ಕಡಕ್ ರೊಟ್ಟಿ ರತ್ನಮ್ಮ
ಕಡಕ್ ರೊಟ್ಟಿ ರತ್ನಮ್ಮ
ಖಡಕ್ ರೊಟ್ಟಿ ರತ್ನಮ್ಮ..💞
ಅಮ್ಮಮ್ಮ ಇಂದು ವಿಶ್ವಕಾರ್ಮಿಕರ ದಿನ
ಶುಭವಾಗಲಿ ನಿನ್ನ ಶುಚಿಯಾದ ಕೈ ರುಚಿಗೆ.
ಎಪ್ಪ ನಂದೇನೈತಿ ಎಲ್ಲ ಮ್ಯಾಲಿನಾವಂದು
ನಿಟ್ಟುಸಿರಿಟ್ಟು ಮತ್ತೆ ತಟ್ಟುತ್ತಾಳೆ ರೊಟ್ಟಿ..!
ಕೆಂಡದಲಿ ಸುಟ್ಟ ರೊಟ್ಟಿ ನಕ್ಕು ಆಗಾಗ
ತೋರುತ್ತದೆ ಅವಳ ಮೇಲಿನ ಮಮತೆ
ಖಡಕ್ ರೊಟ್ಟಿಯ ಸುಟ್ಟ ಕಲೆಯೆಲ್ಲ
ಅವಳ ಜೀವನಗಾಥೆಯ ನೋವ ಸಾರುತ್ತ.
ರತ್ನಜ್ಜಿ ಹಸಿವು ಎಂದಾಗ ಬಂದು ಬಡಿಸುತ್ತಾಳೆ
ಅವಳ ಆದರ ಶಬರಿಗೂ ಕಡಿಮೆಯಿಲ್ಲ.
ಬುದ್ದ ಬಸವ ಮಹಾತ್ಮರೂ ತಲೆಬಾಗಿಹರು..
ಅವಳ ಕಾಯಕ ನಿಷ್ಠೆಗೆ,ಬೆರಗಾಗಿ ನಕ್ಕು..
ನಗರದ ಖಾನವಳಿಗೆ ಸರಬರಾಜಾದ ರೊಟ್ಟಿ
ಇವಳ ಮನೆ ಕದತಟ್ಟಿ ಬರುತ್ತವೆ ಮತ್ತೆ ಮತ್ತೆಂದು
ಬಾಳಿನಲಿ ಬಲು ಗಟ್ಟಿ, ಜಗದ ಜಟ್ಟಿಯಾಕೆ
ಎಂಬತ್ತೆರಡಾದರೂ ಅಳಿಯದ ಕಾಯಕ..
ರತ್ನಜ್ಜಿ ಇಂದಾದರೂ ಕೂರಬಾರದೆ ಸುಮ್ಮನೆ
ಕೂತು ಉಂಡರೆ ಕುಡಿಕೆ ಹೊನ್ನು ಸಾಲದು
ಆಡುತ್ತಾಳೆ ನಕ್ಕು,ಮಾಡಿ ಜೀವನ ಬೋಧೆ
ನಿಜವೇ ಎಲ್ಲ,ಅನುಭವದ ಪಡಿ ನುಡಿ ಸುಧೆ..
