Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

B S Jagadeesha Chandra

Inspirational

4.7  

B S Jagadeesha Chandra

Inspirational

ಹೃದಯ ಶಿವ

ಹೃದಯ ಶಿವ

7 mins
298



ಆಸ್ಪತ್ರೆಯಲ್ಲಿರುವ ಗಂಡನ ಮರಣದ ಕ್ಷಣ ಗಣನೆ ಆರಂಭವಾಗಿತ್ತು. ಅವರು ಹೋದಮೇಲೆ ಹೇಗೆ? “ಅವರು ಯಾವುದೇ ಅಸ್ತಿ ಮಾಡಿಲ್ಲ, ದುಡ್ಡು ಕೂಡಿಟ್ಟಿಲ್ಲ. ಇಬ್ಬರು ಮಕ್ಕಳು ಓದುತ್ತಿದ್ದಾರೆ” ಇವೆಲ್ಲವುಗಳನ್ನು ಚಿಂತಿಸುತ್ತ ಸಾವಿತ್ರಿಗೆ ಅಂದು ಬಹಳ ಯೋಚನೆಯಾಗಿತ್ತು. ಗಂಡನ ತಿಂಗಳ ಸಂಬಳ ಇನ್ನು ಮುಂದೆ ಇರುವುದಿಲ್ಲ. ಪಿಂಚಣಿ ಎಂಬುದು ಕನಸು, ಅವರು ಹೆಚ್ಚು ದಿನ ಇರುವುದಿಲ್ಲ ಎಂದಾಗ ಬಹಳ ಯೋಚನೆಯಾದರೂ ನಿಭಾಯಿಸಬಲ್ಲೆ ಎಂದು ಮಾನಸಿಕವಾಗಿ ಸಿದ್ಧವಾಗಿದ್ದರೂ ಈಗ ಯಾಕೋ ಭಯ ಕಾಡುತ್ತಿದೆ ಎಂದನ್ನಿಸಿತು. 

ಅಂತೂ ಆ ದಿನ ಬಂದೆ ಬಿಟ್ಟಿತು. “ಯಾವುದೇ ಕೆಲಸವನ್ನು ಮಾಡು, ಆದರೆ ಶ್ರದ್ಧೆ ಯಿಂದ, ನಿಷ್ಠೆಯಿಂದ, ಪ್ರಾಮಾಣಿಕವಾಗಿ, ಸಂತೋಷದಿಂದ ಮಾಡಿದರೆ ಖಂಡಿತ ಫಲ ನೀಡುತ್ತದೆ” ಎಂದು ತನ್ನ ಕಡೆಯ ಮಾತನ್ನು ಹೇಳಿದ ಸಾವಿತ್ರಿಯ ಗಂಡ ಅವಳ ಪಾಲಿಗೆ ಎಂದೂ ಇಲ್ಲವಾಗಿದ್ದರು. ಅವರ ಇಚ್ಚೆಯಂತೆ ಅವರ ಅಂಗಗಳನ್ನು, ದೇಹವನ್ನು ದಾನಮಾಡಿದುದರಿಂದ, ಯಾವುದೇ ಕಾರ್ಯಗಳನ್ನು ನಡೆಸಬಾರದು ಎಂದು ಹೇಳಿದ್ದುರಿಂದ, ಅವರ ಹೆಣ ಹೋದನಂತರ ಮಾಡುವುದೇನೂ ಇರಲಿಲ್ಲ. ಮುಂದೆ ಏನು ಮಾಡುವುದು ಎಂದು ಯೋಚಿಸುವುದೇ ಆಗಿತ್ತು. ಬಂದ ನೆಂಟರು ಬಾಯಿಯಲ್ಲಿ ಉಪಚಾರದ ಮಾತನ್ನು ಆಡಿದರೇ ಹೊರತು ಬೇರೆ ಏನೂ ಮಾಡಲಿಲ್ಲ.

ತಾನು ಮಾಡಿದ್ದ ಬಿ ಎಸ್ಸಿ ಪದವಿ ಈಗ ಸಹಾಯಕ್ಕೆ ಬರುವುದೇ? ಯಾವುದೊ ಕಾಲದಲ್ಲಿ ಮಾಡಿದ್ದ ಅವು ತನಗೆ ನೆನಪಿದೆಯೇ? ಆ ಪದವಿ ಪತ್ರ ಎಲ್ಲಿದೆ? ತನಗೆ ಇಂಥ ಪರಿಸ್ಥಿತಿಯಲ್ಲಿ ಯಾರು ಕೆಲಸ ಕೊಡುತ್ತಾರೆ? ಮನೆಯಲ್ಲಿ ಈಗ ಸ್ವಲ್ಪ ಉಳಿಸಿದ ಹಣ ಅಷ್ಟೇ ಇರುವುದು, ಮುಂದೆ ಹೇಗೆ? ದಿನಸಿ, ಊಟ, ಮಕ್ಕಳ ಶುಲ್ಕ??? ಎಲ್ಲವು ಉತ್ತರವಿಲ್ಲದ ಪ್ರಶ್ನೆಗಳೇ ಆಗಿ ಸಾವಿತ್ರಿಯನ್ನು ಕಾಡುತ್ತಿದ್ದವು. ಆದರೂ ಸಾವಿತ್ರಿ ಅಧೀರಳಾಗಲಿಲ್ಲ, ಹೆದರಲಿಲ್ಲ, ಅಳಲಿಲ್ಲ.

ನಾಳೆಯೇ ಪರಿಚಯ ಇರುವ ಅಕ್ಕ ಪಕ್ಕದ ಎಲ್ಲರ ಮನೆಗೂ ಹೋಗಿ ತಾನು ಏನಾದರೂ ಕೆಲಸ ಮಾಡುತ್ತೇನೆ, ಅದಕ್ಕೆ ಸ್ವಲ್ಪ ಹಣ ಕೊಡಿ ಎಂದು ಕೇಳುವುದೇ ಈಗ ಇರುವ ದಾರಿ ಎನ್ನಿಸಿತು ಸಾವಿತ್ರಿಗೆ. ತಮ್ಮ ಮನೆಯಲ್ಲಿ ಬೆಳೆದಿದ್ದ ತರಕಾರಿ, ಸೊಪ್ಪುಗಳನ್ನು ಈಗ ಅವರಿಗೆ ಕೊಟ್ಟು (ಮಾರಿ) ಅವರಿಂದ ತಾವು ಮಾಡುವ ಕೆಲಸಕ್ಕೆ ಹಣ ಕೇಳುವುದು ಎಂದು ನಿಶ್ಚಯಿಸಿದಳು. ಸಾವಿತ್ರಿಗೆ ಈಗ ತಾನು ಮಾಡುವ ಕೆಲಸದ ಬಗ್ಗೆ ವಿಶ್ವಾಸ ಇದ್ದದ್ದು ಅಡುಗೆ ಹಾಗೂ ತೋಟದ ಕೆಲಸದಲ್ಲಿ ಮಾತ್ರ. ಅಕ್ಕಪಕ್ಕದ ಐದಾರು ಮನೆಯಲ್ಲಿ ಕೆಲಸ ಮಾಡಿ ತಿಂಗಳಿಗೆ ಒಂದು ಐದು ಸಾವಿರ ಸಂಪಾದಿಸಿದರೆ ಹೇಗೋ ನಿಭಾಯಿಸಬಹುದು ಎಂದೆನ್ನಿಸಿತು. ಈಗ ಮನಸು ಹಗುರವಾಗಿ ನಿದ್ದೆ ಬಂದಿತು.

ಬೆಳಿಗ್ಗೆ ಎದ್ದಾಗ ಮಗ ಓಡಿ ಬಂದು “ಅಮ್ಮ ಮನೆಯ ಹೊರಗೆ ಯಾರೋ ಏನೋ ಪೆಟ್ಟಿಗೆ ಇಟ್ಟಿದ್ದಾರೆ” ಎಂದ. ಹೋಗಿ ನೋಡಿದರೆ ಒಂದು ವಾರಕ್ಕೆ ಆಗುವಷ್ಟು ದಿನಸಿ ಅದರಲ್ಲಿತ್ತು. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಎಂದು ಸುಂದರವಾಗಿ ಬರೆದ ಕಾಗದವೊಂದು ಆ ಪೆಟ್ಟಿಗೆಯಿಂದ ಬಗ್ಗಿ ನೋಡುತ್ತಿತ್ತು. ಸಾವಿತ್ರಿಗೆ ದೇವರು ಇಲ್ಲ ಎಂದು ಯಾರು ಹೇಳುತ್ತಾರೆ, ಮಾನವ ರೂಪದ ಎಷ್ಟೊಂದು ದೇವರು ಇರುವಾಗ ಎಂದು ಸಂತೋಷವಾಯಿತು. ಇನ್ನೊಂದು ವಾರದ ನಂತರ ಹೀಗೆ ಇನ್ನೊಂದು ಪೆಟ್ಟಿಗೆ ಖಂಡಿತ ಬರುತ್ತದೆ ಎಂದು ಅವಳ ಅಂತರಂಗ ನುಡಿಯುತ್ತಿತ್ತು. ಕೂಡಲೇ “ನೀವು ಯಾರೋ ಗೊತ್ತಿಲ್ಲ, ನಮ್ಮ ಪಾಲಿನ ದೇವರು ಎಂದೇ ನಂಬಿದ್ದೇನೆ, ನಿಮ್ಮ ಋಣ ಹೇಗೆ ತೀರಿಸುವುದೋ ಗೊತ್ತಿಲ್ಲ, ಧನ್ಯವಾದಗಳು” ಎಂದು ಒಂದು ಚೀಟಿಯಲ್ಲಿ ಬರೆದಿಟ್ಟುಕೊಂಡು ಅದೇ ಡಬ್ಬಕ್ಕೆ ಅಂಟಿಸಿದಳು. ದಿನವೂ ರಾತ್ರಿ ಮಲಗುವಾಗ ಅದನ್ನು ಮನೆಯ ಬಾಗಿಲಲ್ಲಿ ಇಟ್ಟು ಮಲಗುವುದು ಎಂದು ಅಂದುಕೊಂಡಳು.

ಮಾರನೇ ದಿನ ಪಕ್ಕದ ಮನೆಯ ಮನೆಯ ಇಂದಿರಾ ಅವರ ಮನೆಗೆ ಹೋಗಿ ತಾವು ಅವರಿಂದ ಏನು ಕೆಲಸ ಮಾಡಬಹುದು ಎಂದು ಚರ್ಚಿಸಿದಳು. ಇಂದಿರಾ ಅವರಿಗೆ ಇಬ್ಬರು ಚಿಕ್ಕ ಮಕ್ಕಳು, ಗಂಡ ಹೆಂಡತಿ ಇಬ್ಬರೂ ಕೆಲಸ ಮಾಡುವವರು, ಮಕ್ಕಳನ್ನು ನೋಡಿಕೊಳ್ಳಲು ಅವರನ್ನು ಕಚೇರಿಯ ಹತ್ತಿರದ “ಮಕ್ಕಳ ಮನೆ” ಯಲ್ಲಿ ಬಿಡುತ್ತಿದ್ದರು. “ನೀವು ನೋಡಿಕೊಳ್ಳುವಿರಾದರೆ ಮುಂದಿನ ತಿಂಗಳಿಂದ ನಿಮ್ಮ ಮನೆಯಲ್ಲೇ ಬಿಡುತ್ತೇನೆ” ಎಂದರು. ಸಾವಿತ್ರಿಗೆ ಒಪ್ಪಿಗೆ ಯಾಯಿತು. ಗೊತ್ತಿರುವವರು, ಮಕ್ಕಳಿಗೂ ಪರಿಚಯ, ಹೀಗಾಗಿ ಕೆಲಸವೇನೂ ಕಷ್ಟವಾಗಲಾರದು ಎನ್ನಿಸಿತು. ಈ ಹದಿನೈದು ದಿನ ಕಳೆದರೆ ಒಂದು ಕೆಲಸವಂತೂ ಗಟ್ಟಿ ಎಂದು ಖುಷಿಯಾಯಿತು. ಇಂದಿರಾ ಅವರಿಗೆ ಧನ್ಯವಾದವನ್ನು ತಿಳಿಸಿ ಹಿಂದಿನ ಬೀದಿಯ ವಿನುತಾ ಅವರ ಮನೆಗೆ ಹೊರಟಳು.

ವಿನುತಾ ಅವರ ಮನೆಯಲ್ಲಿ ಅಡುಗೆ, ತೋಟದ ಕೆಲಸ, ಅಥವಾ ಇನ್ನ್ಯಾವುದೇ ತಮ್ಮ ಕೈಲಾಗುವ ಕೆಲಸ ಕೇಳಿದಾಗ, “ಸಧ್ಯಕ್ಕೆ ನಮ್ಮಲ್ಲಿ ಅಂಥಹದೇನೂ ಇಲ್ಲ, ಬೇಕಾದರೆ ನಾವು ಸುಮ್ಮನೆ ನಿಮಗೆ ತಿಂಗಳಿಗೆ ಒಂದಷ್ಟು ದುಡ್ಡು ಕೊಡುತ್ತೇವೆ, ನಿಮಗೆ ಸಾಧ್ಯವಾದಾಗ ಕೊಡಿ” ಎಂದರು. ಆದರೆ ಸಾವಿತ್ರಿಯ ಸ್ವಾಭಿಮಾನ ಅಡ್ಡ ಬಂತು. “ಏನಾದರೂ ಕೆಲಸ ಮಾಡಿ ತೆಗೆದುಕೊಂಡರೆ ನನಗೂ ತೃಪ್ತಿ, ಬೇರೆ ವಿಧಿಯೇ ಇಲ್ಲ ಎಂದರೆ ನಿಮ್ಮನ್ನು ಕೇಳುತ್ತೇನೆ” ಎಂದು ಹೊರಟಳು. ಆಗ ಏನೋ ಜ್ಞಾಪಿಸಿಕೊಂಡ ವಿನುತಾ “ನೋಡಿ ಈ ಬೀದಿಯ ಕೊನೆ ಮನೆಯ ಶೀಲಾ ಅವರ ಮನೆಯಲ್ಲಿ ಬೇಕಾದಷ್ಟು ಜಾಗ ಇದೆ, ಚೆನ್ನಾಗಿ ತೋಟ ಮಾಡುವವರು ಯಾರಾದರೂ ಇದ್ದರೆ ಹೇಳಿ ಎಂದಿದ್ದರು, ಬೇಕಾದರೆ ಪರಿಚಯ ಮಾಡಿಸುತ್ತೇನೆ, ತಮಗೆ ಒಪ್ಪಿಗೆ ಯಾದರೆ ನೋಡಿ” ಎಂದರು. ಯಾಕಾಗಬಾರದು, ಅದು ನನಗಿಷ್ಟವಾದ ಕೆಲಸ, ಪರಿಚಯ ಮಾಡಿಸಿ, ನೋಡಿಯೇ ಬಿಡೋಣ” ಎಂದು ಸಾವಿತ್ರಿ ಹೇಳಿದಳು.

ಶೀಲಾ ಅವರಿಗೆ ಸಾವಿತ್ರಿಯನ್ನು ಪರಿಚಿಯಿಸುತ್ತ ಅವರ ಮನೆಯ ಪರಿಸ್ಥಿತಿ ಯನ್ನು ವಿವರಿಸಿ “ನೋಡಿ ಈಕೆ ತೋಟದ ಕೆಲಸದಲ್ಲಿ ಬಲು ನಿಪುಣೆ, ನಿಮಗೆ ಅನುಕೂಲವಾಗಬಹುದು” ಎಂದರು. “ತೋಟದ ಕೆಲಸವನ್ನು ಹೆಂಗಸರ ಕೈಲಿ, ಅದು ಇಂಥ ಸ್ಥಿತಿವಂತರ ಕೈಲಿ ಹೇಗೆ ಮಾಡಿಸುವುದು? ಎಂದು ಸಂಕೋಚ ಪಟ್ಟುಕೊಂಡರು ಶೀಲಾ. ಕೂಡಲೇ ವಿನುತಾ, “ನೋಡಿ ಇವು ಸಾವಿತ್ರಿ ಅವರೇ ಮನೆಯಲ್ಲಿ ಬೆಳೆದಿದ್ದದ್ದು” ಎಂದು ಹಿರೇಕಾಯಿ, ದಂಟಿನ ಸೊಪ್ಪನ್ನು ಕೊಟ್ಟರು. “ಈ ಹೂವುಗಳೂ ಅಷ್ಟೇ ಅವರ ಮನೆಯಲ್ಲಿಯೇ ಬೆಳೆದದ್ದು” ಎಂದು ಹೂವಿನ ರಾಶಿಯನ್ನೇ ಅವರ ಮುಂದೆ ಸುರಿದರು. “ಆದರೂ” ಎಂದು ಶೀಲಾ ರಾಗ ಎಳೆದಾಗ “ಏನೂ ಸಂಕೋಚ ಪಡಬೇಡಿ, ನನ್ನ ಮನೆ ಎಂದು ಭಾವಿಸಿ, ನಾನು ವಾರಕ್ಕೆ ಮೂರು ದಿನ ಬಂದು ನಿಮಗೆ ಬೇಕಾದ ಗಿಡಗಳನ್ನು ಹಾಕಿ ನೋಡಿಕೊಳ್ಳುತ್ತೇನೆ, ನನಗೂ ಈಗ ಹಣದ ಅವಶ್ಯಕತೆ ಇರುವುದರಿಂದ ಸಿದ್ಧವಾಗಿದ್ದೇನೆ” ಎಂದು ಹೇಳಿ, “ನಮ್ಮ ಮನೆಗೆ ಒಮ್ಮೆ ಬನ್ನಿ, ಗಿಡಗಳನ್ನು ತೋರಿಸುತ್ತೇನೆ, ಅದು ನನಗೆ ಹೆಚ್ಚು ಪ್ರಿಯೆಯಾದ ಹವ್ಯಾಸ” ಎಂದಳು ಸಾವಿತ್ರಿ. ಶೀಲಾ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡರು. ಅಂತೂ ಎರಡು ಕೆಲಸ ಗಟ್ಟಿಯಾಯಿತು ಎಂದು ಸಾವಿತ್ರಿಗೆ ಸಂತೋಷವಾಯಿತು. ಇನ್ನು ಯಾರಾದರೂ ಅಡುಗೆ ಕೆಲಸ ಕೊಟ್ಟರೆ ಮೂರು ಕೆಲಸವಾಗುತ್ತದೆ, ಸದ್ಯಕ್ಕೆ ಅಷ್ಟು ಸಾಕು ಎನ್ನಿಸಿತು.

ಆಗ ಶೀಲಾ, “ನೋಡಿ ಇಲ್ಲಿ ಮುಂದಿನ ರಸ್ತೆಯಲ್ಲಿರುವ ಗೃಹ ಸಂಕೀರ್ಣದಲ್ಲಿ ಇಬ್ಬರು ವೃದ್ಧರಿದ್ದಾರೆ, ಅವರಿಗೆ ಅಡುಗೆ ಮಾಡಿಕೊಡಬೇಕು, ಬೇಕಾದರೆ ಕೇಳಿ ನೋಡಿ” ಎಂದರು. “ಈಗಲೇ ಕೆಲಸ ಆಗಿಬಿಡಲಿ, ಹೋಗಿ ಬನ್ನಿ” ಎಂದು ವಿನುತಾ ಅಲ್ಲಿಂದ ಹೊರಟರು. ಶೀಲಾ, ಸಾವಿತ್ರಿಯನ್ನು ಕರೆದುಕೊಂಡು ಹೊರಟರು.

ಆ ಮನೆಯಲ್ಲಿ ಹಿರಿಯರಾದ ಜಾನಕಿ, ವಾಸುದೇವ್ ಅವರಿದ್ದರು. ಇವರು ಹೋದಾಗ ಅವರೊಂದಿಗೆ ಅವರ ಎದುರು ಮನೆಯ ಕಮಲಾ ಸಹ ಅಲ್ಲೇ ಮಾತನಾಡುತ್ತ ಕುಳಿತಿದ್ದರು. ಶೀಲಾ, ಸಾವಿತ್ರಿಯನ್ನು ಅವರೆಲ್ಲರಿಗೂ ಪರಿಚಿಯಸಿ, “ತುಂಬಾ ಸ್ವಾಭಿಮಾನಿ ಹೆಂಗಸು, ಕೆಲಸ ಮಾಡಿಯೇ ಸಂಪಾದನೆ ಮಾಡುತ್ತೇನೆ ಎಂದು ನಿರ್ಧರಿಸಿದ್ದಾರೆ, ನೋಡಿ ನಿಮಗೆ ಅಡುಗೆಗೆ ಒಬ್ಬರು ಸಿಕ್ಕರು, ಸಾವಿತ್ರಿಗೂ ಒಂದು ಕೆಲಸ ಗಟ್ಟಿ” ಎಂದರು. “ನಮಗೂ ಮನೆಯಲ್ಲಿ ಅಡುಗೆ ಮಾಡುವವರೇ ಬೇಕಿತ್ತು” ಎಂದು ಜಾನಕಿ ನಿಧಾನವಾಗಿ ಸಾವಿತ್ರಿಯ ವಿವರಗಳನ್ನು ತಿಳಿದು ಕೊಂಡರು. ಅವರಿಗೆ ಒಪ್ಪಿಗೆಯಾಯಿತು. ಸಾವಿತ್ರಿ ಆಗ “ನಾನು ನಿಮಗೆ ಬೇಕಾದ ಅಡುಗೆಯನ್ನು ನಮ್ಮ ಮನೆಯಲ್ಲೇ ಮಾಡಿ ತಂದರೆ ಹೇಗೆ?” ಎಂದಾಗ, ಜಾನಕಿ, “ನೋಡಿ ನಿಮ್ಮ ಅನುಕೂಲ” ಎಂದರು. ಆಗ ಅಲ್ಲೇ ಕುಳಿತಿದ್ದ ಕಮಲಾ, “ಸಾವಿತ್ರಿ ಅವರೇ, ನಮಗೂ ಅಡುಗೆಯವರು ಬೇಕಿತ್ತು, ನೋಡಿ ಇಲ್ಲೇ ಮಾಡಿದರೆ ಎರಡೂ ಮನೆಗೂ ಅನುಕೂಲ, ನಿಮಗೂ ಅನುಕೂಲ” ಎಂದರು. “ಅಕ್ಕ ಪಕ್ಕದ ಮನೆಯಾದುದರಿಂದ ಪರವಾಗಿಲ್ಲ, ಒಂದೆರೆಡು ತಿಂಗಳು ಇಲ್ಲೇ ಮಾಡುತ್ತೇನೆ, ನಂತರ ನೋಡೋಣ” ಎಂದು ಸಾವಿತ್ರಿ ತನ್ನ ತೀರ್ಮಾನ ತಿಳಿಸಿದಳು.

ಅಂತೂ ಸಾವಿತ್ರಿ ಅವರೆಲ್ಲರಿಗೂ ಧನ್ಯವಾದಗಳನ್ನು ತಿಳಿಸಿ ಹೊರಟಾಗ ಮನಸ್ಸು ನಿರಾಳವಾಗಿತ್ತು. ಶಿವನು ಮನುಷ್ಯರೂಪದಲ್ಲಿ, ಮನುಷ್ಯರ ಹೃದಯದಲ್ಲಿ ಇರುವುದು ನಿಜ ಅನ್ನಿಸಿತು. ಈ ಹದಿನೈದು ದಿನ ಕಳೆದರೆ ತಮ್ಮ ಹೊಸ ವೃತ್ತಿ ಆರಂಭವಾಗುತ್ತದೆ, ಇನ್ನು ಯೋಚನೆ ಇಲ್ಲ ಎಂದು ಸಮಾಧಾನವಾಯಿತು.

ಗಂಡನ ಮರಣವಾಗಿ ಒಂದು ವಾರವಾಗಿತ್ತು. ಅಂದು ಸಹ ಸಾವಿತ್ರಿ “ಧನ್ಯವಾದಗಳು” ಎಂದು ಬರೆದ ಡಬ್ಬವನ್ನು ಮನೆಯ ಬಾಗಿಲ ಬಳಿ ಇಟ್ಟು ಮಲಗಿದಳು. ಮರುದಿನ ಬೆಳಿಗ್ಗೆ ನೋಡಿದಾಗ, ಅಲ್ಲಿ ಇನ್ನೊಂದು ಡಬ್ಬವಿತ್ತು. ಖಾಲಿ ಡಬ್ಬ ಮಾಯವಾಗಿತ್ತು. ಅದು ಯಾರದು ಎಂದು ಪತ್ತೇದಾರಿ ಮಾಡಬೇಕು ಅನ್ನಿಸಿದರೂ, ಯಾರೋ ಪುಣ್ಯಾತ್ಮರು, ತಮ್ಮ ಹೆಸರೂ ಸಹ ತಿಳಿಸದೇ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ನಾನೂ ಸಹ ನನ್ನ ಕೈಲಾದ ಒಳ್ಳೆ ಕೆಲಸ ಮಾಡಿದರೆ ಅವರಿಗೆ ಧನ್ಯವಾದಗಳನ್ನು ತಿಳಿಸಿದಂತೆ ಎಂದುಕೊಂಡು ಸುಮ್ಮನಾದಳು. ಮರುದಿನ ಬೆಳಿಗ್ಗೆ ಮನೆಯ ಮುಂದೆ ಒಂದು ಕಾಗದ ಬಿದ್ದಿತ್ತು. ಒಡೆದು ನೋಡಿದರೆ “ನಿಮ್ಮ ಕಷ್ಟಗಳೆಲ್ಲ ನೀಗುತ್ತದೆ, ನೀವೂ ಸಹ ನಿಮಗೆ ಸಾಧ್ಯವಾದ ಒಳ್ಳೆಯ ಕೆಲಸಮಾಡಿ, ಆ ಸೃಷ್ಟಿಕರ್ತ ಎಲ್ಲರನ್ನೂ ಚೆನ್ನಾಗಿಟ್ಟಿರಲಿ” ಎಂದು ಬರೆದಿತ್ತು. ಸಾವಿತ್ರಿಗೆ ಹೃದಯ ತುಂಬಿ ಬಂತು. ಎದುರಿಗೆ ಇದ್ದಿದ್ದರೆ ಅವರೊಂದಿಗೆ ನನ್ನ ಸುಖ ದುಃಖ ಹಂಚಿಕೊಂಡು ಅತ್ತುಬಿಡಬಹುದಿತ್ತು ಅನ್ನಿಸಿತು.

ಈಗ ಸಾವಿತ್ರಿ ಪಕ್ಕದ ಮನೆಯ ಇಂದಿರಾಳ ಎರಡು ಮಕ್ಕಳನ್ನು ತನ್ನ ಮಕ್ಕಳೆಂದೇ ಭಾವಿಸಿ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಅವಳಿಗೆ ಅದು ಕೆಲಸ ಅನ್ನಿಸುತ್ತಿರಲಿಲ್ಲ. ಆ ಮಕ್ಕಳಿಗೂ ಇವಳು ದೊಡ್ಡಮ್ಮನಾಗಿಬಿಟ್ಟಿದ್ದಳು. ಇಂದಿರಾಳನ್ನು ಸಹ ತನ್ನ ತಂಗಿಯಂತೆಯೇ ಭಾವಿಸಿದ್ದಳು. ಒಮ್ಮೊಮ್ಮೆ ಹೊತ್ತಲ್ಲದ ಹೊತ್ತಲ್ಲೂ ಆ ಮಕ್ಕಳನ್ನು ತನ್ನ ಮನೆಯಲ್ಲೇ ಇಟ್ಟುಕೊಂಡು ತನ್ನ ಮಕ್ಕಳ ಜೊತೆ ಆಟಪಾಠಗಳನ್ನು ಹೇಳಿಕೊಟ್ಟಾಗ, ಇಂದಿರಾಳೆ ಸಾವಿತ್ರಿಯನ್ನು ಸಲಿಗೆಯಿಂದ ಗದರಿಸಿ, “ನಿನಗೆ ದುಡ್ಡು ಕೊಡುವುದು ೫ ಗಂಟೆಯವರಿಗೆ ಮಾತ್ರ” ಎನ್ನುತ್ತಿದ್ದಳು. ಆಗ ಸಾವಿತ್ರಿಯೂ ಸಲಿಗೆಯಿಂದ “ನೀನು ಹೆಚ್ಚು ದುಡ್ಡು ಕೊಡಲಿ ಎಂದು ನಾನೇನು ಕೆಲಸ ಮಾಡುತ್ತಿಲ್ಲ, ನನ್ನ ತಂಗಿಯ ಮಕ್ಕಳೆಂದು ಭಾವಿಸಿದ್ದೇನೆ, ಈ ಹಣದ ಅವಶ್ಯಕತೆ ಇಲ್ಲದಿದ್ದರೆ ಆ ದುಡ್ಡನ್ನೂ ಕೇಳುತ್ತಿರಲಿಲ್ಲ” ಎಂದಳು. ಆಗ ಇಂದಿರಾ ಭಾವುಕಳಾಗಿ “ನೀನು ನನಗೆ ಯಾವ ಜನ್ಮದಲ್ಲಿ ಒಡಹುಟ್ಟಿದ್ದಿಯೋ ಏನೋ, ಈಗ ಮತ್ತೆ ನಾವು ಒಟ್ಟಾಗಿದ್ದೇವೆ” ಎಂದಳು. ಇಲ್ಲಿ ಸಾವಿತ್ರಿ ಹಣಕ್ಕಿಂತ ನಿಷ್ಠೆಗೆ ಹೆಚ್ಚು ಒತ್ತುಕೊಟ್ಟಿದ್ದಳು. ಇದಕ್ಕೆ ಪ್ರತಿಫಲವಾಗಿ ಇಂದಿರಾ ಹೆಚ್ಚು ಹಣ ಕೊಡದಿದ್ದರೂ, ಕಷ್ಟಕ್ಕೆ ನೆರವಾಗುತ್ತಿದ್ದಳು, ಸಣ್ಣ ಪುಟ್ಟ ಸಹಾಯವನ್ನು ತಾನಾಗಿಯೇ ಮಾಡುತ್ತಿದ್ದಳು. ಇಂದಿರಾಳ ಗಂಡನ ಇರುವು ಸಾವಿತ್ರಿಗೆ ಸೋದರನೊಬ್ಬ ತನ್ನ ಜೊತೆ ಇದ್ದಾನೆ ಎಂಬ ಮಾನಸಿಕ ಬಲ ತಂದಿತ್ತು.

ಸಾವಿತ್ರಿ, ಶೀಲಾಳ ಮನೆಯ ತೋಟದ ಕೆಲಸಕ್ಕೆ ವಾರಕ್ಕೆ ಮೂರು ದಿನ ಹೋಗುತ್ತಿದ್ದಳು. ಸಂಜೆಯ ವೇಳೆ ಸ್ವಲ್ಪ ಬಿಸಿಲು ಕಡಿಮೆಯಾದಾಗ ಹೋಗಿ ಹೆಚ್ಚು ಕೆಲಸ ಮಾಡುತ್ತಿದ್ದಳು. ಬೆಳಿಗ್ಗೆ ಮಕ್ಕಳು ಶಾಲೆಗೆ ತೆರಳಿದ ನಂತರ, ಇಂದಿರಾಳ ಮಕ್ಕಳನ್ನೂ ಕರೆದುಕೊಂಡು ಹೋಗಿ ಕಳೆ ಕೀಳುವುದು, ಒಣಗಿದ ಕಡ್ಡಿಗಳನ್ನು ಕೀಳುವುದು, ಬೇಡವಾದ ರೆಂಬೆಗಳನ್ನು ಕತ್ತರಿಸುವುದು, ಹುಳಬಂದಿರುವ ಕಡ್ಡಿಗಳನ್ನು ಕೀಳುವುದು ಇತ್ಯಾದಿಗಳನ್ನು ಮಾಡುತ್ತಿದ್ದಳು. ಆ ಮಕ್ಕಳಿಗೂ ಇದೊಂದು ಸಕಾರಾತ್ಮಕವಾಗಿ ಹೊತ್ತು ಕಳೆಯುವ ಒಳ್ಳೆ ಹವ್ಯಾಸವಾಗಿತ್ತು. ಅವುಗಳಿಗೆ ಪ್ರಕೃತಿಯ ಪರಿಚಯ, ಗಿಡ, ತರಕಾರಿ, ಹೂವು, ಚಿಟ್ಟೆ, ಕೀಟಗಳು ಇವುಗಳ ಬಗ್ಗೆ ದೊಡ್ಡಮ್ಮನಿಂದ ಪಾಠವೂ ಆಗುತ್ತಿತ್ತು. ಸಾವಿತ್ರಿಯ ಕೈಗುಣದಿಂದ ಶೀಲಾಳ ಮನೆಯ ತೋಟ ನಂದನವನವಾಗಿತ್ತು. ಅಲ್ಲಿ ತರಕಾರಿ, ಹೂವು ಯಥೇಚ್ಛವಾಗಿ ಬೆಳೆಯುತ್ತಿದ್ದವು. ವಾರಕ್ಕೆ ಮೂರುದಿನ ಎಂದು ಹೇಳಿದ್ದರೂ ಸಾವಿತ್ರಿ ಬೇಕೆನಿಸಿದಾಗಲೆಲ್ಲ ಹೋಗುತ್ತಿದ್ದಳು. ದುಡ್ಡಿಗಾಗಿ ಒಪ್ಪಿಕೊಂಡರೂ ತನ್ನ ಮನಸ್ಸಿನ ಸಮಾಧಾನಕ್ಕೆ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಳು. ಇದನ್ನು ಕಂಡು ಶೀಲಾ ಹೆಚ್ಚಿನ ಹಣಕೊಡುತ್ತೇನೆಂದರೂ ಬೇಡವೆಂದು ತಿಳಿಸಿ ಸಾವಿತ್ರಿ ಅದು ತನ್ನ ಮನೆಯ ತೋಟವೆಂದೇ ಭಾವಿಸಿ ಕೆಲಸ ಮಾಡುತ್ತಿದ್ದಳು. ಈ ಶ್ರದ್ಧೆ, ನಿಷ್ಠೆ, ತಲ್ಲೀನತೆ ಸಾವಿತ್ರಿಗೆ ಅನುಕೂಲ ಮಾಡಿಕೊಟ್ಟಿದ್ದವು. ಶೀಲಾಳ ಗಂಡ, ಹೆಚ್ಚಿನ ದುಡ್ಡಿನ ಬದಲು ಸಾವಿತ್ರಿಯ ಮಕ್ಕಳಿಗೆ ಶಾಲೆಗೆ ಕಟ್ಟುವ ಶುಲ್ಕದಲ್ಲಿ ರಿಯಾಯಿತಿ ಕೊಡಿಸಿದ್ದರು. ಮಕ್ಕಳಿಗೆ ಪಠ್ಯ ಪುಸ್ತಕಗಳು, ನೋಟ್ ಪುಸ್ತಕಗಳು ಶಾಲೆಯಿಂದಲೇ ಕೊಡಿಸುವಂತೆ ಏರ್ಪಾಟು ಮಾಡಿದ್ದರು. ಹೀಗೆ ಒಬ್ಬರಿಗೆ ಒಬ್ಬರು ಸಹಾಯಮಾಡುತ್ತ ಇಬ್ಬರೂ ಅನ್ಯೋನ್ಯ ವಾಗಿದ್ದರು. ಶೀಲಾಳ ಮನೆಯ ತೋಟ ನೋಡಲೆಂದೇ ಅನೇಕರು ಬರುತ್ತಿದ್ದರು. ಅವರಿಗೆಲ್ಲ ಸಾವಿತ್ರಿಯೇ ಸಲಹೆಕಾರಳಾಗಿದ್ದಳು. ಕೆಲವು ಮನೆಗಳಿಗೆ ತಾನೇ ಹೋಗಿ ಎಲ್ಲಿ ಯಾವ ಗಿಡ ಹಾಕಬೇಕು, ಹೇಗೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿ, ಸ್ವಘೋಷಿತ ಮಾಲಿ ಆಗಿಬಿಟ್ಟಿದ್ದಳು. ಕೆಲವರು ಅದಕ್ಕೆ ಹಣವನ್ನೂ ಕೊಡುತ್ತಿದ್ದರು. ಇದು ಹೀಗೆಯೇ ಬೆಳೆದು ಕಡೆಗೆ ಸಾವಿತ್ರಿಯನ್ನು ಒಬ್ಬ ಒಳ್ಳೆ ಕೈ ತೋಟದ ಪರಿಣತೆಯನ್ನಾಗಿ ಮಾಡಿ, ಅವಳ ಮುಂದಿನ ಜೀವನಕ್ಕೆ ನಾಂದಿ ಹಾಡಿತ್ತು.

ಇನ್ನು ಜಾನಕಿ ಮತ್ತು ಕಮಲಾ ಅವರ ಮನೆಯ ಅಡುಗೆಯ ಕೆಲಸ. ಸಾವಿತ್ರಿ ಬೆಳಿಗ್ಗೆ ೬ ಗಂಟೆಗೇ ಹೋಗಿ ಅವರ ಮನೆಯಲ್ಲಿ ಅಡುಗೆ ಮಾಡಿಟ್ಟು ಬರುತ್ತಿದ್ದಳು. ಮನೆಯಲ್ಲಿ ಮಕ್ಕಳಿಗೆ ಕೆಲವು ಅಡುಗೆ ಕೆಲಸ ಕಲಿಸಿದುದರಿಂದ, ಅವಳು ಬರುವ ವೇಳೆಗೆ ತರಕಾರಿ ಬೆಂದು ಅನ್ನ ಆಗಿರುತ್ತಿತ್ತು. ಅವಳು ಸಾರು ಅಥವಾ ಹುಳಿಯನ್ನು, ಜೊತೆಗೆ ಅಂದಿನ ತಿಂಡಿಯನ್ನು ಮಾಡಿ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಳು. ಪಕ್ಕದ ಮನೆಯ ಇಂದಿರಾಳ ಗಂಡ ಸಾವಿತ್ರಿಯ ಮಕ್ಕಳನ್ನು ತನ್ನ ಗಾಡಿಯಲ್ಲಿ ಬಿಡುತ್ತಿದ್ದ. ಹೀಗಾಗಿ ಸಾವಿತ್ರಿಗೆ ಸಮಯ ಉಳಿತಾಯವಾಗುತ್ತಿತ್ತು. ವಾರದಲ್ಲಿ ಒಂದೆರೆಡು ದಿನ ಕಮಲಾ ಮತ್ತು ಜಾನಕೀ ಅವರ ಬಲವಂತದಿಂದ ಅಲ್ಲಿನ ಅಡುಗೆಯನ್ನೇ ಮನೆಗೂ ತರುತ್ತಿದ್ದಳು. ಮನೆಯಲ್ಲಿ ಅನ್ನ ಒಂದನ್ನು ಸಿದ್ದ ಪಡಿಸಿದ್ದರೆ ಸಾಕಾಗುತ್ತಿತ್ತು. ಇಲ್ಲಿಯೂ ಸಹ ಸಾವಿತ್ರಿ ತನ್ನ ನಿಸ್ವಾರ್ಥ ಕೆಲಸದಿಂದ ಅವರ ಮನ ಗೆದ್ದಿದ್ದಳು. ಕಮಲಳಿಗೆ ತಂಗಿಯಾಗಿ, ಜಾನಕೀ ಅವರಿಗೆ ಮಗಳಾಗಿಬಿಟ್ಟಿದ್ದಳು.

ಗಂಡನನ್ನು ಕಳೆದುಕೊಂಡರೂ ಸಾವಿತ್ರಿ ತನ್ನ ನಿಷ್ಠೆಯ ಹಾಗೂ ನಿಸ್ವಾರ್ಥದ ದುಡಿತದಿಂದ ಎಲ್ಲರ ಮನ ಗೆದ್ದು ಇಂದು ಸಂತಸವಾಗಿದ್ದಾಳೆ. ಎಲ್ಲರಿಗೂ ಬೇಕಾಗಿದ್ದಾಳೆ. ಈಗ ಸುಮಾರು ವರ್ಷಗಳು ಕಳೆದಿವೆ. ಸಾವಿತ್ರಿಯ ಒಬ್ಬ ಮಗನನ್ನು ಜಾನಕೀ ಅವರ ಗಂಡನೇ ಮುತುವರ್ಜಿ ವಹಿಸಿ ವೈದ್ಯ ಶಿಕ್ಷಣ ಕೊಡಿಸಿದ್ದಾರೆ. ಇನ್ನೊಬ್ಬ ಮಗಳಿಗೆ ಇಂದಿರಾಳ ಮನೆಯವರೇ ಮುತುವರ್ಜಿ ವಹಿಸಿ ಇಂಜಿನಿಯರ್ ಓದಿಸಿ ಇಂದಿರಾಳ ತಮ್ಮನಿಗೇ ಮದುವೆ  ಮಾಡಿಕೊಟ್ಟಿದ್ದಾರೆ. ಈಗ ಕಮಲಾಳ ಮನೆಗೆ ಸಾವಿತ್ರಿಯ ಮನೆಯಿಂದಲೇ ಊಟ ಸರಬರಾಜಾಗುತ್ತಿದೆ. ಇತ್ತೀಚಿಗೆ ಜಾನಕೀ ಅವರ ಗಂಡ ಮರಣ ಹೊಂದಿರುವದರಿಂದ ಜಾನಕೀ ಒಬ್ಬರೇ ಆಗಿದ್ದಾರೆ. ಅವರ ಮನೆಯಲ್ಲಿ ಸಾವಿತ್ರಿಯ ಮಗಳೇ ಬಾಡಿಗೆಗೆ ಇದ್ದಾಳೆ. ಜಾನಕಿಯನ್ನು ಅಮ್ಮನಾಗಿ ಸ್ವೀಕರಿಸಿ, ಈಗ ಸಾವಿತ್ರಿಯೇ ಮಗಳಾಗಿ ತನ್ನ ಮನೆಯಲ್ಲಿಯೇ ನೋಡಿಕೊಳ್ಳುತ್ತಿದ್ದಾಳೆ. ಸಾವಿತ್ರಿಯ ಮಗಳು ಕೊಡುವ ಜಾನಕಿ ಅವರ ಮನೆಯ ಬಾಡಿಗೆಯ ದುಡ್ಡನ್ನ ನೀನೇ ಇಟ್ಟುಕೋ ಎಂದು ಜಾನಕಿ ಎಷ್ಟು ಬಲವಂತ ಮಾಡಿದರೂ ಸಾವಿತ್ರಿ ಅದನ್ನು ಜಾನಕೀ ಅವರ ಆರೋಗ್ಯಕ್ಕೆ ಇರಲಿ ಎಂದು ಅವರ ಖಾತೆಗೇ ಹಾಕುತ್ತಿದ್ದಾಳೆ. ಶೀಲಾಳ ಮನೆಯ ತೋಟ ಇನ್ನೂ ಸಾವಿತ್ರಿಯ ಆಡಳಿತದಲ್ಲೇ ಇದೆ. ಅದರಿಂದಾಗಿ ಸಾವಿತ್ರಿ ಇಂದು ಅನೇಕ ಮನೆಗಳ ತೋಟದ ಸಲಹೆಕಾರಳಾಗಿ ಕೆಲಸ ಮಾಡುತ್ತಿದ್ದಾಳೆ. ವಯಸಿದ್ದಿದ್ದರೆ ಕೈತೋಟದ ಒಂದು ಪದವಿಯನ್ನು ಗಳಿಸಬಹುದಿತ್ತು ಎಂದು ಅಂದುಕೊಳ್ಳುತ್ತಾಳೆ. ಶೀಲಾಳ ಮಗಳು ಈಗ ಸಾವಿತ್ರಿಗೆ ಸೊಸೆ ಆಗುವಳಿದ್ದಾಳೆ.

ಅಂತೂ ಸಾವಿತ್ರಿ ತನ್ನ ಗಂಡನನ್ನು ಕಳೆದುಕೊಂಡರೂ ತನ್ನ ಮನೆಯೊಂದಿಗೆ ಇತರ ನಾಲ್ಕು ಮನೆಯನ್ನೂ ಒಂದು ಮಾಡಿದಳು. ತಾನು ಮಾಡುವ ಕೆಲಸದ ಬಗ್ಗೆ ಎಂದೂ ಕೀಳರಿಮೆ ಪಡಲಿಲ್ಲ, ಇದಕ್ಕೆ ಮುಖ್ಯ ಕಾರಣ ಅವಳ ಶ್ರದ್ಧೆ, ಸ್ವಾಭಿಮಾನ, ನಿಷ್ಠೆ ಹಾಗೂ ಮಾನವೀಯತೆ. ಕಷ್ಟಕಾಲದಲ್ಲಿ ನೆರವಾದ ಅವರೆಲ್ಲರ ಹೃದಯದಲ್ಲಿ ನೆಲೆಸಿರುವ ಶಿವನನ್ನು ಅವಳು ಇಂದಿಗೂ ಸ್ಮರಿಸುತ್ತಾಳೆ. ಅವರೂ ಸಹ ಸಾವಿತ್ರಿಯ ಈ ಗುಣಗಳನ್ನು ಮೆಚ್ಚಿಕೊಂಡೇ ಇವಳೊಂದಿಗೆ ಸಂಬಂಧ ಬೆಳಿಸಿದ್ದಾರೆ. “ನಿಮ್ಮ ಕಷ್ಟಗಳೆಲ್ಲ ನೀಗುತ್ತದೆ, ನೀವೂ ಸಹ ನಿಮಗೆ ಸಾಧ್ಯವಾದ ಒಳ್ಳೆಯ ಕೆಲಸಮಾಡಿ, ಆ ಸೃಷ್ಟಿಕರ್ತ ಎಲ್ಲರನ್ನೂ ಚೆನ್ನಾಗಿಟ್ಟಿರಲಿ” ಎಂದು ಬರೆದ ಕಾಗದ ಸಾವಿತ್ರಿಗೆ ಸ್ಫೂರ್ತಿ ಕೊಟ್ಟಿತ್ತು.

ಹಿನ್ನುಡಿ: ಒಟ್ಟಿನಲ್ಲಿ ನಮ್ಮೆಲ್ಲರ ಹೃದಯದಲ್ಲೂ ಶಿವನಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿ ಸಾವಿತ್ರಿಯ ಬದುಕು ಒಂದು ಕಥೆಯಾಗಿದೆ, ಮಾದರಿಯೂ ಆಗಿದೆ, “ಶ್ರದ್ಧಾಹಿ ಪರಮಾ ಗತಿಃ” ಎಂಬ ವಾಕ್ಯವನ್ನು ನಿಜ ಮಾಡಿದೆ. “ಯಾವುದೇ ಕೆಲಸವನ್ನು ಮಾಡು, ಆದರೆ ಶ್ರದ್ಧೆ ಯಿಂದ, ನಿಷ್ಠೆಯಿಂದ, ಪ್ರಾಮಾಣಿಕವಾಗಿ, ಸಂತೋಷದಿಂದ ಮಾಡಿದರೆ ಖಂಡಿತ ಫಲ ನೀಡುತ್ತದೆ” ಎನ್ನುತ್ತಿದ್ದ ಸಾವಿತ್ರಿಯ ಗಂಡನ ಮಾತನ್ನು ಸಾವಿತ್ರಿ ಪ್ರತ್ಯಕ್ಷವಾಗಿ ಮಾಡಿ ತೋರಿಸಿದ್ದಾಳೆ, ಸಮಾಜದಲ್ಲಿ ಗೌರವ ಗಳಿಸಿದ್ದಾಳೆ. ಹಿಂದಿನ ಸಾವಿತ್ರಿ ಗಂಡನ್ನು ಉಳಿಸಿಕೊಂಡಳು, ಈ ಸಾವಿತ್ರಿ ಗಂಡನ ಮಾತನ್ನು ಉಳಿಸಿ ಆತ್ಮ ವಿಶ್ವಾಸದಿಂದ ಹೇಗೆ ಬದುಕಬಹುದು ಎಂದು ಮಾದರಿಯಾಗಿದ್ದಾಳೆ. 



Rate this content
Log in

Similar kannada story from Inspirational