ಎರಡು ಟೊಮೇಟೊ
ಎರಡು ಟೊಮೇಟೊ
ನಮ್ಮಲ್ಲಿ ಸೋಮವಾರ ಸಂತೆಯ ದಿನ. ಬಾನಿನಲ್ಲಿ ಕಾರ್ಮೋಡಗಳು ಮಳೆಯಾಗಿ ಭೂಮಿಯನ್ನು ಸ್ಪರ್ಶಿಸಲು ಸಿದ್ಧವಾಗಿದ್ದವು. ಮಳೆ ಇನ್ನೇನು ಸುರಿಯುವ ವೇಳೆ. ತಂದೆಯೊಂದಿಗೆ ತರಕಾರಿಗಳ ಭೇಟಿಗಾಗಿ ಸಂತೆಯ ದಾರಿ ಹಿಡಿದಿದ್ದೆ. ಹೆಚ್ಚು ತರಕಾರಿ ತಿನ್ನುವ ನನ್ನ ಮನೆಯಲ್ಲಿ ಟೊಮೇಟೊ ಅತೀ ಅಗತ್ಯದ ತರಕಾರಿ. ಎಂದಿನಂತೆ ನನ್ನ ತಂದೆಯು ಸಂತೆಯ ಪ್ರತಿ ಮೂಲೆಮೂಲೆಗೂ ತೆರಳಿ ಪಾಲಿನ ತರಕಾರಿ ಕೊಳ್ಳುವಲ್ಲಿ ಮಗ್ನರಾಗಿದ್ದರು. ಸ್ವಲ್ಪ ಸಮಯ ಇತರ ತರಕಾರಿಗಳ ಖರೀದಿಯ ನಂತರ ನಾವು ತಲುಪಿದ್ದು ಟೊಮ್ಯಾಟೋ ಮಾರುವವನ ಬಳಿ. ಅಲ್ಲಲ್ಲಿ ಅನೇಕ ಟೊಮೇಟೊ ಮಾರುವವರಿದ್ದರು ತಂದೆಯ ಮನಸ್ಸಿಗೆ ಇಷ್ಟವಾಗುವ ಒಂದು ಕಡೆ ಬಂದೆವು.
ಟೊಮೇಟೊ ಬಹಳ ದುಬಾರಿಯಾಗಿದ್ದು ಸಮಯ ಅದು. ನನ್ನ ತಂದೆ ಟೊಮೇಟೊ ಮಾರುವವನೊಂದಿಗೆ ಬೆಲೆಯ ಬಗ್ಗೆ ಚರ್ಚಿಸುತ್ತಿದ್ದರು. ಆತನ ಬಳಿ ನೂಕುನುಗ್ಗಲು ಹೆಚ್ಚಾಗುತ್ತಿದ್ದಂತೆ ನನ್ನ ಪಕ್ಕ ಕೈಯೊಂದು ಸಾಗಿದಂತೆ ಭಾಸವಾಯಿತು.
ಒಂದೇ ಸಲ ತಿರುಗಿ ನೋಡಿದೆ. ಬರಿದಾದ ಕೈ ಮತ್ತು ಕೊರಳು, ಹಳೆಯ ಚೂಡಿದಾರ ಧರಿಸಿ ಒಂದು ಹರಿದ ಚೀಲ ಹಿಡಿದ ಹೆಂಗಸು ಟೊಮೇಟೊ ಕೊಳ್ಳಲು ಅಲ್ಲಿಗೆ ಬಂದಿದ್ದರು. ನನ್ನ ಕಣ್ಣು ಅವಳ ಕಣ್ಣನ್ನು ಭೇಟಿಯಾದಾಗ ಏನೋ ನೋವಿನ ಭಾಸವಾಯಿತು. ಆಕೆ ಟೊಮೇಟೊ ಖರೀದಿಗೆ ಬಂದ ಕಾರಣ ಸ್ವಲ್ಪ ಜಾಗ ನೀಡಲು ಯತ್ನಿಸಿದೆ. ಆದರೆ ಅಲ್ಲಿ ಜನಸಂದಣಿ ಹೆಚ್ಚಾಗುತ್ತಲೇ ಹೋಯಿತು.
ಜನರ ಮಧ್ಯೆ ಆ ಹೆಂಗಸು ಒಂದೇ ನಿಮಿಷದಲ್ಲಿ ಎರಡು ಟೊಮೇಟೊ ತೆಗೆದು ತನ್ನ ಹರಿದ ಚೀಲಕ್ಕೆ ತುಂಬಿಸಿ ತಿರುಗಿ ನೋಡದೆ ವೇಗವಾಗಿ ಮಾಯವಾದಳು. ಎಲ್ಲರೂ ಅವರವರ ಕೆಲಸದಲ್ಲಿ ತೊಡಗಿದ್ದರು. ಇದನ್ನು ನೋಡಿದ ನನಗೆ ಅವಳನ್ನು ನೋಡಲು ಧೈರ್ಯ ಸಾಕಾಗಲಿಲ್ಲ. ಏಕೆಂದರೆ ಅವಳು ತೆಗೆದದ್ದು ಎರಡು ಟೊಮೇಟೊ. ಇದು ಕಳ್ಳತನವೇ? ಅಲ್ಲ ಅಗತ್ಯತೆ ಎಂದಿತು ನನ್ನ ಮನಸ್ಸು. ನಾನು ಅವಳನ್ನು ಹಿಂಬಾಲಿಸಿ ಕೊಂಡು ಹೋದೆ. ಯಾವುದೋ ಗಿಡದ ಮಧ್ಯೆಯಲ್ಲಿ ನಿಂತುಕೊಂಡೆ. ಅವಳು ವೇಗವಾಗಿ ಒಂದು ಮನೆಯ ಒಳಗೆ ಹೋದಳು. ಮನೆಯಂತೂ ಚಿಕ್ಕ ಮಳೆಗೆ ಹಾರಿ ಹೋಗುವಂತಿತ್ತು. ಅದೇ ಸಮಯ 2-3 ವರ್ಷದ ಮಗುವೊಂದು ಓಡೋಡಿ ಬಂದು ಅವಳನ್ನು ಅಪ್ಪಿಕೊಂಡಿತು. ಮನೆಯ ಎದುರಲ್ಲಿ ಕಂಠಪೂರ್ತಿ ಕುಡಿದು ಕುಳಿತ ಗಂಡಸು ಅವಳ ಗಂಡನೆಂದು ಭಾವಿಸಿದೆ. ಎರಡು ಟೊಮೇಟೊ ಆ ದಿನ ಆ ಮನೆಯ ಹಸಿದ ಹೊಟ್ಟೆಗೆ ಅಮೃತವಾಗುತ್ತದೆ ಎಂದು ಖುಷಿಯಾಯಿತು. ಆದರೂ ಆಕೆಯ ಕಣ್ಣಿನಲ್ಲಿದ್ದ ನೋವು ನನಗೆ ಅರ್ಥವಾಯಿತು. ಎರಡು ಟೊಮೇಟೊ ಬದುಕಿನ ಕಟು ಸತ್ಯವನ್ನು ನನಗೆ ಕಲಿಸಿತ್ತು. ಎಂದಿಗೂ ಮರೆಯಲಾರೆ ಆ ಎರಡು ಟೊಮೇಟೊ!!!
