Revati Patil

Classics Inspirational Others

4  

Revati Patil

Classics Inspirational Others

ಮಮತಾಮಯಿ 11

ಮಮತಾಮಯಿ 11

2 mins
187


(ಭಾಗ 10ರಲ್ಲಿ ಸೀತಾ ಮನೆಯವರ ಮಾತಿಗೋಪ್ಪಿ ಮತ್ತೊಂದು ಮಗುವಿಗಾಗಿ ಸಿದ್ಧಳಾದಳು. ಮುಂದೇನಾಯಿತು?)


ಎಷ್ಟೋ ಜನರಿಗೆ ಮಕ್ಕಳಾಗುವುದೇ ದೊಡ್ಡ ಸವಾಲಾಗಿರುತ್ತದೆ. ಇನ್ನೇಷ್ಟೋ ಜನರಿಗೆ ಮದುವೆಯಾಗಿ ವರ್ಷದಲ್ಲೇ ಮಗುವಿನ ಭಾಗ್ಯ ಸಿಕ್ಕಿರುತ್ತದೆ. ಸೀತಾ ಸೊಮ್ಮಣ್ಣ ಎರಡೂ ಗುಂಪಿಗೂ ಸೇರದವರು. ಮೊದಲ ಮಗುವಿಗೆ ಹರಕೆ ಹೊತ್ತು, ವೈದ್ಯರುಗಳ ಚಿಕಿತ್ಸೆಯ ಫಲವಾಗಿ ತಾಯಿಯಾದವಳು ಸೀತಾ. ಅದೇ ತೊಂದರೆ ಮುಂದಿನ ಮಕ್ಕಳಿಗೆ ಆಗಲಿಲ್ಲ. ಎರಡು ವರ್ಷದಲ್ಲಿ ಒಂದು ಮಗು, ಒಂದು ಗರ್ಭಪಾತ ಕಂಡಿದ್ದಳು ಸೀತಾ. ಸೀತಾಳಿಗೆ ಈಗ ಅನಿಸಿತ್ತು ಅತ್ತೆಯ ಮಾತಿನಂತೆ ಬರೀ ಮರಕ್ಕೆ ಪೂಜಿಸಿದ್ದರೆ ಸಾಕಿತ್ತೆಂದು.

ಮಕ್ಕಳಾಗದಿದ್ದರೂ ತೊಂದರೆ ಇರುತ್ತಿರಲಿಲ್ಲ, ಈ ಗಂಡು ಮಗುವಿನ ಆಸೆಯ ಮುಂದೆ ಎಂದು ಸೀತಾ ಅದೆಷ್ಟೋ ಬಾರಿ ಅಂದುಕೊಂಡಿದ್ದಳು.

ಅವಳ ಮಾತುಗಳು ಅವಳನ್ನು ದಾಟಿ ಆಚೆ ಬರುತ್ತಿರಲಿಲ್ಲ ಎನ್ನುವುದು ಅಷ್ಟೇ ಸತ್ಯವಾಗಿತ್ತು. ಈಗ ಇನ್ನೊಂದು ಸತ್ಯವೆಂದರೆ ಸೀತಾ ಮತ್ತೆ ಗರ್ಭಿಣಿಯಾಗಿದ್ದಳು!


ಈ ಬಾರಿಯಂತೂ ಮನೆಯವರು ಸೀತಾಳನ್ನು ಅತಿಯಾಗಿ ಕಾಳಜಿ ಮಾಡತೊಡಗಿದ್ದರು. ಸೀತಾಳಿಗೆ ಹೆಚ್ಚಿನ ಕೆಲಸವನ್ನು ಸಹ ನೀಡುತ್ತಿರಲಿಲ್ಲ. ಅಡಿಗೆ ಮನೆ ಅತ್ತೆಯ ಜವಾಬ್ದಾರಿಯಾಗಿತ್ತು. ದೀಪಾ, ದುರ್ಗಾಳ ಜೊತೆ ಸೀತಾ ಸಹ ಬೆಳಗ್ಗೆ ಸಂಜೆ ಹಾಲು ಕುಡಿಬೇಕಿತ್ತು. ಅಡುಗೆ ಬಿಸಿಯಿರುವಾಗಲೇ ಸೊಸೆಗೆ ಊಟಕ್ಕೆ ಬಡಿಸುತ್ತಿದ್ದರು ಅತ್ತೆ. ಬಟ್ಟೆ ಒಗೆಯುವುದಕ್ಕೂ ಮನೆಗೆ ಆಳು ನೇಮಿಸಿದ್ದರು. ಹುಟ್ಟುವ ಮಗು ಮನೆಯ ವಂಶೋದ್ಧಾರಕ, ತಾಯಿ ಆರೋಗ್ಯವಾಗಿದ್ದರೆ ಮಗುವು ಆರೋಗ್ಯವಾಗಿರುತ್ತದೆ ಎಂದು ಸೀತಾಳನ್ನು ಪ್ರಾಮಾಣಿಕವಾಗಿಯೇ ಅತೀ ಮುತುವರ್ಜಿಯಿಂದ ನೋಡಿಕೊಳ್ಳತೊಡಗಿದರು. ಮೊದಲ ಮಕ್ಕಳನ್ನು ಹೆರುವಾಗ ಇಲ್ಲದ ಪ್ರೀತಿ, ಈಗ ಜೋಯಿಸರು ಹೇಳಿದ ಮಾತಿಗೆ ಉಕ್ಕುತ್ತಿರುವುದನ್ನು ನೋಡಿ ಸೀತಾಳಿಗೆ ಸಂಕಟವಾಗುತ್ತಿತ್ತು. ಅಷ್ಟೇ ಭಯವೂ ಅವಳ ಮನಸ್ಸಲ್ಲಿ ಉಳಿದಿತ್ತು. ಎಲ್ಲರ ಲೆಕ್ಕಾಚಾರದಂತೆ ಈ ಮಗು ಗಂಡಾದರೆ, ತಾನಿನ್ನು ಮತ್ತೊಂದು ಗಂಡು ಮಗುವನ್ನು ಹೆರುವ ಯಂತ್ರವಾಗಲಾರೆ ಎನ್ನುವ ಸಂತೋಷವೂ ಇತ್ತು. ಆದರೆ ಹೆಣ್ಣಾದರೆ? ಅದನ್ನು ಮನೆಯವರು ಒಪ್ಪದಿದ್ದರೆ? ದೀಪಾಳನ್ನೇ ಇನ್ನೂ ಸರಿಯಾಗಿ ಮಗಳು, ಮೊಮ್ಮಗಳೆಂದು ಒಪ್ಪದ ಇವರು ಮೂರನೇ ಮಗುವೂ ಹೆಣ್ಣಾದರೆ ಏನು ಮಾಡುವುದೆಂದು ಸೀತಾ ಹಗಲು ರಾತ್ರಿ


ಸೀತಾ ಚಿಂತಿಸುತ್ತಿದ್ದಳು.


ಈ ಸಾರಿ ಸೋಮಣ್ಣ ಖುದ್ದು ಹೆಂಡತಿಯ ಆರೈಕೆ ಮಾಡುತ್ತಿದ್ದ. ಅವಳ ಆಸ್ಪತ್ರೆಯ ಓಡಾಟ, ವೈದ್ಯರ ಭೇಟಿ, ಊಟದಲ್ಲಿ ಏನು ಸೇವಿಸಬೇಕು, ಎಷ್ಟು ಸೇವಿಸಬೇಕು, ತನ್ನ ಹೆಂಡತಿಗೆ ಎಷ್ಟು ಸಮಯದ ನಿದ್ರೆ ಅಗತ್ಯ ಎನ್ನುವುದನ್ನು ವೈದ್ಯರಿಂದ ಕೇಳಿ ಮಾಹಿತಿ ಪಡೆದಿದ್ದ ಸೋಮಣ್ಣ. ಮಗು ಬೆಳ್ಳಗೆ, ಗಟ್ಟಿಯಾಗಿರಲು ಬೋರಮ್ಮಜ್ಜಿ ಹೇಳಿದಂತೆ ಬಾದಾಮಿ, ಕೇಸರಿಯುಕ್ತ ಹಾಲನ್ನು ಸೀತಾಳಿಗೆ ಕೊಡುತ್ತಿದ್ದ. ಸೀತಾ ಬೆಳಿಗ್ಗೆ ಬೇಗ ಎದ್ದು ಅಂಗಳದಲ್ಲಿ ರಂಗೋಲಿ ಹಾಕಿಲ್ಲವೆಂದರೂ ಅತ್ತೆಗದು ವಿಷಯವೇ ಆಗಿರಲಿಲ್ಲ, ಒಟ್ಟಿನಲ್ಲಿ ಮಹಾರಾಣಿಯಂತಹ ಜೀವನ ಸೀತಾಳದ್ದು.


ಸೀತಾಳಿಗೆ ಒಂಬತ್ತು ತಿಂಗಳು ಮುಗಿಯುತ್ತ ಬಂದ ಹಾಗೆ ಮನೆಯವರ ಉತ್ಸಾಹ ಹೆಚ್ಚಿತ್ತು. ಸೀತಾಳಿಗೆ ಮಾತ್ರ ಮಗು ಹೆರುವವರೆಗೂ ಚಿಂತೆ ಕಡಿಮೆಯಾಗುವ ಲಕ್ಷಣಗಳು ಕಾಣಲಿಲ್ಲ

ಸೀತಾಳ ಅತ್ತೆ, ಸೀತಾಳ ತಾಯಿಗೆ ಬಾಣಂತನವನ್ನು ನಾವೇ ಮಾಡುತ್ತೇವೆ ಎಂದಾಗ ಸೀತಾಳ ಹೆತ್ತವರಿಗೂ ಅತ್ಯಾಶ್ಚರ್ಯ. ಅವರು ಸಹ ಸೀತಾಳಿಗೆ ಗಂಡು ಮಗುವೇ ಆಗಿ, ಸೀತಾಳ ಬದುಕು ಸುಖವಾಗಿರಲಿ ಎಂದು ಹರಸಿದ್ದರು. ಹೆರಿಗೆಯಾದ ಮೇಲೆ ಬೇಕಾಗುತ್ತದೆ ಎಂದು ಮೊದಲೇ ದೇಸಿ ತುಪ್ಪ ತಯಾರಿಸಿಟ್ಟಿದ್ದರು ಸೋಮಣ್ಣನ ತಾಯಿ.


ಎಲ್ಲರೂ ಅಂದುಕೊಂಡಂತೆ ಸೀತಾಳಿಗೆ ಹೆರಿಗೆ ನೋವು ಶುರುವಾಯಿತು. ಸೋಮಣ್ಣ ಮೊದಲು ಓಡಿದ್ದೆ ಜೋಯಿಸರ ಬಳಿ. "ಚಿಂತೆ ಬೇಡ, ಒಳ್ಳೆಯ ದಿನವೇ ಮಗುವಾಗುತ್ತಿದೆ, ಮುಂದೆ ಉತ್ತಮ ಅಧಿಕಾರಿಯಾಗುವ ಮಗುವಿದು " ಎಂದು ಹೇಳಿ ಸೋಮಣ್ಣನಿಗೆ ಆಶೀರ್ವದಿಸಿದ್ದರು ಜೋಯಿಸರು.


ಸೋಮಣ್ಣನ ಮಾತು ಕೇಳಿ ಮನೆಯವರೆಲ್ಲರೂ ಮತ್ತಷ್ಟು ಖುಷಿಯಾಗಿದ್ದರು. ಸೀತಾಳಿಗೆ ಹೆರಿಗೆಯಾಯಿತು. ಮಗುವಿನ ಅಳುವಿನ ಸದ್ದು ಮನೆಯವರ ಮುಖದಲ್ಲಿ ನಗು ಮೂಡಿಸಿತ್ತು. ಎಲ್ಲರೂ ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸುತ್ತಿದ್ದರು.


"ಅಭಿನಂದನೆಗಳು, ಹೆಣ್ಣು ಮಗುವಾಗಿದೆ" ವೈದ್ಯರು ಸೋಮಣ್ಣನಿಗೆ ಕೈಕುಲುಕಿ ಹೇಳಿದರು.ಸೋಮಣ್ಣ ಬಿಟ್ಟ ಕಣ್ಣು ಬಿಟ್ಟೇ ಇದ್ದ.


ಜೋರಿದ್ದ ಆರ್ಭಟ ಒಮ್ಮೆಲೇ ಮಂಕಾಯಿತು.


(ಮುಂದಿನ ಭಾಗದಲ್ಲಿ ನಿರೀಕ್ಷಿಸಿ )



Rate this content
Log in

Similar kannada story from Classics