*ಅಳಲು*
*ಅಳಲು*


ಸೂರ್ಯದೇವ ನಿನ್ನ ಮಹಿಮೆ ಅಪಾರ
ಬಣ್ಣಿಸಲಾರೆನದ ನಾ ಪಾಮರ
ಜಗಕೆಡೆಬಿಡದೆ ನೀಡುವೆ ಬೆಳಕ
ಓಡಿಸುತ ಕಾರ್ಮೋಡ ನಿಶೆಯ
ನಿನ್ನೀ ಶಾಖಕೆ ಬತ್ತುವುದು ನದನದಿ
ಕರಗುವುದು ಹಿಮಶಿಖರಗಳು
ಬಾಯಾರಿ ಬಸವಳಿವುದು ಪ್ರಾಣಿ ಸಂಕುಲ
ಕ್ಷೀಣಿಪುದು ತೊರೆ, ಕಡಲಬ್ಬರದ ತೆರೆ
ರವಿತೇಜ ನೀನಿಲ್ಲದಿರೆ ಬತ್ತುವುದರಣ್ಯ
ಆದರೆ, ಲೋಕಪಾಲನೇ ನಿನ್ನಿಂದಾಗದೇಕೆ
ಬತ್ತಿಸಲು ಬಡಶ್ರಮಿಕನ ಬೆವರು ಕಣ್ಣೀರಧಾರೆ?
*ರಾಸೋ*