ಹೀಗೊಂದು ಪ್ರಯಾಣದ ಅನುಭವ
ಹೀಗೊಂದು ಪ್ರಯಾಣದ ಅನುಭವ
ಸ್ನೇಹಿತರೆ,
ಇಂದು ಅತ್ತಿಬೆಲೆಯಿಂದ ಕೆ.ಆರ್.ಪುರಂಗೆ ಬಿ.ಎಂ.ಟಿ.ಸಿ ಬಸ್ಸಲ್ಲಿ ಪ್ರಯಾಣ ಮಾಡುತ್ತಿದ್ದಾಗ ಉಂಟಾದ ಆಶ್ಚರ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕರ್ನಾಟಕದ ರಾಜ್ಯ ಭಾಷೆ ಕನ್ನಡ ಎಂಬ ಮಾತುಗಳನ್ನು ಕೇಳಿದ್ದೇವೆ. ಆದರೆ ಇಂದು ನಮ್ಮ ಕನ್ನಡದ ಸ್ಥಿತಿಗತಿಗಳ ಬಗ್ಗೆ ಗಮನಹರಿಸಿ ನೋಡಿ. ನಮ್ಮ ಕನ್ನಡದ ಸ್ಥಿತಿಗತಿಯ ಬಗ್ಗೆ ಪರಿಪೂರ್ಣ ಚಿತ್ರಣ ಸಿಗುತ್ತದೆ. ಬಸ್ಸು ಅತ್ತಿಬೆಲೆಯಿಂದ ಸರ್ಜಾಪುರ ದಾರಿಯಲ್ಲಿ ಸಾಗುತ್ತಿರಲು ಬಸ್ಸಿಗೆ ಹತ್ತಿದ ಪ್ರಯಾಣಿಕರಲ್ಲಿ ಶೇಕಡಾ ೯೦ರಷ್ಟು ಪ್ರಯಾಣಿಕರು ಕನ್ನಡೇತರರು( ಬಹುಮಂದಿ ನೇಪಾಳ ಮತ್ತು ಒರಿಸ್ಸಾದವರು). ಅವರನ್ನು ಕಂಡು ಮೂಕವಿಸ್ಮಿತನಾಗಿ ನೋಡುತ್ತಿದ್ದೆ. ಅವರು ತಮ್ಮ ನೇಪಾಳಿ, ಹಿಂದಿ ಭಾಷೆಯಲ್ಲಿ ವ್ಯವಹರಿಸುತ್ತಿದ್ದರು. ಬಸ್ಸಿನಲ್ಲಿದ್ದ ನಿರ್ವಾಹಕ(ಕಂಡೆಕ್ಟರ್)ರು ಕರ್ನಾಟಕದವರಾಗಿದ್ದರೂ ನೇಪಾಳಿಗರೊಂದಿಗೆ ಹಿಂದಿಯಲ್ಲಿ ವ್ಯವಹರಿಸುತ್ತಿದ್ದರು. ಆಗ ನಿರ್ವಾಹಕರು ಚಿಲ್ಲರೆ ಕೊಡಿ, ನನ್ನ ಬಳಿ ಇಲ್ಲ ಎಂದು ಕೇಳಿದರು. ಅದಕ್ಕೆ ನೇಪಾಳಿಯವರಲ್ಲೊಬ್ಬ ನೀನೇ ಚಿಲ್ಲರೆ ಇಟ್ಕೋಬೇಕು. ನನ್ನ ಏಕೆ ಕೇಳ್ತೀಯಾ ಎಂದು ಏಕವಚನದಲ್ಲೇ ನಿರ್ವಾಹಕನನ್ನೇ ದಬಾಯಿಸಿದ. ಪಾಪ ನಮ್ ಕಂಡೆಕ್ಟರ್ರಣ್ಣ ಪ್ರತಿಮಾತನಾಡದೆ ಸುಮ್ನಾದರು. ನಿರ್ವಾಹಕರನ್ನು ನಾನು ಮಾತನಾಡಿಸಿ ಅಣ್ಣ, ನಿವ್ಯಾಕೆ ಇವರೊಂದಿಗೆ ಹಿಂದಿಯಲ್ಲಿ ಮಾತಾಡ್ತೀರಾ? ಕನ್ನಡದಲ್ಲೇ ಮಾತನಾಡಬಹುದಲ್ವಾ ಅಂದೆ. ಅದಕ್ಕೆ ಕಂಡೆಕ್ಟ್ರಣ್ಣ, ಇಲ್ಲಾ ಸರ್, ಇವರಿಗೆ ಕನ್ನಡ ಬರೋದಿಲ್ಲ. ನೇಪಾಳ್, ಒರಿಸ್ಸಾದಿಂದ ಬಂದಿದ್ದಾರೆ. ನನಗೆ ಪ್ರತಿದಿನ ಇದೇ ಗೋಳಾಗಿದೆ ಅಂದ್ರು. ಅಲ್ಲಾ ಕಂಡೆಕ್ಟ್ರಣ್ಣ ನೀವು ಹಿಂದಿನಲ್ಲಿ ಮಾತನಾಡೋದಿಕ್ಕೆ ಇವರು ಕನ್ನಡ ಕಲೀತಿಲ್ಲ. ತಪ್ಪು ನಿಮ್ದೆ ಅಲ್ವಾ ಅಂತ ಕೇಳ್ದೆ.
ಸಾರ್ ತಪ್ಪು ನನ್ನೊಬ್ಬನದೇ ಅಲ್ಲ. ನಮ್ ಕರ್ನಾಟಕದ ಜನತೆದೂ ತಪ್ಪು ಅಂದ್ರು. ನಾನು ಕುತೂಹಲದಿಂದ ಕರ್ನಾಟಕದ ಜನ್ರು ಅಂದ್ರಲ್ವಾ ಅದು ಹೇಗೆ? ಎಲ್ಲರಿಂದ ಹೇಗೆ ತಪ್ಪಾಗ್ತಿದೆ? ಅಂದೆ. ಅದಕ್ಕೆ ಕಂಡೆಕ್ಟ್ರಣ್ಣ, ನೋಡಿ ಸರ್, ಇವರು ನೇಪಾಳ ಮತ್ತು ಒರಿಸ್ಸಾದಲ್ಲಿ ಬದುಕೋಕೆ ಕಷ್ಟ. ಜೀವನ ನಡೆಸಲು ಕೆಲ್ಸಾನೇ ಸಿಗಲ್ಲ ಅಲ್ಲಿ. ಅದಕ್ಕೆ ಅವರು ನಮ್ ಕರ್ನಾಟಕಕ್ಕೆ ಅದರಲ್ಲೂ ಬೆಂಗಳೂರಿಗೆ ಬರ್ತಾರೆ. ಇಲ್ಲಿ ಕೆಲಸ ಮಾಡ್ತಾ ಪ್ರತಿ ಅಂಗಡಿ, ಜನರ ಬಳಿ ಹಿಂದಿಯಲ್ಲಿ ವ್ಯವಹರಿಸಿ ದಿನದೂಡುತ್ತಿದ್ದಾರೆ. ಅವರನ್ನ ಕನ್ನಡದಲ್ಲಿ ಮಾತನಾಡಿಸಿದ್ರೆ ಹಮ್ ಕೋ ಕನ್ನಡ ನಹೀ ಹಾಥ ಅಂತಾನೆ ಹೇಳ್ತಾರೆ. ಸ್ವಲ್ಪ ದಿನದಲ್ಲೇ ಕರ್ನಾಟಕದಲ್ಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಾಸಸ್ಥಳ ಪ್ರಮಾಣ ಪತ್ರ ಎಲ್ಲಾ ಮಾಡಿಸಿಕೊಳ್ತಾರೆ. ಕರ್ನಾಟಕದ ಎಲ್ಲಾ ಸವಲತ್ತುಗಳನ್ನೂ ಪಡೆಯುತ್ತಾ ಕರ್ನಾಟದವರ ಪಾಲನ್ನು ಕಸಿದುಕೊಳ್ಳುತ್ತಿದ್ದಾರೆ. ವಿಶಾಲ ಹೃದಯಿಗಳಾದ ನಮ್ ಕನ್ನಡಿಗರು ಮಾತ್ರ ಕೆಲಸ ಕಳೆದುಕೊಂಡು ಭಿಕ್ಷೆ ಬೇಡುವ ಸ್ಥಿತಿಗೆ ತಲುಪುತಿದ್ದಾರೆ. ನಮ್ಮ ಸರ್ಕಾರವೂ ಸಹ ಇಂತಹ ಕನ್ನಡೇತರರಿಗೆ ಬೇಕಾದ ಸವಲತ್ತುಗಳನ್ನು ನೀಡುತ್ತಿರುವುದು ದುರದೃಷ್ಟಕರ ಎನ್ನಬಹುದು. ಇಂತಹ ಕನ್ನಡೇತರರು ಕನ್ನಡ ಕಲಿಯುವಂತೆ ಮಾಡಬೇಕು. ಆಗ್ಲೇ ಇವರು ಕನ್ನಡ ಕಲಿಯೋದು ಅಂತ ಕಂಡೆಕ್ಟ್ರಣ್ಣ ಹೇಳಿದ್ದು ನೋಡಿ ಬೇಸರವಾಯಿತು. ಕನ್ನಡೇತರರಿಗೆ ಕರ್ನಾಟಕದಲ್ಲಿ ಬದುಕಲು ಅವಕಾಶಬೇಕು. ಇಲ್ಲಿನ ಸೌಕರ್ಯಗಳು ಬೇಕು. ಆದ್ರೆ ನಮ್ ಕನ್ನಡವನ್ನು ಕಲಿಯಲು ಮುಂದೆ ಬರೋದೇ ಇಲ್ಲ ಸರ್ ಅಂತ ಕಂಡೆಕ್ಟ್ರಣ್ಣ ಹೇಳಿದ್ರು. ಇದನ್ನು ಕೇಳಿದ ನನಗೆ ಥಟ್ಟನೆ ನೆನಪಾದದ್ದು ಬ್ಯಾಂಕ್ಗಳು. ಬ್ಯಾಂಕಿನಲ್ಲಿ ಇಂದು ಪ್ರತಿಶತ ೮೫ರಷ್ಟು ಉದ್ಯೋಗಿಗಳು ಕನ್ನಡೇತರರೇ ಆಗಿದ್ದಾರೆ. ಇವರಿಗೆ ಕನ್ನಡ ಬರದಿದ್ದರೂ ಸಹ ತಮ್ನ ಭಾಷೆಯಲ್ಲಿ ವ್ಯವಹರಿಸುತ್ತಿರುವುದು ತಮ್ಮೆಲ್ಲರಿಗೂ ಗೊತ್ತಿರುವುದೆ ಆಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ನಮ್ಮ ಕನ್ನಡ ಭಾಷೆ ಉಳಿಯಲು ಸಾಧ್ಯವೇ ಇಲ್ಲ ಎನ್ನಬಹುದು. ಇಂದು ಬೆಂಗಳೂರಿನಲ್ಲಿ ಕನ್ನಡ ಭಾಷೆಯು ಕಂಗ್ಲಿಷ್ ಆಗಿದೆ. ಇದೇ ಬಸ್ಸಲ್ಲಿ ನಿಂತಿದ್ದ ಇಬ್ಬರು ಕನ್ನಡದ ಹುಡುಗಿಯರು ಮಾತನಾಡುವುದು ಕಿವಿಗೆ ಬಿತ್ತು. ಇವರ ಸಂಭಾಷಣೆ ಎಷ್ಟು ಚೆನ್ನಾಗಿತ್ತು ಅಂದ್ರೆ!!!!!!!
ಕೇಳಿ, ಮೊದಲ ಹುಡುಗಿ, ಎಸ್ಟರ್ ಡೇ ನಮ್ ಬ್ರದರ್ಗೆ ಆಕ್ಸಿಡೆಂಟ್ ಆಯ್ತು. ಅರ್ಜೆಂಟಾಗಿ ಆಂಬೂಲೆನ್ಸ್ ಬಂತು ಹಾಸ್ಪಿಟಲ್ಬಲ್ಲಿ ಆಡ್ಮಿಂಟ್ ಆಯ್ತು. ಡಾಕ್ಟರ್ ಆಪರೇಷನ್ ಮಾಡಿ ಕಂಡೀಷನ್ ಸೀರಿಯಸ್ ಅಂದ್ರು. ನಮ್ ಫ್ಯಾಮಿಲಿ ಮೆಂಬರ್ಸ್ ಫುಲ್ ಟೆಂಷನ್ನಲ್ಲಿದ್ದಾರೆ. ನಾನು ಮಾರ್ನಿಂಗಿಂದ ಟ್ವೆಂಟಿ ಟೈಮ್ ಕಾಲ್ ಮಾಡಿ ಮಮ್ಮಿ ಡ್ಯಾಡಿ ಹತ್ರ ಮಾತಾಡ್ದೆ. ಬಸ್ಸು ಹಾಸ್ಪಿಟಲ್ ನಿಯರ್ ಸ್ಟಾಪ್ ಕೊಡ್ತಾರೆ. ಪೇರೆಂಟ್ಸ್ ಜೊತೆ ಹಾಸ್ಪಿಟಲ್ಗೆ ವಿಸಿಟ್ ಕೊಡ್ತಿದ್ದೀನಿ. ಅಂತ ಒಂದೇ ಸಮನೆ ಮಾತಾಡ್ತಿದ್ದನ್ನ ನೋಡಿ ಈ ಕನ್ನಡತಿ ಯಾವ ಭಾಷೆಯಲ್ಲಿ ಮಾತಾಡ್ತಿರೋದು ಅಂತ ಗೊತ್ತಾಗ್ಲೇ ಇಲ್ಲ ಕಣ್ರಿ. ನೋಡಿ ಇದು ನಮ್ ಕನ್ನಡ ಭಾಷೆಯ ಸಂಭಾಷಣೆ. ಸ್ನೇಹಿತರೆ, ಇತ್ತೀಚೆಗೆ ನಮ್ ಕನ್ನಡ ಅಧ್ಯಾಪಕರೂ ಕನ್ನಡ ಬಿಟ್ಟು ಇಂಗ್ಲಿಷ್ ಭಾಷೆಯನ್ನೇ ಉಪಯೋಗಿಸುತ್ತಾ ನಾನೂ ತುಂಬಾ ಜ್ಞಾನಿ ಅಂತ ಹೆಮ್ಮೆಪಡುತ್ತಿದ್ದಾರೆ. ಕನ್ನಡ ಭಾಷೆಯ ಅಳಿವು ನಮ್ಮಿಂದಲೇ ಆಗ್ತಾ ಇದೆ ಅನ್ನೋ ಕಂಡೆಕ್ಟ್ರಣ್ಣ ಹೇಳಿದ ಮಾತು ನಿಜಾ ಅಲ್ವಾ!!!! ಈ ಮಾತು ಸತ್ಯಾನಾ, ಸುಳ್ಖೋ ಯೋಚಿಸಿ ಹೇಳಿ ನೋಡೋಣ.
ಕನ್ನಡಿಗರಾದ ನಾವೇ ಕನ್ನಡ ಭಾಷೆಯಲ್ಲಿ ವ್ಯವಹರಿಸಲು ಹಿಂಜರಿದರೆ ಕನ್ನಡ ಭಾಷೆಯು ಉಳಿಯುವುದಾದರೂ ಹೇಗೆ? ಕನ್ನಡ ರಾಜ್ಯೋತ್ಸವದಂದು ಮಾತ್ರ ತಮ್ಮ ಫೋನ್, ಫೇಸ್‌ಬುಕ್ ಗಳಲ್ಲಿ ರಾರಾಜಿಸುವ ಕನ್ನಡದ ಒಲವು, ಅಭಿಮಾನ, ಪ್ರೀತಿ, ವಿಶ್ವಾಸ ನವೆಂಬರ್ ೨ ರಂದೇ ಕೊನೆಯಾಗುತ್ತೆ ಅಲ್ವಾ!!! ಆಮೇಲೆ ವೀರ ಕನ್ನಡಿಗರಾಗಿದ್ದರೂ, ತಾಯಿ ಭುವನೇಶ್ವರಿಯ ಮಕ್ಕಳಾಗಿದ್ದರೂ, ಕಾವೇರಿ ನೀರನ್ನು ಕುಡಿಯುತ್ತಾ, ಚಾಮುಂಡಿ ದೇವಿಯ ಆಶೀರ್ವಾದದಿಂದ ಬದುಕುತ್ತಿದ್ದರೂ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಯನ್ನು ಮಾತನಾಡುತ್ತಿದ್ದೇವೆ. ಇದಕ್ಕೆ ಕೊನೆ ಎಂದು????
ನುಡಿದಂತೆ ನಡೆಯದಿರ್ದಡೆ ಬದುಕು ವ್ಯರ್ಥ ಎಂಬ ಮಾತನ್ನು ಎಲ್ಲ ಕನ್ನಡಿಗರೂ ಅರ್ಥಮಾಡಿಕೊಂಡು ಕನ್ನಡವನ್ನು ಉಳಿಸಿ ಬೆಳೆಸಲು ಪ್ರಯತ್ನಿಸಿ. ಕನ್ನಡೇತರರಿಗೂ ಕನ್ನಡವನ್ನು ಕಲಿಸುವ ಕಲಿ ವೀರರಾಗಿ ಎಂದು ಆಶಿಸುತ್ತೇನೆ.
ಜೈ ಭುವನೇಶ್ವರಿ.
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ.
