ಬ್ರಹ್ಮಕಮಲ
ಬ್ರಹ್ಮಕಮಲ
ಯಾರ ಸ್ಪರ್ಶಕೆ ಈ ಬ್ರಹ್ಮಕಮಲ ನಗುವಂತಾಗಿದೆ
ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ
ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ
ಯಾರು ಕಾರಣರು ಇದಕ್ಕೆಲ್ಲಾ?
ರಾತ್ರಿಯ ಸಮಯದಲ್ಲಿ
ಸೌಂದರ್ಯವೇ ತಾನಾಗಿ ನಗುತಿಹುದು
ಈ ಹೂವಿನ ಪರಿಮಳ ಗಾಳಿಯಲ್ಲಿ
ತೇಲತ ಊರೆಲ್ಲ ಘಮ್ಮೆನಿಸಿಹುದು!!
ಯಾರ ಹೃದಯ ವೇದನೆಗೆ
ನೆಮ್ಮದಿಯ ದಾರಿಯಾಗಿ ಬಂದಿಹುದೋ
ಯಾರ ವಿರಹ ವೇದನೆಗೆ
ತಂಪೆರೆಯಲು ಸ್ವರ್ಗದಿಂದಿಳಿದಿಹುದೋ?
ಏಕೆ ನಗುತಿಹೆ ಬ್ರಹ್ಮಕಮಲವೇ ?
ಏಕೆ ಸುಗಂಧವ ಪಸರಿಸಿ ಅರಳಿರುವೇ ?
ಯಾರ ಸ್ಪರ್ಶದ ಸುಖವೋ ನೀನು
ಶಾಂತಿ ನೆಮ್ಮದಿಯ ಅರಸಿಯೇ ನೀನು!!
ಯಾರ ಬರುವಿಕೆಗಾಗಿ ಕಾದಿಹೆ ನೀನು
ಕತ್ತಲಲ್ಲಿ ಬಿರಿದು ನಗುತ್ತಿರುವೆ ಯಾಕೆ?
ಸುಂದರ ಸುಕೋಮಲ ಹೂವೇ
ನನ್ನ ಮನವು ಸೋತಿದೆ ನಿನ್ನ ಸೌಂದರ್ಯಕೆ!!
✍️ ಪುಷ್ಪ ಪ್ರಸಾದ್
