ಈ ಸಾವು ನ್ಯಾಯವೇ...?!
ಈ ಸಾವು ನ್ಯಾಯವೇ...?!
ಅದೊಂದು ಸರ್ಕಲ್. ನೂರು ಮೀಟರ್ ಅಂತರದಲ್ಲಷ್ಟೇ ಪ್ರತಿಷ್ಠಿತ ಸ್ಕೂಲು ಇದೆ. ಇಲ್ಲೇ ಜಾನು ಓದುತ್ತಿರುವುದು. ಇನ್ನೇನು ಸರ್ಕಲ್ ಗೆ ತಾವು ನಡೆದು ಬರುತ್ತಿದ್ದ ರೋಡು ಸೇರಬೇಕು ಎನ್ನುವ ಘಳಿಗೆಯಲ್ಲೇ ವೇಗವಾಗಿ ಬಂದ ಕಾರೊಂದು, ಜಾನು ಮತ್ತು ಅವಳ ತಾಯಿಯನ್ನು ಗುದ್ದಿಕೊಂಡು ಹೋಯಿತು. ಪುಟ್ಟ ಮಗು ಮತ್ತು ಸಣ್ಣ ಹರೆಯದ ಜಾನುವಿನ ತಾಯಿ ಎಗರಿ ಬಿದ್ದರು. ರಕ್ತದ ಮಡುವಿನಲ್ಲಿ ಒದ್ದಾಡಿ, ನರಳಿ ಅಲ್ಲೇ ಪ್ರಾಣಬಿಟ್ಟರು. ಕ್ಷಣ ಮಾತ್ರದಲ್ಲಿ ಸೇರಿದ ಜನಜಂಗುಳಿಯನ್ನು ಚದುರಿಸಲು ಟ್ರಾಫಿಕ್ ಪೊಲೀಸ್ ಬಂದರು. ಆಂಬುಲೆನ್ಸ್ ಗೆ ಫೋನ್ ಮಾಡಿ ಜೀವವಿರಬಹುದೇನೋ ಎಂಬ ದೂರದ ಆಸೆಯಿಂದ ಇಬ್ಬರನ್ನು ಹತ್ತಿರವಿದ್ದ ಆಸ್ಪತ್ರೆಗೆ ಕಳುಹಿಸಿದರು.
ವ್ಯಾನಿಟಿ ಬ್ಯಾಗಿನಲ್ಲಿ ದೊರಕಿದ ಡಾಕ್ಯುಮೆಂಟ್ಸ್ ಪ್ರಕಾರ ಅವಳ ಹೆಸರು ಸುಧಾ. ಗಂಡ ಮಹದೇವ. ಐದು ವರ್ಷದ ಬಾಲಕಿ ಜಾಹ್ನವಿ. ಅದೇನು ಯೋಚಿಸಿ ಬರುತ್ತಿದ್ದಳೋ ಅಥವಾ ಕಾರಿನ ಚಾಲಕನ ಬೇಜವಾಬ್ದಾರಿ ಮತ್ತು ಅತಿ ವೇಗದಿಂದಲೋ ಇಬ್ಬರು ಅಮಾಯಕರು ಸಾವಿಗೀಡಾದರು. ಅವಳ ಗಂಡನಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ, ಮಹದೇವನು ತನ್ನ ಜಗತ್ತೇ ಇನ್ನೂ ಶೂನ್ಯ ಎನ್ನುವಂತೆ ಕುಸಿದು ಕುಳಿತನು...! ಗೊತ್ತು ಗುರಿಯಿಲ್ಲದಂತೆ ಏನೋ ಯೋಚಿಸುತ್ತಾ, ಆಸ್ಪತ್ರೆಯ ದಾರಿಗೆ ಕಾರನ್ನು ಚಲಾಯಿಸಲು ಶುರುಮಾಡಿದನು. ಆದರೊಂದಿಗೇನೇ ಅವನ ಮನಸ್ಸಿನಲ್ಲಿ ಸುರುಳಿಯಂತೆ ಅಡಗಿ ಕುಳಿತಿದ್ದ ನೆನಪುಗಳು ಒಂದೊಂದೇ ತೆರೆಯಲ್ಪಟ್ಟಿತು....
ಸುಧಾ ಮತ್ತು ಮಹದೇವ ಇಬ್ಬರು ಇಷ್ಟಪಟ್ಟು ಮದುವೆಯಾಗಿ ಮೂರು ವರ್ಷಕ್ಕೆಲ್ಲ ತಂದೆ ತಾಯಿಯರಾದರು. ಇಬ್ಬರೂ ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚಿಗೇಕೋ ಜಗಳಗಳು ಆಗಾಗ ನಡೆಯುತ್ತಿದ್ದವು. ವಿಪರೀತ ಕೆಲಸದಿಂದ ದಣಿವಾಗಿ ಬರುತ್ತಿದ್ದ ಮಹದೇವನನ್ನು ವಿಚಾರಿಸಲು ಸುಧಾಗೆ ಟೈಮ್ ಸಿಗುತ್ತಿರಲಿಲ್ಲ. "ಅವಳದೇನು ವರ್ಕ್ ಫ್ರಮ್ ಹೋಂ. ಮನೆಯಲ್ಲಿಯೇ ಇದ್ದು ಕೆಲಸ ಮಾಡುತ್ತಾಳೆ. ಆದರೆ ತಾನು? ಒಂದು ಘಂಟೆ ಮೆಟ್ರೋನಲ್ಲಿ ಟ್ರಾವೆಲ್ ಮಾಡಿ ಕೆಲಸದ ಸ್ಥಳವನ್ನು ತಲುಪಬೇಕು".
"ಅವಳಿಗೇನು ಕಷ್ಟ? ಮಗುವನ್ನ ಸ್ಕೂಲಿಗೆ ಬಿಟ್ಟು ಬಂದರೆ, ನಂತರ ಮನೆಯಿಂದಲೇ ಕೆಲಸ. ಮತ್ತೆ ಕುಕ್ಕರ್ ಕೂಗಿಸಿ, ಸಾರು ಮಾಡಿದರಾಯ್ತು. ಬಿಡುವಾದಾಗ ಬಟ್ಟೆಗಳನ್ನು ವಾಷಿಂಗ್ ಮಷೀನ್ ಗೆ ಹಾಕಿ, ಪಾತ್ರೆಗಳನ್ನು ತೊಳೆದು ಇಡುತ್ತಾಳೆ...!! ನನಗಾದರೋ ಯಾವಾಗಲೂ ಬಾಸ್ ನಿಂದ ಕಿರಿಕಿರಿ. ಅಲ್ಲೇ ಆಫೀಸಿನಲ್ಲಿ ಕುಳಿತಿರುವ ಬಾಸ್ ಕೆಲಸದ ಮೇಲೆ ಕೆಲಸ ಹೇಳಿ ನನ್ನನ್ನು ಯಂತ್ರದಂತೆ ದುಡಿಸಿಕೊಳ್ಳುತ್ತಾನೆ..!!" ಎಂದುಕೊಳ್ಳುತ್ತಿದ್ದನು ಮಹದೇವನು.
ಆದರೆ ಕಥೆಯೇ ಬೇರೆ. ವರ್ಕ್ ಫ್ರಮ್ ಹೋಂ ಆದರೂ, ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಡುವಿಲ್ಲದ ಕೆಲಸ ಸುಧಾಳಿಗೆ. ಅದೂ ಮನೆಯಲ್ಲಿಯೇ ಯಾರ ಸಹವಾಸವು ಇಲ್ಲದೆ, ಒಬ್ಬಂಟಿಯಾಗಿ ಆಫೀಸಿನ ಕೆಲಸ ಮತ್ತು ಮನೆಗೆಲಸ ಮಾಡಿ, ಸುಧಾಳಿಗೆ ಹುಚ್ಚು ಹಿಡಿದಂತೆ ಆಗುತ್ತಿತ್ತು..!! ಇದರ ಜೊತೆಗೆ ಜಾಹ್ನವಿಯನ್ನು ಮನೆಯ ಹತ್ತಿರವಿದ್ದ ಸ್ಕೂಲಿಗೆ ಕರೆದುಕೊಂಡು ಹೋಗಿ ಬರುವುದು
ಮತ್ತೊಂದು ಕೆಲಸ. ಎಲ್ಲಾ ಹೊರೆಯು ತನ್ನ ಮೇಲೆ ಬಿದ್ದಿದೆ ಎಂದು ಗಂಡ ಅಂದುಕೊಂಡರೆ, ಇಲ್ಲ ಈ ಮನೆಯಲ್ಲಿ ಕೆಲಸದವಳಂತೆ ಎಲ್ಲಾ ಕೆಲಸಗಳನ್ನು ನಾನೇ ಮಾಡಬೇಕು ಎಂದು ಹೆಂಡತಿ ಅಂದುಕೊಳ್ಳುತ್ತಿದ್ದಳು..!!
ಆದರೆ ಮನಸ್ಸು ಬಿಚ್ಚಿ ಮಾತಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳಲು ಇಬ್ಬರಿಗೂ ಸಮಯ ಮತ್ತು ಅಹಂ ಬಿಡುತ್ತಿರಲಿಲ್ಲ! ಹಾಗಾಗಿಯೇ ದಿನದಿಂದ ದಿನಕ್ಕೆ ಇಬ್ಬರ ಮಧ್ಯೆಯ ಶೀತಲ ಸಮರದಿಂದ ತಣ್ಣನೆಯ ಗೋಡೆ ದೊಡ್ಡದಾಗುತ್ತಿತ್ತೇ ವಿನಹ ಕರಗುತ್ತಿರಲಿಲ್ಲ..!! ಅಂದೂ ಸಹ ಮ್ಯಾನೇಜರ್ ಹೇಳಿದ ಕೆಲಸವನ್ನು ಬೇಗ ಮುಗಿಸಬೇಕೆಂದು ಸುಧಾ ಬೆಳಿಗ್ಗೆ ಟೆನ್ಶನ್ ನಲ್ಲಿ ಎದ್ದು, ಮಗಳನ್ನು ಸ್ಕೂಲಿಗೆ ರೆಡಿ ಮಾಡಿದಳು. ತನಗೆ ತಿಂಡಿಯನ್ನು ಕೈಗೆ ತಂದುಕೊಡಲಿಲ್ಲವೆಂದು ಗಂಡನು ತೆಗೆದ ತಗಾದೆಗೆ ಮನಸ್ಸಿನಲ್ಲಿಯೇ ಕಿರಿಕಿರಿ ಅನುಭವಿಸಿದಳು. ಮಗಳು ಜಾಹ್ನವಿಯು ಏಕೋ ತಿಂಡಿ ತಿನ್ನುವುದಕ್ಕೆ ಆಟ ಆಡಿಸುತ್ತಿದ್ದಳು. ಸರಿಯಾಗಿ ಬೈದು "ಬೇಗ ತಿಂದರೆ ಸರಿ ಈವಾಗ..!" ಎಂದು ಅರ್ಧ ತಟ್ಟೆ ಖಾಲಿ ಮಾಡಿಸಿದಳು.
"ಬಂದು ಸ್ನಾನ ಮಾಡಿ, ನಾನು ಲ್ಯಾಪ್ ಟಾಪ್ ಮುಂದೆ ಕೂರುವುದು ಯಾವಾಗ..?" ಎಂದು ಚುರುಗುಟ್ಟುತ್ತಿದ್ದ ಹೊಟ್ಟೆಯ ಹಸಿವನ್ನು ಲೆಕ್ಕಿಸದೆ, ಚಪ್ಪಲಿಯನ್ನು ಹಾಕಿ ಮಗುವಿನೊಂದಿಗೆ ಮನೆಯನ್ನು ಬಿಟ್ಟಳು. ಆದರೆ ಶಾಶ್ವತವಾಗಿ ತಾನು ಮತ್ತು ತನ್ನ ಮಗಳು ಆ ಮನೆಯನ್ನು ಮತ್ತು ಈ ಜಗವನ್ನು ಬಿಡುತ್ತಿದ್ದೇವೆ ಎಂದು ಸುಧಾ ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲ..!! ಒಂದು ಚಿಕ್ಕ ಸುಳಿವು ಸಿಕ್ಕಿದ್ದರೂ ಅವಳು ಅಂದು ಮಗಳನ್ನು ಸ್ಕೂಲಿಗೆ ಬಿಡುತ್ತಿರಲಿಲ್ಲವೇನೋ..? ಆದರೆ ಸಾವು ಯಾರಿಗೆ ತಾನೇ ಹೇಳಿ ಬರುತ್ತದೆ? ಯಾವುದೋ ನೆಪದಲ್ಲಿ ಬಂದು ನಮ್ಮನ್ನು ಎಡತಾಗುತ್ತದೆ. ಆದರೂ ಸಹ ಚಿಕ್ಕಪ್ರಾಯದ ಅಮ್ಮ ಮತ್ತು ಮಗಳನ್ನು ಆಕ್ಸಿಡೆಂಟ್ ಮೂಲಕ ಸಾವು, ಬಲಿ ತೆಗೆದುಕೊಂಡಿದ್ದು ಎಲ್ಲರಲ್ಲೂ ಶೋಕ ಮಡುಗಟ್ಟುವಂತೆ ಮಾಡಿತ್ತು.
ಕೆಲಸದ ಗಡಿಬಿಡಿಯಲ್ಲೇ ಮನೆ ಬಿಟ್ಟ ಸುಧಾ ಯಾವಾಗಲೂ ರೋಡಿನ ಬದಿ ತಾನಿದ್ದು, ಮಗುವನ್ನು ಸುರಕ್ಷಿತವಾಗಿ ಸ್ಕೂಲಿಗೆ ಕರೆದುಕೊಂಡು ಹೋಗುತ್ತಿದ್ದಳು. ಆದರೆ ಇಂದು ಅದೇನು ಅವಳ ಬುದ್ಧಿಗೆ ಮಂಕು ಬಡಿದಿತ್ತೋ..! ಮಗುವನ್ನು ರೋಡಿನ ಕಡೆ ಬರುವಂತೆ ಹಿಡಿದುಕೊಂಡು ಅರ್ಜೆಂಟ್ ನಲ್ಲಿ ಸ್ಕೂಲಿನ ಕಡೆಗೆ ಹೊರಟಿದ್ದಳು...!! ಹರೆಯದ ಶೋಕಿಗೆ ಬಲಿಪಶುವಾಗಿ ವೇಗವಾಗಿ ಕಾರನ್ನು ಓಡಿಸುತ್ತಿದ್ದ ನವ ಯುವಕ ಕಾರಿನಲ್ಲಿ ಜೋರಾಗಿ ಬರುತ್ತಿದ್ದ ಹಾಡಿಗೆ ದನಿಯಾಗುತ್ತಾ ಇಬ್ಬರ ಧ್ವನಿಯನ್ನು ಶಾಶ್ವತವಾಗಿ ನಿಲ್ಲಿಸಿಬಿಟ್ಟಿದ್ದ..!!
ತಾನು ಜೋರಾಗಿ ಗುದ್ದಿದ ರಭಸಕ್ಕೆ ಇಬ್ಬರು ದಾರಿಹೋಕರು ಎಗರಿಬಿದ್ದು, ಪ್ರಾಣ ಕಳೆದುಕೊಂಡರು ಎಂಬುದೂ ಸಹ ಅವನಿಗೆ ತಕ್ಷಣಕ್ಕೆ ಅರಿವಿಗೆ ಬಂದಿರಲಿಲ್ಲ. ಅಂತಹ ಪ್ರಾಯದ ಮದದಲ್ಲಿ ಈಜುತ್ತಿದ್ದ ಅವ..!! ಕೊನೆಗೆ ಪೊಲೀಸರು ಅವನನ್ನು ಹಿಡಿದು ಶ್ರೀಮಂತ ವ್ಯಾಪಾರಿಯ ಹದಿಹರೆಯದ ಮಗನು ಆತ ಎಂದು ಕೇಸ್ ಫೈಲ್ ಮಾಡಿದರು.
ಆದರೆ ತೀರಿಹೋದ ಅಮೂಲ್ಯವಾದ ಎರಡು ಅಮಾಯಕ ಜೀವಗಳು ಮತ್ತೆ ಹಿಂದಿರುಗುತ್ತವೆಯೇ..? ಎಷ್ಟೋ ಆಸೆಯನ್ನು ಹೊತ್ತು ತನ್ನ ಮಗಳನ್ನು ಬೆಳೆಸಿದ್ದ ಆ ತಾಯಿ, ತಾಯಿಯೇ ತನ್ನ ಪ್ರಪಂಚ ಎಂದು ತಿಳಿದಿದ್ದ ಆ ಮಗಳು ಇಬ್ಬರೂ ಈ ಲೋಕದಿಂದ ಮರೆಯಾಗಿ ಹೋದರು....
"ಇದೇಕೆ ನನ್ನನ್ನು ಇಷ್ಟು ಬೇಗ ಒಬ್ಬಂಟಿಯಾಗಿ ಮಾಡಿ ಹೋದಿರಿ..? ನೀವಿಲ್ಲದ ಮನೆಯಲ್ಲಿ ನಾನು ಹೇಗೆ ತಾನೆ ಬಾಳಲಿ..? ದೇವರೇ ನನ್ನಲ್ಲಿದ್ದ ಅಹಂ ಈ ಸಾವಿಗೆ ಕಾರಣವಾಯಿತೇ..! ಈ ಸಾವು ನ್ಯಾಯವೇ...?!" ಎಂದು ಅಲವತ್ತುಕೊಂಡನು ಮಹದೇವನು....
