Shridevi Patil

Inspirational Others Children

3  

Shridevi Patil

Inspirational Others Children

ಬಾಲ್ಯದ ಆಟ ಆ ಹುಡುಗಾಟ

ಬಾಲ್ಯದ ಆಟ ಆ ಹುಡುಗಾಟ

3 mins
121


ಮನುಷ್ಯ ಎಷ್ಟೇ ದೊಡ್ಡವನಾದರೂ ಸಹ ಆತನ ಒಳಗೊಂದು ಮಗುವಿನಂತಹ ಮನಸ್ಸು ಇದ್ದೇ ಇರುತ್ತದೆ. ವಯಸ್ಸು ಕಳೆದರೂ ಸಹ ಆತನಲ್ಲಿ ಇರುವ ಮಗುವಿನ ಮನಸ್ಸು ಹಾಗೆ ಇರುತ್ತದೆ. ಎಷ್ಟು ಚಂದ ಅಲ್ಲವೇ. ಮಕ್ಕಳ ಮನಸ್ಸು ಬೆಣ್ಣೆಯಂತೆ. ಬಲು ಬೇಗ ಕರಗುವಂತೆ ಎಷ್ಟೇ ಸಿಟ್ಟು ಮಾಡಿಕೊಂಡರೂ , ಎಷ್ಟೇ ಜಗಳ ಮಾಡಿದರೂ ಆ ಮಕ್ಕಳಲ್ಲಿ ಕೋಪದ ತಾಪ ತುಂಬಾ ಹೊತ್ತು ಇರುವುದಿಲ್ಲ. ಅದಕ್ಕೆ ಮಗುವಿನಂತಹ ಮನಸ್ಸು ಇರಬೇಕೆಂದು ಹೇಳುತ್ತಾರೆ.


ನಾನು ನನ್ನ ಬಾಲ್ಯದ ದಿನಗಳಿಗೆ ಜಾರಿದರೆ ಒಂದೇ ಒಂದು ನೆನಪು ಮರಳಿ ಮರಳಿ ಬರುತ್ತದೆ , ಅದುವೇ ಅಪ್ಪ ಅಮ್ಮನೊಂದಿಗೆ ಇರದೇ ಇರುವ ಆ ನನ್ನ ಚಿಕ್ಕಂದಿನ ಬೇಸರದ ದಿನಗಳು. ಎಲ್ಲ ಮಕ್ಕಳೂ ಅಪ್ಪ ಅಮ್ಮನೊಂದಿಗೆ ಕೈ ಹಿಡಿದು ಸುತ್ತಾಡುವ ಹೊತ್ತಲ್ಲಿ ನಾನು ಅವರಿಂದ ದೂರವಿದ್ದೆ. ಯಾರು ಎಷ್ಟೇ ಪ್ರೀತಿ ಕೊಟ್ಟರೂ ಅದು ನನ್ನ ಅಪ್ಪ ಅಮ್ಮನ ಪ್ರೀತಿಗೆ ಸರಿಸಾಟಿ ಆದೀತೆ. ಎಲ್ಲರೂ ಹೇಳಬಹುದು, ಇವರು ನನ್ನ ಅಪ್ಪ ಅಮ್ಮ ಇದ್ದಂತೆ , ಅಪ್ಪ ಅಮ್ಮನಿಗೂ ಹೆಚ್ಚು ಅಂತ. ಆದರೆ, ಅಪ್ಪ ಅಮ್ಮ ಅಂತ ಹೇಳುವರೆ?


ಈಗ ನನ್ನ ಮಗಳು ಶ್ರೇಯಾ ಕಳೆಯುವ ಬಾಲ್ಯವನ್ನು ನೋಡಿದರೆ ಅದೆಷ್ಟೋ ಖುಷಿಯಾಗುತ್ತದೆ. ಬಾಲ್ಯ ಅಂದರೆ ಹಾಗೆಯೇ ಇರಬೇಕು. ಲೋಕದ ಪರಿವೆಯೇ ಇಲ್ಲದಂತೆ , ತಮ್ಮ ಲೋಕದಲ್ಲಿ ಆಟ ಆಡುತ್ತಾ , ಗೆಳೆಯರೊಂದಿಗೆ ಜಗಳ ಮಾಡುತ್ತ , ಚೆಂದವಾಗಿ ಖುಷಿಯಾಗಿರುತ್ತಾರೆ.


ಆದರೆ ನಾನು , ಈ ಮನೆಯ ಹೆಚ್ಚಿದ ಜವಾಬ್ದಾರಿಗಳೊಂದಿಗೆ , ಮನೆ , ಮಗಳು , ಗಂಡ , ಅವರ ಕೆಲಸಗಳು , ಇವರನ್ನು ಈ ನೋಡಿಕೊಳ್ಳುವ ಸರಪಣಿಯೊಂದಿಗೆ ಒಮ್ಮೊಮ್ಮೆ ನಗುವುದನ್ನೇ ಮರೆತು ಬಿಡುವ ನಾನು , ಕೆಲವೊಮ್ಮೆ ಆರೋಗ್ಯದ ವಿಷಯದಲ್ಲೂ ತುಸು ನಿಷ್ಕಾಳಜಿ ಮಾಡಿಕೊಂಡಿದ್ದೇನೆ.


ಆದರೆ ಆ ಬಾಲ್ಯದ ನನ್ನೊಳಗಿನ ಮಗು ಎನ್ನುವ ಈ ವಿಷಯ ನೋಡಿದ ತಕ್ಷಣ , ಮನಸ್ಸು ಹಾಗೆ ಇಪ್ಪತ್ತು ಇಪ್ಪತ್ತೆರಡು ವರ್ಷದ ಹಿಂದೆ ಹಾಗೆ ಕಳೆದೊಯಿತು. ಬಾಲ್ಯವೇ ಹಾಗೆ. ಚಿಕ್ಕವಳಿದ್ದಾಗ ಹಾಡಬೇಕೆಂದು ಮನಸ್ಸು ಬಯಸಿದಾಗ ನನಗೆ ಬಂದಂತೆ ಹಾಡುತ್ತಿದ್ದೆ. ಒಮ್ಮೆ ನಮ್ಮ ಮನೆಯಲ್ಲಿ ಹಿರಿಯರೊಬ್ಬರು ( ಹತ್ತಿರದವರೆ) ಅದೇನು ಹಿಂಗ ಯಾವಾಗಲೂ ವಟ್ ವಟ್ ಅಂತ ವಟಗೂಡ್ತಾ ಇರ್ತಿಯಾ? ಬಾಯಿ ಮುಚ್ಚಕೊಂಡು ಇರೋದು ಕಲ್ಕೋ ಅಂದಿದ್ರು. ಹೋಗಲಿಬಿಡು ಅನ್ಕೊಂಡು ಸುಮ್ನಾದೆ. ಆಮೇಲೆ ಏನಾದರೊಂದು ಹೊಸತನ್ನು ಮಾಡಬೇಕೆಂದರೆ ಭಯ ಇರ್ತಿತ್ತು, ಕೇಳಬೇಕು ಹು ಅನ್ನುವರೊ ಹು ಹು ಅನ್ನುವರೊ ಎನ್ನುವ ಭಯದಿಂದ ಸುಮ್ಮನಿದ್ದಿದ್ದೆ ಹೆಚ್ಚು. ಈ " ಹು ಮತ್ತೆ ಹು ಹು" ಮದ್ಯೆದಲ್ಲೇ ನನ್ನ ಬಾಲ್ಯ ಕಳೆದೊಯಿತು. ಸೂಪರ್ ನೆನಪಿನ ಬಾಲ್ಯ ಎಂದು ಹೇಳಲಿಕ್ಕಾಗದು.


ಅಪ್ಪನೊಂದಿಗೆ ಕೈ ಕೈ ಹಿಡಿದು , ಹೆಗಲ ಮೇಲೇರಿ ಒಮ್ಮೆ ಊರುರು ಸುತ್ತಬೇಕೆಂಬ ಆಸೆ, ಅದು ಬೇಕು ಇದು ಬೇಕು ಅಂತ ಎಲ್ಲವನ್ನೂ ಕೊಡಿಸಿಕೊಳ್ಳುವಾಸೆ. ಆ ಬಾಲ್ಯದಲ್ಲಿ ಸಿಗುತ್ತಿದ್ದ ಕಡ್ಡಿ ಐಸ್ ತಿನ್ನುವಾಸೆ. ಅಳ್ಳಿಪವ್ ಅಂತ ಸಿಗ್ತಿತ್ತು ಅದನ್ನೊಮ್ಮೆ ತಿನ್ನುವಾಸೆ. ಅಯ್ಯೋ ಬಯಕೆಗಳಿಗೆ ಬರವಿಲ್ಲ. ಬಾಲ್ಯ ಮರಳಿ ಬರುವುದಿಲ್ಲ.


ಮಕ್ಕಳ ಬಾಲ್ಯ ನೋಡುತ್ತಾ ಮೈಮರೆಯುವ ನಾವು, ನಮಗೆ ಅಂತಹ ಬಾಲ್ಯ ಸಿಕ್ಕಿಲ್ಲ ನಿಜ , ಆದರೂ ಬಾಲ್ಯವನ್ನು ಕಳೆದಿದ್ದೇವೆ ಅದು ನಿಜವೇ ಅಲ್ಲವೇ. ಬಾಲ್ಯದ ಆ ಆಟ ಹುಡುಗಾಟ ಎಷ್ಟು ಚೆಂದ. ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡಾಗ ಏಟು ಬೀಳುವ ಹೊತ್ತಿಗೆ ಕಿತ್ತು ಓಡುತ್ತಿದ್ದ ಆ ಪರಿ ಇನ್ನೂ ಚೆಂದ. ಈಗ ಕುಂತರೆ ಬೇಗನೆ ಎದ್ದೇಳಲು ಕಷ್ಟ ಆಗ್ತಿದೆ. ಸುಳ್ಳು ಹೇಳಿ ಓಡುತ್ತಿದ್ದ ಸಮಯದೀ ಯಾರದಾದರು ಕೈಗೆ ಸಿಕ್ರೆ ಹೊಡೆತ ಬೀಳುವ ಮೊದಲೇ ನನ್ನ ಅಂಗಿ ಒದ್ದೆ ಆಗಿರುತ್ತಿತ್ತು. ಹೊಡೆಸಿಕೊಂಡಿದ್ದೆಷ್ಟು ಸಲವೋ ನಾ ಕಾಣೆ. ನನಗೆ ತಿಳುವಳಿಕೆ ಬಂದ ಮೇಲೂ ಹೊಡೆಯಿಸಿಕೊಂಡ ನೆನಪು ಅಚ್ಚಳಿಯದೆ ಮನಸ್ಸಲ್ಲಿ ಕೂತಿದೆ. ನಮ್ಮ ಮನೆ ಗುಡ್ಡದ ಪಕ್ಕದಲ್ಲಿ ಇರುವುದರಿಂದ ಯಾವಾಗಲೂ ಆಟ ಆಡಲು ಆ ಗುಡ್ಡದ ತುದಿಗೆ ಹೋಗುತ್ತಿದ್ದೆವು. ಒಂದಿಷ್ಟು ಪೇಪರ್ ಒಂದು ದಾರದ ರೀಲು ತೆಗೆದುಕೊಂಡು ಹೋಗಿ ಗಾಳಿಪಟ ಮಾಡುತ್ತಿದ್ದೆವು.ಅದು ಹಾರಲಿ ಬಿಡಲಿ ಒಟ್ಟಿನಲ್ಲಿ ಹಾಳೆ ಹರಿದಿದ್ದೆ ಹರಿದಿದ್ದು. ಒಮ್ಮೊಮ್ಮೆ ಅಲ್ಲಿಯೇ ಕಾರಿಕಂಟಿಯೊಳಗೆ ಸಿಕ್ಕಿ ಹಾಕಿಕೊಂಡು ಹರಿದೆ ಹೋಗ್ತಿತ್ತು. ಈಗ ಮಗಳೊಂದಿಗೆ ನಾನೇ ಕುಳಿತು ಅಂದ ಚೆಂದದ ಗಾಳಿಪಟ ರೆಡಿ ಮಾಡಿಕೊಡುತ್ತೇನೆ. ಆಗ ನಾನು ಕೂಡ ಮಗುವಾಗಿ ಬಿಡುತ್ತೇನೆ. ಆಕೆಯೊಂದಿಗೆ ಕ್ರಾಫ್ಟ್ ಮಾಡುವಾಗ ನಾನು ನನ್ನ ಬಾಲ್ಯಕ್ಕೆ ಹೋಗಿಬಿಡುವೆ. ಒಮ್ಮೊಮ್ಮೆ ಆಕೆಯ ಪೈಂಟಿಂಗ್ ಬುಕ್ಕಲ್ಲಿ ಒಂದೆರಡು ಚಿತ್ರಗಳಿಗೆ ನಾನೇ ಬಣ್ಣ ಹಾಕಿದ್ದೇನೆ. ಅವಳು ಸಿಟ್ಟು ಬಂದು " ಅಮ್ಮ , ನೀನ್ಯಾಕೆ ಪೇಂಟ್ ಮಾಡಿರುವೆ, ನನ್ನ ಬುಕ್ಕಲ್ಲಿ ನಾನೇ ಮಾಡ್ಬೇಕು" ಎಂದು ಜಗಳ ಮಾಡುವಾಗ ಆ ಸಿಟ್ಟಿನ ಮುದ್ದು ಮುಖವನ್ನು ನೋಡಿ ತುಂಬಾ ಖುಷಿ ಪಡುವೆ. ಆಕೆಯೊಂದಿಗೆ ವಾಕಿಂಗ್ ಹೋಗುವಾಗ ಅವಳ ಜೊತೆ ಒಮ್ಮೊಮ್ಮೆ ಓಡುತ್ತಾ ಆರು ವರ್ಷದ ಸಿರಿ ಆಗಿಬಿಡುವೆ. ಅವಳು ಮುಂದೆ ಓಡಿಹೋಗಿ ನಾ ಗೆದ್ದೇ ಅಂದಾಗ ಆಕೆಯ ಮುಗ್ದ ನಗುವಿನಲ್ಲಿ ನನ್ನ ಬಾಲ್ಯದ ಮಗುವಿನ ಮುಖ ಕಂಡುಕೊಳ್ಳುವೆ. ಅವಳು ಕನ್ನಡಿಯ ಮುಂದೆ ನಿಂತು ತನ್ನನ್ನು ನೋಡಿಕೊಳ್ಳುವಾಗ ನಾನು ಆಕೆಯ ಆ ಪುಟ್ಟ ಮುಖದಲ್ಲಿ ನನ್ನನ್ನು ನೋಡಿಕೊಳ್ಳುವೆ.ಶ್ರೇಯಾ ಸ್ಕಿಪ್ಪಿಂಗ್ ಮಾಡುವಾಗ ನನ್ನೊಳಗಿನ ಆ ಮಗುವಿನ ಮನಸ್ಸು ಜಾಗೃತವಾದಂತೆ ಅನ್ನಿಸಿಬಿಡುತ್ತದೆ. ಆಕೆಗೆ ರಿಕ್ವೆಸ್ಟ್ ಮಾಡಿ ಆಕೆಗಿಂತ ಮೊದಲು ನಾನು ಸ್ಕಿಪ್ಪಿಂಗ್ ಮಾಡಬೇಕೆಂದು ಹಗ್ಗವನ್ನಿಸಿದುಕೊಂಡು ಸ್ಕಿಪ್ಪಿಂಗ್ ಮಾಡಿದ್ದುಂಟು. ಸ್ಕಿಪ್ಪಿಂಗ್ ಮಾಡುವುದೆಂದರೆ ನನಗೆ ತುಂಬಾ ಇಷ್ಟ. ಸೆಟಲ್ ಕಾಕ್ ಅಡುವಾಗಂತೂ ಶ್ರೇಯಾಳಂತೆ ನಾನು ಕೂಡ ಎಂಟು ವರ್ಷದ ಸಿರಿಯೇ ಆಗಿರುತ್ತೇನೆ. ಸದಾ ಬಟ್ಟೆ ಹೊಲಿದು ಹೊಲಿದು , ಆ ಬಿಡುವಿರದ ಕೆಲಸಗಳನ್ನು ಮಾಡಿ ಮಾಡಿ , ಒಮ್ಮೊಮ್ಮೆ ಮಗಳೊಂದಿಗೆ  ನಾನು ಚಿಕ್ಕವಳಾಗಿ ಚಿಕ್ಕ ಮಕ್ಕಳಂತೆ ಜೋರಾಗಿ ನಗಾಡುತ್ತ ಆಡಿದರೆ ಆಹಾ! ಮೈ ಮನಸ್ಸು ಹಳಾರ( ಹಳಾರ ಅಂದ್ರೆ ನೆಮ್ಮದಿ ಸಿಕ್ಕಂತಾಗುತ್ತದೆ ಎಂದರ್ಥ) ಆಗುತ್ತದೆ. ಈಗಿನ ಬಬಲ್ ಊದುವ ಆ ಕಡ್ಡಿ ಸಿಕ್ಕರೆ ಸಾಕು ಶ್ರೇಯಾಳಿಗಿಂತ ಮುಂಚೆ ನಾನೇ ಊದಿ ಗುಳ್ಳೆ ಬಿಡುವೇ. ಅಮ್ಮಾ, ನಿ ಖಾಲಿ ಮಾಡಬೇಡಮ್ಮ, ನಾನು ನಾಳೆ ಊದುವೆ ಅಂತ ಅವಳು ಹೇಳಿದರೂ ನನ್ನ ಮನಸ್ಸು ಮತ್ತೊಮ್ಮೆ ಊದಲೂ ಹೇಳುತ್ತಿರುತ್ತದೆ. ಆ ಗುಳ್ಳೆಗಳನ್ನು ಹಿಡಿಯುವುದೆಂದರೆ ತುಂಬಾ ಇಷ್ಟ. ನಾವು ಚಿಕ್ಕವರಿದ್ದಾಗ ಬೇಲಿಯಲ್ಲಿ ಬೆಳೆಯುವ ಮರವಾಡಲ ಗಿಡದ ಎಲೆಯ ಹಿಂಬದಿಯ ಭಾಗದಲ್ಲಿ ಈ ತರದ ಲೋಳೆಯಂತ ಹಾಲು ಬರುತ್ತಿತ್ತು. ಅದರಿಂದ ಗುಳ್ಳೆಗಳನ್ನು ಊದುತ್ತಿದ್ದೆವು.ಹೀಗೆ ಒಂದೇ , ಎರಡೇ , ಬಾಲ್ಯದ ಆ ಆಟಗಳು.



ಏನೇ ಹೇಳಿ ಈ ಬ್ಯುಸಿ , ಒತ್ತಡದ ಜವಾಬ್ದಾರಿಯುತ , ಭಾರವಾದ ಈಗಿನ ನನ್ನ ಜೀವನಕ್ಕೋ ,ಏನೂ ಅರಿಯದ ಬರಿ ಆಟ , ಖುಷಿ ತುಂಬಿರುತ್ತಿದ್ದ ಆ ಬಾಲ್ಯದ ಜೀವನಕ್ಕೂ ತುಂಬಾ ವ್ಯತ್ಯಾಸವಿದೆ. ಕಾರಣವಿಲ್ಲದೆ ನಗುವುದು , ಖುಷಿ ಪಡುವುದು , ಎಲ್ಲವೂ ಈ ಬಾಲ್ಯದ ಜೀವನದಲ್ಲಿ ಮಾತ್ರ.



ಅದಕ್ಕೆ ಹೇಳುವುದು ಬಾಲ್ಯದ ಆ ಜೀವನವೇ ಚೆಂದ ಅಂತ.




Rate this content
Log in

Similar kannada story from Inspirational