Revati Patil

Classics Inspirational Others

3  

Revati Patil

Classics Inspirational Others

ಮಮತಾಮಯಿ 2

ಮಮತಾಮಯಿ 2

2 mins
178



ಹಿತೇಶ್ ಹುಟ್ಟಿದ್ದೇ ಹುಟ್ಟಿದ್ದು. ಸೋಮಣ್ಣನಿಗೆ ಕಾಲು ನೆಲದ ಮೇಲೆ ನಿಂತಿರಲಿಲ್ಲ. ತನ್ನ ಹಳೆಯ ನೆನಪುಗಳನ್ನೊಮ್ಮೆ ತನ್ನಷ್ಟಕ್ಕೆ ತಾನೇ ನೆನಪಿಸಿಕೊಂಡು, ಅಂತೂ ತಾನು ಅಂದುಕೊಂಡಿದ್ದನ್ನು ಸಾಧಿಸಿದೆ ಎಂದು ಜಂಭಪಟ್ಟುಕೊಳ್ಳುತ್ತ ಮಗನನ್ನು ಅತಿಯಾಗಿ ಮುದ್ದು ಮಾಡುತ್ತಿದ್ದ. ಮಗ ಕೇಳುವ ಮೊದಲೇ ಪ್ರತಿಯೊಂದನ್ನು ತರುತ್ತಿದ್ದ ಸೋಮಣ್ಣ.


ಬೆಳೆಯುತ್ತಿರುವ ನಾಗರತ್ನಳಿಗೆ ಏನಾದರು ಬೇಕೆಂದು ಶಾರದೆ ಕೇಳಿದರೆ, ಅವಳಿಗೇಕೆ ಖರ್ಚು ಮಾಡಬೇಕು, ಇನ್ನೆರಡು ವರ್ಷಕ್ಕೆ ಯಾರಿಗಾದರೂ ಕೊಟ್ಟು ಮದುವೆ ಮಾಡಿದರೆ ಮುಗಿಯುತ್ತೆ ಜವಾಬ್ದಾರಿ. ಮದುವೆಗೆ ಮಾಡೋ ಖರ್ಚೆ ಬೇಕಾದಷ್ಟಿದೆ ಮತ್ತ್ಯಾಕೆ ಈಗಿಂದಾನೆ ಖರ್ಚು ಮಾಡಬೇಕು? ಅಂತ ಹೆಂಡತಿಯನ್ನೇ ಮರಳಿ ಪ್ರಶ್ನಿಸುತ್ತಿದ್ದ!


ದಿನವೂ ಮಗನ ಪರವಾಗಿ ಸೋಮಣ್ಣ, ಮಗಳ ಪರವಾಗಿ ಶಾರದೆಯ ಕಿತ್ತಾಟಗಳು ನಿಲ್ಲದೇ ನಡೆಯುತ್ತಿದ್ದವು. ಹಿತೇಶನನ್ನು ಒಳ್ಳೆಯ ಕಡೆ ಓದಿಸಲು ಸೋಮಣ್ಣ ನಾಗರತ್ನಾಳ ಶಾಲೆಯನ್ನು ಮೊಟಕುಗೊಳಿಸಿದ್ದ. ಏನೂ ಮಾಡದ ಹತಾಷ ಸ್ಥಿತಿಯಲ್ಲಿ ಶಾರದಾ ಇದ್ದಳು.


ರತ್ನಾ ಓದಿನಲ್ಲಿ ಚುರುಕು ಇದ್ದಾಳೆ, ಅವಳ ಶಾಲೆ ಬಿಡಿಸಿ ಹಿತೇಶನನ್ನು ಓದಿಸುವ ಬದಲು, ಹಿತೇಶನನ್ನು ಕೂಡ ರತ್ನಾ ಓದುವ ಶಾಲೆಗೆ ಹಾಕಬಾರದಾ? ಖರ್ಚು ಕಡಿಮೆ ಎಂದು ಶಾರದಾ ಕೇಳಿದ್ದೆ ತಡ ಸೋಮಣ್ಣ ಕುಪಿತಗೊಂಡು "ಅವನು ಗಂಡು ಮಗ, ಚಿನ್ನದ ಮೊಟ್ಟೆಯಿಡುವ ಕೋಳಿಯಂತೆ. ಅವನಿಗೆ ಖರ್ಚು ಮಾಡಿದರೆ ನಾಳೆ ನಮ್ಮ ಮುಪ್ಪಿನ ಕಾಲದಲ್ಲಿ ಅವನು ನಮ್ಮಿಬ್ಬರನ್ನು ನೋಡಿಕೊಳ್ಳುತ್ತಾನೆ, ಇವಳಿಗೆ ಎಷ್ಟು ಸುರಿದರೇನು, ಕೊಟ್ಟವರ ಮನೆಗೆ ಹೋಗುತ್ತಾಳೆ? ಇಬ್ಬಿಬ್ಬರ ಪುಸ್ತಕ, ಬಟ್ಟೆ, ಖರ್ಚು ನನಗೆ ಹೊರೆಯಾಗುತ್ತದೆ. ಅದಕ್ಕೆ ಇವಳ ಶಾಲೆ ಬೇಡ, ಇವಳೇನು ಸಾಧನೆ ಮಾಡಬೇಕಿದೆ ಓದಿ? ಹೆಣ್ಣು ಮಕ್ಕಳಿಗೆ ಗಂಡನ ಮನೆ ಕಸ ಮುಸುರೆ ಮಾಡುವಷ್ಟು ಜ್ಞಾನವಿದ್ದರೆ ಸಾಕು. ನಾನು ಹೇಳುವುದು ಅರ್ಥ ಮಾಡಿಕೋ ಶಾರದಾ. ನನ್ನ ಮಾತು ಅರ್ಥವಾಗುತ್ತಿದೆ ತಾನೇ? ನೀನು ಕೂಡ ಚಿಕ್ಕ ವಯಸ್ಸಿಗೆ ನನ್ನನ್ನು ಮದುವೆಯಾದೆ ಅಲ್ವಾ? ನಿಮ್ ಅಪ್ಪನೂ ಬೇಗ ಬೇಗ ನಿನ್ನನ್ನು ಗಂಡನ ಮನೆಗೆ ಸೇರಿಸಿ ತಮ್ಮ ಜವಾಬ್ದಾರಿ ಕಳೆದುಕೊಂಡ ಹಾಗೆ ನಾವು ಕೂಡ ರತ್ನಾಳ ಜವಾಬ್ದಾರಿ ಕಳೆದುಕೊಳ್ಳೋಣ. ವಯಸ್ಸಿಗೆ ಬಂದ ಮಗಳು ಅಂದ್ರೆ ಸೆರಗಲ್ಲಿರುವ ಕೆಂಡ ಇದ್ದಂತೆ ಮರೆಯಬೇಡ" ಎಂದು ಹೆಂಡತಿಗೆ ಎಚ್ಚರಿಸಿದ ಸೋಮಣ್ಣ.


ಮುಂದಿನವಾರ ಬನ್ನೂರಿನ ರಾಮಪ್ಪ ತನ್ನ ಮಗಳಿಗೆ ರತ್ನಾಳನ್ನು ನೋಡೋಕೆ ಬರ್ತಿದಾನೆ, ಅವರೇನಾದ್ರು ಒಪ್ಪಿದರೆ ಮದುವೆ ಮಾಡಿ ಮುಗಿಸಿದರಾಯಿತು. ಅದಕ್ಕೆ ಇವಳಿಗೆ ಶಾಲೆಗಿಂತ ಅಡಿಗೆ ಮಾಡೋದೆಲ್ಲ ಕಲಿಸು. ನಾನು ಹಿತೇಶನನ್ನು ಪಟ್ಟಣದ ಶಾಲೆಗೆ ಸೇರಿಸಲು ಏನೇನು ತಯಾರಿ ಬೇಕೋ ಮಾಡ್ತೀನಿ ಎಂದು ಹೇಳಿ ಆಚೆ ಹೊರಟ ಸೋಮಣ್ಣ.


ತನ್ನ ಗಂಡನಿಗೆ ವಯಸ್ಸಾದರೂ ಬುದ್ಧಿ ಬರಲಿಲ್ಲ ಎಂದು ಶಾರದೆ ನೊಂದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದ ರತ್ನಾಳನ್ನು ಸಮಾಧಾನಪಡಿಸಿ

"ರತ್ನಾ, ಈ ಮನೆ ಎಂದೂ ನಿನಗೆ ನಗುವನ್ನು ಕೊಡಲಿಲ್ಲ. ಗಂಡನ ಮನೆಯಲ್ಲಾದರೂ ನಿನಗೆ ಸಂತೋಷ ಸಿಗುವುದಿದ್ದರೆ ಧಾರಾಳವಾಗಿ ಮದುವೆಗೆ ಒಪ್ಪಿಕೊ ಮಗಳೇ. ದಿನವೂ ಅಪ್ಪನಿಂದ ಅನಿಷ್ಟ ಎನಿಸಿಕೊಳ್ಳುವ ಬದಲು ಬೇರೊಂದು ಮನೆಗೆನಂದಾದೀಪವಾಗಿ ಕಾಲಿಡು. ಈ ಜಂಜಾಟದ ಬದುಕು ನನಗೇ ಸರಿ" ಎಂದು ಮಗಳನ್ನು ತಬ್ಬಿ ಶಾರದಾ ಜೋರಾಗಿ ಅಳತೊಡಗಿದಳು.


ರಾತ್ರಿಯಿಡಿ ನಿದ್ದೆಯಿಲ್ಲದೆ ಶಾರದೆ, ರತ್ನಾ ಅತ್ತಿತ್ತ ಹೊರಳಾಡುತ್ತಿದ್ದರು. ಶಾರದೆಗೆ ತನ್ನ ಗಂಡನ ಹಳೆಯ ಬದುಕಿನ ಬಗ್ಗೆ ಕೋಪವಿದೆ. ಒತ್ತಾಯವಾಗಿ ತನ್ನನ್ನು ಇವನ ಜೊತೆ ಮದುವೆ ಮಾಡಿದ್ದಕ್ಕಾಗಿ ಅಪ್ಪನ ವಿರುದ್ಧ ಕೋಪವಿದೆ. ಹೆಣ್ಣು ಮಕ್ಕಳನ್ನು ಸಹಿಸದ ಸೋಮಣ್ಣನ ಇತಿಹಾಸ ಶಾರದೆಗೆ ತಡವಾಗಿ ತಿಳಿದಿತ್ತು. ಅಷ್ಟರಲ್ಲಾಗಲೇ ಅವಳು ರತ್ನಾಳನ್ನು ಹೆತ್ತಿದ್ದಳು!


ಮರುದಿನ ರತ್ನಾಳನ್ನು ನೋಡಲು ಗಂಡಿನ ಮನೆಯವರು ಬರುವವರಿದ್ದರು, ಬಲವಂತವಾಗಿ ನಿದ್ದೆಗೆ ಜಾರುವ ಪ್ರಯತ್ನ ಮಾಡಿದಳು ಶಾರದೆ..


(ಮುಂದಿನ ಭಾಗದಲ್ಲಿ ನಿರೀಕ್ಷಿಸಿ )



Rate this content
Log in

Similar kannada story from Classics