇದಾನೆ ಅಂತ ಅನಿಸ್ತೋ, ಆಗ ನಿಮಗೆ ಇವನು ಸಹ ಕಾಲ ಕಸ ಆಗ್ಬಿಟ್ಟ. ಅಗತ್ಯಕ್ಕೂ ಮೀರಿ ಹಿತೇಶನನ್ನ ತಲೆ ಮೇಲಿಟ್ಟು ಮೆರ್ಸಿದ್ದು ಯಾರು? ಮಾಡೋ ತಪ್ಪೆಲ್ಲಾ ಮಾಡಿ ಈಗ ಬಂದು ನನ್ಮೇಲೆ ಕೂಗಡ್ತೀರಾ?

ನಮ್ಮ ಮಗ ಸತ್ತಿದ್ದು ನನ್ನಿಂದ ಅಲ್ಲ, ಸೀತೆಯ ಶಾಪದಿಂದ!

ನಿಮ್ಮ ಕೆಟ್ಟ ಕೆಲಸಗಳ ಫಲ ನಮ್ಮ ಮಗ ಅನುಭವಿಸೋ ಹಾಗಾಯ್ತು." ಶಾರದೆ ಅಳುತ್ತಲೇ ಇದ್ದಳು.


ಇಷ್ಟೊತ್ತು ಶಾರದೆಯ ಮೇಲೆ ಕೂಗಾಡುತ್ತಿದ್ದ ಸೋಮಣ್ಣ ಶಾರದೆಯ ಕೊನೆಯ ಮಾತುಗಳನ್ನು ಕೇಳಿ ದಂಗಾಗಿ ಹೋದ.


‌‌ಮನೆಯ ವಂಶೋದ್ಧಾರಕ ಹೀಗೆ ಶವವಾಗಿದ್ದನ್ನು ನೋಡಿ ಸೋಮಣ್ಣನಿಗೆ ಇದು ಸೀತೆಯ ಶಾಪ ಎಂದು ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ.


ಯಾರು ಈ ಸೀತೆ?


(ಮುಂದಿನ ಭಾಗದಲ್ಲಿ ನಿರೀಕ್ಷಿಸಿ )


Rate this content
Log in

Similar kannada story from Classics