ತಾಯಿ ಭಾರತಿ
ತಾಯಿ ಭಾರತಿ
ಜನ್ಮ ಭೂಮಿ ನೀನು ಕರ್ಮಭೂಮಿ ನೀನು
ರಾಮ-ಕೃಷ್ಣರ ಕ್ಷಾತ್ರ ತೇಜವು ನೀನು
ಋಷಿಮುನಿಗಳ ತಪೋ ಭೂಮಿಯು ನೀನು
ಸತ್ಯಸಂಧರ ಜನನಿ ನಿನ್ನೊಡಲ ಕೂಸು ಧನ್ಯ ನಾನು
ಸಂಸ್ಕೃತಿ ಕಲೆಗಳು ಮೇಳೈಸಿಹುದು ನಿನ್ನೊಳು
ಗಂಗೆ ತುಂಗೆ ಕೃಷ್ಣ ಕಾವೇರಿ ನೆಲೆಸಿಹರು ನಿನ್ನೊಳು
ಬಾನೆತ್ತರದಿ ನಿಂದು ಪೊಡಮಡುವ ಹಿಮಾಲಯವು
ಸಹ್ಯಾದ್ರಿ ಕೊಡಚಾದ್ರಿ ಹಸಿರುಡಿಸಿ ಸಿಂಗರಿಸಿಹವು
ಅಗಣಿತ ಭಾಷೆ, ನೂರಾರು ಜಾತಿ ಮತ,
ವಿವಿಧತೆಯಲಿ ಏಕತೆ ಸಾರಿಹ ನಿನ್ನ ಪಥ
ಸಂಜಾತರು ಸಾಗಿಹರು ಮನುಜ ಮತದತ್ತ
ನಿತ್ಯ ಸತ್ಯ ಶಾಂತಿ ಮಂತ್ರವ ಪಠಿಸುತ್ತ
>
ವೀರ ಪುತ್ರ-ವನಿತೆಯರ ಮಾತೆ ನೀನು
ಕಬ್ಬಿಗ, ಸಾಧು-ಸಂತ ಸುಪೂತರ ಕಾಮಧೇನು
ಸತ್ಯಮಾರ್ಗವನರಸಿ ಸರ್ವರೊಳಿತ ಬಯಸಿ
ವಿಶ್ವಗುರುವಿನ ಪದದೆಡೆಗೆ ಅಡಿಯನಿರಿಸಿ
ರಕ್ತ ಪಿಪಾಸು ನರಾಧಮ ರಕ್ಕಸರು
ವಿಷಬೀಜ ಬಿತ್ತುವ ರಕ್ತ ಬೀಜಾಸುರರು
ಇದ್ದರೇನಂತೆ ಕೇಕೆ ಹಾಕುವ ರಣಹದ್ದುಗಳು
ಮರುಗದಿರು ಬಂಜೆಯಲ್ಲ ನಿನ್ನೊಡಲು
ತನು-ಮನವನರ್ಪಿಸಿಹೆವು ನಿನ್ನ ಸೇವೆಗೆಂದೆಂದು
ಹರಣದ ಹಂಗು ತೊರೆದು
ಸಾಗುವೆವು ಮುಂದು
ತಾಯಿ ಭಾರತಿಯೆ ನಮಿಪೆವು ನಿನಗೆತ್ತಿ ಆರತಿ
ಮುಗಿಲ ಮುಟ್ಟಲಿ ಜಯಘೋಷ ಜೈ ಭಾರತಿ...