ಬಹಳಷ್ಟು ಇವೆ ಗೆಳೆಯ
ಬಹಳಷ್ಟು ಇವೆ ಗೆಳೆಯ
ಆಗಸದಲಿ ಮಿನುಗುವ
ನಕ್ಷತ್ರಗಳ ಕಾಣುತ್ತ
ತಂಗಾಳಿಯಲಿ ತೇಲಿ ಬರುವ
ಬೆಳದಿಂಗಳ ಚಂದಿರನ ನೋಡುತ
ನಿನ್ನ ಮಡಿಲಲ್ಲಿ ತಲೆಯಿಟ್ಟು
ಕನವರಿಸಬೇಕಿದ್ದ ಕನಸುಗಳು
ಬಹಳಷ್ಟು ಇವೆ ಗೆಳೆಯ!!
ನನ್ನ ಅಗಲ ಮೊಗದಿ
ಕಣ್ಣರೆಪ್ಪೆಯಂತೆ ನಿನ್ನ ಬಚ್ಚಿಡುತ
ನಾ ನಿನ್ನಲ್ಲಿ ಬಿಚ್ಚಿಡಬೇಕಿರುವ
ಒಲುಮೆಯ ನುಡಿಗಳು
ಬಹಳಷ್ಟು ಇವೆ ಗೆಳೆಯ!!
ನಿನ್ನ ಅಂತರಾಳದ
ಒಲವನು ತಿಳಿಯುತ್ತ
ನಿನ್ನೊಲವಿನ ಜಗತ್ತಲ್ಲಿ ನಲಿಯುತ್ತ
ಎನ್ನೊಲವ ಧಾರೆಯನು
ಸುರಿಸಬೇಕಿರುವ ಆಸೆಗಳು
ಬಹಳಷ್ಟು ಇವೆ ಗೆಳೆಯ!!
ಬರಿಯ ಪದಗಳಲ್ಲಿ
ಹೇಳಲಾಗದು ಗೆಳೆಯ
ನಿನ್ನ ಮೇಲೆ ನನಗಿರುವ ಒಲವ
ಸಾಗರದಿ ಮೂಡಿಬರುವ ಅಲೆಗಳು
ಬಹಳಷ್ಟು ಇವೆ ಗೆಳೆಯ!!
ನಿನ್ನ ಹೆಗಲ ಮೇಲೆ
ಒರಗಿ ಕುಳಿತು ಮಾತನಾಡುತ್ತ
ಮೂಡಿರುವ ಬಯಕೆಗಳೊಂದಿಗೆ
ನಿನ್ನೊಲವು ತುಂಬಿ
ಆಗಸದಿ ತುಂಬಿರುವ ತಾರೆಗಳು
ಬಹಳಷ್ಟು ಇವೆ ಗೆಳೆಯ!!

