ಮನೆ ಕಟ್ಟಿ ನೋಡು***
ಮನೆ ಕಟ್ಟಿ ನೋಡು***
ಒಂದೇ ಒಂದು ಕನಸಿರಮನೆ ಇತ್ತು
ಸುಂದರ ಹೂಬನದ ನಡುವೆ.
ಹಸಿರು ತಪ್ಪಲಿನಲ್ಲಿ ತಂಪೆರೆವ
ಮರಗಳ ಮಧ್ಯೆ ಅನಾವರಣಗೊಂಡಿತ್ತು.
ಕಲ್ಪನೆಗಳ ಛಾವಡಿಯಡಿ ನರಳಿತ್ತು.
ಮನಸ್ಸಿನೊಳಗೊಂದು ಹುರುಪಿತ್ತು.
ಕನಸು ನನಸಾಗುವಂತೆ ಆಶಯವಿತ್ತು.
ಅರಮನೆಗೆ ನಿನ್ನದೇ ಹೆಸರಿಡುವಾಸೆಯಿತ್ತು.
ಪ್ರತಿ ಕಲ್ಲಿನಲ್ಲೂ ಭಾವನೆಗಳ ಛಾಯೆ
ಪ್ರತಿ ಮರಳುಕಣದಲ್ಲೂ ಅನುಬಂಧವೇ
ಕಿಟಕಿಬಾಗಿಲುಗಳಿಗೂ ಮಾತಾಡುವಾಸೆ
ಅಂಗಳದ ಮಲ್ಲೆಗೆ ಮೆಲ್ಲನರಳಿ ನಗುವಾಸೆ.
ದೇವಕೋಣೆಯ ದೀಪ ಬೆಳಗಿತ್ತು ನಿತ್ಯ
ಜೀವಕಳೆ ತಂದ ಹೂಗುಚ್ಛಕೂ ಆತಿಥ್ಯ
ಮಾವುತೋರಣಕೂ ಬಾಗಿಲೇರುವಾಸೆ
ಸೂರು ತೇರಿನಂದದಿ ಕಂಗೊಳಿಸಿತ್ತು.
ಮನೆಯೊಡತಿಯೆಂದು ನಾ ಬೀಗಲಾರೆ
ಮನದೊಡೆಯ ನೀನಿರುವಾಗ ಆಸರೆ
ಎನ್ನದೆನ್ನಲು ಏನಿಲ್ಲ ಎಲ್ಲವೂ ಅವನದೇ
ಇಲ್ಲವೆನ್ನುವುದೇನಿಲ್ಲ ಎಲ್ಲವೂ ಇಹುದು.
