*ಬೆಳಕಿಗೇನು ಬರವಿಲ್ಲ*
*ಬೆಳಕಿಗೇನು ಬರವಿಲ್ಲ*
ಅಂದು ಸಂಜೆ ಕಾರ್ಮೋಡ ಕವಿದ ಹಿನ್ನೆಲೆಯಲ್ಲಿ ಮೊದಲೇ ಹಗಲು ಕಡಿಮೆಯಿದ್ದ ಕ್ಷಣಕೆ ಕತ್ತಲು ತಾಮುಂದು ಎಂದೆ ಗಾಢವಾಗಿ ಆವರಿಸಿತ್ತು.ಜೀರುಂಡೆಗಳ ಗುಂಯ್ ಗುಟ್ಟುವ ನಾದಕ್ಕೆ ಕತ್ತಲಿನ ತೀವ್ರತೆ ಹೆಚ್ಚಿದ್ದರ ಕಲ್ಪನೆ ಮನದಲ್ಲಿ ಮೂಡಿತ್ತು.ಕಿಡಕಿಯಾಚೆ ಯಾರೋ ಹರಿದಾಡಿದ ಸದ್ದು,ಭಯ ಒಮ್ಮೆ ಬಂದರೂ ಜೀವನದಲ್ಲಿ ಆದ ಆಘಾತಕ್ಕಿಂತ ಇದೇನು ಮಹಾ ಅನ್ನಿಸಿ ಕಿಟಕಿಗೊಂದು ಚಿಲಕ ಭದ್ರಪಡಿಸಿ ಮಗ್ಗುಲಾದೆ.ಕಂಬಳಿಯ ಹೊದ್ದು ಮಲಗಿದಷ್ಟು ಬಿಸಿಯ ಅನುಭವದಲ್ಲಿ ನೋವು ಕಣ್ಣಂಚಲಿ ನಿಂತು ಜಿನುಗಲು ಹವಣಿಸುತ್ತಿತ್ತು. ಎಂಥ ವಿಪರ್ಯಾಸ! ಬಯಸದೆ ಬಂದ ಭಾಗ್ಯಕ್ಕೆ ಮುಳ್ಳ ಹಾಸಿಗೆಯು ಹೂವಿನಂತೆ ಬದಲಾಗಿತ್ತು.
ನನಗಿದೆಂತ ಪರೀಕ್ಷೆ? ನನ್ನೊಳಗಿನ ತಾಮಸವ ಕೊಚ್ಚಿಕೊಂದಷ್ಟು ನಿರ್ಮಲವಾಗದ ಮನಸ್ಸಿಗೆ ಸಮಾಧಾನ ನೀಡಲು ಕೈಚಾಚಿದವರೆಷ್ಟು? ನಾನೊಂದು ಅನಾಥ ಮಗುವಂತೆ ಭಾಸವಾಗುತ್ತಿತ್ತು.ಅಯ್ಯೋ ದುರ್ವಿಧಿಯೇ ಇಂತಹ ಕ್ಷಣಕ್ಕಾಗಿ ನನ್ನ ಬದುಕಿಸಿದೆಯಾ? ಅತ್ತು ಅತ್ತು ದಿಂಬು ಒದ್ದೆಯಾಯಿತೆ ಹೊರತು ಸಮಾಧಾನ ಸಿಗಲಿಲ್ಲ.ದೀಪಾವಳಿ ಹಬ್ಬದ ಸಡಗರ ಗಲ್ಲಿಗಲ್ಲಿಯಲ್ಲಿ ದೀಪಗಳ ಅಂಕಾರದೊಂದಿಗೆ ವಿಜೃಂಭಣೆಯಿಂದ ನಡೆಯುತ್ತಿತ್ತು.ಹೌದಲ್ಲವಾ ದೀಪಗಳು ಬೆಳಕನ್ನು ನೀಡುತ್ತವೆ.ಅವು ಬೆಳಗಿದಷ್ಟು ಗಳಿಗೆ ಕರಿನೆರಳ ಭಯವಿಲ್ಲ. ಆದ್ರೆ ಏನಿದ್ದು ಏನ್ ಪ್ರಯೋಜನ ? ನನ್ನ ಎದೆಯೊಳಗಿನ ದೀಪ ಜ್ವಾಲೆಗಳು ನನ್ನೊಡಲ ಸುಟ್ಟಲ್ಲದೆ ಇನ್ನಾರನ್ನೂ ಸುಡವೆಂಬ ಸತ್ಯ ಅರಿತಿದ್ದು ತಡವಾಗಿ.
ಅವನೊಂದು ಧೂಮಕೇತುವಿನಂತೆ ಸರಳ ಸಂಪನ್ನನಂತೆ ನನ್ನೆದುರು ದುತ್ತನೆ ಇಳಿದಾಗ ಅಗೋಚರದಾನುಭವ. ಅಬ್ಬಾ! ಇವನಾರು? ನನ್ನರಸಿ ಬಂದುದು ಹೇಗೆ? ಇದು ಕನಸೋ ನನಸೋ ನಾನರಿಯೇ ಕಂಗಳಲಿ ಅಗಾಧ ಪ್ರೀತಿ,ನಿನ್ನೊರತು ನನಗಾರಿಲ್ಲ ಸಂಗಾತಿಯೆಂಬ ಅಳಲು.ಪ್ರೀತಿಯೆಂಬ ಹೊಂಗನಸು ನನ್ನೆದೆಯ ತಿವಿದಷ್ಟು ಆಗಸದಲ್ಲಿ ಹಾರಾಡುವ ಹಕ್ಕಿಯಂತೆ ಮೈಮರೆತ ಸಮಯ ನೆನೆದರೆ ನಾಚಿಕೆ ಆವರಿಸುತ್ತೆ.ಅವನೆಂಬ ಪ್ರೇಮ ಬೆಸೆದು ಹೊಸೆದು ರಕ್ತದ ಕಣಕಣದಲ್ಲಿ ನೆಲೆಸಿದ್ದು ಅರಿವಾಗಲಿಲ್ಲ.ಪ್ರಪಂಚದ ಯಾವ ಸತ್ಯವು ನನಗೆ ಗೋಚರಿಸಲಿಲ್ಲ.ಪ್ರೇಮದ ಅಮಲು ಮನದಾಳದಲಿ ಘಮಲು ಮಲ್ಲಿಗೆಯಂತೆ ಆವರಿಸಿತ್ತು.ಇದೆ ಸತ್ಯವೆಂಬ ಭ್ರಮೆಯಲಿ ಬದುಕುವುದು ಸುಲಭವಾಗಿತ್ತು.
ಅವಹೆಣೆದ ಬಲೆಯಲ್ಲಿ ಬಂದಿಯಾಗಿ ಮೈಮರೆತಿದ್ದೆ. ಜಗತ್ತು ಅಸ್ತಿತ್ವಕ್ಕೆ ಬಂದಿದ್ದು ನನ್ನಿಂದಲೇ ಎಂಬ ಕನಸು ಬೇರೆ.ಅವನಿಗೂ ನನ್ನ ಆಕರ್ಷಣೆ ಕಡಿಮೆಯಾಗಿರಬೇಕು. ಪ್ರೀತಿ ವಿಶ್ವಾಸ ಹಂತ ಹಂತವಾಗಿ ಅದರ ಪ್ರಮಾಣ ಕಡಿಮೆಯಾಗುತ್ತ ಬಂದಿತೆಂಬ ಮಾತು ಕೇಳಿ ಮನಸ್ಸಿಗೆ ನೋವಾಯಿತು.ನನ್ನ ಲೋಕಕೆ ಇಷ್ಟು ಬೇಗ ಸ್ವಪ್ನ ದೋಷ ಉಂಟಾಗುತ್ತದೆಂಬ ಕುರುಹು ಕಾಣದಿರಲಿಲ್ಲ.ಅವಗೀಗಿಗ ನನ್ನೆಲ್ಲ ಕೆಲಸಗಳಲ್ಲಿ ಕೊಂಕು ಹುಡುಕುವುದು ರೂಢಿಯಾಗಿದೆ.ತಪ್ಪುಗಳು ಅದ್ವಾನ ರೂಪ ತಾಳುತ್ತಿವೆ.ಪ್ರತಿ ದೀಪಾವಳಿಯಲ್ಲಿ ನಗುವಿನಾಭರಣ ತೊಟ್ಟು,ದೀಪ ಹಚ್ಚುವಾಗೆಲ್ಲ ಮನೆಯು ಸ್ವರ್ಗದಂತೆ ಕಾಣುತ್ತಿತ್ತು.ಆದ್ರೆ ಈಗ ಅದು ಭಿನ್ನವಾಗಿದೆ.
ನನ್ನ ಸಂತೋಷದ ಬೆಳಕಿಗೆ ಗ್ರಹಣ ಕವಿದಿದೆ.ಅದು ತಾನಾಗಿ ಕವಿದಿಲ್ಲ.ಅತಿಥಿ ಸತ್ಕಾರ ಮಾಡಿ ಕರೆತಂದ ಗ್ರಹಚಾರವಿದು. ಸಹಾಯ ಮಾಡಿದವರ ಕೊರಳಿಗೆ ನೇಣುಗಂಬವಾಗಿ ಪರಿಣಮಿಸಿದ್ದು ಆಶ್ಚರ್ಯವಾದರು ಒಪ್ಪಲೇ ಬೇಕು. ಅವನಿಗೆಂಥ ಅನಿವಾರ್ಯತೆ? ತನ್ನದಲ್ಲದ ಕೆಲಸಕ್ಕ ತಾನೆ ಶರಣಾಗಿರುವುದು ವಿಚಿತ್ರ.ನನ್ನೂ ಬಲಿಪಡೆದಿರುವುದು ಸತ್ಯ.ಒಂದು ಮಿಣುಕು ಹುಳು ಕಣ್ಮುಂದೆ ಹಾದುಹೋಯಿತು.ಕತ್ತಲಾದರೂ ಇದಕ್ಕೊಂದು ಉಮೇದಿ? ಬೆಳಕಬೀರುವ ಆತುರ.ಸೋತು ಸುಣ್ಣಾದವಳ ಮುಂದೆ ಇರುಳಲ್ಲದೆ ಬೆಳಕಿಗೆಲ್ಲಿದೆ ಅವಕಾಶ.
ನಿನಗೇನು ಕೊರತೆ ಮಾಡಿನಿ? ಚೆನ್ನಾಗಿ ನೋಡಕೊಂಡಿನಿ. ನೀನೆ ನನ್ನ ಕಡೆಗೆಣಿಸಿರುವೆ.ನಿನಗೊಂದು ಅಹಂಕಾರ. ನಾನೆಂಬ ಸೊಕ್ಕು.ಆದರೆ ಅದರ ಚಿಂತೆ ಮಾಡಿಲ್ಲ ನಾನು.ನಿನ್ನ ದೂರ ತಳ್ಳಲು,ನಿನ್ನಿಂದ ದೂರಾಗಲೂ ನೂರು ಕಾರಣಗಳಿವೆ.ಅದ್ರೂ ಆ ಕೆಲಸ ಮಾಡಲ್ಲ.ನಿನ್ನ ಕೈ ಬಿಡಲ್ಲ.ಹಾಗೆಯೆ ಹೊರಗಿನ ಸಂಬಂಧವನ್ನು ಕೈ ಬಿಡಲಾರೆ.ಅದು ಆಕಸ್ಮಿಕವಾದರೂ ಬಹಳ ಹಿತವಾಗಿದೆ. ಇದು ಅನಿವಾರ್ಯ ಸಮಾಜದ ದೃಷ್ಟಿಯಿಂದ ಇದನ್ನು ಕಾಪಾಡಲೇಬೇಕು.ಹಾಗಾಗಿ ನೀನು ಚಿಂತಿಸಬೇಡ. ನಿನಗೆಂದು ಮೋಸವಾಗದು ಅನ್ನುವುದು ಅವನಿಗೆ ಸುಲಭವಾಗಿತ್ತು. ಆದ್ರೆ ಅದನು ಸ್ವೀಕರಿಸುವ ಮನಸ್ಸು ನನ್ನದೆಂದು ಮರೆತಂತಿದೆ.ಪ್ಯಾನಿಗೆ ಕೊರಳೊಡ್ಡುವ ಸಾಹಸ ಮಾಡಿದ್ದು ವಿಫಲವಾಯಿತು. ಕರುಳ ಕುಡಿಗಳು ಕಣ್ಣೇದುರು ಬಂದಾಗ ಕೈಕಾಲು ನಡುಕ ಹುಟ್ಟಿ ಅಯ್ಯೋ ನನ್ನಿಂದ ಎಂಥ ತಪ್ಪಾಗುತ್ತಿತ್ತು.ಅನಾಯಾಸವಾಗಿ ಸತ್ತರ ಈ ಬದುಕಿಗೆ ಅರ್ಥವೆಲ್ಲಿ?
ಅವನಿಗಿಂದು ಕಣ್ಣಿಗೆ ಪೊರೆಬೆಳೆದಿದ್ದು ನಿಜ.ಸತ್ಯ ಯಾವತ್ತು ಕಹಿ.ಅದರ ಅರಿವಾದಾಗ ಕ್ಷಮಿಸಲು ನಾನಿರಬೇಕು.ತಂದೆ ಹಾದಿ ತಪ್ಪಿದೆರೆ ತಾಯಿ ಮಕ್ಕಳ ಪಾಲಿಗೆ ಎರಡು ಸ್ಥಾನ ತುಂಬಬೇಕು.ಮಕ್ಕಳದೇನು ತಪ್ಪು? ಅವರನ್ನು ಪ್ರೀತಿಸಿ ಮುನ್ನಡೆಸುವ ಕಾಯಕ ನಮ್ಮದು.ಅವಸೋತರೇನಾತು? ಸುಳ್ಳಿನಹಾಸಿಗೆ ಹಾಸಿ ಹೊದ್ದು ಮಲಗಲಿ.ಅದರಿಂದ ನನಗೇನು ಪ್ರಯೋಜನ.ನಾನು ಕ್ಷಣಿಕವಾದ ಮೇಲೆ, ನನ್ನ ಅಸ್ತಿತ್ವಕ್ಕೆ ಬೆಲೆಯೆಲ್ಲಿದೆ? ಮಕ್ಕಳ ಏಳಿಗೆಗೆ ಮಾತ್ರ ಈ ಬದುಕು ಎಂಬ ಧ್ಯೇಯ ಮನದಟ್ಟಾಗಲು ಸಮಯ ತುಂಬಾನೆ ಕಾಡಿತು.ಕತ್ತಲೆಯ ಆರ್ಭಟ ಮುಗಿದಂತೆ ಹೊಸ ಸೂರ್ಯ ಉದಯಿಸಿದಂತೆ ಮೆಲ್ಲನೆ ಕಿಟಕಿಯ ನೂಕಿ ಒಳಸುಳಿದ ರವಿಕಿರಣಗಳು ದೀಪಾವಳಿಗೆ ಮಕ್ಕಳಿಗಾಗಿ ದೀಪ ಹಚ್ಚು! ಅವರ ಬದುಕಲ್ಲಿ ಹೊಸ ರವಿಯ ಹೊಂಗನಸು ತುಂಬಿ ಎಂಬ ಸಂದೇಶ ಸಾರಿದಂತೆಲ್ಲ.
ಕಂಗಳು ಅಳುವ ನುಂಗಿ ತೇವದಾರ್ಭಟದಲ್ಲಿ ಮೈ ಕೊಡವಿ ಎದ್ದ ಒಳಮನಸಿಗೆ ನಮಿಸಿ ಬೆಳಕ ಬೀರುವ ದೀಪಗಳ ಸಾಲು ಈ ದೀಪಾವಳಿಯೆಂದು ಕತ್ತಲಿದ್ದ ಮೂಲೆ ಮೂಲೆಗೂ ಬೆಳಕ ಚೆಲ್ಲಿದಂತೆ ಏನೋ ದಿವ್ಯಾನುಭವ. ಅವನಿದ್ದರೂ,ಇಲ್ಲದಿದ್ದರೂ ಬೆಳಕಿಗೇನು ಬರವಿಲ್ಲ.
