ಗಜಲ್
ಗಜಲ್
ಎನಿದ್ದರೇನೂ ಎಲ್ಲ ಬರಿ ಮಣ್ಣು ಗೆಳೆಯ..
ಇರುವಷ್ಟು ದಿನ ಒಲವ ಉಣ್ಣು ಗೆಳೆಯ..
ಆಗಸದ ಚಿಕ್ಕಿಗಳಿಗೂ ಹಗಲು ಸಾವಂತೆ
ಸಿಹಿಗನಸುಗಳೇ ಬದುಕಿಗೆ ಗಿಣ್ಣು ಗೆಳೆಯ..
ಕೋಟೆ ಕಟ್ಟಿ ಮೆರೆದವರೆಲ್ಲ ಚರಿತ್ರೆಯಾಗಿಹರು
ಚಾರಿತ್ರ್ಯವೊಂದು ಮಾಗಿದ ಹಣ್ಣು ಗೆಳೆಯ..
ಅವರವರ ಕರ್ಮದ ಫಲ ಅವರ ಪಾಲಿಗೆ
ಇಲ್ಲದವರ ಪಾಲಿಗೆ ನೀನೇ ಕಣ್ಣು ಗೆಳೆಯ..
ಲಕುಮಿಕಂದನ ನೇಹದಿ ಬೆರತ ಸುಮ ನೀನು
ಹುಳುಬಿದ್ದು ಆಗದಿರಲಿ ಹುಣ್ಣು ಗೆಳೆಯ.
