ಮಮತಾಮಯಿ 10
ಮಮತಾಮಯಿ 10
(ಭಾಗ 9ರಲ್ಲಿ ಸೀತಾಳಿಗೆ ಗರ್ಭಪಾತವಾಗಿ, ಮತ್ತೆ ಮುಂದಿನ ಮಗುವಿನ ಬಗ್ಗೆ ಗಂಡನೊಂದಿಗೆ ನಿರ್ಧಾರ ತೆಗೆದುಕೊಳ್ಳಲು, ಅವನ ಮನವೊಲಿಸಲು ಪ್ರಯತ್ನಿಸಿ ವಿಫಲವಾಗಿದ್ದಳು. ಮುಂದೇನಾಯಿತು )
ರಾತ್ರಿ ಗಂಡನೊಂದಿಗೆ ಮಾತಾಡಿದ ಮಾತನ್ನು ಅಲ್ಲಿಯೇ ಮರೆತು ಮಕ್ಕಳಿಗೆ ಹಾಲು ಬಿಸಿ ಮಾಡುತ್ತಿದ್ದಳು ಸೀತಾ. ಆದರೆ ಸೋಮಣ್ಣ ಆ ವಿಷಯವನ್ನು ಅಲ್ಲಿಗೆ ಬಿಟ್ಟಿರಲಿಲ್ಲ. ಅದಕ್ಕೊಂದಷ್ಟು ಸುಣ್ಣ ಬಣ್ಣ ಹಚ್ಚಿ, ತನ್ನ ತಂದೆ ತಾಯಿಯ ಮುಂದೆ ಸೀತಾಳನ್ನು ಅಪರಾಧಿಯನ್ನಾಗಿ ನಿಲ್ಲಿಸಿದ್ದ. ಸೀತಾಳಿಗೆ ಮತ್ತೊಂದು ಮಗು ಬೇಕಿಲ್ಲವೆಂದು, ತನ್ನ ಅಪ್ಪ ಅಮ್ಮ ಕೂತು ತಿನ್ನುತ್ತಾರೆಂದು ಅವಳ ಹೇಳಿಕೆಗಳನ್ನು ತನ್ನ ಮನಸ್ಸಿಗೆ ಬಂದಂತೆ ತಿರುಚಿ ಹೇಳಿದ್ದ ಸೋಮಣ್ಣ.
ಇಷ್ಟು ವಿಷಯ ಕಿವಿಗೆ ಬಿದ್ದ ತಕ್ಷಣವೇ ಸೋಮಣ್ಣನ ತಾಯಿ ಸೊಸೆಯನ್ನು ತರಾಟೆಗೆ ತೆಗೆದುಕೊಳ್ಳಲು ಅಡಿಗೆ ಮನೆಗೆ ಬಂದಿದ್ದರು.
ತನ್ನ ಅತ್ತೆ ಬಂದು ನಿಂತಿದ್ದು ಗೊತ್ತಾಗಲಿಲ್ಲ ಸೀತಾಳಿಗೆ.
"ನಮ್ಮೆಲ್ಲರ ಮುಂದೆ ಒಪ್ಪಿಗೆ ನೀಡಿ ರಾತ್ರಿ ನಿನ್ನ ಗಂಡನ ಹತ್ತಿರ ನಾನು, ನನ್ನ ಗಂಡ ಕೂತು ತಿಂತಿದೀವಿ, ಮಕ್ಕಳಾದರೆ ಖರ್ಚು ಜಾಸ್ತಿ ಅಂತೆಲ್ಲ ಹೇಳಿ ನಿನ್ನ ಗಂಡನ ಮನಸ್ಸು ಕೆಡಿಸೋ ಪ್ರಯತ್ನ ಮಾಡಿದೀಯಾ ಸೀತಾ? ನಾವು ಈ ವಯಸ್ಸಲ್ಲಿ ದುಡೀಬೇಕು ಅಂತ ನಿನ್ನ ಲೆಕ್ಕಾಚಾರವಾ?"
"ಛೆ! ಛೆ! ಇಲ್ಲಾ ಅತ್ತೆ. ನಾನು ಅಂದಿದ್ದೆ ಬೇರೆ, ನಿಮ್ಮ ಮಗ ಅರ್ಥೈಸಿದ್ದೆ ಬೇರೆ. ಮನೆಯಲ್ಲಿ ದುಡಿಯೋದು ನಿಮ್ಮ ಮಗ ಒಬ್ರೇ, ಈಗಲೇ ಆರು ಜನ ಇದೀವಿ, ಮತ್ತೊಂದು ಮಗು ಆದ್ರೆ ಸಾಕೋದು ಕಷ್ಟ ಆಗಬೋದು ಅನ್ನೋ ಅರ್ಥಕ್ಕೆ ಹೇಳಿದ್ದು ಅತ್ತೆ "
"ಅದಕ್ಕೆ ಆಲ್ವಾ ಆ ಮಗುನ ತೆಗ್ಸಿದ್ದು? ಗಂಡು ಮಗುನ ಹೆರೋಕು, ಬೆಳೆಸೋಕು ಪುಣ್ಯ ಬೇಕು. ನೋಡು ಸೀತಾ ನೀನು ಅಗತ್ಯಕ್ಕಿಂತ ಹೆಚ್ಚಿನ ವಿಷ್ಯಕ್ಕೆ ಮೂಗು ತೂರಿಸೋದು ಬಿಟ್ಟು ಆದಷ್ಟು ಬೇಗ ಇನ್ನೊಂದು ಮಗು ಹೆರೋಕೆ ಸಿದ್ಧ ಆಗು. ಹೇಗೂ ಜೋಯೀಸ್ರು ಹೇಳಿದಾರೆ ಹುಟ್ಟೋದು ಗಂಡೇ ಅಂತ ಮತ್ಯಾಕೆ ಚಿಂತೆ "
"ಅತ್ತೆ ನಂದು ಒಂದು ಪ್ರಶ್ನೆ ಇದೆ "
"ಏನ್ ಹೇಳು "
"ಒಂದ್ವೇಳೆ ಆ ಜೋಯೀಸ್ರ ಮಾತು ಸುಳ್ಳಾಗಿ ನನಗೇನಾದ್ರೂ ಮತ್ತೊಂದು ಹೆಣ್ಣು ಹುಟ್ಟಿದರೆ, ಆಗ ಆ ಮಗುನ ನೀವೆಲ್ರೂ ಇಷ್ಟೇ ಪ್ರೀತಿಯಿಂದ ಒಪ್ಕೋತೀರಾ? ನಿಮ್ಮ ಮೊಮ್ಮಗು ಅಂತ ಸ್ವೀಕರಸ್ತೀರಾ?"
(ಸೀತಾ ಜೋರಾಗಿ ಅಳುತ್ತಿದ್ದಳು )
"ಥೂ! ಯಾವಾಗ್ಲೂ ಅಪಶಕುನ ನುಡಿತೀಯಲ್ಲ ಸೀತಾ! ಇಲ್ಲಿವರೆಗೂ ಅವರ ಮಾತು ಯಾವ್ದು ಸುಳ್ಳಾಗಿಲ್ಲ. ನೀನು ಚಿಂತೆ ಮಾಡಿ ಭಯ ಪಡ್ಬೇಡ, ಹುಟ್ಟೋದು ಗಂಡೇ. ಹಾಗೂ ನಿನ್ನ ಸಮಾಧಾನಕ್ಕೆ ಹೇಳ್ಬೇಕು ಅಂದ್ರೆ ಹೆಣ್ಣು ಹುಟ್ಟಿದ್ರೆ ಅದನ್ನೂ ನಾವು ಒಪ್ಕೋತೀವಿ, ದೀಪಾ ತರ. ಆಯ್ತಾ "
ಸೀತಾಳಿಗೆ ಅತ್ತೆಯ ಮಾತು ಎಲ್ಲವೂ ನಾಟಕೀಯ ಎಂದು ತಿಳಿದಿತ್ತು
ಗಂಡಲ್ಲದೆ ಅವರಿಗೆ ಬೇರೇನೋ ಬೇಕಿರಲಿಲ್ಲ. ಅಲ್ಲದೆ ತಾನು ಹೆರುವ ಮಗುವಿನ ಬಗ್ಗೆ, ತನಗೆ ನಿರ್ಧಾರ ಮಾಡುವ ಹಕ್ಕಿಗೆ ಅತ್ತೆ ಮೂಗು ತೂರಿಸುವುದು ಅಂದಿದ್ದು ಸೀತಾಳಿಗೆ ಇನ್ನಷ್ಟು ಬೇಸರ ನೀಡಿದ್ದವು. ತಾನೊಂದು ಮಗು ಹೆರುವ ಯಂತ್ರ ಮಾತ್ರವೆಂದು ಕಣ್ಣೀರಿಡುತ್ತ ಮಕ್ಕಳಿಗೆ ಹಾಲು ಕೊಡಲು ಹೋದಳು ಸೀತಾ.
ಹಿಂದೆಯೇ ಬಂದ ಗಂಡ, ಸೀತಾಳನ್ನು ಕೋಣೆಗೆ ಆಹ್ವಾನಿಸಿದ್ದ. ಅವನಿಗೆ ಗಂಡು ಮಗುವು ಬೇಕಿತ್ತೋ? ಸೀತಾಳ ದೇಹ ಬೇಕಿತ್ತೋ! ಸೀತೆ ಮಾತ್ರ ಗಂಡು ಮಗುವನ್ನು ಹೆತ್ತು ಈ ಜವಾಬ್ದಾರಿಯಿಂದ ಹಗುರಾಗಲು ನೋಡಿದಳು.
(ಸೀತಾಳ ಮುಂದಿನ ಜೀವನ ಏನಾಯಿತು ಎನ್ನುವುದನ್ನು ಮುಂದಿನ ಭಾಗದಲ್ಲಿ ನಿರೀಕ್ಷಿಸಿ?
