Revati Patil

Classics Inspirational Others

3  

Revati Patil

Classics Inspirational Others

ಮಮತಾಮಯಿ 4

ಮಮತಾಮಯಿ 4

2 mins
249



ಶಾರದಾ ಗರ್ಭಿಣಿ ಎನ್ನುವ ಸತ್ಯ ರತ್ನಾಳ ಗಂಡನ ಮನೆಯವರಿಗೂ ತಿಳಿದಿತ್ತು. ನೋಡ ನೋಡುತ್ತಿದ್ದಂತೆ ರತ್ನಾಳ ಮದುವೆ ಆಗಿಯೇ ಹೋಯಿತು.


ರತ್ನಾಳ ಅತ್ತೆ ಮಾತ್ರ

"ನೋಡಿ ಶಾರದಮ್ಮ, ಈಗ ನಿಮ್ಮ ಮಗಳು ಗರ್ಭಿಣಿ ಆದರೆ ಅವಳ ಬಾಣಂತನ ನೀವೇ ಮಾಡಬೇಕು, ಅದು ಬಿಟ್ಟು ನಿಮ್ಮ ಬಾಣಂತನ ಮಾಡಲು ನಮ್ಮ ಸೊಸೆಯನ್ನ ಕರೆಸಿಕೊಳ್ಳೋ ಹಂತಕ್ಕೆ ಬಂದಿದ್ದೀರಿ, ಅದೇನಾದ್ರೂ ಮಾಡ್ಕೊಳಿ, ಈಗ ರತ್ನಾ ನಮ್ ಮನೆ ಸೊಸೆ. ಇನ್ಮುಂದೆ ಅವಳು ನಾವು ಹೇಳಿದರೆ ಮಾತ್ರ ಆಚೆ ಹೋಗ್ಬೇಕು, ನೀವೂ ಬೇರೆ ವ್ಯವಸ್ಥೆ ಮಾಡ್ಕೊಳಿ "

ಎಂದು ಒಂದೇ ಮಾತಲ್ಲೇ ರತ್ನಾಳ ಅತ್ತೆ ಶಾರದೆಗೆ ಹೇಳಿ ರತ್ನಾಳನ್ನು ತಮ್ಮ ಮನೆಗೆ ಕರೆದೊಯ್ದರು.


ಹೀಗೆ ದಿನಗಳೆದಂತೆ ಶಾರದೆ ಪ್ರಸವಕ್ಕೆ ದೈಹಿಕವಾಗಿ ಮಾತ್ರ ಸಿದ್ಧವಾಗಿದ್ದಳು, ಮಾನಸಿಕವಾಗಿ ತುಂಬಾ ಕುಗ್ಗಿದ್ದಳು. ಅತ್ತ ಸೋಮಣ್ಣ ಹಿತೇಶನನ್ನು ಒಳ್ಳೆಯ ಶಾಲೆಗೆ ಸೇರಿಸಿದ್ದ. ಮಗನ ಹೊರತು ಬೇರೆ ಪ್ರಪಂಚವೇ ಇರಲಿಲ್ಲ ಸೋಮಣ್ಣನಿಗೆ.


ನವಮಾಸ ತುಂಬಿದ ಶಾರದೆ ಮತ್ತೊಂದು ಗಂಡು ಮಗುವಿಗೆ ಜನ್ಮಕೊಟ್ಟಿದ್ದಳು, ಅವನೇ ಲೋಕೇಶ್. ಹೆಂಡತಿ ಗಂಡುಮಗುವಿಗೆ ಜನ್ಮ ನೀಡಿದ್ದು ಕೇಳಿ ಸೋಮಣ್ಣ ಮತ್ತೊಮ್ಮೆ ಊರಿಗೆಲ್ಲ ಸಿಹಿ ಹಂಚಿದ್ದ. ಆದರೆ ಶಾರದೆ ಮಾತ್ರ ನಾಚಿಕೆಯಿಂದ ತಲೆ ತಗ್ಗಿಸಿದ್ದಳು.

ಅಲ್ಲದೆ ಹುಟ್ಟಿದ ಮಗು ಮಾನಸಿಕವಾಗಿ ಅಸ್ವಸ್ಥ ಇದ್ದದ್ದು ಶಾರದೆ, ಸೋಮಣ್ಣನಿಗೆ ತಿಳಿಯಲು ಐದು ವರ್ಷಗಳೇ ಬೇಕಾಯಿತು.


ತಮ್ಮ ಹುಟ್ಟಿ ವರ್ಷವಾದರೂ, ರತ್ನಾ ಅವನನ್ನು ನೋಡಲು ಬಂದಿರಲಿಲ್ಲ. ರತ್ನಾಳಿಗೆ ತನ್ನ ಮನೆಯ ಕೆಲಸಗಳೇ ಮಾಡಿ ಮುಗಿಸುವಷ್ಟರಲ್ಲಿ ಕತ್ತಲಾಗುತ್ತಿತ್ತು. ಅದರ ಮಧ್ಯೆ ಗಂಡನ ಕುಡಿತದ ಚಟ, ಮಾವ ಅತ್ತೆಯ ಆಜ್ಞೆಗಳು, ಮೈದುನನ ಅಸಹಜ ನಡವಳಿಕೆಗಳಿಂದ ರತ್ನಾಳಿಗೆ ಉಸಿರುಗಟ್ಟುವ ಪರಿಸ್ಥಿತಿ ಆಗಿತ್ತು.



ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂದು ಶಾರದೆ ಕೂಡ ರತ್ನಾಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಲೊಕೇಶನ ಆರೈಕೆಯಲ್ಲಿ ತೊಡಗುತ್ತಾಳೆ. ಮಗನ ನಡುವಳಿಕೆ ಎಲ್ಲ ಮಕ್ಕಳಂತಿಲ್ಲ ಎಂದು ಅರಿತ ಶಾರದಾ ಬೋರಮ್ಮಜ್ಜಿಯನ್ನು ಕೇಳುತ್ತಾಳೆ. ಲೊಕೇಶನಿಗೆ ಐದು ವರ್ಷ ತುಂಬುತ್ತಲೇ ಬೋರಮ್ಮಜ್ಜಿಯ ಸಲಹೆಯತೆ ಪಕ್ಕದೂರಿನ ನಾರಾಯಣಪುರ ಮಠದ ಸ್ವಾಮೀಜಿ ಬಳಿ ತೆರಳುತ್ತಾಳೆ ಶಾರದೆ.


ಶಾರದೆಗೆ ಆ ಸ್ವಾಮೀಜಿ

"ನಿನ್ನ ಮಗು ದೇವರ ಅವತಾರ. ಹದಿನೈದು ವರ್ಷ ತುಂಬಿದ ಬಳಿಕ ಮಾತು ಬಂದು, ಅವನ ಮಾನಸಿಕ ರೋಗವು ಕಳೆದು ಎಲ್ಲರಂತೆ ಸಾಮಾನ್ಯ ಜೀವನ ನಡೆಸುತ್ತಾನೆ, ನೊಂದುಕೊಳ್ಳದಿರು ತಾಯಿ " ಎಂದು ಲೊಕೇಶನ ಕೈ ನೋಡಿ ಅವನ ಭವಿಷ್ಯ ನುಡಿಯುತ್ತಾರೆ .


ಆದರೆ ಆ ಹದಿನೈದು ವರ್ಷ ಸಣ್ಣ ಸಮಯವಲ್ಲ, ಅಲ್ಲಿಯವರೆಗೂ ಇವನ ದಿನದ ಚಾಕರಿ ಮಾಡುವ ಬದಲು ಯಾವುದಾದರೂ ಅನಾಥಾಶ್ರಮಕ್ಕೋ, ಮಾನಸಿಕ ರೋಗಿಗಳ ಚಿಕಿತ್ಸಾ ಕೇಂದ್ರಕ್ಕೋ ಬಿಟ್ಟು ಬರೋಣ ನಡಿ ಎಂದು ಸೋಮಣ್ಣ ತನ್ನ ಪತ್ನಿ ಶಾರದೆಗೆ ಹೇಳಿದಾಗ, ಯಾವ ತಾಯಿ ತಾನೇ ತಾನಿದ್ದು ಕಂದನನ್ನು ಅನಾಥಾಶ್ರಮಕ್ಕೆ ಬಿಡಲು ಒಪ್ಪುತ್ತಾಳೆ? ಕುಂಟ, ಕುರುಡ, ಮೂಗನಾದರೂ ಮಾತೃ ಹೃದಯಕ್ಕೆ ಅದು ಕಂದ ಅಂತಷ್ಟೇ ಗೋಚರವಾಗುತ್ತದೆ. ಗಂಡನ ಮಾತಿಗೆ ಕ್ಯಾಕರಿಸಿ ಉಗಿದು, ನಿನ್ನಂತ ಬೇಜವಾಬ್ದಾರಿ ಗಂಡನಜೊತೆ ಇರುವ ಬದಲು ನನ್ನ ಮಗನಿಗೆ ನಾನೇ ಅಪ್ಪನೂ ಆಗಿ ಬಿಡುತ್ತೇನೆ ಎಂದು ನೇರವಾಗಿ ಹೇಳಬೇಕೆಂದುಕೊಂಡಳು. ಕೋಪದಲ್ಲಿ ಗಂಡನೂ "ಆಯ್ತು, ಪೀಡೆ ಕಳೆಯಿತು ಎಂದುಕೊಳ್ಳುತ್ತೇನೆ, ಮೊದಲು ತೊಲಗಿ " ಎಂದು ಹೇಳಿಬಿಟ್ಟರೆ ತಾನೆಲ್ಲಿ ಹೋಗುವುದು? ತನಗ್ಯಾರ ಆಸರೆಯಿದೆ? ಹಿತೇಶನ ಅವಸ್ಥೆ ಹಾಗಾಯಿತು, ಈ ಲೋಕೇಶ ಹೀಗಾದ, ಮಗಳು ರತ್ನಾ ಗಂಡನಮನೆಯಲ್ಲಿ ಅತ್ತೆ, ಮಾವ, ಮೈದುನರು ಪ್ರತಿದಿನ ಹಾಕುವ ಲಕ್ಷ್ಮಣ ರೇಖೆಗಳನ್ನು ಎಣಿಸುತ್ತ, ಉಳಿದರೆ ಊಟ, ಇಲ್ಲದಿದ್ದರೆ ಚೊಂಬು ಪೂರ್ತಿ ನೀರು ಕುಡಿದು ಕುಡುಕ ಗಂಡನ ಜೊತೆ ಜೀವನ ಸಾಗಿಸುತ್ತಿದ್ದಾಳೆ. ಹೀಗಿರುವಾಗ

ತನ್ನ ಮಗುವಿಗಾದರೂ ತಾನು ಗಂಡನ ಅಸಹನೆಯನ್ನು ಸಹಿಸಿಕೊಳ್ಳಬೇಕೆಂದು ಶಾರದೆ ಸುಮ್ಮನಾಗುತ್ತಾಳೆ..


(ಶಾರದೆ, ಸೋಮಣ್ಣ ದಂಪತಿಯ ಮೊದಲ ಮಗ ಹಿತೇಶನಿಗೆ ಏನಾಯಿತು ಎನ್ನುವುದನ್ನು ಮುಂದಿನ ಭಾಗದಲ್ಲಿ ನಿರೀಕ್ಷಿಸಿ )


Rate this content
Log in

Similar kannada story from Classics