ಕಣ್ಣಿಗೆ ಕಾಣದ ಕೃತಿಕಾರ
ಕಣ್ಣಿಗೆ ಕಾಣದ ಕೃತಿಕಾರ
ಕಣ್ಣಿಗೆ ಕಾಣದ ಓ ಕೃತಿಕಾರ
ನೇಸರ ಪಟದಲಿ ರಚಿಸಿದೆ ಚಿತ್ತಾರ
ಮೂಡಣದಿ ರಂಗಿನ ಕುಂಕುಮವಿಟ್ಟು
ಇಬ್ಬನಿ ಮಣಿಯ ಲತೆಯಲಿಟ್ಟು
ಭುವಿಯನು ಸಿಂಗರಿಸಿದ ಚಿತ್ರಕಾರ ||ಕಣ್ಣಿಗೆ||
ನೀಲ ಗಗನಕೆ ನೀಲಾಂಬರವಿತ್ತು
ನಕ್ಷತ್ರ ಪುಂಜದ ರಂಗೋಲಿಯನಿಟ್ಟು
ಸೂರ್ಯ ಚಂದ್ರರಲಿ ಪ್ರಭೆಯನು ಇಟ್ಟು
ಧರೆಗೆ ಹಸಿರ ಸೀರೆಯನುಡಿಸಿ
ಬಿಡಿಸಿದೆ ರಂಗಿನ ಚಿತ್ರವ ಕಲೆಗಾರ ||ಕಣ್ಣಿಗೆ||
ಹಾರಲು ಹಕ್ಕಿಗೆ ರೆಕ್ಕೆಯ ಕೊಟ್ಟು
ಕೋಗಿಲೆ ಕೊರಳಲಿ ರಾಗವನಿಟ್ಟು
ಹರಿವ ನದಿಯಲೆಯಲಿ ನಾದವನಿತ್ತು
ವಸುಧೆಯೊಡಲಲಿ ಜೀವರಾಶಿಯನಿತ್ತು
ಕಾಡು ಮೇಡು ಕಡಲ ಸೃಷ್ಟಿಸಿದ ಸೃಷ್ಟಿಕಾರ ||ಕಣ್ಣಿಗೆ||
ಕಾಣದ ಹಸ್ತದಿ ಕುಂಚವ ಪಿಡಿದು
ಮನುಜನ ಸೃಷ್ಟಿಸಿ ಕಳುಹಿದೆ ಧರೆಗೆ
ರಾಗಾನು ರಾಗದ ಬಯಕೆಯ ಬಿತ್ತಿ
ಕಲ್ಲುಮುಳ್ಳಿನ ಹಾದಿಯ ಕ್ರಮಿಸಲು
ಚಿತ್ತದಿ ಬಿಡಿಸು ಬೆಳಕಿನ ಓಂಕಾರ,
|| ಓ ಹರಿಕಾರ...ಕಣ್ಣಿಗೆ ಕಾಣದ ಕೃತಿಕಾರ||
