ಅವನಿಲ್ಲದ ತಲ್ಲಣ
ಅವನಿಲ್ಲದ ತಲ್ಲಣ
ಮುಂಜಾವಿನ ಮಂಜಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿರುವೆ ನೋಡಲು ಅವನಿಲ್ಲ..!
ಅವ ನೋಡದ ರಂಗೋಲಿಯ ಬಣ್ಣ ಮಾಸಿದಂತಾಗಿದೆ.
ಅಭ್ಯಂಜನದ ನಂತರ ತಲೆ ಕೂದಲಿನ ನೀರನ್ನು ಸಿಂಪಡಿಸುವಾಸೆ ಮಂಚದಲ್ಲಿ ಅವನಿಲ್ಲ..!
ಸೀರೆ ಉಡುವಾಗ ನೆರಿಗೆ ಸರಿ ಪಡಿಸಿ, ಸೆರೆಗೆಳೆದು
ಅಪ್ಪಿಕೊಳ್ಳಲು ಅವನಿಲ್ಲ..!
ಬಗೆ ಬಗೆಯ ಭಕ್ಷ್ಯಗಳು ಮಾಡಿ ಕಾದಿರುವೆ
ಉಂಡು ತೃಪ್ತಿಯ ನೋಟ ಬೀರಲು ಅವನಿಲ್ಲ..!
ಸಕ್ಕರೆಯ ಸಿಹಿ ಪಾಯಸವು ಸಪ್ಪೆಯಾದಂತಿದೆ ಅವನಿಲ್ಲದೆ.
ಮುಸ್ಸಂಜೆ ಮಬ್ಬಲ್ಲಿ ಮುಡಿಗೆ ಮಲ್ಲಿಗೆ ಮೂಡಿಸಿ ಮುದ್ದಿಸಲು ಅವನಿಲ್ಲ..!
ಹೊತ್ತು ಮುಳಗಿದರು ಬರಲಿಲ್ಲ ಅವನು... ಮತ್ತದೇ ಆಶಯ ಬರುವನಲ್ಲ ನಾಳೆಗಾದರೂ.
ಅವನಿಲ್ಲ ಅವನಿಲ್ಲ ಎನ್ನುವ ಪ್ರತಿಕ್ಷಣವು, ಇರುವ ನನ್ನೊಳವನು.
ಈ ಜನುಮಕೆ ಇಷ್ಟು ಸಾಕಲ್ಲವೇನು..!

