Win cash rewards worth Rs.45,000. Participate in "A Writing Contest with a TWIST".
Win cash rewards worth Rs.45,000. Participate in "A Writing Contest with a TWIST".

Revati Patil

Classics Inspirational Others


4  

Revati Patil

Classics Inspirational Others


ಕೃಷ್ಣಸುಂದರಿ

ಕೃಷ್ಣಸುಂದರಿ

8 mins 197 8 mins 197

ಸೋಮಯ್ಯ ಮತ್ತು ದೇವಮ್ಮ ದಂಪತಿಗಳಿಗೆ ಮೂವರು ಮಕ್ಕಳು. ಹಿರಿಯವಳು ಸುಮಾ ಎರಡನೆಯವನು ರವಿ ಮೂರನೇಯವಳು ಸುಧಾ.. ಮೂಲತಃ ಬಡತನದ ಕುಟುಂಬವದು. ಸೋಮಯ್ಯ ಶುದ್ಧ ಸೋಮಾರಿ. ಅವನೆಂದೂ ಸಹ ಮಡದಿ ಮಕ್ಕಳ ಬಗ್ಗೆ ಯೋಚಿಸಿದವನೇ ಅಲ್ಲಾ. ತಾನಾಯಿತು ತನ್ನ ಕುಡಿತವಾಯಿತು ಹಾಗಿದ್ದು ಪಕ್ಕದೂರಿನ ಎಂದರೆ ಎನೋ ಸೆಳೆತವಿತ್ತು ಸೋಮಯ್ಯನಿಗೆ. ತಾನು ದುಡಿದಿದ್ದರಲ್ಲಿ ಕಂಠಪೂರ್ತಿ ಕುಡಿಯುತ್ತಿದ್ದ. ತನ್ನ ಬಡತನದ ಬಗ್ಗೆ ಸೋಮಯ್ಯನಿಗೆ ಸಹಿಸಲಾಗದಷ್ಟು ಕೋಪವಿತ್ತು. ಹಾಗೆಂದೇ ಅವನು ದೇವರಿಗೆ ಪ್ರತಿದಿನವೂ ಬೈಯ್ಯುತ್ತಿದ್ದ. ದೇವಮ್ಮ ಕೂಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು. ಸುಮಾ ನೋಡಲು ಮುದ್ದಾಗಿದ್ದಳು. ದುಂಡು ಮುಖದ ಉದ್ದ ಜಡೆಯ ಶ್ವೇತಸುಂದರಿ ಈಕೆ. ಸೋಮಯ್ಯನಿಗೆ ಸುಮಾಳ ಬಗ್ಗೆ ಜಂಭವಿತ್ತು. ಎಷ್ಟಾದರೂ ಮಗಳು ರೂಪವತಿ, ಮುಂದೆ ಯಾರಾದರೂ ಶ್ರೀಮಂತ ಹುಡುಗ ಈಕೆಯ ಸೌಂದರ್ಯಕ್ಕೆ ಮಾರುಹೋಗಬಹುದು, ಆಗ ಮದುವೆ ಖರ್ಚು ಹುಡುಗನ ಮೇಲೆ ಹಾಕಿದರಾಯಿತು ಎಂದು ಲೆಕ್ಕಾಚಾರ ಹಾಕುತ್ತಿದ್ದ. ಇನ್ನು ರವಿ ಬಗ್ಗೆಯೂ ಚಿಂತೆ ಇರಲಿಲ್ಲ. ರವಿ ಹೇಗೂ ಹುಡುಗನಲ್ವಾ, ಏನಾದರೂ ಮಾಡಿ ಜೀವನ ಸಾಗಿಸ್ತಾನೆ, ಇಲ್ಲಾ ಅವನ ಹಣೆಯಲ್ಲಿ 'ಮನೆಅಳಿಯ' ಆಗುವ ಯೋಗವಿದ್ದರೂ ಒಳ್ಳೆಯದು ಎಂದುಕೊಳ್ಳುತ್ತಿದ್ದ. ಆದರೆ ಅವನಿಗೆ ಸುಧೆಯ ಬಗ್ಗೆ ಮಾತ್ರ ತಿರಸ್ಕಾರ ಭಾವನೆಯಿತ್ತು. ತನ್ನ ಮಗಳೇ ಆದರೂ ಸೋಮಯ್ಯನಿಗೇ ಯಾಕೊ ಅಸಹನೆ, ಅದಕ್ಕೆ ಕಾರಣ ಅವಳು ಗುಣವಂತೆ ಆಗಿದ್ದರೂ ಕಪ್ಪು ಮೈಬಣ್ಣವುಳ್ಳವಳು. ಸೋಮಯ್ಯನಿಗೆ ಅದೇ ದೊಡ್ಡ ತಲೆ ನೋವಾಗಿತ್ತು. ಸುಮಾ, ರವಿ ಎಷ್ಟು ಲಕ್ಷಣವಾಗಿದ್ದಾರೆ, ಅವರ ಮದುವೆ ಖರ್ಚು ನನಗೆ ಬಾರದು ಆದರೆ ಈ ಸುಧಾನೋ....?! ಇವಳನ್ನು ಯಾರಾದರೂ ಒಪ್ಪುತ್ತಾರಾ? ಹಾಗೂ ಒಪ್ಪಿದರೆ ಅವರಿಗೆ ಎರಡು-ಮೂರು ಲಕ್ಷವಾದರೂ ಕೊಡಬೇಕಾಗತ್ತೊ ಏನೊ...! ಲೇ ದೇವಿ, ಅದೇನು ಅಂತಾ ಇವಳ್ನಾ ಹೆತ್ತಿದಿಯಾ ಕಣೆ? ನೋಡೋವ್ರೆಲ್ಲಾ ಕಪ್ ಸುಧಾಳ ಅಪ್ಪಾ ಅಂತಾ ರೇಗಸ್ತಾರೆ ಗೊತ್ತೇನೆ? ಇವಳೊಬ್ಳು ಹುಟ್ಟಿಲ್ಲಾ ಅಂದಿದ್ರೆ ಚನ್ನಾಗಿರ್ತಿತ್ತು ಅನ್ಸತ್ತೆ. ಒಂದೇ ಸಮನೆ ಮಾತಾಡ್ತಿದ್ದ ಸೋಮಯ್ಯನಿಗೆ, ದೇವಮ್ಮ ಬೈದಳು. "ಅದ್ಯಾಕ್ರಿ ಯಾವಾಗ್ಲೂ ಬಣ್ಣಾ, ಬಣ್ಣಾ ಅಂತ ಬಾಯಿ ಬಡ್ಕೋತಿರಾ? ಕಪ್ಪಗಿರೋರ್ಗೆ ಬದುಕೊ ಹಕ್ಕೇ ಇಲ್ವಾ? ಸುಧಾ ಕೇಳಿಸ್ಕೊಂಡ್ರೆ ಬೇಸರ ಮಾಡ್ಕೋತಾಳೆ ಅಃತಾ ನಿಮಗೆ ಅನ್ಸಲ್ವಾ? ಇಷ್ಟೆಲ್ಲಾ ಮಾತಾಡೋ ನೀವು ಒಮ್ಮೆ ಕನ್ನಡಿಯಲ್ಲಿ ನಿಮ್ಮ ಮುಖ ನೋಡ್ಕೋಳಿ. ನೀವೂ ಕಪ್ಪಗೇ ತಾನೇ ಇರೋದು? ಅಂದ್ಮೇಲೆ ಇನ್ನೋಬ್ಬರಿಗೆ ಅನ್ನೊ ಹಕ್ಕು ನಿಮಗಿಲ್ಲಾ. ಅಷ್ಟಕ್ಕೂ ಬಣ್ಣ ಅನ್ನೋದು ನಮ್ಮ ಕೈಯಲ್ಲಿ ಇಲ್ಲಾ. ಬೆಳ್ಳಗಿದ್ದರೇನೇ ಶ್ರೇಷ್ಠಾ, ಕಪ್ಪಗಿದ್ರೆ ಕನಿಷ್ಟಾ ಅಂತಾ ಕಾನೂನೇನಾದ್ರೂ ಇದೆಯಾ? ಇದೆಲ್ಲಾ ನಿಮ್ಮ ನಿಮ್ಮ ಸ್ವಾರ್ಥಕ್ಕೆ ಮಾಡ್ಕೊಂಡಿರೊ ಚೌಕಟ್ಟು. ಇವೆಲ್ಲಾ ನಿಮ್ಮ ಯೋಗ್ಯತೆ ತೋರ್ಸತ್ತೆ. ಅಷ್ಟೇ..! ನಮ್ಮ ಸುಧಾ ಕಪ್ಪಗಿದ್ರು ತುಂಬಾ ಲಕ್ಷಣವಾಗಿದ್ದಾಳೆ. ಅವಳು 'ಕೃಷ್ಣ ಸುಂದರಿ'.. 'ಕೃಷ್ಣಸುಂದರಿ' ದೇವಮ್ಮ ಕಣ್ಣು ಮುಚ್ಚಿ ಕುರ್ಚಿ ಮೇಲೆ ಕೂತರು. ಮದುವೆ ಆದಾಗಿನಿಂದಲೂ ಸೋಮಯ್ಯನ ಬಗ್ಗೆ ರೋಸಿ ಹೋಗಿದ್ದರು ದೇವಮ್ಮ. ಸೋಮಯ್ಯನನ್ನು ಸರಿದಾರಿಗೆ ತರಲು ದೇವಮ್ಮ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಿದ್ದರು. ಆದರೆ ಸೋತಿದ್ದರು. ವಾಸ್ತವದಲ್ಲಿ ಸೋತಿದ್ದು ದೇವಮ್ಮ ಅಲ್ಲಾ ಸೋಮಯ್ಯ..!!

ಹೀಗೆ ಸಮಯ ಸಾಗಿತ್ತು ಏನೊಂದೂ ಬದಲಾಗದೆ..!

'ಅಮ್ಮ,,,, ಅಮ್ಮ,,,,ಅಪ್ಪಾ ಮತ್ತೆ ಮನೆ ಬಿಟ್ಟು ಹೋಗಿರಬೇಕು ಅನ್ಸುತ್ತೆ. ಮನೇಲಂತೂ ಇಲ್ಲಮ್ಮಾ'

ಸುಮಾ ತನ್ನ ತಾಯಿಗೆ ಹೇಳಿದಳು.

ಅದಕ್ಕೆ ದೇವಮ್ಮ 'ಎಲ್ಲಿಗೆ ಹೋಗ್ತಾರೆ ಬಿಡು, ಕೈಲಿರೊ ಕಾಸು ಮುಗಿದ್ಮೇಲೆ ಬಂದೇ ಬರ್ತಾರೆ. ಇದೇನ್ ಹೊಸಾ ವಿಷಯಾನಾ ಹೇಳು? ಎಂದರು.

ಹೀಗೆ ವಾರಗಟ್ಟಲೆ ಸೋಮಯ್ಯ ಮನೆ ಬಿಟ್ಟು ಹೋಗುತ್ತಿದ್ದನಾದರೂ ಈ ಸಾರಿ ಅವನು ಹದಿನೈದು ದಿನಗಳಾದರೂ ಮರಳಿರಲಿಲ್ಲ.. ಮಕ್ಕಳಿಗೆ ಚಿಂತೆಯಾಗಿತ್ತು ಆದರೆ ದೇವಮ್ಮನ ಮುಖದಲ್ಲಿ ಶೂನ್ಯಭಾವವಿತ್ತು. 'ತನ್ನ ಗಂಡ ಮನೆಯಲ್ಲಿದ್ದಾಗಲೂ ತನಗೆ ನೆಮ್ಮದಿ ಎನ್ನುವುದು ಮರೀಚಿಕೆ ಆಗಿತ್ತು. ಹೆಂಡ್ತಿ ಅಂತಾ ನನಗೆ ಅವರು ಮಾಡಿದ್ದಾದರೂ ಏನು? ತನ್ನ ಸ್ವಂತ ಮಗಳ ಬಗ್ಗೆಯೇ ತಿರಸ್ಕಾರ ಹೊಂದಿರುವ ಇವನು ಒಬ್ಬ ಅಪ್ಪಾನಾ?' ದೇವಮ್ಮ ತನಗೆ ತಾನೇ ಪ್ರಶ್ನಿಸಿಕೊಂಡಳು. ಮಕ್ಕಳ ಭವಿಷ್ಯದ ಜವಾಬ್ದಾರಿಯನ್ನು ದೇವಮ್ಮ ದೇವರಿಗೆ ಬಿಟ್ಟಿದ್ದಳು.

ಅವಸರದಿಂದ ಮನೆಯೊಳಗೆ ಬಂದ ರವಿಯನ್ನು ಕಂಡ ದೇವಮ್ಮ ಕೇಳಿದರು. ಯಾಕಪ್ಪ ರವಿ, ಏನಾಯ್ತು? ಗಾಬರಿ ಆದಂಗಿದೆ, ಏನೋ ವಿಷ್ಯಾ?.

'ಅಯ್ಯೋ, ಗಾಬರಿ ಅಲ್ಲಮ್ಮಾ ಒಂದು ಒಳ್ಳೆ ಸುದ್ದಿ ತಂದಿದೀನಿ. ನಮ್ಮ ಸುಮಕ್ಕನ್ನಾ ನೋಡೋಕೆ ನಾಡಿದ್ದು ಸಿಂಗೂರಿಂದ ಬರ್ತಾರಂತೆ. ಹುಡುಗಾ ಕ್ಲರ್ಕ್ ಅಂತೆ. ಅಪ್ಪಾ, ಅಮ್ಮಾ, ಇಬ್ಬರು ತಂಗಿಯರು. ಕೊನೆಯವಳು ಮೈಸೂರಲ್ಲಿದಾಳಂತೆ. ದೊಡ್ಡವಳಿಗೆ ಮದುವೆ ಆಗಿ ಒಂಬತ್ತು ವರ್ಷಕ್ಕೆ ಗಂಡ ತೀರ್ಕೊಂಡಿದ್ರಿಂದ ಅವಳು ಅವಳ ಆರು ವರ್ಷದ ಮಗಳ ಜೊತೆ ತವರಮನೆಯಲ್ಲಿದ್ದಾಳೆ. ಹುಡುಗನಿಗೆ ಎರಡು ಎಕರೆ ಜಮೀನಿದೆ. ಒಂದ್ ಹೊಸ ಮನೆನೂ ಕಟ್ಟಸ್ತಾನಂತೆ. ನಮ್ಮ ಸುಮಾ ಅವನ ಕಣ್ಣಿಗೆ ಹೇಗ್ ಬಿದ್ಲೊ ಗೊತ್ತಿಲ್ಲ. ನೀವು ಏನು ಕೋಡೋದು ಬೇಡ, ದೇವಸ್ಥಾನದಲ್ಲಿ ಸರಳವಾಗಿ ಮದುವೆ ಮಾಡ್ಕೋಡಿ ಅಂದ್ರಮ್ಮಾ' ಎಲ್ಲವೂ ಒಂದೇ ಉಸಿರಿಗೆ ಹೇಳಿ ಮುಗಿಸಿದ್ದ ರವಿ. ತನ್ನ ಗೆಳೆಯನ ಅಪ್ಪನ ಮೂಲಕ ಈ ವಿಷಯ ರವಿಗೆ ತಿಳಿದಿತ್ತು.

ದೇವಮ್ಮನಿಗೆ ಖುಷಿ, ಗಾಬರಿ ಎರಡೂ ಆಯ್ತು. ಸೋಮಯ್ಯನ ಸುಳಿವೂ ಇಲ್ಲವಾಗಿತ್ತು.

ಮಕ್ಕಳ ಮದುವೆಯಂತೂ ಮಾಡಲೇ ಬೇಕಲ್ಲಾ. ದೇವಮ್ಮ ತನಗೆ ತಾನೇ ಧೈರ್ಯ ತಂದುಕೊಂಡು, ಸುಮಾಳ ಒಪ್ಪಿಗೆ ಪಡೆದು ಮದುವೆ ಸಿದ್ಧತೆಗೆ ಅಣಿಯಾದಳು. ದೇವಮ್ಮ ತಾನು ಅಷ್ಟು ಇಷ್ಟು ಕೂಡಿಟ್ಟ ಕಾಸಿನ ಜೊತೆಗೆ ರವಿ ಕೊಟ್ಟಿದ್ದ ಕಾಸು ಸೇರಿಸಿದಳು , ಸ್ವಲ್ಪ ಸಾಲವೂ ಸೇರಿ ಹೇಗೋ ಸುಮಾಳ ಮದುವೆ ಆಯ್ತು. ಅಪ್ಪ-ಅಮ್ಮ ಎರಡೂ ದೇವಮ್ಮಳೇ ಆಗಿದ್ದಳು.ಎಲ್ಲ ಶಾಸ್ತ್ರ ಸಂಪ್ರದಾಯ ಮುಗಿಸಿ ಸುಮಾ ಗಂಡನ ಮನೆ ಸೇರಿದಳು.

ಈಗಂತೂ ಮನೆ ತುಂಬಾ ನಿಶ್ಯಬ್ದದ ಆಡಳಿತವಿತ್ತು.

ಸೋಮಯ್ಯ, ಸುಮಾ ಇಬ್ಬರ ಅನುಪಸ್ಥಿತಿಯ ಜೊತೆಗೆ ರವಿಯು ಕೆಲಸಕ್ಕಾಗಿ ಬೇರೊಂದು ಊರಿನಲ್ಲಿದ್ದ. ಮನೆಯಲ್ಲಿ ಸುಧಾ, ದೇವಮ್ಮ ಇಬ್ಬರೇ ಉಳಿದಿದ್ದರು. ದೇವಮ್ಮಳಿಗೆ ಸುಧಾಳ ಮದುವೆ ಬಗ್ಗೆ ಚಿಂತೆಯಾಗಿತ್ತು. ದೇವಮ್ಮ ತನ್ನ ಮಗಳು ಕಪ್ಪು ಎಂದು ತಲೆ ಕೆಡಿಸಿಕೊಂಡವಳಲ್ಲ ಆದರೆ ಈಗ ಮದುವೆಯ ವಿಷಯದಲ್ಲಿ ಗಾಬರಿಯಾಗಿದ್ದಂತೂ ನಿಜ. ಹೌದು, ನಮ್ಮ ಸಮಾಜವೇ ಹಾಗಲ್ಲವೇ..!! ನಮ್ಮ ಸಮಾಜದ ಚಿಂತನೆಗಳೇ ಬೇರೆ, ಅದರ ಆಚರಣೆಗಳೇ ಬೇರೆ. ಇದೇ ಬಣ್ಣದ ಬಗ್ಗೆ ಮಾತಾಡುವ ಗಂಡು, ಅಷ್ಟು ಸುಲಭವಾಗಿ ಕಪ್ಪುಹುಡುಗಿಯನ್ನು ವಿವಾಹವಾಗಲಾರ. ಇದೇ ಆತಂಕ ಇಂದು ದೇವಮ್ಮಳ ಮುಖದಲ್ಲಿತ್ತು. ಸುಧಾಳನ್ನು ನೋಡಿದ ಎಷ್ಟೋ ಗಂಡುಗಳು ಮನೆಗೆ ಹೋದಮೇಲೆ ತಿಳಿಸ್ತೀವಿ ಎಂದು ನಂತರದಲ್ಲಿ ಸುಮ್ಮನಾಗುತ್ತಿದ್ದರು.ಸುಧಾಳಿಗೂ ಇದು ಅಭ್ಯಾಸವಾಗಿತ್ತು. ತನ್ನ ಕಪ್ಪು ವರ್ಣದ ಬಗ್ಗೆ ಅವಳು ರೋಸಿ ಹೋಗಿದ್ದಳು‌ ಈ ಪುರುಷ ಅಧಿಪತ್ಯದ ಸಮಾಜದಲ್ಲಿ, ಎಲ್ಲ ಬಣ್ಣಗಳ ಮೇಲೆ ಅವರಿಗಷ್ಟೇ ಅಧಿಕಾರವಿದೆ. ಹೆಣ್ಣಿಗೇನಿದ್ದರೂ ಬಿಳಿ ಬಣ್ಣವಿದ್ದರಷ್ಟೇ ಅಸ್ತಿತ್ವ ಉಳಿಯುವುದೆಂದು ಸುಧಾಳ ಮನಸ್ಸಲ್ಲಿ ಆಳವಾಗಿ ಬೇರೂರಿತ್ತು. ಆದರೆ ಸುಧಾ ಹೇಡಿಯಲ್ಲ. ಅವಳಿಗೆ ಮದುವೆ ಬಗ್ಗೆ ಯಾವ ಆಸಕ್ತಿಯೂ ಇರಲಿಲ್ಲ.. ಹೆಣ್ಣಿನ ಜೀವನಕ್ಕೆ ಮುಕ್ತಿ ಸಿಗುವುದು ಕೇವಲ ಮದುವೆಯಿಂದಲೇ ಅಲ್ಲ ಎಂಬುದು ಸುಧೆಯ ವಾದವಾಗಿತ್ತು.ಮದುವೆಯಾಗಿ ತನ್ನ ತಾಯಿ ಪಟ್ಟ ಪಾಡು ಅವಳಿಗೇ ತಿಳಿದೇ ಇತ್ತು. ಈ ಸುಖಕ್ಕಾಗಿ ತನ್ನ ತಾಯಿ ಮದುವೆಯಾದರೂ ಯಾಕಾಗಬೇಕಿತ್ತು? ತನ್ನಷ್ಟಕ್ಕೆ ತಾನೇ ಪ್ರಶ್ನಿಸಿಕೊಂಡಳು ಸುಧೆ.

ರವಿಗೂ ಸಾಕಾಗಿ ಹೋಗಿತ್ತು ತನ್ನ ತಂಗಿ ಸುಧಾಳಿಗಾಗಿ ಗಂಡುಗಳನ್ನು ನೋಡಿ ನೋಡಿ. ಹೇಗಾದರೂ ಮದುವೆ ಮಾಡಲೇಬೇಕಿತ್ತು. ಕೊನೆಗೂ ಸುಧಾಳನ್ನು ಮೆಚ್ಚಿ ಒಂದು ಗಂಡು ಬಂದಿತ್ತು. ಸುಮಾರು ಮೂವತ್ತೆರಡರ ಆಸುಪಾಸಿನ ವಯಸ್ಸು ಆಗಿರಬಹುದು ಆತನಿಗೆ. ಮೊದಲ ಹೆಂಡತಿ ಸತ್ತಿಂದರಿಂದ ಮತ್ತೊಂದು ಮದುವೆಗೆಂದು ಹೆಣ್ಣು ನೋಡುತ್ತಿದ್ದ. ಇವನನ್ನು ಕಂಡ ಕೂಡಲೇ ದೇವಮ್ಮನ ಕೋಪ ನೆತ್ತಿಗೇರಿತು.ತನ್ನ ಮಗಳಿಗೆ ಇಂದಲ್ಲ, ನಾಳೆ ಒಬ್ಬ ಹುಡುಗನನ್ನ ನೋಡಿ ಮದುವೆ ಮಾಡುತ್ತೇನೆ ನಿನ್ನಂತವನಿಗಲ್ಲ ನಡೆಯಿರಿ ಎಂದು ಖಾರವಾಗಿಯೇ ಹೇಳಿದಳು. ರವಿ ಎದ್ದೂ 'ನೋಡಿ ಸಂಗಮೇಶ್ ಬೇಸರ ಮಾಡ್ಕೋಬೇಡಿ, ಸುಧಾಳನ್ನು ಒಪ್ಪಿಸೋ ಜವಾಬ್ದಾರಿ ನಂದು. ನೀವೀಗ ಹೊರಡಿ' ಎಂದು ಅವನನ್ನು ಕಳುಹಿಸಿದನು..

ಸುಧಾ ಮಾಮೂಲಿಯಂತೆ ಮೌನವಾಗಿದ್ದಳು. ರವಿ-ದೇವಮ್ಮಳ ನಡುವೆ ಮಾತಿನ ಯುದ್ಧವೇ ನಡೆದಿತ್ತು.

'ಸುಧೆ ನಿನ್ನ ತಂಗಿ ಅನ್ನೋದು ಮರ್ತಿದಿಯಾ ನೀನು. ಅವಳ ಮದುವೆ ಚಿಂತೆ ನಿನಗೆ ಬೇಡ, ಅವಳ ಮದುವೆ ಆಗದೇ ಇದ್ರೂ ಪರವಾಗಿಲ್ಲ, ನಾನ್ ಸಾಯೋವರೆಗೂ ಅವಳನ್ನ ನಾನು ನೋಡ್ಕೋಳ್ತಿನಿ' ದೇವಮ್ಮ ರವಿಗೆ ಕಟುವಾಗಿ ಹೇಳಿದರು.

ಅಮ್ಮ, ಅದು ಹಾಗಲ್ಲ ಎಂದು ರವಿಯೂ ಬೇರೊಂದು ವಿಷಯಕ್ಕೆ ಪೀಠಿಕೆ ಹಾಕುತ್ತಿದ್ದ ಅದೇನೆಂದು ದೇವಮ್ಮ ಕೇಳಿದಳು.

'ನಾನ್ ಕೆಲಸ ಮಾಡೊ ಕಡೆ ಒಂದು ಹುಡುಗಿನ ಇಷ್ಟ ಪಟ್ಟಿದೀನಿ ಅಮ್ಮ. ಆದರೆ ಸುಧಾಳ ಮದುವೆ ನಂತರ ನಮ್ಮ ಮದುವೆ ಅಂತ ನಿರ್ಧಾರ ಮಾಡಿದ್ವಿ. ಪಾಪ ಅವಳು ನಾಲ್ಕು ವರ್ಷದಿಂದ ಕಾಯ್ತಿದಾಳೆ. ಈಗ ಅವರ ಮನೇಲಿ ಅವಳಿಗೆ ಗಂಡು ನೋಡೋಕೆ ಶುರು ಮಾಡಿದ್ದಾರೆ ಆದರೆ ಅವಳು ನನ್ನ ಬಿಟ್ಟು ಯಾರನ್ನೂ ಮದುವೆಯಾಗಲ್ಲ ಅಂತ ಹೇಳಿದ್ದಾಳಮ್ಮ. ಅದಕ್ಕೆ ಮೊದಲು ಸುಧಾಳ ಮದುವೆ ಮಾಡೋಣ ಅಂತ ಸಂಗಮೇಶನನ್ನು ಕರೆತಂದೆ. ಅವನು ನಾವ್ ಕೆಲಸ ಮಾಡೊ ಕಡೇನೆ ಕೆಲಸ ಮಾಡ್ತಿದಾನೆ. ತುಂಬಾ ಒಳ್ಳೆ ಮನುಷ್ಯ ಹೆಂಡತಿ ಇಲ್ಲ ಅಂತಾ ಅವನು ಮದುವೆ ಆಗ್ತಿಲ್ಲಾ, ತನ್ನಿಬ್ಬರು ಚಿಕ್ಕ ಮಕ್ಕಳ ಸಲುವಾಗಿ ಮದುವೆಗೆ ಹುಂ ಅಂದಿದ್ದಾ. ಹೀಗೆ ಬಿಟ್ರೆ ಸುಧಾಳನ್ನು ಯಾರಮ್ಮಾ ಮದುವೆ ಆಗ್ತಾರೆ? ಅದಿಕ್ಕೆ ನಾನು ಅವರನ್ನು ಕರ್ಕೊಂಡು ಬಂದಿದ್ದು' ಎಂದು ರವಿ ಹೇಳಿದ.

ದೇವಮ್ಮ ಇನ್ನೂ ಕೋಪದಲ್ಲಿದ್ದಳು. ನಿನ್ನ ಮದುವೆಗಾಗಿ ನಿನ್ನ ತಂಗಿ ಜೀವನ ಹಾಳು ಮಾಡೋಕೆ ಹೋಗ್ತಿದಿಯಲ್ಲ..!! ಇನ್ಮೇಲೆ ಸುಧಾಳ ವಿಷಯದಲ್ಲಿ ನೀನು ಜವಾಬ್ದಾರಿ ತಗೋಬೇಕಿಲ್ಲ. ಅದ್ಯಾರನ್ನೋ ಮದ್ವೆ ಆಗ್ಬೇಕು ಅಂದ್ಯಲ್ಲಾ ಹೋಗಿ ಮದುವೆ ಆಗು. ಇನ್ಮೇಲಿಂದ ನನ್ನಾ, ಸುಧಾಳನ್ನ ನೋಡೋಕು ಬರಬೇಡ ಹೋಗು ಎಂದಳು ದೇವಮ್ಮ. ರವಿ ಹೋಗಿಯೇ ಬಿಟ್ಟ..!!

ಈ ನಡುವೆ ಸುಮಾಳಿಗೆ ಮಗುವಾಗಿತ್ತು ದೇವಮ್ಮ, ಸುಧಾ ಇಬ್ಬರು ಸೇರಿ ಬಾಣಂತಿಯ ಆರೈಕೆ ಮಾಡಿ ಐದು ತಿಂಗಳಿಗೆ ಸಮಾಳನ್ನು ಕಳುಹಿಸಿಕೊಟ್ಟರು.

ಅತ್ತ ರವಿ ಹೋಗುವಷ್ಟರಲ್ಲಿ ವಾಣಿ ತನ್ನ ತಂದೆ ತಾಯಿಗೆ ತಮ್ಮ ಪ್ರೀತಿಯ ಬಗ್ಗೆ ಹೇಳಿ ಮದುವೆಗೆ ಒಪ್ಪಿಗೆ ಪಡೆದಿದ್ದಳು ಒಬ್ಬಳೇ ಮಗಳಾದ್ದರಿಂದ ಅವಳ ಹೆತ್ತವರು ವಿರೋಧಿಸಲಿಲ್ಲ. ರವಿಗೂ ಸ್ವಲ್ಪಮಟ್ಟಿಗೆ ಸಮಾಧಾನ ಆಗಿತ್ತು. ಮದುವೆಗೆ ದೇವಮ್ಮ ಹೋಗಲಿಲ್ಲ. ರವಿಯು ಒತ್ತಾಯ ಮಾಡಲಿಲ್ಲ. ಹೊಸ ಜೀವನದ ಬಗ್ಗೆ ಖುಷಿಯಾಗಿದ್ದ. ಅದರ ಜೊತೆಗೆ ರವಿಯ ಅತ್ತೆ ಮಾವ ತಮ್ಮೆಲ್ಲ ಆಸ್ತಿಯನ್ನು ವಾಣಿ ರವಿ ಹೆಸರಿಗೆ ಮಾಡಿದ್ದರು ಒಂದು ಕರಾರಿನ ಜೊತೆ. ಅದೇನೆಂದರೇ ರವಿ ಮನೆ ಅಳಿಯನಾಗುವುದು. ರವಿ ಇದಕ್ಕೆ ಕ್ಷಣಮಾತ್ರದಲ್ಲಿ ಒಪ್ಪಿದ್ದನು. (ರವಿಯ ತಂದೆಯ ಕನಸು ಇದೇ ಆಗಿತ್ತು)

ಅವನು ಹೊಸ ಕುಟುಂಬದ ಗುಂಗಲ್ಲಿ ದೇವಮ್ಮ ಸುಧೆಯನ್ನು ಮರೆತೇ ಬಿಟ್ಟನು.

ಇತ್ತ ಸುಧೆಯನ್ನು ಯಾರು ಒಪ್ಪುತ್ತಿಲ್ಲ ಎಂದು ಕೊರಗುತ್ತಾ ದೇವಮ್ಮ ಹಾಸಿಗೆ ಹಿಡಿದರು. ದೇವಮ್ಮ ದಿನದಿನವೂ ಕುಗ್ಗಿದರು. ರವಿಗಂತೂ ಇದ್ಯಾವುದರ ಪರಿವೆಯೇ ಇರಲಿಲ್ಲ. ಸುಧಾ ತನ್ನ ತಾಯಿಯನ್ನು ಉಳಿಸಿಕೊಳ್ಳಲು ಎಲ್ಲ ಕಸರತ್ತು ನಡೆಸಿದಳು. ದೇವಮ್ಮಳನ್ನು ದೊಡ್ಡ ಆಸ್ಪತ್ರೆಗೆ ಸೇರಿಸಲು ವೈದ್ಯರು ಸೂಚಿಸಿದರು. ಸುಧಾಳಿಗೋ ಪ್ರಪಂಚವೆ ಮುಳುಗಿದಂತಾಯಿತು. ಹುಟ್ಟಿದಾಗಿನಿಂದಲೂ ಅವಳು ತನ್ನೂರಲ್ಲದೇ ಬೆರೇನೂ ನೋಡಿರಲಿಲ್ಲ. ಆದರೆ ಸುಧಾ ಧೈರ್ಯಗೆಡದೆ ತನ್ನ ತಾಯಿಯನ್ನು ಉಳಿಸಿಕೊಳ್ಳಲೆ ಬೇಕೇಂದು ತಯಾರಾದಳು. ಆದರೆ ಆಕೆಗೆ ಹಣದ ಅವಶ್ಯಕತೆ ಇತ್ತು. ಸುಧಾ ತಡಮಾಡದೆ ತನ್ನಕ್ಕ ಸುಮಾಳ ಮನೆಗೆ ಹೋದಳು. ಸುಮಾಳ ಮನೆಯ ಪರಿಸ್ಥಿತಿಯೂ ಉತ್ತಮವಾಗಿರಲಿಲ್ಲ. ಮನೆಯಲ್ಲಿ ದುಡಿಯುತ್ತಿದ್ದದ್ದು ಸುಮಾಳ ಗಂಡ ಒಬ್ಬನೇ, ಮನೆಯಲ್ಲಿದ್ದದ್ದು ಏಳು ಜನ.!! ಸುಮಾ ತನ್ನ ತಾಯಿಯ ಬಗ್ಗೆ ಮರುಕಪಟ್ಟಳು ತನ್ನಿಂದ ಯಾವ ಸಹಾಯವು ದೊರಕದ್ದಕ್ಕೆ ಅತ್ತಳು ಆದರೆ ಅವಳು ಅಸಹಾಯಕಳಾಗಿದ್ದಳು ಹಾಗೆಯೇ ರವಿಯ ಬಗ್ಗೆಯೂ ಕೋಪಿಸಿಕೊಂಡಳು.

ಸುಧಾ ತನ್ನ ಅಕ್ಕನಿಗೆ ಭಾವನಿಂದ ರವಿ ಬಗ್ಗೆ ವಿಚಾರಿಸಲು ಹೇಳಿ ಮನೆಗೆ ಹೋದಳು.‌ ಸುಮಾಳ ಗಂಡ ತನಗೆ ಗೊತ್ತಿರುವ ಕಡೆ ರವಿಯ ಬಗ್ಗೆ ವಿಚಾರಿಸಿದ. ರವಿ ಊರು ಬಿಟ್ಟು ಬೇರೆ ಊರಿಗೆ ಹೋಗಿದ್ದಾರೆಂದಷ್ಟೆ ತಿಳಿಯತು ಆದರೆ ಅವನ ಪತ್ತೆಯಾಗಲಿಲ್ಲ.

ಸುಧಾಳಿಗೆ ದುಡ್ಡಿನ ಅಗತ್ಯವಿತ್ತು ಅದಕ್ಕಾಗಿ ಆಕೆಯೊಂದು ನಿರ್ಧಾರಕ್ಕೆ ಬಂದಳು ನೇರವಾಗಿ ಸಂಗಮೇಶನ ಮನೆಗೆ ನಡೆದಳು. ತನ್ನ ತಾಯಿಯ ಕತೆಯನ್ನು ಹೇಳಿ ತನಗೆ ದುಡ್ಡಿನ ಅಗತ್ಯವಿದೆಯೆಂದು ಹೇಳಿದಳು. ಒಂದು ವರ್ಷದಲ್ಲಿ ಸಾಲ ತೀರಿಸುತ್ತೇನೆ ಎಂದಳು. ಸಂಗಮೇಶ ಅವಳೊಂದಿಗೆ ಮನೆಗೆ ಬಂದು ದೇವಮ್ಮನನ್ನು ಕಂಡು ಆಸ್ಪತ್ರೆಗೆ ತಾನೆ ಕರೆದುಕೊಃಡು ಹೋಗುತ್ತೇನೆ ಎಂದ. ದೇವಮ್ಮಳಿಗೆ ತಾನು ಹಿಂದೆ ಬೈದಿದ್ದು ನೆನಪಾಗಿ ಅತ್ತಳು. ತನ್ನ ಮಗ ರವಿಯ ಬಗ್ಗೆ ಕೇಳಿದಳು. ರವಿ ಕೆಲಸ ಬಿಟ್ಟು ಮಂಗಳೂರಿಗೆ ಹೋಗಿ ಸುಮಾರು ಎಂಟು ವರ್ಷದ ಮೇಲಾಗಿರಬೇಕೆಂದು ಸಂಗಮೇಶ ಹೇಳಿದ. ಸುಧಾ ತಿಂಡಿ ತಂದಳು ಮೂವರು ತಿಂದು ಆಸ್ಪತ್ರೆಗೆ ಹೋಗಲು ಅಣಿಯಾದರು. ದೊಡ್ಡ ಊರಲ್ಲಿ ದೊಡ್ಡ ಆಸ್ಪತ್ರೆ ನೋಡಿ ಸುಧಾ, ದೇವಮ್ಮ ದಂಗಾಗಿದ್ದರು. ಎರಡು ಮೂರು ದಿನ ಅಲ್ಲೀಯೇ ಇರಬೇಕಿತ್ತು. ಸಂಗಮೇಶ ಪದೇಪದೇ ತನ್ನ ಮಕ್ಕಳ ಬಗ್ಗೆ ಯೋಚಿಸುತ್ತಿದ್ದ ಇದನ್ನು ತಿಳಿದ ದೇವಮ್ಮ ಇನ್ನಷ್ಟು ಕುಗ್ಗಿದರು. ಇವನಿಗೆ ಸುಧಾಳನ್ನು ಕೊಟ್ಟಿದ್ದರೆ ಚನ್ನಾಗಿತ್ತು ಎಲ್ಲರಂತೆ ಸುಧಾಳಿಗೂ ಸಂಸಾರ ಸಿಗುತ್ತಿತ್ತು, ಇಷ್ಟೋತ್ತಿಗೆ ಐದಾರು ವರ್ಷದ ಮಗನೋ ಮಗಳೊ ಇರ್ತಿತ್ತೆನೊ ಎಂದು ವ್ಯಥೆ ಪಟ್ಟರು. ಈಗಲೂ ಇವನು ಮದುವೆಯಾಗಿಲ್ಲವೆಂದರೆ ಸುಧಾ ಬಗ್ಗೆ ಅವನ ಅಭಿಪ್ರಾಯ ಕೇಳಬೇಕೆಂದು ದೇವಮ್ಮ ನಿರ್ಧರಿಸಿದರು ಅಷ್ಟರಲ್ಲೇ ಪಕ್ಕದ ಬೆಡ್ ಮೇಲಿನ ಪೇಷಂಟ್ ನರಳುತ್ತಿರುವುದನ್ನು ನೋಡಿದ ದೇವಮ್ಮ ಆ ಧ್ವನಿ ತನಗೆ ಪರಿಚಿತ ಎಂದು ನೋಡಲು ಪ್ರಯತ್ನಿಸಿದಳು ಅದು ಬೇರಾರು ಆಗಿರದೆ ಅವಳ ಗಂಡ ಸೋಮಯ್ಯನಾಗಿದ್ದ..!

ದೇವಮ್ಮ ಸುಧಾಳಿಗೆ ಆಶ್ಚರ್ಯವಾಯಿತು ಸೋಮಯ್ಯನನ್ನು ಅಲ್ಲಿ ನೋಡಿ.. ಸೋಮಯ್ಯನಿಗೆ ನಾಚಿಕೆಯಾಯಿತು. ತುಂಬಾ ಸೊರಗಿ ಸಣಕಲಾಗಿದ್ದ. ಪಕ್ಕದೂರಿನ ಕಮಲಿ ಬಣ್ಣಕ್ಕೆ ಮಾರುಹೋಗಿ ಅವಳನ್ನು ನಂಬಿ ಈ ಊರಿಗೆ ಬಂದು ಹಾಳಾದೆ ಎಂದು ತನ್ನ ಕಥೆ ಬಿಚ್ಚಿಟ್ಟ. ದೇವಮ್ಮಳಿಗೆ ಗಂಡನ ಪರಿಸ್ಥಿತಿ ಕಂಡು ದುಃಖವಾದರೂ ಸುಧೆಯ ಬಣ್ಣದ ಬಗ್ಗೆ ಸೋಮಯ್ಯ ಆಡಿದ್ದ ಮಾತೆಲ್ಲ ನೆನಪಾದವು.

'ಸುಧೆಗೆ ನೀವು ಆಡಿದ ಮಾತುಗಳೇ ಇವತ್ತಿನ ನಿಮ್ಮ ಪರಿಸ್ಥಿತಿಗೆ ಕಾರಣಾ. ಅವಳ ಮೈಬಣ್ಣ ನಿಮಲ್ಲಿ ತಿರಸ್ಕಾರ ಮೂಡಿಸಿತ್ತು ಅಲ್ವಾ? ಯಾವ ಬಣ್ಣ ಶ್ರೇಷ್ಠ ಅಂತ ನೀವು ಮರುಳಾಗಿದ್ದರೊ ಆ ಬಣ್ಣದ ಮುಖವಾಡ ಕಳಚಿರಬೇಕಲ್ಲಾ?' ಎಂದು ದೇವಮ್ಮ ಸೋಮಯ್ಯನಿಗೆ ವ್ಯಂಗ್ಯವಾಗಿಯೇ ಚುಚ್ಚಿದಳು. ಆದರೆ ಸೋಮಯ್ಯನಿಗೆ ಇದೆಲ್ಲ ಅರ್ಥವಾಗಿ ತುಂಬಾ ದಿನಗಳಾಗಿತ್ತು. ಅದರಿಂದಲೇ ಅವನು ಹೆಂಡತಿ ಮಕ್ಕಳಿಗೆ ಮುಖ ತೋರಿಸದಿರಲು ನಿರ್ಧರಿಸಿ ಇಲ್ಲಿಯೇ ಉಳಿದಿದ್ದ. ಸೋಮಯ್ಯನಿಗೆ ಸುಮಾ, ರವಿ ಮದುವೆ ಆಗಿದ್ದು ಕೇಳಿ ಸಂತಸಪಟ್ಟ. ರವಿಯ ಬಗ್ಗೆ ಕೋಪವೂ ಬಂತು. ಸೋಮಯ್ಯ ಸುಧಾಳನ್ನು ನೋಡಿದ. ಅದೇ ಶಾಂತರೂಪ.. ಹೌದು ಈಕೆ "ಕೃಷ್ಣಸುಂದರಿ"..ಸೋಮಯ್ಯನಿಗೆ ಮಾತಾಡಲು ನಾಚಿಕೆಯಾಯಿತು. ಮಗಳ ಬಳಿ ಕ್ಷಮೆ ಕೇಳಿದ. ಯಾರನ್ನು ಕೇವಲ ಎಂದು ತಿಳಿದಿದ್ದನೋ ಅದೇ ಸುಧಾ ಇಂದು ತಂದೆ ತಾಯಿಯ ಸೇವೆಗೆ ನಿಂತಿದ್ದಳು. ಹೀಗೆ ಎರಡು ಮೂರು ದಿನ ಕಳೆಯಿತು. ವೈದ್ಯರು ಸಂಗಮೇಶನ ಕಿವಿಯಲ್ಲಿ ಎನೋ ಹೇಳಿದರು. ವೈದ್ಯರು ದೇವಮ್ಮ ಸೋಮಯ್ಯ ಇಬ್ಬರನ್ನು ಮನೆಗೆ ಕರೆದುಕೊಂಡು ಹೋಗಲು ಹೇಳಿದ್ದಾರೆಂದು ಸುಧೆಗೆ ಸಂಗಮೇಶ ಹೇಳಿ ಹೊರಡಲು ಸಿದ್ಧರಾದರು. ಎಲ್ಲ ಖರ್ಚು ಸಂಗಮೇಶ್ ನೀಡಿದ್ದ. ಮನೆಗೆ ಬಂದ ತಕ್ಷಣ ದೇವಮ್ಮ ಸಂಗಮೇಶನ ಎರಡನೆ ಮದುವೆ ಬಗ್ಗೆ ಕೇಳಿದಳು. ಅವನು ಇನ್ನೊಂದು ಮದುವೆಯಾಗಿರಲಿಲ್ಲ. ಅಲ್ಲದೆ ನನ್ನ ಮಕ್ಕಳಿಗೆ ಆಗ ತಾಯಿಯ ಅಗತ್ಯವಿತ್ತು. ಈಗ ಮದುವೆ ಬೇಡವೆಂದು ನಿರ್ಧರಿಸಿದ್ದೆನೆಂದು ಸಂಗಮೇಶ್ ದೇವಮ್ಮಳಿಗೆ ಹೇಳಿದ. ಈ ಮಾತು ಕೇಳಿಸಿಕೊಂಡ ಸೋಮಯ್ಯ ಸಂಗಮೇಶನ ಕೈ ಹಿಡಿದು ಸುಧಾಳನ್ನು ಮದುವೆಯಾಗುವಂತೆ ಬೇಡಿಕೊಂಡ. ದೇವಮ್ಮಳು ಬೇಡಿಕೊಂಡಳು. ನಾವು ಸತ್ತಮೇಲೆ ನಮ್ಮ ಸುಧಾಳಿಗೆ ಯಾರೂ ಇಲ್ಲದಂತಾಗತ್ತೆ ದಯವಿಟ್ಟು ಮದುವೆಯಾಗುವಂತೆ ಒತ್ತಾಯ ಮಾಡಿದಳು. ಸಂಗಮೇಶನು ಇವರ ಒತ್ತಾಯಕ್ಕೆ ಮಣಿದು ಒಪ್ಪಿದನು ಜೊತೆಗೆ ಸುಧೆಯ ನಿರ್ಧಾರ ಕೇಳಿದನು. ಎಂದಿನಂತೆ ಸುಧೆ ಮೌನವಾಗಿರದೇ ಮಾತಾಡಿದಳು...!! ಸುಧೆಗೆ ಮದುವೆ ಆಗಲು ಆಸೆಯಿರಲಿಲ್ಲ. ತಾನೊಂದು ಕೆಲಸಕ್ಕೆ ಸೇರಿ ತನ್ನ ತಂದೆ ತಾಯಿಯನ್ನು ಚನ್ನಾಗಿ ನೋಡಿಕೊಬೇಕು ಎಂದಳು. ನಾನು ಸ್ವಾಭಿಮಾನಿಯಾಗಿ ಬದುಕಬೇಕು ಎಂದಳು. (ವಾಸ್ತವದಲ್ಲಿ ಅವಳ ಬಣ್ಣದ ಬಗ್ಗೆ ಎಲ್ಲರಿಂದ ಕೇಳುತ್ತಿದ್ದ ಮಾತುಗಳಿಂದ ಅವಳು ಈ ನಿರ್ಧಾರಕ್ಕೆ ಬಂದಿದ್ದಳು, ಕಪ್ಪಗಿರುವವರಿಗೂ ಬದುಕುವ ಹಕ್ಕಿದೆ ಅಲ್ವಾ ಎಂದು ಪ್ರಶ್ನಿಸಿದಳು.

ಸಂಗಮೇಶನೂ ಸಹ ಅವಳ ಮಾತಿಗೆ ಒಪ್ಪಿದನು. ನನಗೂ ಎರಡನೇ ಮದುವೆ ಆಗುವ ಆಸೆಯಿಲ್ಲ ಆದರೆ ನನ್ನ ಮಕ್ಕಳಿಗಾಗಿ ಒಪ್ಪಿದ್ದೆ. ನಿಮ್ಮ ಬಣ್ಣದ ಬಗ್ಗೆ ನನಗ್ಯಾವ ತಿರಸ್ಕಾರ ಭಾವನೆ ಇಲ್ಲ ಸುಧಾ. ನಿಮ್ಮನ್ನು ಒತ್ತಾಯಿಸುವ ಹಕ್ಕು ನನಗಿಲ್ಲ. ನಿಮಗಿಷ್ಟವಿಲ್ಲ ಅಂದ್ರೆ ಮದ್ವೆ ಬೇಡ ಆದರೆ ನಮ್ಮ ಕಂಪನಿಯಲ್ಲೆ ನೂರಾರು ಜನ ದುಡಿತಿದಾರೆ , ನೀವು ಒಪ್ಪೋದಾದ್ರೆ ನಿಮಗಲ್ಲಿ ಕೆರಸದ ವ್ಯವಸ್ಥೆ ಮಾಡ್ತೀನಿ ಎಂದ. ಅವಳು ಒಪ್ಪಿದಳು. ಆದರೆ ದೇವಮ್ಮ ಸೋಮಯ್ಯ ಮಾತ್ರ ಸುಧೆಯನ್ನು ಮದುವೆಗೆ ಒಪ್ಪಿಸುವಲ್ಲಿ ಗೆದ್ದೆಬಿಟ್ರು..!! ಕೊನೆಗೂ ಸುಧೆ ಮದುವೆಗೆ ಹುಂ ಎಂದಳು.

ಸೋಮಯ್ಯ-ದೇವಮ್ಮ, ಸಂಗಮೇಶನ ಇಬ್ಬರು ಮಕ್ಕಳ ಮುಂದೆ ಮದುವೆ ಸರಳವಾಗಿ ನಡೆಯಿತು. ಸೋಮಯ್ಯನ ದೇಹಸ್ಥಿತಿ ಕೆಟ್ಟಿತ್ತು ಅದನ್ನು ವೈದ್ಯರು ಮೊದಲೇ ಸಂಗಮೇಶನ ಕಿವಿಯಲ್ಲಿ ಹೇಳಿದ್ದರು ಸೋಮಯ್ಯ ಉಳಿಯುವುದು ಕಷ್ಟ, ಅವನನ್ನು ಮನೆಗೆ ಕರೆದುಕೊಂಡು ಹೋಗಿ, ಇರುವಷ್ಟು ದಿನ ಸಂತೋಷವಾಗಿ ನೋಡಿಕೊಳ್ಳುವಂತೆ.. ಸುಧೆಯ ಮದುವೆ ನೋಡಿದ ಖುಷಿಯಲ್ಲಿ ಸೋಮಯ್ಯನ ಪ್ರಾಣಪಕ್ಷಿ ಹಾರಿಹೋಗಿತ್ತು.ಎಷ್ಟೋ ವರ್ಷಗಳಿಂದ ಮನೆ ತೊರೆದು ಹೋಗಿದ್ದರಿಂದ ಸೋಮಯ್ಯನ ಅಗಲುವಿಕೆ ದೇವಮ್ಮಳಲ್ಲಿ ಯಾವ ಬದಲಾವಣೆಯನ್ನೂ ಮೂಡಿಸಲಿಲ್ಲ. ಸಂಗಮೇಶ ತನ್ನ ಕೃಷ್ಣಸುಂದರಿ ಸುಧಾ, ಮಕ್ಕಳೊಂದಿಗೆ ತನ್ನೂರಿಗೆ ಹೊರಟು ನಿಂತ. ಸುಧೆಯೂ ಅಮ್ಮನನ್ನು ತಬ್ಬಿಕೊಂಡು ಅತ್ತಳು. ದೇವಮ್ಮ ಇನ್ನೂ ಅಳುತ್ತಲೇ ಇದ್ದರು. ಈ ಪ್ರೀತಿ-ವಾತ್ಸಲ್ಯ ಬೇರೆ ಮಾಡಲು ಸಂಗಮೇಶನ ಮನಸ್ಸು ಒಪ್ಪಲಿಲ್ಲ. ಅವನ ಮಕ್ಕಳು ಸಹ "ಅಜ್ಜಿ ನೀವೂ ನಮ್ಮ ಜೊತೆ ಬರಲೇಬೇಕು" ಎಂದು ಹಠ ಹಿಡಿದರು. ಸುಧೆಯು ಅಮ್ಮನನ್ನು ತಮ್ಮೊಡನೆ ಬರಲು ಕೇಳಿಕೊಂಡಳು. ಇವರೆಲ್ಲರ ಪ್ರೀತಿಗೆ ಸೋತು ದೇವಮ್ಮ ಮಗಳು, ಅಳಿಯ, ಮೊಮ್ಮಕ್ಕಳ ಜೊತೆ ಅವರೂರಿಗೆ ನಡೆದಳು. ಮುಂದೆ ಸುಧೆ ಸಹ ತನ್ನ ಗಂಡನ ಕಂಪನಿಯಲ್ಲಿ ಹೆಚ್ಚೆಚ್ಚು ಮಹಿಳೆಯರನ್ನು ಅದರಲ್ಲೂ ಕಪ್ಪಗಿರುವವರನ್ನೇ ಆಯ್ಕೆ ಮಾಡಿ ಅವರ ಜೀವನಕ್ಕೆ ಆಧಾರವಾಗಿದ್ದಳು.


Rate this content
Log in

More kannada story from Revati Patil

Similar kannada story from Classics