ಆಗುವುದೆಲ್ಲಾ ಒಳ್ಳೆಯದಕ್ಕೆ
ಆಗುವುದೆಲ್ಲಾ ಒಳ್ಳೆಯದಕ್ಕೆ
ಭೀಮಯ್ಯ ಹಾಗೂ ಸರಸ್ವತಿ ದಂಪತಿಗಳಿಗೆ ಮೂವರು ಹೆಣ್ಣು ಮಕ್ಕಳು, ಕಡು ಬಡತನ ಬೇರೆ ಆದರೂ ನೆಮ್ಮದಿಯಲ್ಲಿ ಜೀವನ ನಡೆಸುತ್ತಿದ್ದರು. ಬಡತನವಿದ್ದರೂ ಪ್ರೀತಿಗೇನೂ ಕೊರತೆಯಿರಲಿಲ್ಲ ಅವರಲ್ಲಿ. ಹೀಗೆ ಜೀವನ ಸಾಗಿಸುತ್ತಿರುವಾಗ ಊರಿನ ಸಾಹುಕಾರರು ಈ ಕಡು ಬಡತನದಲ್ಲಿ ಮೂರು ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಮದುವೆ ಹೇಗೆಂದು ಮಾಡಿಸುವೆ?, ಹೆಣ್ಣು ಮಕ್ಕಳು ಎಂದಿಗೂ ಕುಲಕ್ಕೆ ಹೊರಗು, ನೀನು ಕಷ್ಟಪಟ್ಟು ದುಡಿಯೋದು ಬಂತು ನೋಡು, ಮುಂದೆ ನಮ್ಮೆಲ್ಲಾ ಜವಾಬ್ದಾರಿಗಳನ್ನು ಹೊತ್ತು, ವಂಶೋದ್ಧಾರ ಮಾಡಿ, ನಮ್ಮ ಕುಲವನ್ನು ಬೆಳಗಲು ಗಂಡು ಮಕ್ಕಳೇ ಬೇಕು ಹೊರತು ಹೆಣ್ಣು ಮಕ್ಕಳಲ್ಲ ಎಂದು ಲೇವಡಿ ಮಾಡಲು ಶುರು ಮಾಡಿದನು.
ಈ ಮಾತಿನಿಂದ ಅವನಿಗೆ ಕೊಂಚ ನೋವಾಯಿತಾದರೂ ಅವನು ಅವರ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಅವನ ಪಾಡಿಗೆ ಕೆಲಸ ಮಾಡುತ್ತಿದ್ದನು. ಹೀಗೆ ದಿನಗಳುರುಳಿದವು ಭೀಮಯ್ಯನ ಹೆಣ್ಣು ಮಕ್ಕಳು ಉತ್ತಮ ಸಂಸ್ಕಾರ, ವಿದ್ಯೆಗಳನ್ನು ಕಲಿತು ದೊಡ್ಡವರಾದರು ಆದರೆ ಸಾಹುಕಾರನ ಗಂಡು ಮಕ್ಕಳು ಶ್ರೀಮಂತಿಕೆಯ ಮದದಲ್ಲಿ ಅಹಂಕಾರ ಮೆರೆಯುತ್ತಿದ್ದರು.
ಅಪ್ಪ, ಅಮ್ಮನೂ ಶ್ರೀಮಂತಿಕೆಯ ದರ್ಪದಲ್ಲಿ ಇದ್ದರೇ ಹೊರತು ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಹೇಳಿಕೊಡಲಿಲ್ಲ ಸಾಲದ್ದಕ್ಕೆ ಗಂಡು ಮಕ್ಕಳು ಎಂದು ತುಂಬಾ ಮುದ್ದಾಗಿ ಸಾಕಿದ್ದರು.
ಮಕ್ಕಳು ಬೆಳೆಯುತ್ತಾ ಹೋದಂತೆ ಸಂಸ್ಕಾರ ಹೀನರಾಗಿ, ವಿದ್ಯೆ, ಬುದ್ಧಿಯನ್ನು ಕಲಿಯದೇ, ಕುಡಿತದ ಚಟ, ಸಿಗರೇಟ್ ಚಟಗಳನ್ನೆಲ್ಲಾ ರೂಢಿಸಿಕೊಂಡಿದ್ದರು ಸಾಲದ್ದಕ್ಕೆ ಇಲ್ಲ ಸಲ್ಲದ ಕಾರಣಗಳಿಗೆ ದುಂದು ವೆಚ್ಚ ಮಾಡಿ ಒಂದಿಷ್ಟು ಸಾಲವನ್ನು ಅಪ್ಪನ ಮೈಗೆ ಹಾಕಿಬಿಟ್ಟಿದ್ದರು.
ಕೆಟ್ಟ ಚಟಗಳಿಂದ ವಿದ್ಯಾಭ್ಯಾಸದ ಕಾಲದಲ್ಲಿ ಸರಿಯಾಗಿ ವಿದ್ಯೆ ಕಲಿಯದೇ, ಆಚಾರ ವಿಚಾರ, ಸಂಸ್ಕಾರಗಳನ್ನು ತಿಳಿದುಕೊಳ್ಳದೇ ಪುಂಡರಂತೆ ಬೆಳೆದರು. ಅತ್ತ ಉದ್ಯೋಗವೂ ಇಲ್ಲ ಇತ್ತ ಮದುವೆಯೂ ಇಲ್ಲ ಎಂಬಂತಾಯಿತು ಅವರ ಪರಿಸ್ಥಿತಿ!!
ಹೀಗೆ ದೊಡ್ಡವರಾದ ಮಕ್ಕಳು, ಅಪ್ಪ ಅಮ್ಮನ ಮಾತು ಕೇಳದೇ ಕಳ್ಳತನ, ದರೋಡೆಗಳ ದಾರಿ ಹಿಡಿದರು ಹಾಗೂ ಅಪ್ಪ, ಅಮ್ಮನಿಗೆ ವಯಸ್ಸಾದಾಗ ಕಾರಾಗೃಹದಲ್ಲಿ ಖೈದಿಯಾಗಿ ಬಂಧಿಯಾದರು.
ಈಗ ಸಾಹುಕಾರರಿಗೆ ತಮ್ಮ ತಪ್ಪಿನ ಅರಿವಾಯಿತು ಹಾಗೂ ಭೀಮಯ್ಯನ ಹೆಣ್ಣು ಮಕ್ಕಳು ಒಳ್ಳೆಯ ವಿದ್ಯೆ, ಸಂಸ್ಕಾರಗಳನ್ನು ಕಲಿತು, ಅಪ್ಪ ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಭೀಮಯ್ಯ ಹಾಗೂ ಸರಸ್ವತಿ ದಂಪತಿಗಳಿಗೆ ಕಡು ಬಡತನ, ಹೆಣ್ಣು ಮಕ್ಕಳ ಸಂತಾನವಿದ್ದರೂ ಆಗುವುದೆಲ್ಲಾ ಒಳ್ಳೆಯದಕ್ಕೆ, ದೇವರು ಮಾಡುವುದೆಲ್ಲಾ ಒಳ್ಳೆಯದಕ್ಕೆ ಎಂದು ತಿಳಿದುಕೊಂಡರು.
