ಒಲವೆಂದರೆ..
ಒಲವೆಂದರೆ..
ಒಲವೆಂದರೆ ಬರಿ ಮೋಹವಲ್ಲ ಮರುಳ
ಹಿರಿದಿದೆ ಪಾತ್ರ ತಿಳಿಯಬೇಕದರ ತಿರುಳ
ಒಲವೇ ಸರ್ವದಕೂ ಮೊದಲ ಕಾರಣ
ಉಂಟಂತೆ ಆಳದಲಿ ಗೆಲುವಿನ ಹೂರಣ.!
ಸಕಲರಲ್ಲಡಗಿದ ಅಮೃತವದು ಒಲವು
ಇಲ್ಲದಿರೆ ಬಾಳು ಮಸಣಮಾರಿ ಚೆಲವು
ಅಮ್ಮನ ವಾತ್ಸಲ್ಯ ಸೋದರಿಯ ಅಕ್ಕರೆ
ಮಿತ್ರನ ಸ್ನೇಹವದು ಜೇನಂತಹ ಸಕ್ಕರೆ.!
ಖಗಮಿಗಗಳ ಕಾರುಣ್ಯ ದೇಹದ ತಾರುಣ್ಯ
ಹವ್ಯಾಸವದು ಚಟ ಸತ್ಯದೊಲುಮೆ ದಿಟ
ಗುರಿಯದು ಸಾಧನೆ ಸಿರಿಯದು ಕಾಮನೆ
ನನ್ನ ದೇಶವೆನ್ನುವ ರಾಷ್ಟ್ರಭಕ್ತಿಯ ಭಾವನೆ.!
ಜೀವಜಗದ ಅಣುಕಣದಲ್ಲಿದೆ ಒಲವು
ಭಾವ ಬಿತ್ತಿಯ ಬರಹಗಳಲ್ಲಡಗಿದೆ ಒಲವು
ಬರಿದೆ ಕಾಮವೇನಲ್ಲ ಒಲವೆಂಬುವದು
ಬೊಮ್ಮ ಸೃಷ್ಟಿಯ ಮಾಯಾಜಾಲವಿದು.!
