ಉಡುಗೊರೆ!? - ರಾಮಮೂರ್ತಿ ಸೋಮನಹಳ್ಳಿ
ಉಡುಗೊರೆ!? - ರಾಮಮೂರ್ತಿ ಸೋಮನಹಳ್ಳಿ
*ಉಡುಗೊರೆ!!*
*ರಾಮಮೂರ್ತಿ ಸೋಮನಹಳ್ಳಿ*
ಗಂಡು ಮಗುವಿನ ನಿರೀಕ್ಷೆಯಲ್ಲೇ ಹೆರಿಗೆಗಾಗಿ ಆಸ್ಪತ್ರೆ ದಾಖಲಾಗಿದ್ದರು ವಿಶಾಲಾಕ್ಷಿ. ದೇವರೇ ಈ ಸಲವಾದರೂ ಗಂಡು ಮಗುವನ್ನು ಕರುಣಿಸು ಎಂದು ಕಂಡಕಂಡ ದೇವರಿಗೆ ಹರಕೆ ಹೊತ್ತಿದ್ದರು. ಗಂಡ ಸುಬ್ರಹ್ಮಣ್ಯ ಸಹ ಮನೆದೇವರಿಗೆ ಹರಕೆ ಹೊತ್ತು, ಹೆಂಡತಿಗೆ ಸಮಾಧಾನ ಹೇಳಿ, ಆಸ್ಪತ್ರೆಗೆ ಸೇರಿಸಿದ್ದರು. ಸರ್ಕಾರಿ ಆಸ್ಪತ್ರೆಯಾದ್ದರಿಂದ ಕನಿಷ್ಠ ಸೌಲಭ್ಯ, ಜನರಲ್ ವಾರ್ಡ್ನಲ್ಲಿ ಇದ್ದರು.
ನರ್ಸ್ ಬಂದು, "ನೀವಿನ್ನು ಹೊರಗೆ ಹೋಗಿ, ಹೆರಿಗೆ ವಾರ್ಡ್ಗೆ ಕರ್ಕೊಂಡು ಹೋಗಬೇಕು," ಎಂದಾಗ ಮೌನದಿಂದಲೇ ಹೊರಗೆ ಬಂದಿದ್ದರು ಸುಬ್ರಹ್ಮಣ್ಯ. ಮಗಳಿಗೆ ಬಾಣಂತನ ಮಾಡಲು ಬಂದಿದ್ದ ಗೌರಮ್ಮ ಸಹ ಮಗಳಿಗೆ ಧೈರ್ಯ ಹೇಳಿ ಅಳಿಯನನ್ನು ಹಿಂಬಾಲಿಸಿದ್ದರು.
"ದೇವರು ಈ ಸಲವಾದರೂ ಗಂಡು ಮಗು ಕರುಣಿಸಿದರೆ ಸಾಕು, ಜನರ ನಿಂದನೆ ಕೇಳಿ, ಕೇಳಿ ಸಾಕಾಗಿದೆ," ತಮ್ಮ ಅಳಲು ತೋಡಿಕೊಂಡರು ಗೌರಮ್ಮ. ಹಾಗೆ ದುಃಖಿಸಲು ಕಾರಣವೂ ಇತ್ತು. ಊರಿನ ಜನ, "ಏನು ಗೌರಮ್ಮ, ನಿಮ್ಮ ಹಣೆ ಬರಹದಲ್ಲಿ ಗಂಡು ಪಿಳ್ಳೆಗೆ ಬಾಣಂತನ ಮಾಡುವ ಅದೃಷ್ಟಾನೆ ಇಲ್ಲ ಅನ್ಸುತ್ತೆ," ಎಂದು ಕೊಂಕು ನುಡಿದಾಗ ಇನ್ನಿಲ್ಲದ ನೋವು ಆಗುತ್ತಿತ್ತು! ಕಣ್ಣೀರು ಹಾಕಿ, ತನ್ನ ಮಗಳಿಗೆ ಗಂಡು ಸಂತಾನ ಕರುಣಿಸು ಎಂದು ದೇವರಲ್ಲಿ ಬೇಡಿಕೊಂಡಿದ್ದರು.
ಹೆರಿಗೆ ಸುಸೂತ್ರವಾಗಿ ಆಗಿತ್ತು. ಒಳಗಿನಿಂದ ಬಂದ ನರ್ಸ್, "ಹೆರಿಗೆ ಆಯಿತು. ತಾಯಿ, ಮಗು ಆರೋಗ್ಯವಾಗಿದ್ದಾರೆ," ಎಂದಾಗ ಸಮಾಧಾನವಾದರೂ, ಕುತೂಹಲ ತಣಿದಿರಲಿಲ್ಲ. ಗೌರಮ್ಮ ತಮ್ಮ ಕುತೂಹಲ ಹಿಡಿದಿಡಲಾಗದೆ "ಎಂತಹ ಮಗು, ನಾವು ಹೋಗಿ ನೋಡಬಹುದಾ?" ಕೇಳಿದರು. ಸುಬ್ರಹ್ಮಣ್ಯ ಸಹ ಎಂತಹ ಮಗು ಎಂದು ತಿಳಿಯಲು ಆಸಕ್ತರಾಗಿದ್ದರು.
"ಹೋಗಿ ನೋಡಿ," ಎಂದಷ್ಟೇ ಹೇಳಿದ ನರ್ಸ್ ಅನ್ಯ ಕಾರ್ಯದ ನಿಮಿತ್ತ ಆತುರಾತುರವಾಗಿ ಹೊರಟುಹೋದರು.
ಗೌರಮ್ಮ ಅಳಿಯನ ಮುಖ ನೋಡಿದರು. ಸುಬ್ರಹ್ಮಣ್ಯ ಅವರಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ.
"ಬನ್ನಿ ಅತ್ತೆ, ಹೋಗಿ ನೋಡೋಣ," ಎಂದು ವಾರ್ಡಿನತ್ತ ಹೊರಟರು. ಗೌರಮ್ಮ ಮರುಮಾತಾಡದೆ ಅಳಿಯನನ್ನು ಹಿಂಬಾಲಿಸಿದರು.
ಹಾಸಿಗೆ ಮೇಲೆ ಮಲಗಿದ್ದ ವಿಶಾಲು ಅವರ ಪಕ್ಕದಲ್ಲಿ, ಬಟ್ಟೆಯಿಂದ ಸುತ್ತಿದ್ದ ಮಗು ಸಹ ಮಲಗಿತ್ತು. ಹಾಸಿಗೆ ಬಳಿ ಹೋಗಿ ನಿಂತ ಸುಬ್ರಹ್ಮಣ್ಯ, ಹೆಂಡತಿಯ ತಲೆ ಮೇಲೆ ಕೈ ಆಡಿಸಿ, "ವಿಶಾಲು," ಎಂದು ಸಣ್ಣ ಧ್ವನಿಯಲಿ ಕರೆದರು. ಗಂಡನ ಧ್ವನಿ ಕೇಳಿ ನಿಧಾನವಾಗಿ ಕಣ್ತೆರೆದು ನೋಡಿ, ದುಃಖಿಸುತ್ತಾ, "ಕ್ಷಮಿಸಿ, ಈ ಸಲವೂ ಹೆಣ್ಣು ಮಗು, ನಿಮ್ಮ ಆಸೆ ಪೂರೈಸಲು ಆಗಲಿಲ್ಲ," ಎಂದು ಕಣ್ಣೀರು ಹಾಕಿದರು. ಹೆಂಡತಿಯ ಮಾತು ಕೇಳಿ, ಸುಬ್ರಹ್ಮಣ್ಯ ಅವರಿಗೆ ನಿಂತ ನೆಲವೇ ಕುಸಿದು ಹೋಯಿತು. ಆಕಾಶವೇ ತಲೆ ಮೇಲೆ ಬಿದ್ದ ಅನುಭವವಾಯಿತು. ಯಾವುದೇ ಭಾವನೆ ವ್ಯಕ್ತಪಡಿಸದೆ ಮೌನವಾಗಿ ಕುಳಿತರು. ಗೌರಮ್ಮ ಸಹ ತಲೆ ಮೇಲೆ ಕೈ ಹೊತ್ತು ಕುಳಿತರು.
ಸುಬ್ರಹ್ಮಣ್ಯ ಬರಗೂರು ಗ್ರಾಮದಲ್ಲಿ ವಾಸವಾಗಿದ್ದರು. ಮೂರು ಎಕರೆ ಹೊಲ, ಒಂದು ಮನೆ ಇತ್ತು. ಜೊತೆಗೆ ಒಂದೆರಡು ಹಸುಗಳು. ಸಂಪ್ರದಾಯಸ್ಥರ ಕುಟುಂಬ. ಪಕ್ಕದ ಊರಿನ ವಿಶಾಲಾಕ್ಷಿ ಜೊತೆ ಮದುವೆ ಆಗಿತ್ತು. ಮದುವೆ ಆದ ಮೂರು ವರ್ಷದಲ್ಲೇ ಅಪ್ಪ, ಅಮ್ಮನನ್ನು ಕಳೆದುಕೊಂಡಿದ್ದರು. ಕಷ್ಟಕಾಲದಲ್ಲಿ ಅತ್ತೆ ಗೌರಮ್ಮ ಬಂದು ಸಹಾಯ ಮಾಡುತ್ತಿದ್ದರು.
ಮದುವೆಯಾಗಿ ಐದು ವರ್ಷವಾದರೂ ಸಂತಾನ ಭಾಗ್ಯವಿರಲಿಲ್ಲ. ಆಗಲೇ ಊರಿನವರ ಬಾಯಿಗೆ ಆಹಾರವಾಗಿದ್ದರು ವಿಶಾಲು. "ಅವಳ ಹೊಟ್ಟೇಲಿ ಹುಳು ಸಹ ಹುಟ್ಟಿಲ್ಲ," ಎಂಬ ಮೂದಲಿಕೆ ಕೇಳಿ ನೊಂದಿದ್ದರು ದಂಪತಿಗಳು. ತನ್ನ ಮಗಳ ಬದುಕು ಮೂರಾಬಟ್ಟೆಯಾಯಿತಲ್ಲ ಎಂದು ಕಣ್ಣೀರು ಹಾಕುತ್ತಿದ್ದರು ತಾಯಿ ಗೌರಮ್ಮ. ಪಕ್ಕದ ಬಸವಾಪಟ್ಟಣ ಗ್ರಾಮದ ಜ್ಯೋತಿಷಿಯನ್ನು ಸಂಪರ್ಕಿಸಿದಾಗ, ನಾಗಪ್ರತಿಷ್ಠೆ ಮಾಡಿ, ಸಂತಾನ ಪ್ರಾಪ್ತಿ ಆಗುತ್ತೆ, ಎಂಬ ಸಲಹೆ ನೀಡಿದ್ದರು.
ಮೊದಲೇ ಬಡತನ. ನಾಗಪ್ರತಿಷ್ಠೆಯೇ? ಹೆಂಡತಿ ಮತ್ತು ಅತ್ತೆಯ ಒತ್ತಾಯಕ್ಕೆ ಮಣಿದು, ನಾಗಪ್ರತಿಷ್ಠೆ ಮಾಡಿದರು. ಯೋಗಾಯೋಗ, ಅದೇ ವರ್ಷದಲ್ಲಿ ವಿಶಾಲು ಗರ್ಭಧರಿಸಿ ಹೆಣ್ಣು ಮಗುವಿಗೆ ಜನ್ಮವಿತ್ತರು. ಇನ್ನಿಲ್ಲದ ಸಂತಸ ಮನೆಯಲ್ಲಿ ಆವರಿಸಿತು. ಲಕ್ಷ್ಮೀ ಮನೆಗೆ ಬಂದಿದ್ದಾಳೆ ಎಂಬ ಭಾವನೆ! ' ಲಕ್ಷ್ಮೀ' ಎಂದೇ ನಾಮಕರಣ ಮಾಡಿ ಸಂಭ್ರಮಿಸಿದ್ದರು. ಆದರೆ ಈ ಸಂತಸ ತುಂಬಾ ವರ್ಷ ಉಳಿಯಲಿಲ್ಲ. ಒಂದರ ಮೇಲೊಂದರಂತೆ ನಾಲ್ಕು ಮಕ್ಕಳಿಗೆ ಜನ್ಮವಿತ್ತರು. ಮನೆಯಲ್ಲಿ ಈಗ ಐದು ಜನ ಹೆಣ್ಣು ಮಕ್ಕಳು. ಮೊದಲೇ ಬಡತನ. ಜೊತೆಗೆ ಐದು ಜನ ಹೆಣ್ಣುಮಕ್ಕಳು! ಅವರ ವಿದ್ಯಾಭ್ಯಾಸ, ಬೆಳೆದಂತೆ ಮದುವೆ! ಭವಿಷ್ಯ ನೆನೆದು ಕಂಗಾಲಾದರು ದಂಪತಿಗಳು! ಮೊದಲೇ ಸಂಪ್ರದಾಯಸ್ಥರಾದ ಸುಬ್ರಹ್ಮಣ್ಯ ಅವರಿಗೆ ಗಂಡು ಮಗುವಿಲ್ಲ ಎಂಬ ಚಿಂತೆ ಕಾಡುತ್ತಿತ್ತು. ಇದಕ್ಕೆ ಗೌರಮ್ಮ ಸಹ ಪುಷ್ಟಿ ನೀಡಿದ್ದರು.
"ನನ್ನ ಮಗಳಿಗೆ ಗಂಡು ಮಗುವಿನ ಯೋಗ ಇದೆ, ಆಗೇ ಆಗುತ್ತೆ, ಮನೆ ದೇವರಿಗೆ ಹರಕೆ ಹೊತ್ತಿದ್ದೇನೆ," ಎಂದು ಹುರಿದುಂಬಿಸಿದರು.
ಆರನೇ ಬಾರಿಗೆ ವಿಶಾಲ್ ಗರ್ಭಿಣಿಯಾದಾಗ ಎಲ್ಲರೂ ಗಂಡು ಮಗುವಿನ ನಿರೀಕ್ಷೆಯಲ್ಲೇ ಇದ್ದರು. ಆದರೆ, ವಿಧಿ ಬೇರೆಯೇ ಬರೆದಿತ್ತು. ಈಗಲೂ ಹೆಣ್ಣು ಮಗು!
ಆಸ್ಪತ್ರೆಯಿಂದ ಮನೆಗೆ ಬಂದರೂ ಉತ್ಸಾಹವಿರಲಿಲ್ಲ. ಊರಿನವರು, ಬಾಯಿ ಮಾತಿಗೆ ಸಮಾಧಾನದ ಮಾತಾಡುತ್ತಿದ್ದರೂ, ಬೆನ್ನ ಹಿಂದೆ ಕೊಂಕು ನುಡಿಯುತ್ತಿದ್ದರು. ಇದು ವಿಶಾಲು ಅವರ ಕಿವಿಗೂ ಬೀಳುತ್ತಿತ್ತು! ನೊಂದು ಕಣ್ಣೀರು ಹಾಕುತ್ತಿದ್ದರು.
ಅದೇ ಊರಿನಲ್ಲಿ, ವಿಶಾಲು ಅವರ ಅಕ್ಕ ಸರಸ್ವತಿ ಇದ್ದರು. ಊರಿನಲ್ಲೇ ಶ್ರೀಮಂತರು ಎಂಬ ಹೆಸರಿತ್ತು. ಅವರ ಗಂಡ ನರಸಿಂಹಮೂರ್ತಿ ಊರಿನ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಧನ ಸಹಾಯ ಮಾಡುತ್ತಿದ್ದ ಕಾರಣ, ಅವರಿಗೆ ವಿಶೇಷ ಗೌರವ, ಸ್ಥಾನಮಾನವಿತ್ತು.
ತಂಗಿ ವಿಶಾಲು ಆಸ್ಪತ್ರೆಯಿಂದ ಮನೆಗೆ ಬಂದ ವಿಷಯ ತಿಳಿದಿದ್ದರೂ, ಮಗು ಬಾಣಂತಿ ನೋಡಲು ಹೋಗಿರಲಿಲ್ಲ ಸರಸ್ವತಿ. ಆದರೆ ನಾಮಕರಣದ ದಿನ ವಿಧಿಯಿಲ್ಲದೆ ಬಂದರು. ಇದು ವಿಶಾಲುಗೆ ತೀರಾ ಇರಸುಮುರಸುಂಟು ಮಾಡಿತ್ತು. ಕಾರಣ ಅಕ್ಕನ ಮೂದಲಿಕೆ. ಬಂದಾಗಲೆಲ್ಲ ಕೊಂಕು ನುಡಿದೇ ಹೋಗುತ್ತಿದ್ದಳು. "ಸ್ವಲ್ಪಾನೂ ಬುದ್ದಿ ಬೇಡ್ವಾ? ಹಂದಿ ತರಹ ಹೆರ್ತಾ ಇದ್ರೆ, ಸಾಕೋದು ಬೇಡ್ವಾ? ಯೋಚನೆ ಮಾಡು," ಎಂದು ಹಲವಾರು ಬಾರಿ ಎಚ್ಚರಿಸಿದ್ದಳು.
ಸರಸ್ವತಿ ಮತ್ತು ನರಸಿಂಹಮೂರ್ತಿ ಮನೆಗೆ ಬಂದಾಗ, ಸುಬ್ರಹ್ಮಣ್ಯ ಮನೆಯಲ್ಲೇ ಇದ್ದರು. ಗಂಡ ಹೆಂಡತಿಯನ್ನು ಕುಳಿತುಕೊಳ್ಳಲು ಹೇಳಿ, ಹೆಂಡತಿಯನ್ನು ಕರೆದರು.
ಮಗು ಸಮೇತ ಹೊರಗೆ ಬಂದ ವಿಶಾಲುವನ್ನು ನೋಡಿದ ಕೂಡಲೇ, "ಈ ಸಲವೂ ಹೆಣ್ಣೇ ಹೆತ್ಯಂತೆ! ಬೇಕಿತ್ತಾ ನಿಂಗೆ? ಆಪರೇಷನ್ ಮಾಡಿಸ್ಕೋ ಅಂತ ಸಾವಿರ ಸಲ ಬೊಗಳಿದ್ದೀನಿ, ನಿನ್ನ ಹಠ ಬಿಡೋದಿಲ್ಲ," ಮೂದಲಿಸಿದರು ಸರಸ್ವತಿ.
"ಹೌದೌದು, ಸರಸು ಹೇಳೋದ್ರಲ್ಲೂ ಅರ್ಥವಿದೆ, ಮಕ್ಕಳನ್ನು ಹೆರೋದು ಮುಖ್ಯವಲ್ಲ. ಅವರಿಗೆ ಸಂಸ್ಕಾರ ಕೊಟ್ಟು, ಲೌಕಿಕ ವಿದ್ಯಾಭ್ಯಾಸ ಮಾಡಿಸಿ, ಜೀವನ ರೂಪಿಸಿಕೊಡೋದು ಮುಖ್ಯ! ಪ್ರಾಣಿಗಳ ರೀತಿ ಮರಿ ಹಾಕಿ ಬೀದಿಯಲ್ಲಿ ಬಿಡೋದಿಕ್ಕೆ ಆಗೋಲ್ಲ ಅಲ್ವೇ," ಎಂದು ಹೆಂಡತಿ ಮಾತಿಗೆ ತಾಳಹಾಕಿ ನಕ್ಕಿದ್ದರು ನರಸಿಂಹಮೂರ್ತಿ.
ಅಕ್ಕ, ಭಾವನ ಮಾತು ಕೇಳಿ ಕೋಪ ಉಕ್ಕಿ ಬಂತಾದರೂ, 'ಬಡವನ ಕೋಪ ದವಡೆಗೆ ಮೂಲ' ಎಂದು ಅರಿತಿದ್ದ ವಿಶಾಲು ಮರು ಮಾತಾಡಲಿಲ್ಲ.
ನಾಮಕರಣ ಶಾಸ್ತ್ರ ಮುಗಿಯಿತು. ಸೌಪರ್ಣಿಕಾ ಎಂದು ನಾಮಕರಣ ಮಾಡಿದ್ದರು. ಊಟ ಮುಗಿಸಿ ಮನೆಗೆ ಸರಸ್ವತಿ ಗಂಡನ ಜೊತೆ ಹೊರಡುವಾಗ,
"ತಗೋ, ಮಗೂಗೆ ಬೆಚ್ಚಗೆ ಬಟ್ಟೆ ಹಾಕಲು, ಕಿರಣನಿಗೆ ಹಾಕುತ್ತಿದ್ದ ಬಟ್ಟೆ ತಂದಿದ್ದೀನಿ," ಎಂದು ತನ್ನ ಮಗನಿಗೆ ಹಾಕುತ್ತಿದ್ದ ಹಳೆಯ ಬಟ್ಟೆ ಕೊಟ್ಟು, ಕೈಗೆ ಐವತ್ತು ರೂಪಾಯಿ ಕೊಟ್ಟು ಹೋಗಿದ್ದಳು. ಹೋಗುವಾಗ ಎಚ್ಚರಿಕೆ ಸಹ ನೀಡಿದ್ದಳು.
"ನೋಡು ವಿಶಾಲು, ನನ್ನ ಗಂಡ ಉದಾರವಾಗಿ ಕೊಡ್ತಾರೆ ಅಂತ ಪದೇ ಪದೆ ಬಂದು ಕೇಳ್ಬೇಡಿ, ಹಳೆಯ ಸಾಲವನ್ನೇ ಇನ್ನೂ ಕೊಟ್ಟಿಲ್ಲ," ಎಂದು ಹೇಳಿ ಹೋಗಿದ್ದರು.
ಸಂಪ್ರದಾಯದ ಕುಣಿಕೆಯಲ್ಲಿ ಸಿಲುಕಿ, ವಿಶಾಲು ಮತ್ತು ಸುಬ್ರಹ್ಮಣ್ಯ ಕಷ್ಟಗಳನ್ನು ಮೈಮೇಲೆ ಎಳೆದುಕೊಂಡಿದ್ದರು.
"ಅಪುತ್ರಸ್ಯ ಗತಿರ್ನಾಸ್ತಿ ನ ಚ ಸ್ವರ್ಗಂ ಪ್ರಪದ್ಯತೇ । ಪೈತೃಕೇಣ ನರೋ ಗ್ರಸ್ತೋ ಯ ಋಣೇನ ಸದಾ ನೃಪ ||
ಈ ಶ್ಲೋಕದ ಅರ್ಥವನ್ನು ಅರೆಬರೆ ಜ್ಞಾನದ ಪಂಡಿತರು ತಪ್ಪಾಗಿ ತಿಳಿಸಿಕೊಟ್ಟಿದ್ದರು. ಗಂಡು ಮಗನಿಂದಲೇ ಮೋಕ್ಷ ದೊರಕುತ್ತದೆ, ಗಂಡು ಸಂತಾನವಿಲ್ಲದೆ ಪಿತೃ ಋಣ ತೀರಿಸಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆ ಸುಬ್ರಹ್ಮಣ್ಯ ಮತ್ತು ವಿಶಾಲಾಕ್ಷಿ ಅವರ ಮನದಲ್ಲಿ ಬಲವಾಗಿ ಬೇರೂರಿತ್ತು.
ಪುತ್ರ ಎಂದರೆ ಮಕ್ಕಳು. ಹೆಣ್ಣು- ಗಂಡು ಸಂತಾನ ಎಂಬ ಬೇಧಭಾವ ಸರಿಯಲ್ಲ, ಪಿತೃ ಋಣ ತೀರಿಸಲು ಇಬ್ಬರಿಗೂ ಅಧಿಕಾರವಿದೆ. ಜಟಾಯು, ಶಬರಿಗೆ ಭವಂತನೇ ಮೋಕ್ಷ ಕರುಣಿಸಿದ. ಭೀಷ್ಮರಿಗೆ ಅವರ ದಿವ್ಯ ಜ್ಞಾನವೇ ಮೋಕ್ಷದ ದಾರಿ ತೋರಿಸಿತು. ನೂರೊಂದು ಜನ ಮಕ್ಕಳಿದ್ದರೂ ಧೃತರಾಷ್ಟ್ರನಿಗೆ ಕರ್ಮ ಮಾಡಲು ಒಬ್ಬನೂ ಉಳಿಯಲಿಲ್ಲ. ದಶರಥ ಮರಣ ಹೊಂದಿದಾಗ ಗಂಡು ಮಕ್ಕಳು ಸಮೀಪದಲ್ಲಿ ಇರಲಿಲ್ಲ. ಹೀಗಿರುವಾಗ ನಾವು ಹುಲು ಮಾನವರು! ಭಗವಂತನ ಸಾನ್ನಿದ್ಯ ಪಡೆಯಲು ಭಕ್ತಿ ಮಾರ್ಗದಲ್ಲಿ ಸಾಗಿದರೆ ಸಾಕು, ಎಂದು ವೇ.ಬ್ರ.ಶ್ರೀ ಶೇಷಾವಧಾನಿಗಳು ತಿಳುವಳಿಕೆ ನೀಡಿದ್ದರೂ, ನಂಬದ ಸುಬ್ರಹ್ಮಣ್ಯ ದಂಪತಿಗಳು ಅಕ್ಷರ ಸಹ ಕಷ್ಟಕ್ಕೆ ಸಿಲುಕಿದ್ದರು. ಆರು ಜನ ಹೆಣ್ಣು ಮಕ್ಕಳ ಜೀವನ ಕಟ್ಟಿ ಕೊಡುವ ಕಠಿಣ ಸವಾಲು ಅವರ ಮುಂದಿತ್ತು. ಮಳೆಯ ಆಶ್ರಯದಲ್ಲಿ ಮೂರು ಎಕರೆ ಹೊಲದಲ್ಲಿ ಜೀವನ ಸಾಗಿಸಬೇಕಿತ್ತು. ಎಷ್ಟು ಸಾಲ ಮಾಡುವುದು? ಸಾಲ ಕೊಟ್ಟವರು ಸುಮ್ಮನೆ ಇರುತ್ತಾರಾ? ಬಡತನದ ಬೇಗುದಿ ಕಾಡುತ್ತಿತ್ತು. ಜೊತೆಗೆ ನೆಂಟರಿಷ್ಟರ ಅಸಡ್ಡೆ, ಅಗೌರವ! ತಮ್ಮ ಮಕ್ಕಳನ್ನು ತಾತ್ಸಾರದಿಂದ ನೋಡುತ್ತಿದ್ದರು. ಅಕ್ಕ ಸರಸ್ವತಿ ಅವರ ಮಕ್ಕಳಿಗೆ ಇನ್ನಿಲ್ಲದ ಗೌರವ.
ಊರಿನ ಜಾತ್ರಾ ಮಹೋತ್ಸವದಲ್ಲೂ ಸರಸ್ವತಿ, ನರಸಿಂಹ ಮೂರ್ತಿಯದೆ ಕಾರುಬಾರು. ಅವರು ಬಂದು ಪೂಜೆ ಮಾಡಿ, ಪ್ರಸಾದ ಸ್ವೀಕರಿಸಿದ ನಂತರವೇ ಉತ್ಸವಕ್ಕೆ ಚಾಲನೆ ದೊರೆಯುತ್ತಿತ್ತು.
ಸೌಪರ್ಣಿಕಾ ಬೆಳೆದು ದೊಡ್ಡವಳಾಗಿದ್ದಳು. ಓದಿನಲ್ಲೂ ಚುರುಕು. ಶಾಲೆಯಲ್ಲಿ ಒಳ್ಳೆಯ ಹೆಸರಿತ್ತು. ಆಗಿನ್ನೂ ಐದನೆ ತರಗತಿಯಲ್ಲಿ ಕಲಿಯುತ್ತಿದ್ದಳು. ಹನ್ನೊಂದು ವರ್ಷದ ಮಗು. ಊರಿನ ಜಾತ್ರೆ ನೋಡಲು, ಅಪ್ಪ, ಅಮ್ಮ, ಅಕ್ಕಂದಿರ ಜೊತೆ ಹೋಗಿದ್ದಳು. ಎಂದಿನಂತೆ ಉತ್ಸವದ ಚಾಲನೆಗೆ ಸರಸ್ವತಿ ಮತ್ತು ನರಸಿಂಹಮೂರ್ತಿ ದಂಪತಿಗಳು ಬಂದು ಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸುವಾಗ, ಹಸಿವಿನ ಬಾಧೆ ತಾಳಲಾರದ ಸೌಪರ್ಣಿಕಾ, ಓಡಿ ಹೋಗಿ ಪ್ರಸಾದಕ್ಕೆ ಕೈಚಾಚಿದಳು, "ಒಂದ್ನಿಮಿಷ ತಡಿ ಮಗು! ಇವರಿಗೆ ಮೊದಲು ಕೊಟ್ಟು ನಂತರ ಕೊಡ್ತೇನೆ," ಎಂದ ಪುರೋಹಿತರು, ನರಸಿಂಹಮೂರ್ತಿ ಮತ್ತು ಅವರ ಮಕ್ಕಳಿಗೆ ಪ್ರಸಾದ ನೀಡಲು ಮುಂದಾದರು. ತನ್ನ ತಂಗಿ ಮಗಳು ತಮಗಿಂತ ಮೊದಲೇ ಪ್ರಸಾದ ಸ್ವೀಕರಿಸಲು ಮಂದಾಗಿದ್ದನ್ನು ಸಹಿಸದ ಸರಸ್ವತಿ, ಸೌಪರ್ಣಿಕಾಳನ್ನು ರಭಸದಿಂದ ಎಳೆದು ಹಿಂದಕ್ಕೆ ದೂಡಿ, "ವಿಶಾಲು, ನಿನ್ನ ಮಗಳಿಗೆ ಬುದ್ಧಿ ಇಲ್ಲಾಂದ್ರೆ ನಿಂಗೂ ಬುದ್ಧಿ ಬೇಡ್ವಾ?" ಎಂದು ಗುರಾಯಿಸಿದ್ದರು. ಈ ಘಟನೆ ಸೌಪರ್ಣಿಕಾಳನ್ನು ಕಾಡುತ್ತಿತ್ತು.
ಹಿರಿಯ ಮಗಳು ಲಕ್ಷ್ಮಿಯ ಮದುವೆ ಮಾಡಲು ಮತ್ತು ಉಳಿದ ಮಕ್ಕಳ ವಿದ್ಯಾಭ್ಯಾಸದ ಖರ್ಚು ಭರಿಸಲು ಉಪಾಯವಿಲ್ಲದೆ ಇದ್ದ ಮೂರು ಎಕರೆ ಜಮೀನು ಮತ್ತು ಮನೆ ಮಾರಿ ಮೈಸೂರು ಸೇರಿಕೊಂಡರು ಸುಬ್ರಹ್ಮಣ್ಯ ದಂಪತಿಗಳು.
ಮೈಸೂರಿನಲ್ಲಿ ಒಂದು ಅಂಗಡಿಯಲ್ಲಿ ಲೆಕ್ಕ ಬರೆಯುವ ಕೆಲಸಕ್ಕೆ ಸುಬ್ರಹ್ಮಣ್ಯ ಸೇರಿದರೆ, ಒಂದು ಹಾಸ್ಟೆಲ್ ನಲ್ಲಿ ಅಡುಗೆ ಕೆಲಸಕ್ಕೆ ಸೇರಿದರು ವಿಶಾಲಾಕ್ಷಿ.
ಕಷ್ಟ ಕಾಲಕ್ಕೆ ನೆರವಾಗುತ್ತಿದ್ದ ಗೌರಮ್ಮ ಸಹ ಕೊನೆ ಉಸಿರು ಎಳೆದಿದ್ದರೂ. ಊರಿನ ವ್ಯಾಮೋಹ ಇರಲಿಲ್ಲ. ಮೂದಲಿಸುವ ನೆಂಟರಿಷ್ಟರಿಂದ ದೂರವಿರಲು ಬಯಸಿದ್ದ ಸುಬ್ರಹ್ಮಣ್ಯ ದಂಪತಿಗಳು ಬಂಧು ಬಳಗದ ಸಂಪರ್ಕವನ್ನೇ ಕಡಿದುಕೊಂಡಿದ್ದರು!
ಮಕ್ಕಳ ವಿದ್ಯಾಭ್ಯಾಸ ಅಡ್ಡಿ ಆತಂಕವಿಲ್ಲದೆ ಮುಗಿದಿತ್ತು. ಸರ್ಕಾರಿ ಶಾಲಾ ಕಾಲೇಜೀನಲ್ಲೇ ಶಿಕ್ಷಣ ಮುಗಿಸಿ, ಶಿಕ್ಷಕರಾಗಿ, ಬ್ಯಾಂಕ್ ಉದ್ಯೋಗಿಯಾಗಿ, ಸರ್ಕಾರಿ ನೌಕರರಾಗಿ ಕೆಲಸ ಗಿಟ್ಟಿಸಿಕೊಂಡಿದ್ದರು. ಅಪ್ಪ, ಅಮ್ಮನ ಕಷ್ಟ ಅರಿತಿದ್ದ ಮಕ್ಕಳು ಸಂಸಾರ ಸರಿದೂಗಿಸಲು ನೆರವಾಗಿದ್ದರು. ಮಕ್ಕಳ ಯಶಸ್ಸು ಕುರಿತು ಎದೆಯುಬ್ಬಿಸಿ ಅವರಿವರ ಬಳಿ ಹೇಳಿಕೊಳ್ಳುತ್ತಿದ್ದರು. ಏನೇ ಆದರೂ ತಾನು ಹೊಲ ಮಾರಿ ತಪ್ಪು ಮಾಡಿದೆ, ಅಪ್ಪ ಅಮ್ಮನ ನೆನಪಿಗಾಗಿ ಏನೂ ಇಲ್ಲದಹಾಗೆ ಮಾಡಿಬಿಟ್ಟೆ ಎಂದು ಕೊರಗುತ್ತಿದ್ದರು ಸುಬ್ರಹ್ಮಣ್ಯ.
ಸೌಪರ್ಣಿಕಾ, ಬಿಎಸ್ಸಿ ಪದವಿಯನ್ನು ಉನ್ನತ ದರ್ಜೆಯಲ್ಲಿ ಮುಗಿಸಿದ್ದಳು. ಬ್ಯಾಂಕಿನಲ್ಲಿ ಗುಮಾಸ್ತರ ಕೆಲಸ ಸಹ ಸಿಕ್ಕಿತ್ತು. ಆದರೆ ಕೆಲಸಕ್ಕೆ ಹೋಗಲು ನಿರಾಕರಿಸಿದಳು ಸೌಪರ್ಣಿಕ.
"ನಿನಗೆ ಬುದ್ಧಿ ಇದೆಯಾ? ನಿಮ್ಮ ಭವಿಷ್ಯಕ್ಕಾಗಿ ಇದ್ದ ಹೊಲವನ್ನೂ ಮಾರಿ, ನಾನು, ಅಮ್ಮ ಹೊಟ್ಟೆಬಟ್ಟೆ ಕಟ್ಟಿ ಕಷ್ಟಪಟ್ಟಿದ್ದೀವಿ. ದೇವರ ದಯೆಯಿಂದ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿದೆ, ಹೋಗೋದು ಬಿಟ್ಟು, ಬೇಡಾ ಅಂತಿಯಲ್ಲ? ನಿಂಗೆ ನಮ್ಮ ಪರಿಸ್ಥಿತಿ ಅರ್ಥ ಆಗೋಲ್ವಾ? " ಆಕ್ಷೇಪಿಸಿ ಮಗಳಿಗೆ ತಿಳುವಳಿಕೆ ನೀಡಿದರು ಸುಬ್ರಹ್ಮಣ್ಯ. ತಾಯಿ ಸಹ ಮಗಳಿಗೆ ಕೆಲಸಕ್ಕೆ ಹೋಗಲು ಒತ್ತಾಯಿಸಿದರು. ಅಕ್ಕಂದಿರ ಮಾತಿಗೂ ಮನ್ನಣೆ ಸಿಗಲಿಲ್ಲ.
"ನಾನು ಈ ಗುಮಾಸ್ತರ ಕೆಲಸಕ್ಕೆ ಹೋಗೋದಿಲ್ಲ. ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಗೌರವ ಸಿಗಬೇಕಾದ್ರೆ ಉನ್ನತ ಹುದ್ದೆಗೆ ಹೋಗಬೇಕು," ಹಠ ಹಿಡಿದಳು ಸೌಪರ್ಣಿಕಾ.
ಒಂದು ದೃಷ್ಟಿಯಲ್ಲಿ ತಂಗಿಯ ಹಠ ಸರಿ ಎನಿಸಿತು. ಸಣ್ಣ ಪುಟ್ಟ ಉದ್ಯೋಗ ಮಾಡಿಕೊಂಡು ಗೌರವಯುತ ಜೀವನ ನಡೆಸಲು ಅಡ್ಡಿಯಿಲ್ಲ, ಆದರೆ ಗಣ್ಯ ವ್ಯಕ್ತಿ ಎನಿಸಿಕೊಳ್ಳಲು ಹಣ ಇರಬೇಕು, ಅಧಿಕಾರವೂ ಇರಬೇಕು ಎಂಬ ತಂಗಿಯ ವಾದ ಸರಿ ಎನಿಸಿತು.
"ಅಪ್ಪ, ಸೌಪರ್ಣಿಕಾ ನಮಗೆಲ್ಲರಿಗಿಂತಲೂ ಚುರುಕು. ಅವಳಿಗೆ ಛಲ, ಧೈರ್ಯ ಇದೆ, ನಮಗೂ ಸಂಬಳ ಬರುತ್ತೆ, ಮೊದಲಿನ ಹಾಗೆ ಕಷ್ಟವಿಲ್ಲ, ಅವಳು ಏನು ಮಾಡಬೇಕೋ ಅದನ್ನು ಮಾಡಲಿ. ನಾವು ಪ್ರೋತ್ಸಾಹ ಕೊಡೋಣ, ಖರ್ಚಿನ ಬಗ್ಗೆ ಯೋಚಿಸಬೇಡಿ." ಮಕ್ಕಳು ತಮ್ಮ ಅಭಿಪ್ರಾಯ ಸೂಚಿಸಿದರು.
ಅಕ್ಕಂದಿರ ಬೆಂಬಲ ಸಿಕ್ಕಿದ್ದರಿಂದ ಸಂತಸದಲ್ಲಿ ಮಿಂದುಹೋದಳು ಸೌಪರ್ಣಿಕಾ. ಮಕ್ಕಳ ಮಾತಿಗೆ ಅಪ್ಪ ಅಮ್ಮ ಗೋಣು ಆಡಿಸಿದರು.
ಎಂ.ಎಸ್ಸಿ., ಸ್ನಾತಕೋತ್ತರ ಪದವಿ ಓದಲು ಗಂಗೋತ್ರಿ ಕದ ತಟ್ಟಿದಳು. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದಳು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಸುಲಭದ ತುತ್ತಲ್ಲ ಎಂಬ ಜ್ಞಾನ ಸೌಪರ್ಣಿಕಾ ಅವಳ ಗಮನಕ್ಕೆ ಬಂದಿತ್ತು. ಅಕ್ಕಂದಿರ ಜೊತೆ ಸಮಾಲೋಚನೆ ಮಾಡಿದಳು. ಎಲ್ಲರೂ ಸೇರಿ, ಟ್ಯೂಷನ್ ಖರ್ಚು ವೆಚ್ಚ ಭರಿಸುವ ಭಾರವಸೆ ನೀಡಿದರು.
ಹಗಲು ಇರುಳು ಪರಿಶ್ರಮ ಮುಂದುವರಿಸಿದಳು. ಜೀವನದಲ್ಲಿ ಗುರಿ ಇತ್ತು. ಗುರಿ ಮುಟ್ಟಲು ಅಕ್ಕಂದಿರ ಬೆಂಬಲದ ಜೊತೆಗೆ ಅಪ್ಪ, ಅಮ್ಮನ ಆಶೀರ್ವಾದವೂ ಇತ್ತು!
ಎಮ್ಮೆಸ್ಸಿ ಸಹ ಮುಗಿದಿತ್ತು. ಕರ್ನಾಟಕ ಆಡಳಿತ ಸೇವೆ (KAS) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಳು. ಮೌಖಿಕ ಸಂದರ್ಶನ ಮುಗಿಸಿ, ಕರ್ನಾಟಕ ಆಡಳಿತ ಸೇವೆಗೆ ನೇಮಕಗೊಂಡ ಸುದ್ದಿ ಕೇಳಿ ಆನಂದ ಸಾಗರದಲ್ಲಿ ತೇಲಿದಳು ಸೌಪರ್ಣಿಕಾ. ಅಕ್ಕಂದಿರ ಬಳಿ ಎಷ್ಟು ಹೇಳಿಕೊಂಡರೂ ತೃಪ್ತಿಯೇ ಇರಲಿಲ್ಲ. ಮನೆಯಲ್ಲಿ ಸಂತಸದ ವಾತಾವರಣ. ಸಾಧನೆಯ ಜೊತೆಗೆ ಅಪ್ಪ, ಅಮ್ಮನಿಗೆ ಇನ್ನಿಲ್ಲದ ಗೌರವ ತಂದುಕೊಟ್ಟಿದ್ದಳು. ತಿರಸ್ಕಾರದಿಂದ ನೋಡುತ್ತಿದ್ದ ನೆಂಟರಿಷ್ಟರು ಅತಿಯಾದ ಗೌರವ ನೀಡುತ್ತಿದ್ದರು. ಬಾ, ಹೋಗು ಎನ್ನುತ್ತಿದ್ದವರೂ ಸಹ ಬನ್ನಿ, ಹೋಗಿ ಎಂಬ ಗೌರವ ನೀಡುತ್ತಿದ್ದರು. ಎಲ್ಲಿ ಹೋದರೂ ಮೊದಲ ಪ್ರಾಶಸ್ತ್ಯ! ಎಷ್ಟೇ ಗೌರವ, ಪ್ರೀತಿ, ಆದರ ಸಿಕ್ಕಿದ್ದರೂ, ಸುಬ್ರಹ್ಮಣ್ಯ ಅವರಿಗೆ ತಾನು ಜಮೀನು ಕಳೆದುಬಿಟ್ಟೆ ಭಾವನೆ ಬಲವಾಗಿ ಕಾಡುತ್ತಿತ್ತು. ಹೆಂಡತಿ ಮಕ್ಕಳ ಜೊತೆ ಆಗಾಗ್ಗೆ ಹೇಳಿಕೊಂಡು ಕೊರಗುತ್ತಿದ್ದರು.
ದೇವರ ದಯೆಯಿಂದ ಎಲ್ಲವೂ ಒಳ್ಳೆಯದೇ ಆಗಿದೆ, ಈ ವರ್ಷದ ಊರಿನ ಜಾತ್ರಾ ಮಹೋತ್ಸವಕ್ಕೆ ಹೋಗೋಣ ಎಂದು ಮಾತಾಡಿಕೊಂಡರು. ಆದರೆ, ವಿಶಾಲಾಕ್ಷಿ ಅವರಿಗೆ ಮನಸ್ಸಿರಲಿಲ್ಲ. ತನ್ನ ಕುಟುಂಬಕ್ಕೆ ಆ ಜಾತ್ರೆಯಲ್ಲಿ ಆದ ಅವಮಾನ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿತ್ತು. "ಜಾತ್ರೆಗೆ ಹೋಗೋದು ಬೇಡ," ಎಂದು ತಮ್ಮ ಭಾವನೆ ಹೊರಹಾಕಿದರು. ಆದರೆ, ಸುಬ್ರಹ್ಮಣ್ಯ ಅವರಿಗೆ ಊರಿನ ವ್ಯಾಮೋಹ ಕಡಿಮೆಯಾಗಿರಲಿಲ್ಲ. ಎಷ್ಟೇ ಆಗಲಿ, ಹುಟ್ಟಿಬೆಳೆದ ಜಾಗ! ಜೊತೆಗೆ ಕುಲದೇವರ ಜಾತ್ರೆ! ಹೋಗೋಣವೆಂದು ಹಠ ಹಿಡಿದರು. ಅಪ್ಪನ ಆಸೆಗೆ ಮಕ್ಕಳು ಸಹ ನೀರೆರೆದರು. ಈ ಸಲದ ಊರಿನ ಜಾತ್ರೆಗೆ ಹೋಗಲು ನಿರ್ಧರಿಸಿದರು.
ಊರಿನ ಜಾತ್ರೆ ಪ್ರಾರಂಭವಾಗಿತ್ತು. ಎಲ್ಲೆಡೆ ಭಕ್ತಾದಿಗಳು ಸೇರಿದ್ದರು. ಎಂದಿನಂತೆ ಸರಸ್ವತಿ ಮತ್ತು ನರಸಿಂಹಮೂರ್ತಿ ದಂಪತಿಗಳು ಮುಹೂರ್ತಕ್ಕೆ ಸರಿಯಾಗಿ ಬಂದು, "ಪುರೋಹಿತರೇ, ಶುರು ಮಾಡಿ, ಉತ್ಸವಕ್ಕೆ ಚಾಲನೆ ಕೊಡೋಣ," ಎಂದರು.
ಪ್ರಧಾನ ಪುರೋಹಿತರಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಮೌನವಾಗಿ ನಿಂತರು. ಅವರ ನೆರವಿಗೆ ಬಂದ ಸಹಾಯಕ ಪುರೋಹಿತರು ವಿನಂತಿಸಿದರು.
"ಬೇಸರ ಮಾಡ್ಕೋಬೇಡಿ ಯಜಮಾನರೇ, ಈ ಸಲ ತಹಶೀಲ್ದಾರರು ಊರಿಗೆ ಬರ್ತಾ ಇದ್ದಾರೆ ಅನ್ನುವ ಸುದ್ಧಿ ಕೊನೆ ಕ್ಷಣದಲ್ಲಿ ಗೊತ್ತಾಯ್ತು. ಅವರ ಕೈಯಲ್ಲಿ ಉತ್ಸವಕ್ಕೆ ಚಾಲನೆ ಕೊಡೋಣ, ತಾವು ಸಹ ಅವರ ಜೊತೆ ಭಾಗಿಯಾಗಿ, ತಾವು ಊರಿನಲ್ಲಿ ಇರದಿದ್ದ ಕಾರಣ ನಿಮ್ಮ ಅನುಪಸ್ಥಿತಿಯಲ್ಲಿ ಊರಿನವರು ನಿರ್ಧಾರ ಕೈಗೊಂಡಿದ್ದಾರೆ!" ವಿನಂತಿಸಿದರು.
ಊರಿಗೆ ತಹಶಿಲ್ದಾರರು ಬರುತ್ತಿದ್ದಾರೆಂಬ ವಿಷಯ ಬೆಳಿಗ್ಗೆಯಷ್ಟೇ ತಿಳಿದಿದ್ದರೂ ಇಂತಹ ಪರಿಸ್ಥಿತಿಯನ್ನು ನಿರೀಕ್ಷಿಸಿರಲಿಲ್ಲ. ಆದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ತಹಶೀಲ್ದಾರರು ಊರಿಗೆ ಬರುತ್ತಿರುವಾಗ ಪ್ರತಿಭಟಿಸಲು ಆಗಲಿಲ್ಲ. ಸಂದಿಗ್ಧ ಪರಿಸ್ಥಿತಿ. ಅಸಮಾಧಾನವನ್ನು ಬದಿಗೊತ್ತಿ, "ಆಗಲಿ, ಅವರ ಜೊತೆ, ಭಗವಂತನ ಸೇವೆ ಮಾಡೋಣ," ಎಂದು ಅಸಮಾಧಾನವನ್ನು ನುಂಗಿಕೊಂಡರು.
ಹೊರಗೆ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ವಾಲಗ, ಡೋಲು ಶಬ್ಧ! ಜೈಕಾರ.
"ತಹಶೀಲ್ದಾರರು ಬಂದ್ರು ಅನ್ಸುತ್ತೆ," ಎನ್ನುತ್ತಾ ಹೂವಿನ ಹಾರ ಹಿಡಿದು ಓಡಿದರು ಪ್ರಧಾನ ಅರ್ಚಕರು. ಇತರೆ ಪುರೋಹಿತರು ಹಿಂಬಾಲಿಸಿದರು. ಹೆಂಡತಿ, ಮಕ್ಕಳ ಜೊತೆ ಮೂಕರಂತೆ ನೋಡುತ್ತಿದ್ದರು ನರಸಿಂಹಮೂರ್ತಿ.
ಪೂರ್ಣಕುಂಭ ಸ್ವಾಗತದೊಂದಿಗೆ ತಹಶೀಲ್ದಾರರು ಸಮೀಪ ಬರುತ್ತಿದ್ದರು. ಮೊದಲಿಗೆ ಯಾರು ಎಂದು ಸರಸ್ವತಿಗಾಗಲಿ, ನರಸಿಂಹಮೂರ್ತಿಗಾಗಲಿ ತಿಳಿಯಲಿಲ್ಲ. ದಿಟ್ಟಿಸಿ ನೋಡಿದರು... ಮಹಿಳಾ ತಹಶಿಲ್ದಾರರು! ಆಶ್ಚರ್ಯವಾಯಿತು. ಅವರ ಪಕ್ಕ ವಿಶಾಲು, ಸುಬ್ರಹ್ಮಣ್ಯ ಮತ್ತು ಅವರ ಮಕ್ಕಳು! ಆಶ್ಚರ್ಯಚಕಿತರಾದರು ದಂಪತಿಗಳು.
ಜೈಕಾರದ ಘೋಷಣೆ ಮುಗಿಲು ಮುಟ್ಟಿತ್ತು. ಮಂಗಳಾರತಿ ಮಾಡಿ ಪ್ರಸಾದ ಸ್ವೀಕಾರ ಮಾಡಿದರು ತಹಶೀಲ್ದಾರರು ಮತ್ತು ಅವರ ಕುಟುಂಬ! ನರಸಿಂಹಮೂರ್ತಿ ದಂಪತಿಗಳನ್ನು ಕೇಳುವವರೇ ಇರಲಿಲ್ಲ. ಆದರೆ ಪ್ರಧಾನ ಪುರೋಹಿತರು ಸೌಜನ್ಯ ತೋರಿಸಿ. "ಬನ್ನಿ ಯಜಮಾನರೇ, ಪ್ರಸಾದ ಸ್ವೀಕರಿಸಿ!" ಎಂದರು.
ವಿಧಿ ಇರಲಿಲ್ಲ. ಕೃತಕ ನಗೆ ಬೀರಿ ಪ್ರಸಾದ ಸ್ವೀಕರಿಸಿ, ಒಂದು ಬದಿಯಲ್ಲಿ ನಿಂತರು. ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ ತಹಶಿಲ್ದಾರ್ ಸೌಪರ್ಣಿಕಾ, "ನಾನು ಭಾಷಣ ಮಾಡೋದಿಲ್ಲ, ನನ್ನ ಭಾವನೆಗಳನ್ನು ಮಾತ್ರ ಹಂಚಿಕೊಳ್ಳುತ್ತೇನೆ, ಅಭ್ಯಂತರವಿಲ್ವಾ," ಎಂದಾಗ. "ಆಗಲಿ... " ಎನ್ನುತ್ತಾ ಜೈಕಾರ ಹಾಕಿದರು ನೆರೆದಿದ್ದ ಪುರಜನ.
"ಇದು ನಾನು ಹುಟ್ಟಿದ ಊರು. ನನ್ನ ಅಪ್ಪ, ಇಲ್ಲಿಯೇ ಹುಟ್ಟಿ ಬೆಳೆದರು. ಅಪ್ಪ, ಅಮ್ಮ ಬಡತನದ ಬೇಗುದಿಯಲ್ಲಿ ಪಟ್ಟ, ಶ್ರಮ, ಅನುಭವಿಸಿದ ಅವಮಾನ ನನಗಿಂತ ನಿಮಗೇ ಚೆನ್ನಾಗಿ ಗೊತ್ತಿದೆ. ಎಲ್ಲವನ್ನೂ ಸಹಿಸಿಕೊಂಡು, ಮನೆಮಠ ಮಾರಿ ಹೆಣ್ಣು ಮಕ್ಕಳನ್ನು ಓದಿಸಿ, ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಇಂತಹ ತಂದೆತಾಯಿಗಳನ್ನು ಪಡೆದ ನಾವುಗಳೇ ಧನ್ಯರು! ಅವರು ಇಡೀ ಸಮಾಜಕ್ಕೆ ಮಾದರಿ. ತಂದೆತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ, ಆದರೆ ಅವರಿಗೆ ಖುಷಿ ಕೊಡಲು ಸಾಧ್ಯ! ಅವರು ಕಳೆದುಕೊಂಡಿದ್ದನ್ನು ವಾಪಸ್ ಕೊಡಲು ಮಕ್ಕಳಾದ ನಾವು ತೀರ್ಮಾನಿಸಿ, ನಮ್ಮ ಭವಿಷ್ಯ ನಿರ್ಮಿಸಲು ಮಾರಿದ್ದ ಮನೆ, ಮತ್ತು ಹೊಲವನ್ನು ಖರೀದಿಸಿ, ಅವರಿಗೆ ಉಡುಗೊರೆಯಾಗಿ ಕೊಡಲು ನಿರ್ಧರಿಸಿದ್ದೇವೆ. ಇನ್ನು ಮುಂದೆ ನಮ್ಮ ಅಪ್ಪ, ಅಮ್ಮ ನಿಮ್ಮ ಜೊತೆಯಲ್ಲೇ ಇದೇ ಊರಿನಲ್ಲಿ ಇರುತ್ತಾರೆ... " ಎನ್ನುತ್ತಿದ್ದಂತೆಯೇ ಹರ್ಷೋದ್ಗಾರ ಮುಗಿಲು ಮುಟ್ಟಿತು.
ವಿಶಾಲು ಮತ್ತು ಸುಬ್ರಹ್ಮಣ್ಯ ಅವರ ಕಣ್ಣುಗಳು ತೇವಗೊಂಡವು. ಅಪ್ಪ, ಅಮ್ಮನಿಗೆ ಇದಕ್ಕಿಂತಲೂ ಮಿಗಿಲಾದ ಉಡುಗೊರೆ ಬೇರೇನೂ ಬೇಕಿಲ್ಲ ಎಂಬ ಭಾವನೆ ಮೂಡಿತು. ಮಕ್ಕಳ ಬಗ್ಗೆ ಹೆಮ್ಮೆ ಮೂಡಿತ್ತು.
ಕಳೆದುಕೊಂಡಿದ್ದ ಮನೆ, ಮಠ, ಗೌರವ ಎಲ್ಲವೂ ಉಡುಗೊರೆ ರೂಪದಲ್ಲಿ ಸಿಕ್ಕಿತ್ತು.
- *ರಾಮಮೂರ್ತಿ ಸೋಮನಹಳ್ಳಿ*
