Ramamurthy Somanahalli

Classics Inspirational Others

3  

Ramamurthy Somanahalli

Classics Inspirational Others

ಪಾಪಿ ಯಾರು ??

ಪಾಪಿ ಯಾರು ??

2 mins
159


ಮನುಷ್ಯನ ಗುಣ ನಾನು, ನಾನೇ ಶ್ರೇಷ್ಠ, ನಾನೇ ಪ್ರತಿಭಾವಂತ. ನನ್ನಿಂದಲೇ ಎಲ್ಲ. ಈ ಮನೋಭಾವ ನಮ್ಮ ಕಣ್ಣನ್ನು *ನಾನು* ಎಂಬ ಪೊರೆಯ ಮೂಲಕ ಮುಚ್ಚಿಬಿಡುತ್ತದೆ. ಈ ಹಿನ್ನೆಲೆಯಲ್ಲಿ ನನ್ನ ಅಜ್ಜ ಹೇಳಿದ ಕಥೆ ನೆನಪಾಗುತ್ತಿದೆ.  


ಬಯಲು ಸೀಮೆಯ ಪುಟ್ಟ ಹಳ್ಳಿ ಸೋಮನಹಳ್ಳಿ. ಎಂಟು ಜನ ಅಣ್ಣ ತಮ್ಮಂದಿರು. ಅನ್ಯೋನ್ಯವಾಗಿ ಇದ್ದರು. ಏನೇ ಬರಲಿ ಕಷ್ಟ ಸುಖದಲಿ ಭಾಗಿಯಾಗಿ ಒಗ್ಗಟ್ಟಿನಿಂದ ಇರಬೇಕೆಂದು ಅಪ್ಪ ಅಮ್ಮ ಹೇಳಿಕೊಟ್ಟ ಪಾಠವನ್ನು ಪಾಲಿಸುತ್ತಿದ್ದರು. ಅದರಂತೆಯೇ ಜೀವನ ಸಾಗಿತ್ತು. 


ಒಂದು ದಿನ ಎಂಟೂ ಜ‌ನ ದೇವಸ್ಥಾನಕ್ಕೆ ಹೋಗಿದ್ದರು. ಸಂಜೆಯ ಸಮಯ. ನಿರ್ಜನ ಪ್ರದೇಶ. ಗುಡುಗು ಸಿಡಿಲಿನಿಂದ ಕೂಡಿದ ಮಳೆ. ಮಳೆಯ ಆರ್ಭಟಕ್ಕೆ ಅಣ್ಣತಮ್ಮಂದಿರು ಬೆದರಿದರು. ಒಂದೇ ಸಮನೆ ಒಂದರ ಮೇಲೊಂದರಂತೆ ಸಿಡಿಲು ಬಂದು ದೇವಸ್ಥಾನದ ಮುಂಭಾಗದ ಗರುಡಗಂಬಕ್ಕೆ ಬಡಿಯುತ್ತಿತ್ತು. ಅಣ್ಣತಮ್ಮಂದಿರು ಹೆದರಿಕೆಯಿಂದ ಬೆವತು ಹೋದರು. ನಮಗೇನೋ ಕೇಡು ಕಾದಿದೆ. ದೇವಸ್ಥಾನಕ್ಕೆ ಸಿಡಿಲು ಬಡಿದರೆ ನಾವೆಲ್ಲರೂ ಸಾಯುವುದು ಖಂಡಿತ. ನಮ್ಮಲ್ಲಿ ಯಾರೋ ಪಾಪಿಗಳು ಇದ್ದೇವೆ. ಹಾಗಾಗಿ ಈ ರೀತಿ ಆಗುತ್ತಿದೆ ಎಂದು ಮಾತಾಡಿಕೊಂಡರು.‌ ಎಲ್ಲರೂ ನಾನೇ ಪುಣ್ಯವಂತ, ನಾನು ಪಾಪದ ಕೆಲಸ ಮಾಡಿಲ್ಲವೆಂದು ಒಬ್ಬರನ್ನೊಬ್ಬರು ದೂರಿಕೊಂಡರು. ಪಾಪಿಯನ್ನು ಪರೀಕ್ಷಿಸುವ ಒಪ್ಪಂದಕ್ಕೆ ಬಂದರು. ಒಪ್ಪಂದದ ಪ್ರಕಾರ, ಒಬ್ಬೊಬ್ಬರೇ ಗರುಡಗಂಬ ಹೋಗಿ ಮುಟ್ಟಿ ಬರಬೇಕು, ಅದೃಷ್ಟವಂತರು ಬದುಕುತ್ತಾರೆ. ಪಾಪಿ ಸಿಡಿಲಿಗೆ ಸಿಕ್ಕಿ ಸಾಯುತ್ತಾನೆ!

   

ಹಿರಿತನದ ಆಧಾರದ ಮೇಲೆ ಮೊದಲನೆಯವ, ಎರಡು, ಮೂರು ಹೀಗೆ ಒಬ್ಬಬ್ಬರೇ ಹೋಗಿ ಏಳೂ ಜನ ಗರುಡಗಂಬ ಮುಟ್ಟಿ ಬಂದರು. ಯಾರಿಗೆ ಏನೂ ಆಗಲಿಲ್ಲ. ನಾವೆಲ್ಲರೂ ಪುಣ್ಣ್ಯವಂತರು. ನಂತರದ ಸರದಿ ಎಂಟನೆಯವ. ಆತನೇ ಕೊನೆಯವ. ಏಳು ಜನ ಅವನನ್ನು ಶಪಿಸಿದರು, "ನೀನು ಪಾಪಿ, ನಿನ್ನಿಂದ ನಮಗೆ ತೊಂದರೆಯಾಗಿದೆ, ನೀನಿದ್ದರೆ, ಸಿಡಿಲು ಬಡಿದು ನಾವು ಸಾಯುವುದು ಖಂಡಿತ. ಬೇಗ ಗರುಡಗಂಬದ ಹತ್ತಿರ ಹೋಗು " ಎಂದು ಒತ್ತಾಯಿಸಿದರು. ಎಂಟನೆಯವ ಹೆದರಿದ, ಎಲ್ಲರೂ ಬದುಕಿದರು. ನಾನು ಪಾಪಿ. ಗರುಡಗಂಬದ ಬಳಿ ಹೋದರೆ, ಸಿಡಿಲು ಬಡಿದು ಸಾಯುವುದು ಖಂಡಿತ ಎಂದೆಣಿಸಿ, ಎಲ್ಲರ ಕೈಕಾಲು ಹಿಡಿದು ಬೇಡಿದ. "ನಾನು ಗರುಡಗಂಬದ ಬಳಿ ಹೋಗುವುದಿಲ್ಲ. ನಾನು ಬದುಕಬೇಕು. ನನ್ನನ್ನು ಉಳಿಸಿ" ಎಂದು ರೋಧಿಸಿದ. ಆದರೆ ಏಳೂ ಜನ ಅಣ್ಣಂದಿರು ತಮ್ಮನ ಮಾತು ಕೇಳಲಿಲ್ಲ. ನೀನು ಗರುಡಗಂಬದ ಬಳಿ ಹೋಗಲೇ ಬೇಕು, ನೀನು ಪಾಪಿ. ನೀನು ನಮ್ಮ ಬಳಿ ಇದ್ದರೆ ನಮ್ಮ ಸಾವು ಖಂಡಿತ ಎಂದು ಹೇಳಿ, ಏಳೂ ಜನ ಸೇರಿ ಬಲವಂತವಾಗಿ ಕೊನೆಯ ತಮ್ಮನನ್ನು ಎತ್ತಿ ಗರುಡಗಂಬದ ಬಳಿ ಹಾಕಿ, ದೇವಸ್ಥಾನದ ಒಳಗೆ ಹೋದರು. ಅವರು ಏಳು ಜನ ದೇವಸ್ಥಾನದ ಒಳಗೆ ಹೋದ ಮರುಕ್ಷಣವೇ ಬರಸಿಡಿಲು ದೇವಸ್ಥಾನಕ್ಕೆ ಬಡಿದು ಅಪ್ಪಳಿಸಿತು. ಏಳೂ ಜನ ಸತ್ತರು. ಕೊನೆಯ ತಮ್ಮ ಬದುಕುಳಿದ! 

   

ಈಗ ಹೇಳಿ ಪಾಪಿ ಯಾರು? ಪುಣ್ಯವಂತರು ಯಾರು. ಎಂಟೂ ಜನ ಒಟ್ಟಿಗೆ ಇದ್ದಾಗ, ಕೊನೆಯ ತಮ್ಮನ ಪುಣ್ಯದಿಂದ ಏಳೂ ಜನ ಬದುಕಿದ್ದರು. ಆದರೆ ಕೊನೆಯ ತಮ್ಮನನ್ನು ಹೊರಗೆ ಹಾಕಿದ ಕೂಡಲೇ ಏಳೂ ಜನ ಮರಣ ಹೊಂದಿದರು.


ಪಾಪಿಗಳನ್ನು ಪುಣ್ಯವಂತರನ್ನು ಮಾನವ ಗುರುತಿಸಲಾರ. ಅದು ಅವನ ಕೆಲಸವಲ್ಲ. ದೇವರ ಕೆಲಸ. ಐಕ್ಯತೆಯಿಂದ ಬಾಳುವುದಷ್ಟೇ ನಮ್ಮ ಗುರಿ.


ಈ ಕಥೆ ಹೇಳಿದ ನಮ್ಮಜ್ಜ ಈಗ ಇಲ್ಲ. ಆದರೆ ಅವರ ಸಂದೇಶ ನಮ್ಮ ಬಳಿ ಇದೆ.


Rate this content
Log in

Similar kannada story from Classics