Masthi Babu M

Classics Inspirational Others

4  

Masthi Babu M

Classics Inspirational Others

ಏನಾಯಿತು ಮಾನವೀಯತೆ??

ಏನಾಯಿತು ಮಾನವೀಯತೆ??

3 mins
408


ದಿನಗಳು ಉರುಳಿದಂತೆ ಮಾನವನ ಜೀವನದಲ್ಲಿ ಅನುಭವಗಳ ಸರಮಾಲೆಯೇ ತೆರೆದುಕೊಳ್ಳುತ್ತದೆ. ೫೦ ವರ್ಷದ ಹಿಂದೆ ಇದ್ದ ಮನುಷ್ಯರಿಗೂ, ಇಂದು ಇರುವ ಮನುಷ್ಯರಿಗೂ(ನಮಗೂ) ಯಾವುದರಲ್ಲಿ ವ್ಯತ್ಯಾಸವಿದೆ ಎಂದು ದೀರ್ಘವಾಗಿ ಆಲೋಚಿಸಿದರೆ ಯಾವುದೇ ಉತ್ತರ ಸಿಗಲಾರದೇನೋ!!! ಆದರೆ ನನಗೆ ಒಂದು ವಿಚಾರದಲ್ಲಿ ಮಾತ್ರ ವ್ಯತ್ಯಾಸ ಎದ್ದು ಕಾಣುತ್ತಿದೆ. ಯಾವುದಿರಬಹುದು ಆ ಅಂಶ ಎಂದು ಯೋಚಿಸಲು ಮುಂದಾದ್ರಿ ಅನ್ಸುತ್ತೆ. ನಾನು ಕಂಡ ಆ ವ್ಯತ್ಯಾಸವೇ 'ಮಾನವೀಯತೆ'. ಇಂದಿನ ಜಗತ್ತಿನಲ್ಲಿ ಮಾನವೀಯತೆ ಕಣ್ಮರೆಯಾಗುತ್ತಿದೆ. ಮಾನವೀಯ ಗುಣಗಳು ತುಂಬಿರುವ ವ್ಯಕ್ತಿಯನ್ನು ಹುಡುಕಿದರೆ ಅಪರೂಪಕ್ಕೆ ಒಬ್ಬರಲ್ಲೋ, ಇಬ್ಬರಲ್ಲೋ ಮಾನವೀಯ ಅಂಶಗಳು ಕಂಡು ಬರುತ್ತಿದೆ. ೫೦ ವರ್ಷದ ಹಿಂದೆ ಪ್ರತಿ ಮನೆ- ಮನದಲ್ಲೂ ಮಾನವೀಯತೆ ತುಂಬಿತ್ತು. ಸತ್ಯ, ಅಹಿಂಸೆ, ನಿಸ್ವಾರ್ಥತೆ, ಪರೋಪಕಾರ ಗುಣ, ಸಹಬಾಳ್ವೆ, ಸೋದರ ವಾತ್ಸಲ್ಯ, ಕರುಣೆ,ನ್ಯಾಯ, ನೀತಿಗಳೆಲ್ಲಾ ಅಂದು ಬದುಕಿತ್ತು. ಆದರೆ ಇಂದು ಈ ಅಂಶಗಳೆಲ್ಲಾ ಎಲ್ಲಿ ಅಡಗಿ ಕುಳಿತಿದೆ? ಬಹುಶಃ ಮಾನವೀಯ ಅಂಶಗಳಿಗೆ ಮನುಜರ ಗುಣವನ್ನು ನೋಡಿ ಭಯಪಟ್ಟಿರಬಹುದು. ಆದ್ದರಿಂದಲೇ ಇಂದು ಮಾನವೀಯತೆ ಮನೆಯ ಮೂಲೆಯಲ್ಲಿ ಅವಿತುಕೊಂಡಿದೆ. ಇಂದಿನ ಜನಾಂಗದಲ್ಲಿ ಮಾನವೀಯತೆ ಕ್ಷೀಣಿಸಲು ನಾವೇ ಕಾರಣವಿರಬಹುದಾ?? ಎಂದು ಯೋಚಿಸುತ್ತಿರಲು ಅಲ್ಲೊಬ್ಬ ಹೇಳಿದ, ಮಾನವೀಯತೆಯು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ ಎಂದು. ಇದಕ್ಕೆ ನಾನು ಪ್ರತಿಯುತ್ತರವಾಗಿ ಹೇಳಿದೆ. ಕಾಲ ಬದಲಾಗಿಲ್ಲ, ಬದಲಾಗಿರೋದು ಮನುಜನ ಗುಣ ಮಾತ್ರ ಅಲ್ವಾ ಅಂದೆ !! ಆ ಕಾಲದಲ್ಲೂ ೨೪ ಗಂಟೆನೇ, ಈಗ್ಲೂ ೨೪ ಗಂಟೆನೇ. ಇದರಲ್ಲಿ ವ್ಯತ್ಯಾಸವೇ ಇಲ್ಲ. ಸೂರ್ಯ- ಚಂದ್ರರ ಉದಯ ಮತ್ತು ಹಸ್ತದ ಸಮಯವೂ ಬದಲಾಗಿಲ್ಲ. ಬದಲಾಗುತ್ತಿರುವುದು ಮನುಜ ಕುಲ ಮಾತ್ರ, ಮನುಜನ‌ ಗುಣ ಮಾತ್ರ. ಇಂದಿನ ದಿನಗಳಲ್ಲಿ ಮನುಷ್ಯನು ಮನುಷ್ಯನನ್ನು ಮನುಷ್ಯತ್ವದಿಂದ ನೋಡುವ ಮನೋಭಾವ ಬದಲಾಗುತ್ತಿದೆ. ರಸ್ತೆಯಲ್ಲಿ ಆಕಸ್ಮಿಕವಾಗಿ ಬಿದ್ದ ಮನುಜನನ್ನು ನೋಡಿ ಆತನ ಬಗ್ಗೆ ಅನುಕಂಪ ತೋರಿ ರಕ್ಷಣೆ ಮಾಡುವ ಬದಲು ಮೂಗುಮುಚ್ಚಿಕೊಂಡು ನನಗೂ ಪ್ರಜ್ಞೆ ತಪ್ಪಿರುವ ವ್ಯಕ್ತಿಗೂ ಯಾವುದೇ ಸಂಬಂಧವಿಲ್ಲ ಎಂದು ಮುಂದೆ ಹೋಗುವವರೇ ಹೆಚ್ಚು. ಇಂತಹ ಜನಗಳ ಮನೋಭಾವ ಬದಲಾಗುವುದಾದರೂ ಎಂದು???


ಇಂದಿನ ರಾಜಕೀಯದವರು, ಶ್ರೀಮಂತರು ದೊಡ್ಡ ದೊಡ್ಡ ಸಭೆಗಳಲ್ಲಿ ಮಾನವೀಯತೆಯ ಬಗ್ಗೆ ಭಾಷಣ ಮಾಡುತ್ತಾರೆ. ರಸ್ತೆಯಲ್ಲಿ ಹೋಗುವಾಗ ಮಾನವೀಯತೆಯನ್ನು ಅನುಸರಿಸದಿರುವವರೇ ಹೆಚ್ಚಾಗಿ ಕಂಡುಬರುತ್ತಾರೆ. ನುಡಿದಂತೆ ನಡೆಯದಿರ್ದಡೆ ಜನ್ಮ ಸಾರ್ಥಕವಾಗದೆಂಬ ನುಡಿಯನ್ನು ಇವರು ಮರೆತಿಹರು.


ಹಿರಿಯರು ಏನು ಮಾಡುವರೋ ಅದನ್ನು ಮಕ್ಕಳು ಅನುಕರಣೆ ಮಾಡುವುದು ಸಹಜ. ಹಿರಿಯರಾದ ನಾವು ಮಾನವೀಯತೆಯಿಂದ ನಡೆದುಕೊಂಡರೆ ಮುಂದಿನ ಪೀಳಿಗೆಗೂ ಮಾನವೀಯತೆಯ ಅಂಶ ಮುಂದುವರೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ನಡೆ, ನುಡಿ, ಗುಣದಲ್ಲಿ ಮಾನವೀಯತೆಯ ಗುಣಗಳನ್ನು ರೂಢಿಸಿಕೊಂಡಿರಬೇಕು. ಇಂದು ತಾಂಡವವಾಡುತ್ತಿರುವ ಧರ್ಮ, ಜಾತೀಯತೆ, ಲಿಂಗ ಭೇದವನ್ನು ಮಾತ್ರ ಚಾಚೂ ತಪ್ಪದೆ ಪಾಲಿಸುವ ಕೆಟ್ಟ ಗುಣವನ್ನು ಬಿಟ್ಟು ಮಾನವೀಯತೆಯ ಅಂಶಗಳನ್ನು ಪರಿಪಾಲಿಸಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ. ಮನಸ್ಸಿದ್ದರೆ ಮಾರ್ಗ ಎಂಬ ಗಾದೆಯಂತೆ ಪ್ರತಿಯೊಬ್ಬರೂ ಮಾನವೀಯತೆಯ ಗುಣಗಳನ್ನು ಮೂಡಿಸಿಕೊಳ್ಳಲು ಸಾಧ್ಯ. ಚಿಂತನೆ ಮಾಡುವ ಶಕ್ತಿ ಇಲ್ಲದ ಪ್ರಾಣಿಗಳಲ್ಲಿ ದಯೆ, ಕರುಣೆ, ಪ್ರೀತಿ, ವಿಶ್ವಾಸವನ್ನು ಕಾಣುತ್ತೇವೆ. ಮನುಷ್ಯನು ಪ್ರಾಣಿಗಿಂತ ಕೀಳಾದುದು ಏಕೆ?ಯಾವುದೋ ಒಂದು ಕಾಗೆ ಒಂದು ತುತ್ತನ್ನೋ, ಅನ್ನದ ಅಗುಳನ್ನೋ ಕಂಡಾಕ್ಷಣ ಇಡೀ ತನ್ನ ಬಳಗವನ್ನು ಕರೆದು ಹಂಚಿ ತಿನ್ನುತ್ತದೆ. ಇದು ತಮ್ಮೆಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ತಮಗೆ ಇದರ ಅರಿವಿದ್ದರೂ ಮೌನವಾಗಿರಲು, ಮಾನವೀಯತೆಯನ್ನು ತಿರಸ್ಕರಿಸಲು ಕಾರಣವೇನೆಂಬುದರ ಬಗ್ಗೆ ನಿಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಿ. ಇತ್ತೀಚೆಗೆ ಸಾವಿನಂಚಲ್ಲಿ ಇದ್ದ ಯುವಕನನ್ನು ಹಗಲು-ಇರುಳೆನ್ನದೆ ಅವನೊಂದಿಗಿದ್ದು ಧೈರ್ಯ ತುಂಬುತ್ತಾ ಜೀವನವೇ ಇಲ್ಲ ಎನ್ನುವ ಯುವಕನನ್ನು‌ ಬದುಕಿಸಿದ್ದಾಯ್ತು. ಯುವಕನು ಇಂದು ಯಥಾಸ್ಥಿತಿಯಲ್ಲಿ ಜೀವಿಸುವ ಮಟ್ಟಿಗೆ ನೋಡಿಕೊಂಡೆ. ಪರೋಪಕಾರ ಗುಣದಿಂದ ಎಲ್ಲ ರೀತಿಯ ಸಹಾಯ ಮಾಡಿದೆ. ಆ ಯುವಕನು ಇಂದು ನಾನು ಮಾಡಿದ ಪ್ರತಿ ಸಹಾಯವನ್ನು ಮರೆತು ನನ್ನನ್ನೇ ಕೇಳಿದ!! ನೀನೇನು‌ ಮಾಡಿದೆ? ಎಂದು. ಅರೆಕ್ಷಣ ತಬ್ಬಿಬ್ಬಾದೆ. ಅರೆ, ಹಗಲಿರುಳು ಅವನ ಸೇವೆಗಾಗಿ ದುಡಿದ ನನ್ನ ಶ್ರಮಕ್ಕೆ ಸಿಕ್ಕಿದ ಬೆಲೆ ಇದೇನಾ? ಎಂದು‌ ನನ್ನನ್ನೇ ಪ್ರಶ್ನಿಸಿಕೊಂಡಾಗ ದೊರೆತ ಉತ್ತರವೇನೆಂದರೆ, ಆ ಯುವಕನಲ್ಲಿ ಮಾನವೀಯತೆ ಏಕಿಲ್ಲ??. ಅವನಲ್ಲಿ ಮಾನವೀಯತೆ ಇಲ್ಲವೆಂದು ನಾನು ಕಟುಕನಾಗಲಿಲ್ಲ. ಆಗಲಾರೆ ಏಕೆಂದರೆ ನನ್ನ ತಾಯಿಯಲ್ಲಿದ್ದ ಮಾನವೀಯತೆಯ ಅಂಶಗಳು ನನ್ನಲ್ಲಿ ಕರಗತವಾಗಿದೆ. ಇಂದಿಗೂ ಈ ಮಾನವೀಯತೆಗೆ ಬೆಲೆ ಕೊಡುತ್ತಿರುವೆ. ಈ ದಿನಗಳಲ್ಲೂ ನಿಮ್ಮಂತ ಮಾನವೀಯ ವ್ಯಕ್ತಿಯನ್ನು ನೋಡಿ ಸಂತೋಷವಾಗುತ್ತಿದೆ ಎಂದು ಅನೇಕ ಬಾರಿ ಅನೇಕ ಸ್ನೇಹಿತರು‌ ಅದರಲ್ಲೂ ದೊಡ್ಡಬಳ್ಳಾಪುರದ ರಮೇಶ್ ಹೇಳಿದ್ದು ಈಗ ನೆನಪಾಯ್ತು. ಹಿರಿಯರು ಹೇಳಿದ್ದ ಮಾತುಗಳು ಆಗಾಗ ನೆನಪಿಗೆ ಬರುತ್ತಿದೆ. ಅದರಂತೆಯೇ ಬದುಕಲು ಪ್ರಯತ್ನಿಸುತ್ತಿರುವೆ. ಜೀವನದ ಸಾರ್ಥಕತೆಯು ಮಾನವೀಯತೆಯಿಂದ ಮಾತ್ರ ಸಾಧ್ಯ. ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶ ವ್ಯಕ್ತಿಗಳು. ಮಕ್ಕಳು ಅವರನ್ನು ನೋಡಿ, ನಾನೂ ನನ್ನ ಗುರುಗಳಂತಾಗಬೇಕು ಎಂಬ ಮಹದಾಸೆಯನ್ನು ಇಟ್ಟುಕೊಂಡಿರುತ್ತಾರೆ. ಆದರ್ಶ ಗುರುಗಳಲ್ಲಿ ಮಾನವೀಯತೆಯ ಅಂಶಗಳು ಎದ್ದು ಕಾಣಬೇಕು. ಆಗಲೇ ವಿದ್ಯಾರ್ಥಿಗಳಿಗೆ ಮಾಡಿದ ಪಾಠವು ಸಾರ್ಥಕಕವಾಗುವುದು. ತರಗತಿಯ ಕೋಣೆಯಲ್ಲಿ ಮಾನವೀಯತೆಯ ಶಿಲ್ಪಿಯಂತೆ ನಡೆದುಕೊಂಡು ಹೊರಗಿನ ಪ್ರಪಂಚದಲ್ಲಿ ಮತ್ತೊಂದು ರೀತಿಯಲ್ಲಿ ನಡೆದುಕೊಳ್ಳುತ್ತಾ ವಿದ್ಯರ್ಥಿಗಳಿಗೆ ಮೋಸ ಮಾಡಬಾರದು. ಯಥಾ ರಾಜ, ತಥಾ ಪ್ರಜೆ ಎಂಬುದನ್ನು ನೆನಪಿನಲ್ಲಿಡಬೇಕು.

ತಾವೆಲ್ಲರೂ ಬಿ.ಎ.ಸನದಿಯವರು ಬರೆದಿರುವ 'ಮಾನವೀಯತೆ' ಪದ್ಯವನ್ನೊಮ್ಮೆ ಓದಿ ನೋಡಿ. ಮಾನವೀಯತೆಯ ಚಿತ್ರಣವೇ ಕಣ್ಮುಂದೆ ಸಾಲು ಸಾಲಾಗಿ ಕಾಣುತ್ತದೆ. ಈ ಪದ್ಯವನ್ನು ಓದಿದ ನಂತರವಾದರೂ ಎಲ್ಲರಲ್ಲೂ ಮಾನವೀಯತೆಯ ಗುಣಗಳು ಮೂಡಬಹುದೆಂದು ಭಾವಿಸಿದ್ದೇನೆ. ಇಂದು ಪ್ರತಿಯೊಂದು ಮನೆ - ಮನದಲ್ಲೂ ಕಣ್ಮರೆಯಾಗುತ್ತಿದೆ ಮಾನವೀಯತೆ. ಒಮ್ಮೆ ಮಾನವೀಯತೆ ಇಲ್ಲದ ಸಮಾಜ ಹೇಗಿರಬಹುದೆಂದು ಯೋಚಿಸಿ ನೋಡಿ ಮೋಸ, ಸುಳ್ಳು, ಸ್ವಾರ್ಥ, ನಿಷ್ಕರುಣೆ, ಕಳ್ಳತನ, ಕೊಲೆ, ಸುಲಿಗೆ, ಅರಾಜಕತೆ, ಬೇಧ - ಭಾವ, ಸಂಕುಚಿತತೆ ತುಂಬಿ ತುಳುಕುತ್ತಿದೆ. ಇದರಿಂದ ಮನುಜ ಕುಲವು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಸಮಾಜದಲ್ಲಿ ಬದಲಾವಣೆ ಬೇಕಿದೆ. ಆ ಬದಲಾವಣೆ ನಮ್ಮಿಂದಲೇ ಪ್ರಾರಂಭವಾಗಲಿ. ಎಲ್ಲರೂ ಬನ್ನಿ ಎಲ್ಲರೂ ಕೈಜೋಡಿಸಿ ಹಳೆಯ ಕಾಲದ ಮಾನವೀಯತೆ ತುಂಬಿದ ದಿನಗಳನ್ನು ಮತ್ತೆ ಮೂಡಿಸೋಣ. ಆನಂದದಿಂದ ಮಾನವೀಯತೆಯಿಂದ ಬಾಳೋಣ. ಮಾನವೀಯತೆಯನ್ನು ಬದುಕಿಸೋಣ.


Rate this content
Log in

Similar kannada story from Classics