Hurry up! before its gone. Grab the BESTSELLERS now.
Hurry up! before its gone. Grab the BESTSELLERS now.

Revati Patil

Classics Inspirational Others


3  

Revati Patil

Classics Inspirational Others


ಮಮತಾಮಯಿ 1

ಮಮತಾಮಯಿ 1

2 mins 180 2 mins 180


ಶಾರದಾ ವಯಸ್ಸಾದ ಗಂಡನಿಗೆ ಗೊಣಗುತ್ತ ಮನೆಯ ಹೊರಗಿನ ಜಗುಲಿಯ ಮೇಲೆ ಲೋಕದ ಅರಿವೇ ಇಲ್ಲದಂತೆ ಪ್ರಜ್ಞಾಹೀನನಂತೆ ಬಿದ್ದಿದ್ದ ಮಗ ಲೊಕೇಶನನ್ನು ನೀರು ಚಿಮುಕಿಸಿ ಎಬ್ಬಿಸುವ ಪ್ರಯತ್ನ ಮಾಡಿದಳು. ಲೋಕೇಶ ಎದ್ದರೂ, ಅವನು ಮಾತಾಡುವುದು, ತನ್ನನ್ನು ಅಮ್ಮ ಎಂದು ಕರೆಯುವುದು ಈ ಜನ್ಮದಲ್ಲಿ ಅಸಾಧ್ಯವೆನ್ನುವುದು ಅವಳಿಗೂ ಗೊತ್ತಿದೆ. ಆದರೂ ತಾಯಿ ಹೃದಯ ಕೇಳಬೇಕಲ್ಲ? ಎಂದೋ ಒಂದು ದಿನ ಅಮ್ಮ ಎಂದು ಕೂಗಿ ಪವಾಡ ನಡೆದರೂ ನಡೆದೀತು ಎಂದು ಕಳೆದ ಹತ್ತು ವರ್ಷಗಳಿಂದಲೂ ಶಾರದಾ ನಂಬಿಕೊಂಡೆ ಬಂದಿದ್ದಾಳೆ. ಗಂಡನಿಗೆ ಈ ಮಾನಸಿಕ ಅಸ್ವಸ್ಥ ಮಗನ ಬಗ್ಗೆಯಾಗಲಿ, ಶಾರದೆ ಬಗ್ಗೆಯಾಗಲಿ ಹೆಚ್ಚಿನ ಒಲವಿದ್ದಂತೆ ಕಾಣಿಸುತ್ತಿಲ್ಲ. ಯಾವುದೊ ಪಾಪಪ್ರಜ್ಞೆಯ ಸುಳಿಯೊಳಗೆ ಸಿಲುಕಿದಂತೆ ಶಾರದೆಯ ಗಂಡ ಸೋಮಣ್ಣನ ಜೀವನ ಕಾಣುತ್ತಿದೆ. ಗಂಡನ ಈ ಅಲಕ್ಷತನ ಶಾರದೆಗೂ ರೋಸಿ ಹೋಗುವಷ್ಟು ಕೋಪ ತರಿಸುತ್ತದೆ. ಆದರೆ ವಿಧಿಯಿಲ್ಲದೆ ದವಡೆ ಕಚ್ಚಿ ಕೂತಿದ್ದಾಳೆ.


ಸೋಮಣ್ಣ, ಶಾರದಾ ತಮ್ಮ ಮಗು ನಾಲ್ಕೈದು ವರ್ಷದವನಾಗುವವರೆಗೂ ಮಗನ ಮಾನಸಿಕ ಆರೋಗ್ಯದ ಬಗ್ಗೆ ಯೋಚಿಸಿರಲಿಲ್ಲ. ಚಿಕ್ಕ ಮಗು ಹಾಗೆ ಆಡುವುದು ಸಹಜವೆಂದು ಭಾವಿಸಿ ತೀರ ತಲೆಗೆ ತೆಗೆದುಕೊಂಡಿರಲಿಲ್ಲ. ಅವನಿಗಿಂತ ಚಿಕ್ಕ ವಯಸ್ಸಿನ ಮಕ್ಕಳೆಲ್ಲ ನಡೆದು, ಮಾತಾಡಿ ಆಡುವುದನ್ನು ನೋಡಿದಾಗ ಶಾರದಾ ಎಚ್ಚರವಾಗಿದ್ದಳು. ಐದು ವರ್ಷ ಕಳೆದರೂ ಮಲಗಿದಲ್ಲಿಯೇ ಮಲ, ಮೂತ್ರ ಮಾಡಿಕೊಂಡು, ಯಾವಾಗಲೂ ಬಾಯಿಯಿಂದ ಸೋರುವ ಜೊಲ್ಲು, ಅಪ್ಪ, ಅಮ್ಮ, ಅಣ್ಣ, ಯಾರೇ ಮಾತಾಡಿದರೂ ಅವರತ್ತ ಲೊಕೇಶನ ದೃಷ್ಟಿಯೂ ಹೋಗುತ್ತಿರಲಿಲ್ಲ. ತನ್ನ ಲೋಕದಲ್ಲೇ ತಾನು ಕಳೆದು ಹೋಗುತ್ತಿದ್ದ. ಸೋಮಣ್ಣ ಹಂಬಲಿಸಿ, ಹಂಬಲಿಸಿ ಗಂಡು ಮಗುವಿಗಾಗಿ ಕಾದಿದ್ದ. ಈಗ ಈ ಮಗ ಜೀವನ ಪರ್ಯಂತ ಹೀಗೆಯೇ ಬಾಳುವುದಾದರೆ ಹೇಗೆ? ಎನ್ನುವ ಕಳವಳ ಸೋಮಣ್ಣನಿಗೆ ಬಂದಿದ್ದೆ ತಡ ಮಗನ ಮೇಲಿನ ಕಾಳಜಿ, ಮಮತೆ ಅಸಡ್ಡೆಯಾಗಿ ಬದಲಾಗತೊಡಗಿತು.


ಲೋಕೇಶ ಮೂರನೇ ಮಗ. ಅವನಿಗೂ ಮೊದಲು ಈ ದಂಪತಿಗಳಿಗೆ ಚೊಚ್ಚಲ ಮಗಳಾಗಿ ನಾಗರತ್ನ, ಎರಡನೇ ಮಗ ಹಿತೇಶ ಹುಟ್ಟಿದ್ದರು. ವಂಶ ಬೆಳೆಯಲು ಗಂಡು ಮಗುವೇ ಮೊದಲು ಹುಟ್ಟಬೇಕೆಂದು ಶಾರದಾ ಗರ್ಭಿಣಿ ಆಗಿದ್ದಾಗಲೇ ಸೋಮಣ್ಣ ಅವಳಿಗೆ ಮಾನಸಿಕವಾಗಿ ಒತ್ತಡ ಹೇರುತ್ತಿದ್ದ. ಅವಳಿಗೆ ಇಷ್ಟವಿದ್ದೋ, ಇಲ್ಲದೆಯೋ ಗಂಡು ಮಗುವೇ ಹುಟ್ಟಲಿ ಎಂದು ಜಪಿಸಿದ್ದಳು. ಸೋಮಣ್ಣ ಶಾರದೆಯನ್ನು ಮದುವೆಯಾದಾಗ ಆಗಲೇ ಅವನಿಗೆ ನಾಲವ್ವತ್ತೈದರ ಪ್ರಾಯವಾಗಿತ್ತು. ಬಡತನದ ಕಾರಣಕ್ಕೆ ಶಾರದಾಳ ತಂದೆ ವರದಕ್ಷಿಣೆ ಕೇಳದೆ ಮದುವೆಯಾಗಲು ಸೋಮಣ್ಣ ಒಪ್ಪಿದ್ದೆ ತಮಗೆ ದೊರೆತ ಭಾಗ್ಯವೆಂದು ಮಗಳನ್ನು ಒತ್ತಾಯ ಪೂರ್ವಕವಾಗಿ ಸೋಮಣ್ಣನಿಗೆ ಕಟ್ಟಿದ್ದರು. ಈಗ ಸೋಮಣ್ಣ, ಶಾರದೆ ಸತಿ ಪತಿಗಳಾಗಿ ಹದಿನೈದಕ್ಕೂ ಹೆಚ್ಚು ವರ್ಷಗಳ ಕಾಲವಾಗಿರಬೇಕು. ತನಗೆ ವಯಸ್ಸಾಗುತ್ತಿದೆ, ತನ್ನ ತರುವಾಯ ಈ ಮನೆಗೆ ಗಂಡು ಮಗುವೊಬ್ಬ ಬರಲಿ ಎಂದು ಸೋಮಣ್ಣ ಬಯಸಿದದ್ದು ತಪ್ಪಲ್ಲ, ಗಂಡು ಮಗುವೇ ಹುಟ್ಟಬೇಕೆಂದು ಹಠಕ್ಕೆ ಬಿದ್ದಿದ್ದ, ಅದು ತಪ್ಪಾಗಿತ್ತು. ನಾಗರತ್ನ ಹುಟ್ಟಿದಾಗಿನಿಂದಲೂ ಅಪ್ಪನ ತಾತ್ಸಾರಕ್ಕೆ ಒಳಗಾದವಳು. ಅವಳನ್ನ ದ್ವೇಷಿಸಲು ಅವರ ಅಪ್ಪನಿಗೆ, ಅವಳೂ ಹೆಣ್ಣೆನ್ನುವ ಕ್ಷುಲ್ಲಕ ಕಾರಣವೇ ಸಾಕಿತ್ತು!


ನಾಗರತ್ನ ಅಮ್ಮನ ಮಡಿಲಲ್ಲಿ ಆಡುವಾಗಲೇ ಶಾರದೆಯ ಒಡಲು ಮತ್ತೊಂದು ಮಗುವನ್ನು ಹೊತ್ತು ನಿಂತಿತ್ತು. ಈ ಸಾರಿಯೂ ಸೋಮಣ್ಣ ಗಂಡು ಮಗುವನ್ನೇ ಹೆರಬೇಕು, ಇಲ್ಲದಿದ್ದರೆ ತವರು ಮನೆಗೆ ಹೋಗುವುದು ನಿಶ್ಚಿತ ಎಂದು ಶಾರದೆಗೆ ಹೇಳಿಬಿಟ್ಟಿದ್ದ. ಅದೃಷ್ಟವಶಾತ್ ಹಿತೇಶ್ ಹುಟ್ಟಿದ. ತಾಯಿ ಮುಖದಲ್ಲಿ ಯಾವುದೊ ಯುದ್ಧ ಜಯಿಸಿದ ಗೆಲುವಿದ್ದರೆ, ತಂದೆಯ ಮುಖದಲ್ಲಿ ವಂಶ ಉಳಿಯಿತು ಎನ್ನುವ ಸಂತಸ.


ಈ ಸಂತಸ ಹೆಚ್ಚು ದಿನ ಉಳಿಯಲಾರದು ಎನ್ನುವ ಚಿಕ್ಕ ಸುಳಿವು ಸೋಮಣ್ಣ, ಶಾರದೆಗೆ ಇರಲಿಲ್ಲ!

ಯಾಕೆ ಏನಾಯಿತು?


(ಮುಂದಿನ ಭಾಗದಲ್ಲಿ ನಿರೀಕ್ಷಿಸಿ )Rate this content
Log in

More kannada story from Revati Patil

Similar kannada story from Classics