ನಿಮ್ಮಂತೆ ನಾನಾಗಬೇಕು
ನಿಮ್ಮಂತೆ ನಾನಾಗಬೇಕು
ನಿಮ್ಮಂತೆ ನಾನಾಗಬೇಕು ತಿಳಿಸುವಿರಾ ಮೋಡಗಳೆ
ಬಾಯಾರಿಹ ಜೀವಸಂಕುಲಕೆ ನಾಕು ಹನಿಯನೀಯಬೇಕು
ಕಾಡುಮೇಡುಗಳ ಸುತ್ತಿ ಅನ್ನದಾತನಾ ಹೊಲಕೆ
ನೀರೆರೆವ ನದಿಗಳೇ ತಿಳಿಸಿ ನಿಮ್ಮಂತೆ ನಾನಾಗಬೇಕು ||೧||
ನಿಮ್ಮಂತೆ ನಾನಾಗಬೇಕು ತಿಳಿಸುವಿರಾ ಹಕ್ಕಿಗಳೆ
ಚಿಲಿಪಿಲಿ ಗಾನದಲಿ ರಸಿಕರಾ ಮನವ ತಣಿಸಬೇಕು
ಹಸಿದ ಕೂಸಿಗೆ ಹಾಲೆರೆದು ಒಡಲು ತುಂಬುವ ಗೋಮಾತೆಯರೆ ತಿಳಿಸಿ
ನಿಮ್ಮಂತೆ ನಾನಾಗಬೇಕು ||೨||
ನಿಮ್ಮಂತೆ ನಾನಾಗಬೇಕು ತಿಳಿಸುವಿರಾ ತರುಗಳೆ
ಜಗಕುಸಿರಾಗಿ ಬೇಗೆಯಲಿ ನೆರಳಾಗಬೇಕು
ಜೀವಜ್ಯೋತಿಯನುಳಿಸುವ
ಪ್ರಾಣವಾಯುವೆ ತಿಳಿಸು ಸೃಷ್ಟಿಯಲೊಂದಾಗಿ ನಿನ್ನಂತೆ ನಾನಾಗಬೇಕು|| ೩ ||
ನಿಮ್ಮಂತೆ ನಾನಾಗಬೇಕು ತಿಳಿಸುವಿರಾ ಜೇನ್ನೊಣಗಳೇ ಬಸವಳಿದು
ಮಕರಂದವಾ ಹೀರಿ ಮುದದಿ
ಜಗಕೆ ಸವಿಯನೀಯಬೇಕು
ಗೋವಿಂದನ ಚರಣ ಸೇರುತ ಲಕುಮಿಯ ಮುಡಿಯೇರುವ ಹೂವುಗಳೇ ತಿಳಿಸಿ
ನಿಮ್ಮಂತೆ ಹರಿಪಾದ ಸೇರಬೇಕು ||೪||