ಭಾವಯಾನ
ಭಾವಯಾನ
ಮತ್ತೆ ಮತ್ತೆ ಪರಿತಪಿಸಿದೆ
ನಿನ್ನ ನೆನಪಲಿ ಎನ್ನ ಮನ,
ನೀನಿಲ್ಲದೆ ಕಳೆಗುಂದಿದೆ
ನಿತ್ಯ ನರಕದ ಈ ಜೀವನ!
ಭಾನು ಅದೇ ಭೂಮಿಯದೆ
ಸುತ್ತಲಿರೆ ಹೊಸ ಚೇತನ,
ಎಲ್ಲ ಬದುಕು ಸಾಗುತಿದೆ
ನನಗೆ ಮಾತ್ರವಿದು ಕಾನನ!
ಅನ್ನ ಆಹಾರ ಇಳಿಯುತ್ತಿದೆ
ಯಾಂತ್ರಿಕ ಸಹಜ ಸ್ಪಂದನ,
ದೈಹಿಕ ಪೋಷಣೆ ಸಾಗಿದೆ
ಮನಕೆ ಮಾತ್ರವೆ ಒಂಟಿತನ!
ನಗುವ ಮುಖವಾಡವಿದೆ
ಆಂತರ್ಯದಿ ಆಕ್ರಂದನ,
ಜಡುಗಟ್ಟಿದ ಮೌನವಿದೆ
ನಡುನಡುವೆ ನಿನ್ನ ನರ್ತನ!
ಹಂಚಿಕೊಳ್ಳಲು ನೂರಿದೆ
ಏಕಾಂತ ಕೊಡುವರೇ ಈ ಜನ,
ಭಾವಯಾನದಲ್ಲಿ ಒಂಟಿಯಾದೆ
ಕಾಲಚಕ್ರದಿ ನಿಂತ ಮುಳ್ಳು ನಾ!
