STORYMIRROR

Achala B.Henly

Abstract Romance Classics

4  

Achala B.Henly

Abstract Romance Classics

ಅಂತೂ ನಕ್ಕಳು ನನ್ನ ರಾಜಕುಮಾರಿ..!!

ಅಂತೂ ನಕ್ಕಳು ನನ್ನ ರಾಜಕುಮಾರಿ..!!

2 mins
401

  

ಪ್ರತಿಭಾ ತನ್ನ ಹೆಸರಿಗೆ ತಕ್ಕಂತೆ ಬಹಳ ಪ್ರತಿಭೆಯುಳ್ಳವಳಾಗಿದ್ದಳು. ಚಿಕ್ಕ ವಯಸ್ಸಿಗೇ ಸಂಗೀತ, ನೃತ್ಯ, ಟೆನ್ನಿಸ್ ನಲ್ಲಿ ಹೆಸರು ಮಾಡಿದ್ದಳು. ಉನ್ನತ ಶಿಕ್ಷಣವನ್ನು ಅಮೆರಿಕಾದ ಯುನಿವರ್ಸಿಟಿಯಲ್ಲಿ ಮಾಡಬೇಕೆಂಬ ತುಡಿತ ಅವಳಿಗೆ ಚಿಕ್ಕವಳಾಗಿದ್ದಾಗಿನಿಂದಲೂ ಇತ್ತು.

ಒಬ್ಬಳೇ ಮಗಳಾದ್ದರಿಂದ ಪೋಷಕರೂ ಸಹ ಅವಳ ಇಷ್ಟಕ್ಕೆ ತಕ್ಕಂತೆ ಅವಳನ್ನು ಪ್ರೋತ್ಸಾಹಿಸುತ್ತಿದ್ದರು. ಇಂತಿಪ್ಪ ಪ್ರತಿಭಾ ತನ್ನ ಇಪ್ಪತ್ತೆರಡನೆಯ ವಯಸ್ಸಿಗೆ ಎಂಎಸ್ ಮಾಡಲು ಅಮೆರಿಕಾಗೆ ವಿಮಾನದಲ್ಲಿ ಹಾರಿದಳು.


ಮೊದಲಿನಿಂದಲೂ ಧೈರ್ಯದಿಂದ ಎಲ್ಲದರಲ್ಲಿಯೂ ಭಾಗವಹಿಸುತ್ತಿದ್ದರಿಂದ ಅವಳಿಗೆ ಹೊಸ ಜಾಗಕ್ಕೆ ಹೊಂದಿಕೊಳ್ಳಲು ಕಷ್ಟವಾಗಲಿಲ್ಲ. ಯಶಸ್ವಿಯಾಗಿ ಎಂಎಸ್ ಮುಗಿಸಲು ತಾನು ಪಿಎಚ್.ಡಿ ಅನ್ನು ಅಲ್ಲೇ ಮಾಡುವುದಾಗಿ ಅಪ್ಪ ಅಮ್ಮನಿಗೆ ತಿಳಿಸಿದಳು. ಮಗಳು ಓದಿ ಮುಂದುವರೆಯುತ್ತಾಳೆ ಎಂದರೆ ಯಾರು ತಾನೇ ಬೇಡವೆನ್ನುತ್ತಾರೆ? ಅವಳ ಅಪ್ಪ ಅಮ್ಮನೂ ಇದಕ್ಕೆ ಒಪ್ಪಿದರು.

ಈ ಮಧ್ಯೆ ಅವಳು ತನ್ನೂರಾದ ಚಿಕ್ಕಮಗಳೂರಿಗೆ ವರ್ಷಕ್ಕೆರಡು ಬಾರಿ ಬಂದು, ಕೆಲವು ದಿನ ಪೋಷಕರು ಮತ್ತು ಸ್ನೇಹಿತರೊಂದಿಗೆ ಕಾಲ ಕಳೆದು ಹಿಂತಿರುಗಿದ್ದಳು.


ರಿಸರ್ಚ್ ವರ್ಕ್ ಮತ್ತು ತನ್ನ ಇಂಜಿನಿಯರ್ ಕೆಲಸ ಎರಡು ಒಟ್ಟೊಟ್ಟಿಗೆ ಮಾಡುತ್ತಿದ್ದ ಪ್ರತಿಭಾಗೆ ಅಲ್ಲೇ ಭುವನ್ ಎಂಬ ಹುಡುಗನ ಪರಿಚಯವಾಗಿ ಪ್ರೀತಿಗೆ ತಿರುಗಿತು. ಭುವನ್ ಸಹ ಅವಳೊಂದಿಗೆ ವ್ಯಾಸಂಗ ಮಾಡುತ್ತಿದ್ದನು. ಬಿಡುವಿದ್ದಾಗ ಅಮೆರಿಕ ಸುತ್ತಲೂ ಇರುವ ಸ್ಥಳಗಳಿಗೆ ಭೇಟಿ ಕೊಡುತ್ತಾ, ತಮ್ಮ ಪ್ರೀತಿಯ ಇರುವಿಕೆಯನ್ನು ಅಲ್ಲೆಲ್ಲ ಪ್ರಚುರಪಡಿಸಿದರು.


ಕೆಲವು ವರ್ಷಗಳ ಬಳಿಕ, ಇಬ್ಬರ ತಂದೆತಾಯಿಯರು ಒಪ್ಪಿ ಮದುವೆಯು ಸಾಂಗವಾಗಿ ಚಿಕ್ಕಮಗಳೂರಿನಲ್ಲಿಯೇ ನೆರವೇರಿತು. ನವದಂಪತಿ ಮತ್ತೆ ವಿದೇಶಕ್ಕೆ ಹಿಂತಿರುಗಿದರು. ಈಗ ಪ್ರತಿಭಾ ಇಂಜಿನಿಯರ್ ಮಾತ್ರವಲ್ಲದೆ, "ಭುವನ್ ಪತ್ನಿ" ಎಂಬ ಪಟ್ಟವನ್ನೂ ಹೊಂದಿದ್ದಳು.


ಅಲ್ಲಿಯೇ ವಾಸಮಾಡುತ್ತಿದ್ದ ಮಿಕ್ಕ ಭಾರತದ ದಂಪತಿಗಳೊಂದಿಗೆ ಬಿಡುವಿದ್ದಾಗ ಪ್ರವಾಸ ಮಾಡುತ್ತಿದ್ದರು. ಹೀಗೆ ಒಂದು ವರ್ಷ ಕಳೆಯಲು ಪ್ರತಿಭಾಗೆ ಒಂಟಿತನ ಕಾಡಲು ಶುರುವಾಗಿತ್ತು. ಮದುವೆಯ ಮುಂಚೆ ತನ್ನ ಪತಿಯಾದ ಭುವನ್ ಅನ್ನು ಭೇಟಿಯಾಗುತ್ತಿದ್ದದ್ದು ಕೆಲವೇ ಗಂಟೆಗಳಷ್ಟೇ. ಆದರೆ ಈಗ ಇಡೀ ದಿನ ಅವನೊಂದಿಗೆ ಇರಬೇಕು. ಒಟ್ಟಿಗೆ ಇದ್ದಾಗಲೇ ಒಬ್ಬರ ನ್ಯೂನ್ಯತೆ ಇನ್ನೊಬ್ಬರಿಗೆ ತಿಳಿದು, ಸಂಪೂರ್ಣ ವ್ಯಕ್ತಿತ್ವದ ಪರಿಚಯ ಆಗುವುದು. ಈಗಲೂ ಪ್ರತಿಭಾಗೆ ಆಗಿದ್ದು ಅದೇ.

ತನ್ನ ಗಂಡನ ಕೆಲವು ಆಗದ ಗುಣಗಳು ಅವಳಿಗೆ ಬೇಸರ, ಒತ್ತಡ, ಕೋಪವನ್ನು ಆಗಾಗ ತರಿಸುತ್ತಿತ್ತು. ದಿನೇ ದಿನೇ ಅವಳು ಒಬ್ಬಂಟಿಯಾಗುತ್ತಿದ್ದಳು.


 ಇದನ್ನು ಗಮನಿಸಿದ ಭುವನ್ ಅವಳನ್ನು ಹಾಸ್ಯದ ಚಟಾಕಿಗಳ ಮೂಲಕ ನಗಿಸಲು ಪ್ರಯತ್ನಿಸುತ್ತಿದ್ದನು.

ಆದರೆ ಅವಳೇಕೋ ನಗುವನ್ನೇ ಮರೆತಂತೆ ಆಗಿಬಿಟ್ಟಿದ್ದಳು. ಬರೀ ಆಫೀಸಿನ ಕೆಲಸ, ಮನೆಗೆಲಸ ಅಷ್ಟೇ. ಒಂದೆರಡು ಹೆಚ್ಚು ಮಾತುಗಳನ್ನೂ ತನ್ನ ಗಂಡನೊಂದಿಗೆ ಆಡಲು ಇಷ್ಟಪಡುತ್ತಿರಲಿಲ್ಲ.

"ಎಲ್ಲಿ ತಾನಾಡುವ ಮಾತನ್ನು ಇನ್ನೊಂದು ರೀತಿಯಲ್ಲಿ ಅರ್ಥೈಸಿಕೊಂಡು, ತಪ್ಪು ತಿಳುವಳಿಕೆಯಿಂದ ಇಬ್ಬರ ಮಧ್ಯೆ ಮನಸ್ತಾಪವಾಗುವುದೋ ಎಂದು ಹೆದರಿ, ತಾನಾಯಿತು ತನ್ನ ಕೆಲಸವಾಯಿತು"ಎಂದಿರುತ್ತಿದ್ದಳು.


ನಗುವನ್ನೇ ಮರೆತವಳಂತೆ ಇದ್ದ ತನ್ನ ಪತ್ನಿಯನ್ನು ಹೇಗಾದರೂ ಮುಂಚಿನಂತೆ ಮಾಡಬೇಕೆಂದುಕೊಂಡ ಭುವನ್ ,ಸ್ವಲ್ಪ ದಿನ ತನ್ನ ಆಫೀಸಿಗೆ ರಜೆ ಹಾಕಿದನು. ಪ್ರತಿಭಾಗೂ ರಜೆ ಹಾಕಲು ಹೇಳಿ, ಭಾರತಕ್ಕೆ ವಿಮಾನದ ಟಿಕೆಟ್ ಅನ್ನು ಬುಕ್ ಮಾಡಿಸಿದನು. "ಜಾಗ ಬದಲಾವಣೆಯಾಗಿ, ತನ್ನ ತವರು ಮನೆಯವರನ್ನು ಕಂಡರೆ ಅವಳು ಮತ್ತೆ ಸರಿಯಾಗುತ್ತಾಳೆ" ಎಂಬ ಆಶಾಭಾವನೆ ಭುವನ್ ಗೆ ಇತ್ತು.


ಅದರಂತೆಯೇ ಇಬ್ಬರೂ ಚಿಕ್ಕಮಗಳೂರಿಗೆ ಹೋದರು. ತನ್ನ ತವರು ಮನೆ ಮತ್ತು ತನ್ನ ಅಪ್ಪ ಅಮ್ಮನನ್ನು ಕಂಡೊಡನೆ ಪ್ರತಿಭಾಗೆ ಆದ ಸಂತೋಷಕ್ಕೆ ಪಾರವೇ ಇಲ್ಲ. ಬಹಳ ದಿನಗಳ ನಂತರ ಅವಳಿಗೆ "ನೆಮ್ಮದಿ" ಎಂಬ ಪದಕ್ಕೆ ಅರ್ಥ ದೊರೆತಂತೆ ಭಾಸವಾಗಿತ್ತು. ಹಚ್ಚ ಹಸುರಿನ ತನ್ನ ಊರನ್ನು ಕಣ್ಣು ತುಂಬಿಕೊಂಡಳು. ತನ್ನ ಸ್ನೇಹಿತರನ್ನೆಲ್ಲಾ ಭೇಟಿಯಾಗಿ ಮಾತನಾಡಿಸಿದಳು. ಅವಳಿಗೆ ಗೊತ್ತಾಗದಂತೆ ಅವಳ ಮೊಗದಲ್ಲಿ ಮತ್ತೆ "ನಗು" ಮೂಡಲು ಪ್ರಾರಂಭವಾಗಿತ್ತು. ಇದನ್ನು ಕಂಡ ಭುವನ್ ಒಳಗೊಳಗೇ ಸಮಾಧಾನ ಪಟ್ಟುಕೊಂಡನು.


ಇಬ್ಬರೂ ಏಕಾಂತವಾಗಿರುವಾಗ, ಪ್ರತಿಭಾಳು ಅವನ ಬಗ್ಗೆ ಇರುವ ತನ್ನ ಅಭಿಪ್ರಾಯವನ್ನು ತಿಳಿಸಿದಳು. ತಿದ್ದಿಕೊಳ್ಳುವುದಾಗಿ ಹೇಳಿದ ಭುವನ್, "ಇನ್ನು ಮುಂದೆ ಹೀಗಾಗದಂತೆ ಇಬ್ಬರೂ ಎಚ್ಚರದಿಂದಿರೋಣ. ಮತ್ತೆ ನಮ್ಮಿಬ್ಬರ ಮಧ್ಯೆ ಇಂತಹ ವ್ಯತ್ಯಾಸ ಬರದಿರಲಿ. ಬಂದರೂ ಅದನ್ನು ಕೂತು ಪರಿಹರಿಸೋಣ. ದಯವಿಟ್ಟು ಮಾತು ಮತ್ತು ನಗು ಮರೆತವಳಂತೆ ಇದ್ದು, ನನ್ನನ್ನು ಕಾಡಿಸಬೇಡ" ಎನ್ನಲು ಪ್ರತಿಭಾ ನಸುನಕ್ಕಳು.


ತನ್ನ ಮಡದಿಯ ಗುಳಿಕೆನ್ನೆ ನಗುವನ್ನು ಆಸ್ವಾದಿಸಿ ಭುವನ್ "ಅಂತೂ ನಕ್ಕಳು ನನ್ನ ರಾಜಕುಮಾರಿ...!" ಎಂದು ಛೇಡಿಸಿದನು.


Rate this content
Log in

Similar kannada story from Abstract