ಕಾಡ್ಗಿಚ್ಚು
ಕಾಡ್ಗಿಚ್ಚು
ಚಾಚುತ್ತಿದೆ...ಚಾಚುತ್ತಿದೆ....!
ಬೆಂಕಿಯ ಕೆನ್ನಾಲಿಗೆ ಚಾಚುತ್ತಿದೆ,
ಧಗ ಧಗನೆ ಹೊತ್ತಿ ಉರಿಯುತ್ತಿರುವ
ಬೇಗೆಯಲಿ ಎಲ್ಲವೂ ಕರಕಲಾಗುತ್ತಿದೆ!
ಯಾರೋ ಇಟ್ಟ ಕಿಡಿ ಇದಾಗಿದೆ,
ಅರಿವೇ ಇಲ್ಲದ ಮುಗ್ಧ ಬಲಿಯಾಗಿದೆ!
ಅಮಾಯಕತೆಗೆ ಕಾಯ್ವನಾವ ದೈವ ?
ಕಾಡ್ಗಿಚ್ಚು ಸಮಾನತೆಯ ತಾ ಕಾಯ್ದಿದೆ!
ಇಳೆಯೆಲ್ಲಾ ಹೊಗೆಯಲಿ ಮಂಕಾಗಿದೆ,
ಕರಿಬೂದಿಯ ರಾಶಿ ನೆಲವ ಮುಚ್ಚುತಿದೆ!
ಬೊಗಸೆ ರಕ್ಷಣೆ ಬೇಡಲು ಅಳಿದುಳಿದ ಜೀವ,
ಮೂಕಸಾಕ್ಷಿಯ ನೀಲನಭ ಕೆಂಪಾಯ್ತು ದಿಕ್ಕುಗಾಣದೆ!
ಚಮತ್ಕಾರದಿ ಎತ್ತಲಿಂದಲೋ ಬಿರುಗಾಳಿ ಬೀಸಿದೆ,
ಓ ಜೊತೆಗೇ ಜ್ವಾಲೆಯ ಕ್ರೋಧವೂ ಹೆಚ್ಚಾಗುತ್ತಿದೆ!
ಆದರೆ ಗಾಳಿ ತಾನೇ ಎಳೆದು ತಂದಂತೆ ಮೋಡವ,
ಕಾಯ್ವ ಪರಿಯಲಿ ಮುಗಿಲು ಮಳೆ ಕಣ್ಣೀರ ಸುರಿಸಿದೆ!
ಅಷ್ಟರಲ್ಲೇ ಜೀವ ಭಿಕ್ಷೆಯಲಿ ಅರೆ ಜೀವ ಸಿಲುಕಿದೆ,
ಇತ್ತ ಸಾಯಲೂ ಆಗದೆ; ಅತ್ತ ಬದುಕಲೂ ಆಗದೆ!
ತಡೆಯದಾಯ್ತು ಸ್ಮಶಾನದಲ್ಲಿ ಉಳಿದ ಮೌನವ,
ದೇವವಿತ್ತ ಏಕಾಂತ ಮರುಜನ್ಮವ ತಾನೀಗ ಶಪಿಸಿದೆ!
