ಬದುಕು ರೂಪಿಸುವ ಕಲೆಗಾರ್ತಿ - 1
ಬದುಕು ರೂಪಿಸುವ ಕಲೆಗಾರ್ತಿ - 1
ಸಂಜೆಯ ತಂಪು ವಾತಾವರಣ, ತಮ್ಮ ತಮ್ಮ ಕೆಲಸ ಮುಗಿಸಿ ಗೂಡು ಸೇರುತ್ತಿರುವ ಹೊತ್ತು. ಆದರೆ ಅಲ್ಲೊಂದು ಜೀವ ಮನೆಗೆ ಹೋಗದೆ ಕೆರೆಯ ದಂಡೆಯ ಮೇಲೆ ಕುಳಿತು ಅಳುತಿತ್ತು. ಮನವು ರಾಡಿಯಾಗಿತ್ತು. ಆ ಮುಗ್ದ ಮನಸ್ಸನ್ನು ಮಾತಲ್ಲೇ ಚುಚ್ಚಿ ಚುಚ್ಚಿ ನೋಯಿಸಿದ್ದರು. ತನ್ನಮ್ಮನ ಬಗ್ಗೆ ತಪ್ಪಾಗಿ ಮಾತಾನಾಡಿದವರ ಮೇಲೆ ಕೋಪಗೊಂಡು ಕಿರುಚಾಡಿ ಅವರ ಮೇಲೆ ಮಣ್ಣೆರಚಿ ಓಡಿ ಬಂದು ಕರೆಯ ದಂಡೆಯ ಮೇಲೆ ಕೂತು ಅಳುತ್ತಿದ್ದಳು ಒಬ್ಬತ್ತನೆ ತರಗತಿ ಓದುತ್ತಿರುವ ಪೋರಿ ಅಲೇಖ್ಯಾ.. ಸೂರ್ಯನು ತನ್ನ ಕೆಲಸ ಮುಗಿಸಿ ಮನೆಗೆ ಹೊರಟನು. ಕತ್ತಲಾಗುತ್ತಿದ್ದಾಗ ಹುಡುಗಿಗೆ ಭಯವಾಯಿತು. ಕೆಳಗೆ ಬಿದ್ದ ತನ್ನ ಬ್ಯಾಗನ್ನು ಎತ್ತಿ ಅದರಲ್ಲಿ ಅಂಟಿದ್ದ ಮಣ್ಣನ್ನು ಕೊಡವಿಕೊಂಡು ಮನೆಕಡೆ ಹೆಜ್ಜೆ ಹಾಕಿದಳು..
ಹೊತ್ತು ಮುಳುಗಿದರೂ ಮನೆಗೆ ಬಾರದ ಮಗಳನ್ನು ನೆನೆದು ಕಂಗಾಲಾಗಿದ್ದಳು ಸೌಮ್ಯ. ಅಕ್ಕ ಪಕ್ಕದ ಮನೆಯರನ್ನೆಲ್ಲಾ ವಿಚಾರಿಸಿದರು ಸುಳಿವಿಲ್ಲಾ. ಕೊನೆಗೆ ಏನು ಮಾಡುವುದೆಂದು ತೋಚದೆ ರಾಘವನಿಗೆ ಫೋನಚ್ಚಿದಳು. ಅವನು ಇವಳ ಗಾಬರಿಯನ್ನು ಅರಿತವನೆ ಮನೆಗೆ ಓಡಿಬಂದಿದ್ದ. ಎಲ್ಲಿ ಹೋದಳು, ಸ್ಕೂಲಿನಿಂದ ಮನೆಗೆ ಬಂದಿಲ್ವಾ, ಮೊದಲೇ ಹೇಳೋದಲ್ಲವಾ ಸೌಮ್ಯ ನಾನು ನೋಡಿಬರುತ್ತಿದ್ದೆ. ಭಯ ಪಡಬೇಡಿ ನಾನು ಹುಡುಕಿ ಕರೆದುಕೊಂಡು ಬರುತ್ತೇನೆ ಎಂದು ಹೊರಟವನ ಎದುರಿಗೆ ನಿಂತಿದ್ದಳು ಅಲೇಖ್ಯಾ. ಅವಳ ನೋಡಿ ಸಮಾಧಾನವಾಯಿತವರಿಗೆ. ಅವಳ ಬಳಿ ಬಂದು ಯಾಕೆ ಪುಟ್ಟಿ ಇಷ್ಟು ಲೇಟು, ಫ್ರೆಂಡ್ಸ್ ಜೊತೆ ಆಟ ಆಡುತಿದ್ಯಾ ಎಂದು ಕೇಳಿದವನ ಮುಖವನ್ನು ಕೋಪದಿಂದ ನೋಡಿ ಒಳ ಓಡಿದಳು. ಅವಳ ಈ ಹೊಸ ವರೆಸೆ ಇಬ್ಬರಿಗೂ ಆಶ್ಚರ್ಯ ದ ಜೊತೆಗೆ ಆತಂಕ ಮೂಡಿಸಿದ್ದು ಸುಳ್ಳಲ್ಲ. ಅವನು ಸೌಮ್ಯಳ ಮುಖ ನೋಡಿದಾಗ ಅವಳು ಏನು ಅರಿಯದೆ ಒಳ ಹೋದ ಮಗಳ ಮುಖ ನೆನೆದು ದುಃಖಿಸುತ್ತಿದ್ದಳು. ರಾಘವ್ ಸೌಮ್ಯಳಿಗೆ ಫ್ರೆಂಡ್ಸ್ ಜೊತೆ ಏನಾದರು ಮುನಿಸು ಇರಬಹುದು, ಚಿಕ್ಕ ಹುಡುಗಿ, ಅತ್ತಿದ್ದಾಳೆ ಅನ್ನಿಸುತ್ತಿದೆ. ಮೊದಲು ಅವಳನ್ನು ವಿಚಾರಿಸಿ ನಾನಿನ್ನು ಬರುತ್ತೇನೆ ಎಂದು ಹೇಳಿ ಹೊರಟವನ ಮನ ಗೊಂದಲದ ಗೂಡಾಗಿತ್ತು..
ತಾನು ಎದುರು ಬಂದರೆ ರಾಘು ಮಾಮ ಎಂದು ಪ್ರೀತಿಯಿಂದ ಮಾತನಾಡಿಸುತ್ತಿದ್ದ ಹುಡುಗಿ ಇಂದು ತನ್ನನ್ನು ನೋಡಿದ ನೋಟವೇ ಬದಲಾದಂತಿದೆ. ಅವಳ ಕಣ್ಣಲ್ಲಿನ ಕೋಪ ಅಸಹ್ಯ ಏನೋ ನಡೆಯಬಾರದು ನಡೆದಿದೆ ಅನ್ನೋದು ಮಾತ್ರ ಖಚಿತ ಆದರೆ ಅದೇನು ಎಂದು ಯೋಚಿಸುತ್ತಲೇ ಮನೆಕಡೆ ಹೊರಟನು..
ಬ್ಯಾಗನ್ನು ಒಂದು ಮೂಲೆಗೆ ಬಿಸಾಡಿ ಹಾಸಿಗೆ ಮೇಲೆ ಕೂತು ಕಿಟಕಿಯಿಂದ ಹೊರಗಡೆ ನೋಡುತ್ತಿದ್ದ ಮಗಳ ಕಂಡು ತಾಯಿಯ ಮನ ತಲ್ಲಣಿಸಿತು. ಯಾವಾಗಲೂ ಖುಷಿಯಿಂದ ಜಿಂಕೆ ತರ ಓಡಾಡುತ್ತಾ ಇರುತ್ತಿದ್ದವಳು, ಸ್ಕೂಲಿನಿಂದ ಮನೆಗೆ ಬಂದ ತಕ್ಷಣ ಇಡೀದಿನ ನಡೆದುದರ ಬಗ್ಗೆ ತನ್ನಲ್ಲಿ ಅವಳ ರಾಘು ಮಾಮನಲ್ಲಿ ವರದಿ ಒಪ್ಪಿಸುತ್ತಿದ್ದವಳು ಇಂದೂ ತಮ್ಮ ಕಡೆ ಸರಿಯಾಗಿ ನೋಡದೆ ಹೀಗೆ ಕುಳಿತಿರುವುದು ಅವಳಿಗೇಕೋ ಸಹಿಸಲಾಗಲಿಲ್ಲ. ಅವಳ ಮನ ಅಪಶಕುನ ನುಡಿಯುತ್ತಿತ್ತು.
ಮೆಲ್ಲನೆ ಮಗಳ ಬಳಿ ಬಂದವಳು ಅವಳ ಹೆಗಲ ಕೈಹಿಟ್ಟು ಅಲೇಖ್ಯಾ ಎಂದಾಗ ಕೋಪದದಿಂದಲೇ ಸೌಮ್ಯಳ ಕೈಯನ್ನು ಕೊಸರಿಕೊಂಡು ಕಿಟಕಿಯ ಬಳಿ ನಿಂತಳು. ಮಗಳ ಈ ಹೊಸ ವರ್ತನೆಗೆ ಬೆಚ್ಚಿದ ಸೌಮ್ಯ ಏನು ಮಾಡಬೇಕೆಂದು ತಿಳಿಯದೆ ಮತ್ತೆ ಅವಳ ಬಳಿ ಹೋಗಿ ಅಲೇಖ್ಯಾ ಅಂದಾಗ ಎಂದು ಮತ್ತೆ ಕರೆದಾಗ ನನ್ನ ತಂದೆ ಯಾರು ಎಂದು ಪ್ರಶ್ನಿಸಿದಳು ಅಲೇಖ್ಯಾ. ಅವಳ ಈ ಪ್ರಶ್ನೆ ಸೌಮ್ಯಳನ್ನು ತಬ್ಬಿಬ್ಬು ಮಾಡಿತು. ಇಷ್ಟು ವರ್ಷದಲ್ಲಿ ಮಗಳಿಗೆ ಮೂಡದ ಪ್ರಶ್ನೆ ಈಗ ಧಿಡೀರನೆ ಹೇಗೆ? ? ಏಕೆ? ? ಯೋಚಿಸುತ್ತಿದ್ದಳು.
ಆದರೆ ಅಮ್ಮನ ಮನಸ್ಥಿತಿ ಅರಿಯದ ಮಗಳು ನನಗೆ ಅಪ್ಪ ಬೇಕು, ಎಲ್ಲಿದ್ದಾರೆ ಅವರು, ಅವರು ನಿನ್ನ ಬಿಟ್ಟು ಹೋದರ ಅಥವಾ ನೀನು ಅವರನ್ನು ಬಿಟ್ಟು ಬಂದ್ಯಾ ?? ಎಂದು ಕೇಳಿದಾಗ ಸೌಮ್ಯ ಶಾಕ್ ನಲ್ಲಿ ನಿಂತಳು. ಅವಳಿಗೆ ಮಗಳ ಪ್ರಶ್ನೆಯನ್ನು ಕೇಳಿ ತಲೆ ಸುತ್ತುವಂತಾಯಿತು. ಆಸರೆಗಾಗಿ ಗೋಡೆಗೆ ಒರಗಿ ನಿನಂತವಳ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಅಮ್ಮನನ್ನು ಹಾಗೆ ನೋಡಿದವಳು ಅರ್ಥೈಸಿಕೊಂಡಿದ್ದೆ ಬೇರೆ. ಸೌಮ್ಯಳ ಬಳಿ ಹೋಗಿ ಯಾಕಮ್ಮ ನಿಜ ಎಲ್ಲಾ
ನನಿಗೆ ತಿಳಿತು ಅಂತಾ ಹೆದರಿಕೆನಾ ಎಂದು ಕೇಳಿದವಳ ಮುಖವನ್ನು ಧೈನ್ಯವಾಗಿ ನೋಡಿದಳು ಸೌಮ್ಯ. ಆ ನೋಟ ನಿನ್ನಮ್ಮ ತಪ್ಪು ಮಾಡಿಲ್ಲ ಕಣೆ, ಅರ್ಥ ಮಾಡಿಕೋ ಈ ರೀತಿ ಪ್ರಶ್ನೆ ಕೇಳಿ ಹಿಂಸಿಸಬೇಡ ಎನ್ನುವಂತಿತ್ತು.
ಅಲೇಖ್ಯಾ ಅಷ್ಟಕ್ಕೇ ಸುಮ್ಮನಾಗದೆ ಹೇಳಮ್ಮಾ ಆ ರಾಘು ಮಮಾನಿಗೋಸ್ಕರ ನನ್ನ ಅಪ್ಪನನ್ನ ಬಿಟ್ಟು ಬಂದ್ಯಾ ಎಂದು ಕೇಳಿದಾಗ ಅಲೇಖ್ಯಾ ಎಂದು ಜೋರಾಗಿ ಕಿರುಚಿದ್ದಳು ರಮ್ಯಾ.. ಅವಳನ್ನು ನೋಡಿ ಅತ್ತೆ ಎಂದು ಓಡಿಹೋಗಿ ತಬ್ಬಿಡಿದವಳನ್ನು ಕೈ ಹಿಡಿದು ನಿಲ್ಲಿಸಿ 'ನೀನೇನು ಮಾತನಾಡಿದೆ ಅನ್ನೋದು ಗೊತ್ತಾ ನಿನಗೆ, ನಿನ್ನ ಅಮ್ಮನ ಬಗ್ಗೆ ನೀನೇ ಆ ರೀತಿ ಮಾತನಾಡಬಹುದಾ? ತಪ್ಪು ಮಾಡಿದೆ ಅಲೇಖ್ಯಾ, ತಪ್ಪು ಮಾಡಿದೆ. ಯಾವ ಮಗಳು ಅಮ್ಮನಲ್ಲಿ ಕೇಳಬಾರದ ಮಾತನ್ನು ಕೇಳಿ ತಪ್ಪು ಮಾಡಿದೆ. ನಿನ್ನ ಅಮ್ಮ ಅಪರಂಜಿ ಕಣೆ ಅವಳಿಗೆ ಇಂತಹ ಮಾತನ್ನು ಹೇಳಲು ಹೇಗೆ ಮನಸ್ಸು ಬಂತು ಎಂದು ದುಃಖದಿಂದ ಹೇಳುತ್ತಿದ್ದವಳು ಸೌಮ್ಯನೆಡೆ ನೋಡಿದಾಗ ಅವಳು ಜೀವವಿಲ್ಲದ ಬೊಂಬೆಯಂತೆ ನಿಂತಿದ್ದಳು. ಅವಳ ಸ್ಥಿತಿ ನೋಡಿ ರಮ್ಯಾಳ ಕರುಳು ಚುರುಕ್ ಎಂದಿತು. ಅವಳ ಬಳಿ ಹೋಗಿ ಸೌಮ್ಯ ಎಂದು ಕರೆದರೂ ಪ್ರತಿಕ್ರಿಯಿಸದೆ ಇದ್ದಾಗ ಅವಳ ಭುಜ ಅಲುಗಾಡಿಸಿ ಸೌಮ್ಯ ಎಂದಳು. ಎಚ್ಚೆತ್ತ ಸೌಮ್ಯ ರಮ್ಯಾಳನ್ನು ನೋಡಿದ್ದೇ ತಬ್ಬಿಕೊಂಡು ಜೋರಾಗಿ ಅಳಲಾರಂಭಿಸಿದಳು. ಅಮ್ಮನ ಅಳು ನೋಡಿ ಅಲೇಖ್ಯಾನಿಗೆ ತಡೆಯಲಾಗಲಿಲ್ಲ, ಆದರೆ ಅವಳು ಅಮ್ಮನ ಬಳಿ ಹೋಗಲೂ ಬಯಸಲಿಲ್ಲ, ಒಂದು ಮೂಲೆಯಲ್ಲಿ ಕುಳಿತು ದುಃಖಿಸತೊಡಗಿದಳು. ರಮ್ಯಾಳೊಡನೆ ಬಂದ ರಾಘವ್ ಅಲೇಖ್ಯಾಳ ಮಾತನ್ನು ಕೇಳಿ ಅರಗಿಸಿಕೊಳ್ಳಲಾರದೆ ಹೊರಗಡೆನೆ ಕುಳಿತುಬಿಟ್ಟನು.
ನನ್ನಾಸರೆ ನೀನೆಂದು
ನಾ ನೊಂದರು ಸರಿ
ನಿನಗೆ ನೋವು ತಾಗಬಾರದೆಂದು
ಪರಿತಪಿಸುವ ಹೃದಯವಿದು
ಬದುಕಿನ ಆಸೆಗಳೆಲ್ಲಾ
ಕಮರಿದಾಗ
ಜೀವನವೇ ಸಾಕೆಂದು
ಬದುಕು ಬೇಡವೆಂದೆನೆಸಿದಾಗ
ಕಷ್ಟಗಳ ಸಹಿಸಿ
ನೋವನೆಲ್ಲಾ ನುಂಗಿ
ಬದುಕಿದೆ ನಿನಗಾಗಿ
ನಿನ್ನ ಬಾಳ ಅರಳಿಸುವ
ಸಲುವಾಗಿ
ಆದರಿಂದು ಚೂರಾಯ್ತು ಮನ
ಒಡೆದೊಯ್ತು ಹೃದಯ
ನೀ ಆಡಿದ ಮಾತಿನಿಂದ
ಎಷ್ಟೋ ಸವಾಲುಗಳ ಎದುರಿಸಿದ
ಜೀವವಿಂದು
ಸೋತಿದೆ ಮಮತೆಯ ಕುಡಿಯ
ಕಿಡಿಯಂತ ಮಾತಿಂದ
ಉತ್ತರವಿಲ್ಲ ಅವಳ ಪ್ರಶ್ನೆಗೆ
ಕಾರಣ ಯಾರು ನನ್ನ ಈ ಹಣೆ
ಬರಹಕೆ
(ಕವನ - ಗೀತಾ ಮಂಜು ಅಕ್ಕ)
ಯಾರೋ ಅಂದ ಮಾತಿನಿಂದ ಮುಗ್ದ ಮನಸ್ಸು ಗಾಯಗೊಂಡಿದ್ದಲ್ಲದೆ ತನ್ನನ್ನೇ ಜೀವವೆಂದು ಬಾಳುತ್ತಿರುವ ತನ್ನ ಅಮ್ಮನ್ನನ್ನು ನೋಯಿಸಿದ ಅಲೇಖ್ಯಾ ಒಂದೆಡೆ ದುಃಖಿಸುತ್ತಿದ್ದರೆ, ಮಗಳ ಅನಿರೀಕ್ಷಿತ ವರ್ತನೆಯ ಜೊತೆ ಅವಳಂದ ಮಾತುಗಳನ್ನು ಅರಗಿಸಿಕೊಳ್ಳಲಾಗದೆ ಒಳಗೊಳಗೆ ನೊಂದು ಬೇಯುತ್ತಿದ್ದಳು ಸೌಮ್ಯ. ಅಮ್ಮ ಮಗಳ ದುಃಖ ನೋಡಲಾರದೆ ಒದ್ದಾಡುತ್ತಿದ್ದ ರಮ್ಯಾ -ರಾಘವ್.
ಖುಷಿ ಖುಷಿಯಾಗಿದ್ದ ಈ ಚಿಕ್ಕ ಸಂಸಾರ ಇವತ್ತು ದುಃಖ ಸಾಗರದಲ್ಲಿ ಮುಳುಗಿದೆ. ಎಲ್ಲಕಿಂತ ಹೆಚ್ಚಾಗಿ ಪವಿತ್ರವಾದ ತಾಯಿ ಮಗಳ ಸಂಬಂಧದ ಮೇಲೆ ಈ ಘಟನೆ ಹೆಚ್ಚಾಗಿ ಪರಿಣಾಮ ಬೀರಿದೆ.
ಮುಂದೇನಾಗುವುದೋ ಕಾದು ನೋಡಬೇಕಷ್ಟೆ................