ಮಮತಾಮಯಿ 3
ಮಮತಾಮಯಿ 3
ಸೋಮಣ್ಣ ಶಾರದೆ ಗಂಡಿನ ಕಡೆಯವರಿಗೆ ಕಾಯುತ್ತಿದ್ದರು. ಇದ್ದ ಅಮ್ಮನ ಹಳೆಯ ಸೀರೆಯನ್ನೇ ಲಕ್ಷಣವಾಗಿ ಉಟ್ಟು ಗೊಂಬೆಯಂತೆ ಕಂಗೊಳಿಸುತ್ತಿದ್ದಳು ರತ್ನಾ. ಇನ್ನೂ ಹದಿನೈದು ವರ್ಷ ನಡೆಯುತ್ತಿರಬೇಕು ರತ್ನಾಳಿಗೆ. ಹೆಣ್ಣು ಅಂದ್ರೆ ಹೊರೆ ಎಂದುಕೊಂಡಿರುವ ಸೋಮಣ್ಣನಿಗೆ ಮಗಳೆನೋ ವಯಸ್ಸು ಮೀರಿ ಮದುವೆಯಾಗದೆ ಮನೆಯಲ್ಲಿ ಕುಳಿತಂತೆ ಚಿಂತೆಯಾಗಿತ್ತು.
ನಿಜವಾಗಿಯೂ ಚಿಂತೆಯಾಗಿದ್ದು ಶಾರದೆಗೆ ಮಾತ್ರ. ಏನೂ ಅರಿಯದ ಚಿಕ್ಕ ಮಗಳನ್ನು ಗುರುತು ಪರಿಚಯವಿರದವರಿಗೆ ಕೊಡಲು ಅವಳ ತಾಯಿ ಹೃದಯವೇಕೋ ಒಪ್ಪುತ್ತಿಲ್ಲ, ಆದರೆ ಶಾರದೆ ನಿಸ್ಸಹಾಯಕಿ!
ಮಗಳಿಗೆ ಧೈರ್ಯದ ಮಾತುಗಳನ್ನು ಹೇಳುವ ಬದಲು ಅವಳ ಬಳಿ ಬೇರೇನೂ ಇರಲಿಲ್ಲ. ರತ್ನಾ ಕೂಡ ಎಲ್ಲದಕ್ಕೂ ತಯಾರಾಗಿ ನಿಂತಿದ್ದಳು.
ಹನ್ನೊಂದು ಗಂಟೆಗೆ ಸರಿಯಾಗಿ ಗಂಡಿನ ಕಡೆಯವರು ಸೋಮಣ್ಣನ ಮನೆಗೆ ಬಂದರು. ಹುಡುಗ, ಹುಡುಗನ ತಂದೆ, ತಾಯಿ, ತಮ್ಮ ಜೊತೆಗೊಬ್ಬ ಜೋಯಿಸನು ಬಂದಿದ್ದ. ಹಿರಿಯರ ಮಧ್ಯೆ ಮಾತುಕತೆ ನಡೆದಾಗಲೇ ಸಂಬಂಧ ಗಟ್ಟಿಯಾಗಿತ್ತು. ಹೆಸರಿಗಷ್ಟೇ ಹುಡುಗಿ ನೋಡುವ ಶಾಸ್ತ್ರ ಮಾಡಿದರು. ಹುಡುಗನಾಗಲೇ ಮೂವತ್ತು ದಾಟಿದ್ದ, ಹುಡುಗಿಗೆ ಅವನ ಅರ್ಧ ವಯಸ್ಸು.
ಗಂಡಿನ ಕಡೆಯವರು ಹುಡುಗಿ ತಮಗೆ ಒಪ್ಪಿಗೆಯಾಗಿದೆ ಮುಂದಿನ ತಿಂಗಳವೇ ಮದುವೆ ಮಾಡಿ ಮುಗಿಸಿದರಾಯಿತು ಎಂದು ಹೋಗಿದ್ದರು. ಸೋಮಣ್ಣ ಹಿರಿ ಹಿರಿ ಹಿಗ್ಗಿದ್ದ, ಹೆಚ್ಚು ಖರ್ಚಿಲ್ಲದೇ ಮಗಳ ಮದುವೆ ಮಾಡುತ್ತಿರುವುದಕ್ಕೆ. ಆದರೆ ಶಾರದಾ ಯಾಕೋ ಈ ಸಂಬಂಧ ಬೇಡ ಎಂದು ಹೇಳಿಬಿಟ್ಟಳು.
"ರೀ, ಹುಡುಗ ನಮ್ಮ ರತ್ನನಿಗೆ ದೊಡ್ಡವನು, ಅಲ್ದೆ ಅವನ ಮುಖಭಾವ ನೋಡಿದರೆ ಕುಡಿಯುವ ಚಟವಿದ್ದಂತೆ ಕಾಣುತ್ತಾನೆ. ಅವನ ಮನೆಯವರು ಹೇಳಿಕೊಳ್ಳುವಷ್ಟು ಸಂಪನ್ನರು ಅಲ್ಲವೆನಿಸುತ್ತದೆ ರೀ. ರತ್ನಾಳನ್ನು ಶ್ರೀಮಂತರಿಗೆ ಕೊಡದಿದ್ದರೂ ಪರವಾಗಿಲ್ಲ, ಒಳ್ಳೆಯ ಹುಡುಗನಿಗಾದರೂ ಕೊಡಬಹುದು, ಅವಳಿನ್ನು ಚಿಕ್ಕವಳು, ಈ ಸಂಬಂಧ ಹೋದರೆ ಮತ್ತೊಂದು ಬರುತ್ತೆ, ಯಾಕೆ ಇಷ್ಟೊಂದು ಅವಸರ ಮಾಡುತ್ತಿದ್ದೀರಿ? ಎಂದು ಶಾರದೆಯ ಅಂತರಂಗ ಸೋಮಣ್ಣನ ಎದುರಲ್ಲಿ ತೆರೆದುಕೊಂಡಿತ್ತು.
ಸೋಮಣ್ಣ ಎಂದಾದರೂ, ಯಾರ ಮಾತನ್ನಾದರೂ ಕೇಳಿದ್ದಿದ್ದರೆ ಬಹುಶ ಈ ಸಲ ಹೆಂಡತಿ ಮಾತಿನ ಬಗ್ಗೆ ಸ್ವಲ್ಪ ಆದರೂ ಯೋಚಿಸುತ್ತಿದ್ದ. ಆದರೆ ಸೋಮಣ್ಣ ತನ್ನ ಮೂಗಿನ ನೇರಕ್ಕೆ ನಡೆಯುವ ಮನುಷ್ಯ. ರತ್ನಾಳ ಮದುವೆ ಸ್ವತಃ ಬ್ರಹ್ಮ ಬಂದರೂ ತಡೆಯುವ ಮಾತಿರಲಿಲ್ಲ.
ಈ ನಡುವೆ ಅಚ್ಚರಿ ಎನ್ನುವಂತೆ ಶಾರದೆ ತಲೆ ಸುತ್ತಿ ನಿಶ್ಯಕ್ತಿಯಿಂದ ಬಿದ್ದಿದ್ದಳು. ಪಕ್ಕದ ಮನೆಯ ಬೋರಮ್ಮಜ್ಜಿಯನ್ನು ರತ್ನಾ ಕೂಗಿ ಬಂದಿದ್ದಳು. ಬೋರಮ್ಮಜ್ಜಿ, ಶಾರದೆಯ ಕೈ ನೋಡಿಯೇ ಶಾರದೆ ಗರ್ಭಿಣಿ ಎಂದು ಹೇಳಿದ್ದಳು. ಮುಂದಿನ ತಿಂಗಳಷ್ಟೇ ಮಗಳ ಮದುವೆ ಇಟ್ಟುಕೊಂಡು ತಾನು ಗರ್ಭಿಣಿಯಾಗಿದ್ದಕ್ಕೆ ಶಾರದೆಗೆ ಅಸಹ್ಯವೆನಿಸಿತ್ತು.
"ಏನಮ್ಮ ಶಾರದಾ, ಮಗಳಿಗೆ ಮಗುವಾಗೋ ಸಮಯಕ್ಕೆ ನೀನು ಮತ್ತೇ ಬಸುರಿಯಾದ್ಯಲ್ಲೇ?" ಎಂದು ಬೋರಮ್ಮಜ್ಜಿ ಹಾಸ್ಯ ಮಾಡಿದಾಗ ಶಾರದೆಗೆ ಸೋಮಣ್ಣನ ಗಂಡುಮಕ್ಕಳ ಹುಚ್ಚಿನ ಬಗ್ಗೆ ಕೋಪ ಉಕ್ಕೇರಿ ಬಂತು. ಇಷ್ಟು ವರ್ಷಗಳ ಮಧ್ಯೆ ಗಂಡನಿಗೆ ತಿಳಿಯದಂತೆ ನಾಲ್ಕೈದು ಸಲ ಗರ್ಭಪಾತ ಮಾಡಿಕೊಂಡಿದ್ದಳು ಶಾರದಾ. ಆದರೆ ಈ ಸಲ ಮನೆಯ ಸಮಸ್ಯೆಗಳ ಮಧ್ಯೆ ತನ್ನ ದೇಹದ ಬದಲಾವಣೆಯನ್ನೇ ಗಮನಿಸುವುದನ್ನು ಮರೆತಿದ್ದಳು.
ಈಗ ಎಲ್ಲರ ಬಾಯಿಗೂ, ಶಾರದಾ ಗರ್ಭಿಣಿಯಾಗಿ ಸುಲಭವಾಗಿ ಆಹಾರವಾಗಿದ್ದಳು.
ಆದರೆ ಸೋಮಣ್ಣ ಮಾತ್ರ ಮತ್ತೊಂದು ಗಂಡು ಮಗು ಹುಟ್ಟುವುದೆಂಬ ಹುಚ್ಚು ಭ್ರಮೆಯಲ್ಲಿ ತೇಲಾಡುತ್ತಿದ್ದ. ಇತ್ತ ರತ್ನನ ಮದುವೆ ತಯಾರಿಯೋ, ತನ್ನ ಬಸಿರಿನ ಕಾಳಜಿಯೋ ಎಂದು ಶಾರದಾ ಗೊಂದಲಕ್ಕಿಳಿದಿದ್ದಳು.
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ )
