STORYMIRROR

Ramamurthy Somanahalli

Classics Fantasy

4  

Ramamurthy Somanahalli

Classics Fantasy

ಕೊನೇ ಕ್ಷಣದ ಕಣ್ಣೀರು!? - ರಾಮಮೂರ್ತಿ ಸೋಮನಹಳ್ಳಿ

ಕೊನೇ ಕ್ಷಣದ ಕಣ್ಣೀರು!? - ರಾಮಮೂರ್ತಿ ಸೋಮನಹಳ್ಳಿ

7 mins
1

ಕೊನೇ ಕ್ಷಣದ ಕಣ್ಣೀರು!?          ವಿಶ್ವನಿಗೆ ಆಗಿನ್ನೂ ಮೂರು ವರ್ಷವಿರಬಹುದು. ಅಪಘಾತವೊಂದರಲ್ಲಿ ತಂದೆತಾಯಿಯನ್ನು ಕಳೆದುಕೊಂಡಿದ್ದ! ದೈವ ಲೀಲೆ ವಿಶ್ವ ಬದುಕಿದ್ದ! ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದ ವಿಶ್ವನ ಚಿಕ್ಕಪ್ಪ ಹರೀಶ ಮನಸ್ಸಿಲ್ಲದಿದ್ದರೂ ಸಮಾಜಕ್ಕೆ ಹೆದರಿ ವಿಶ್ವನನ್ನು ಸಾಕುವ ಜವಾಬ್ದಾರಿ ಹೊತ್ತರು... ದಿನಕಳೆದಂತೆ ಹರೀಶ ಅವರಿಗೆ ತಮ್ಮ ಸಂಸಾರ ಸರಿದೂಗಿಸುವುದೇ ಕಷ್ಟ ಎನಿಸಿದಾಗ ಅವರಿವರ ಕೈಕಾಲು ಹಿಡಿದು, ಒಂದು ಮಠದಲ್ಲಿ ವಿಶ್ವನಿಗೆ ಇದ್ದುಕೊಂಡು ಓದಲು ವ್ಯವಸ್ಥೆ ಮಾಡಿದ್ದರು. ಓದಿನಲ್ಲಿ ಚುರುಕಾಗಿದ್ದ ವಿಶ್ವ ಮಠದ ಆಶ್ರಯ ಮತ್ತು ಸಹಾಯದಿಂದ ಎಂಜಿನಿಯರಿಂಗ್ ಪದವಿ ಮುಗಿಸಿ ಬೆಂಗಳೂರಿನಲ್ಲೇ ಉದ್ಯೋಗ ಗಿಟ್ಟಿಸಿಕೊಂಡ.  ಬಡವರ ಮನೆಯ ಹೆಣ್ಣು ಪದ್ಮಾವತಿ ಜೊತೆ  ಮದುವೆಯನ್ನೂ ಮಾಡಿದ್ದಾಯಿತು. ರೆಕ್ಕೆಪುಕ್ಕ ಬಲಿತ ಹಕ್ಕಿ ಗೂಡು ಬಿಟ್ಟು ಹಾರುವಂತೆ, ಚಿಕ್ಕಪ್ಪನ ಮನೆಬಿಟ್ಟು ತನ್ನದೇ ಸ್ವತಂತ್ರ ಜೀವನ ಬಯಸಿ ಹೋದ! ಹರೀಶ ಚಿಕ್ಕಪ್ಪನಿಗೆ ವಿಶ್ವನ ವರ್ತನೆ ಬೇಸರ ತಂದಿತ್ತಾದರೂ, ತನ್ನ ಅಣ್ಣನ ಮಗನಿಗೆ ತನ್ನಿಂದ ಒಂದು ದಾರಿ ಆಗಿದೆಯಲ್ಲ ಎಂಬ ತೃಪ್ತಿ.     ರಕ್ತ ಸಂಬಂಧಿಕರ ಬಗ್ಗೆ ತಲೆ ಕೆಡಿಸಿಕೊಳ್ಳದ ವಿಶ್ವನಿಗೆ ತನ್ನ ಚಿಕ್ಕಪ್ಪನನ್ನು  ಮರೆಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಅವನ ಅದೃಷ್ಟವೋ ಏನೋ, ಕಂಪನಿವತಿಯಿಂದ ಅಮೆರಿಕಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಹೆಂಡತಿ ಪದ್ಮಳೊಂದಿಗೆ ಅಮೆರಿಕಾ ದೇಶಕ್ಕೆ ಹಾರಲು ಸಿದ್ಧತೆ ನಡೆಸಿದ್ದ.     ಅದೃಷ್ಟವೋ, ದುರದೃಷ್ಟವೋ ಪದ್ಮ  ಗರ್ಭಿಣಿಯಾದಳು. ಈ ವಿಷಯ ಕೇಳಿ ಹೌಹಾರಿದಳು ಪದ್ಮ. ಮದುವೆಯಾಗಿ ವರ್ಷವೂ ಕಳೆದಿಲ್ಲ. ಇಷ್ಟು ಬೇಗ ಮಕ್ಕಳು! ಕಷ್ಟದಲ್ಲಿ ಬೆಳೆದ ವಿಶ್ವ, ಪದ್ಮ ಇಬ್ಬರೂ ಐಷಾರಾಮಿ ಜೀವನ ನಡೆಸಲು ಉತ್ಸುಕರಾಗಿದ್ದರು. ಮಾನಸಿಕ, ಭೌತಿಕ ಬಂಧನಗಳನ್ನು ದೂರವಿಟ್ಟು ಸ್ವಚ್ಛಂದವಾಗಿ ಹಕ್ಕಿಗಳಂತೆ ತಮ್ಮದೇ ಪ್ರಪಂಚದಲ್ಲಿ ವಿಹರಿಸುವ ಕನಸು ಹೊತ್ತಿದ್ದರು. ಬಾಹ್ಯ ಜಗತ್ತಿನ ಆಕರ್ಷಣೆ ಸೂಜಿಗಲ್ಲಿನಂತೆ ಸೆಳೆದಿತ್ತು!       ಮಲಗಲಷ್ಟೇ ಮನೆ! ಮನೆಯಲ್ಲಿ ಅಡುಗೆ ತಿಂಡಿ ಮಾಡಿ ತಿನ್ನುವುದು ಅಪರೂಪವಾಗಿತ್ತು! ಹೊಸ ಹೊಸ ಹೋಟೆಲ್ ನಲ್ಲಿ ಹೊಸ ಹೊಸ ರುಚಿ ನೋಡುವುದರಲ್ಲಿ ಆಸಕ್ತಿ! ವಾರದ ಕೊನೆಯಲ್ಲಿ ತಿರುಗಾಟ! ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಬೇಕು, ಟ್ರೆಕ್ಕಿಂಗ್ ಮಾಡಬೇಕು! ರೆಸಾರ್ಟ್ ನಲ್ಲಿ ಉಳಿಯಬೇಕು. ಪಬ್ ಸಂಸ್ಕೃತಿಗೆ ಜೋತುಬಿದ್ದರು! ರೇವ್ ಪಾರ್ಟಿಯ ಹುಚ್ಚು ಸ್ವಲ್ಪ ಹೆಚ್ಚಾಗಿಯೇ ಇತ್ತು!  ಈ ಮನಸ್ಥಿತಿಯ ದಂಪತಿಗಳಿಗೆ ಮಗುವನ್ನು ಮಾಡಿಕೊಳ್ಳುವ ಕಲ್ಪನೆಯೂ ಇರಲಿಲ್ಲ! ಬಂಧನದ ಬದುಕು ಬೇಡ ಎಂದು ನಿರ್ಧರಿಸಿದ್ದರು.  ಹೀಗಿರುವಾಗ ಪದ್ಮ ಗರ್ಭಿಣಿ ಎಂಬ ವಿಷಯ ತಿಳಿದು ತಲೆ ತಿರುಗಿದಂತಾಯಿತು! ಆಕಾಶವೇ ತಲೆಮೇಲೆ ಬಿದ್ದಂತಾಯಿತು!  ಗೂಗಲ್ ಸರ್ಚ್ ಮಾಡಿ ಮಾತ್ರೆ ತೆಗೆದುಕೊಂಡರು. ಸ್ವಯಂ ವೈದ್ಯ! ಆದರೆ ಬಯಸಿದಂತೆ ಆಗಲಿಲ್ಲ!  ಕೈ  ಮೀರಿತ್ತು! ಪರೀಕ್ಷಿಸಿದ ವೈದ್ಯರು ಅಬಾರ್ಷನ್ ಮಾಡಲು ಒಪ್ಪಲಿಲ್ಲ. ಪ್ರಭಲ ಕಾರಣವಿಲ್ಲದೆ ಅಬಾರ್ಷನ್  ಮಾಡುವುದು ಕಾನೂನು ಬಾಹಿರ ಎಂದು ಕೈ ಚೆಲ್ಲಿದರು. ಇಂತಹ ಪರಿಸ್ಥಿತಿಯಲ್ಲಿ ಅವಳನ್ನು ಕರೆದುಕೊಂಡು ಅಮೆರಿಕಾಕ್ಕೆ ಹೋಗುವುದಾದರೂ ಹೇಗೆ? ಗಂಡ-ಹೆಂಡತಿ ನಡುವೆ ತಿಕ್ಕಾಟ ಶುರುವಾಯಿತು. ಎಷ್ಟೇ ಮಾತ್ರೆ ಔಷಧಿ ಸೇವಿಸಿದರೂ ಗರ್ಭಪಾತ ಆಗಲಿಲ್ಲ. ಮತ್ತೆ ಮತ್ತೆ ಗರ್ಭಪಾತಕ್ಕೆ ಯತ್ನಿಸಿದರು... ಕಾನೂನಿನಲ್ಲಿ ಅವಕಾಶವಿಲ್ಲ ಎಂದು ವೈದ್ಯರು ಹೇಳಿದ್ದರು.     ಇದರಿಂದ ತೀರಾನೊಂದ ಪದ್ಮ ಹುಚ್ಚಿಯಂತಾದಳು. ಮಾನಸಿಕ ನಿಯಂತ್ರಣ ಕಳೆದುಕೊಂಡು ವಿಶ್ವನ ಮೇಲೆ ಎಗರಾಡಿದಳು. ಹೇಗಾದರೂ ಸರಿ ಹೊಟ್ಟೆಯಲ್ಲಿರುವ ಪಿಂಡವನ್ನು ತೆಗೆಸಲು ವಿಶ್ವ ಯೋಚಿಸಿ, ಕಾನೂನುಬಾಹಿರವಾಗಿ ಗರ್ಭಪಾತ ಮಾಡಿಸುವ ಖಾಸಗಿ ಆಸ್ಪತ್ರೆಗಳನ್ನು ಸಂಪರ್ಕಿಸಿದ. "ಎಷ್ಟೇ ಖರ್ಚಾದರೂ ಚಿಂತೆ ಇಲ್ಲ, ಅಬಾರ್ಷನ್ ಮಾಡಿ," ಎಂದು ವೈದ್ಯರ ಮುಂದೆ ಅಂಗಲಾಚಿದರು ದಂಪತಿಗಳು.    "ಅಬಾರ್ಷನ್ ಮಾಡಬಹುದು. ಆದರೆ ನೀವು ತುಂಬಾ ತಡವಾಗಿ ಬಂದಿದ್ದೀರಿ. ಈ ಹಂತದಲ್ಲಿ ಅಬಾರ್ಷನ್ ಮಾಡಿದರೆ ತಾಯಿ ಜೀವಕ್ಕೂ ತೊಂದರೆ ಆಗಬಹುದು, ಯೋಚಿಸಿ," ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದಾಗ ಪದ್ಮ ಹೆದರಿದಳು.  ವಿಶ್ವ ಮತ್ತು ಪದ್ಮ ಅವರಿಗೆ ಬೇರೆ ದಾರಿಯೇ ಕಾಣಲಿಲ್ಲ. ವಿಧಿಯಿಲ್ಲದೆ ಮಗುವಿಗೆ ಜನ್ಮ ನೀಡಲು ಒಪ್ಪಿದಳು.      ಹೊಸ ಜಾಗ ಹೇಗೋ ಏನೋ  ಗರ್ಭಿಣಿಯಾಗಿದ್ದ ಪದ್ಮಾಳನ್ನು ತಾಯಿ ಮನೆಯಲ್ಲೇ ಬಿಟ್ಟು, ಹೆರಿಗೆ ಆದನಂತರ ಅಮೇರಿಕಾ ದೇಶಕ್ಕೆ ಕರೆದುಕೊಂಡು ಹೋಗುವುದೇ ಸೂಕ್ತವೆಂದು ಯೋಚಿಸಿದ ವಿಶ್ವ. ಗಂಡನ ಯೋಚನೆಯನ್ನು ಒಲ್ಲದ ಮನಸ್ಸಿನಿಂದ ಒಪ್ಪಿದಳು ಪದ್ಮ! ಹೆಂಡತಿಯ ಮನವೊಲಿಸಿ ಅಮೆರಿಕಾಕ್ಕೆ ಹಾರಿದ್ದ.       ಅಮೆರಿಕಾದಲ್ಲಿ ಹೊಸ ಜೀವನಕ್ಕೆ ಹೊಂದಿಕೊಳ್ಳುವುದು ಸುಲಭವಾಗಿರಲಿಲ್ಲ. ಆಚಾರವಿಚಾರಗಳು ಹೊಂದಾಣಿಕೆ ಆಗುತ್ತಿರಲಿಲ್ಲ. ಆದರೆ ಸಂಬಳ ಕೈ ತುಂಬಾ ಬರುತ್ತಿತ್ತು! ದಿನಕಳೆದಂತೆ ಅಲ್ಲಿನ ಜೀವನಕ್ಕೆ ಒಗ್ಗಿ ಹೋದ ವಿಶ್ವ! ಎಲ್ಲವನ್ನೂ  ಭಾರತದೊಂದಿಗೆ ತುಲನೆ ಮಾಡಿ, ಅಮೇರಿಕಾವನ್ನು ವೈಭವೀಕರಿಸಿ ಹೆಂಡತಿ ಜೊತೆ ಮಾತಾಡುತ್ತಿದ್ದ! ಬಡತನದ ನೆರಳಿನಲ್ಲಿ ಬೆಳೆದ ಪದ್ಮಳಿಗೆ ವಿಶ್ವನ ಮಾತುಗಳು  ಆಕರ್ಷಣೀಯವಾಗಿ ಕಾಣುತ್ತಿತ್ತು. ಹೇಗಾದರೂ ಸರಿ ಅಮೆರಿಕ ದೇಶಕ್ಕೆ ಹೋಗಿ ಗಂಡನೊಂದಿಗೆ ದೇಶ ಸುತ್ತುವ ಕನಸು ಕಂಡಳು.        ಹೆರಿಗೆ ಆಯಿತು. ವೀಡಿಯೊ ಕಾಲ್ ಮಾಡಿ ಮಗುವನ್ನು ನೋಡಿದ ವಿಶ್ವ!  ಅಭಿಜಿತ್ ಎಂದು ನಾಮಕರಣ ಮಾಡಲಾಯಿತು. ಅಮೆರಿಕಾಕ್ಕೆ ಹೋಗಲು ತುದಿಗಾಲಲ್ಲಿ ನಿಂತಿದ್ದ ಪದ್ಮ, ಆರು ತಿಂಗಳು ಕಳೆಯುತ್ತಿದ್ದಂತೆಯೇ ಅಮೆರಿಕಾಕ್ಕೆ ಹೊರಡಲು ಮನಸ್ಸು ಮಾಡಿದಳು. ಮಗುವನ್ನು ಅಮ್ಮನ ಮಡಿಲಿಗೆ ಒಪ್ಪಿಸಿ ಹಾರಲು ಸಿದ್ಧವಾದಳು. ಒಬ್ಬನೇ ಇದ್ದ ವಿಶ್ವ ಮರು ಮಾತಾಡದೆ ಹೆಂಡತಿಯ ಮಾತಿಗೆ ಗೋಣು ಆಡಿಸಿದ!      ಅಮೆರಿಕಾದಲ್ಲಿ ಯಾವುದೇ ಕಟ್ಟುಪಾಡು ಇರಲಿಲ್ಲ. ಗಂಡ ಹೆಂಡತಿ ಸ್ವತಂತ್ರ ಜೀವನ. ಯಾರು ಯಾರಿಗೂ ಅಡಿಯಾಳಲ್ಲ. ಸ್ವಚ್ಛಂಧ ಜೀವನ. ಮಕ್ಕಳ ಜಂಜಾಟವಿಲ್ಲ! ಹದಿನೆಂಟು ತುಂಬಿದ ಕೂಡಲೇ ಮಕ್ಕಳು ಸ್ವತಂತ್ರ ಜೀವನ ಅರಸಿ ಹೋಗುತ್ತಿದ್ದರು!  ಮಲಗಲಷ್ಟೇ ಮನೆ! ಹೆಚ್ಚೆಂದರೆ ಫ್ರೋಜನ್ ಫುಡ್ ಬಿಸಿ ಮಾಡಿ ತಿಂದರೆ ಮುಗಿಯಿತು. ಅಮೆರಿಕಾ ಜೀವನಕ್ಕೆ ಒಗ್ಗಿಕೊಂಡರು! ಹಳೆಯ ಬಡತನದ ಬದುಕು ಮರೆತೇ ಹೋಯಿತು! ಐಷಾರಾಮಿ ಬದುಕು ಒಗ್ಗಿ ಹೋಗಿತ್ತು!      ಮಗುವಿನ ಮೇಲೆ ತಾಯಿ-ತಂದೆಗೆ ಇರಬೇಕಾದ ಮಮಕಾರ, ವಾತ್ಸಲ್ಯ, ಪ್ರೀತಿ ಏನೂ ಇರಲಿಲ್ಲ. ಇಚ್ಛೆಗೆ ವಿರುದ್ಧವಾಗಿ ಜನಿಸಿದ ಮಗು! ಹುಟ್ಟಿದಾಗಿನಿಂದ ಒಮ್ಮೆಯೂ ಸಹ ಮಗ ಅಭಿಜಿತನನ್ನು ನೋಡಲು ವಿಶ್ವ ಬಂದಿರಲಿಲ್ಲ. ಅಜ್ಜಿ ಜೊತೆ ಬೆಳೆಯುತ್ತಿದ್ದ ಅಭಿಜಿತ್ ವಾಸ್ತವವಾಗಿ ಸಾಮಾನ್ಯ ಮಗುವಿಗೆ ಇರಬೇಕಾದ ಚಟುವಟಿಕೆ ಇರಲಿಲ್ಲ. ಇದನ್ನು ಗಮನಿಸಿದ ಅಜ್ಜಿ ಶಾಂತಮ್ಮ ಮಗಳ ಗಮನಕ್ಕೆ ತಂದರು.    "ಅಯ್ಯೋ! ಇಂತಹ ಸಣ್ಣಪುಟ್ಟ ವಿಷಯವನ್ನು ಹೇಳಿ ನಮ್ಮ ನೆಮ್ಮದಿ ಹಾಳುಮಾಡಬೇಡಿ, ಡಾಕ್ಟರಿಗೆ ತೋರಿಸಿ, ಹಣ ಕಳುಹಿಸುತ್ತೇವೆ," ಎಂದು ಒಂದಿಷ್ಟು ಹಣ ಕಳುಹಿಸಿದರು ದಂಪತಿಗಳು.      ಅಭಿಜಿತನನ್ನು ಪರೀಕ್ಷಿಸಿದ ವೈದ್ಯರು, ಅತಿಯಾದ ಮಾತ್ರೆ, ಔಷಧ ಸೇವನೆಯಿಂದ ಅಡ್ಡಪರಿಣಾಮ ಬೀರಿದೆ. ದೈಹಿಕ ಬೆಳವಣಿಗೆಯಲ್ಲಿ ನ್ಯೂನತೆಗಳಿವೆ ಎಂದು ತಿಳಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸುವ ಅಗತ್ಯವಿದೆಯೆಂದು ಸಲಹೆ ನೀಡಿದರು. ಮೊದಲೇ ಮಗುವಿನ ಮೇಲೆ ಆಸಕ್ತಿಯಿಲ್ಲದ ದಂಪತಿಗಳಿಗೆ ವೈದ್ಯರ ಸಲಹೆ ಪಥ್ಯವಾಗಲಿಲ್ಲ!  ನಿರ್ಲಕ್ಷಿಸಿದರು. ಶಾಂತಮ್ಮ ಅವರಿಗೆ ಮೊಮ್ಮಗನನ್ನು ನೋಡಿ ಕಣ್ಣೀರು ಹಾಕುವುದು ಬಿಟ್ಟರೆ, ಬೇರೇನೂ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ.       ದಿನಕಳೆದಂತೆ ಅಭಿಜಿತ್ ರಂಪಾಟ ಜೋರಾಗಿತ್ತು. ಕೈಗೆ ಸಿಕ್ಕ ವಸ್ತುಗಳನ್ನು ತೆಗೆದು ಬಿಸಾಡುತ್ತಿದ್ದ! ದೊಡ್ಡವರು, ಚಿಕ್ಕವರು ಎನ್ನದೇ ಎಲ್ಲರನ್ನೂ ಕಚ್ಚುವುದು ಹೊಡೆಯುವುದು ಮಾಡುತ್ತಿದ್ದ!  ಅವನ ಕಾಟ ಅತಿಯಾಗಿತ್ತು. ದೇಹ ಬೆಳೆದರೂ ತಿಳುವಳಿಕೆ ಇರಲಿಲ್ಲ. ಬುದ್ದಿಮಾಂದ್ಯ ಮಗು ಎಂಬ ತೀರ್ಮಾನಕ್ಕೆ ಬಂದರು. ಅಭಿಜಿತನನ್ನು ನೋಡಿಕೊಳ್ಳಲು ಆಗದೆ ಹೈರಾಣಾಗಿದ್ದ ಶಾಂತಮ್ಮ ಮಗನನ್ನು ಕರೆದುಕೊಂಡು ಹೋಗುವಂತೆ ಮಗಳ ಬಳಿ ಕಣ್ಣೀರಿಟ್ಟು ಬೇಡಿಕೊಂಡಿದ್ದರು. ಮೊಮ್ಮಗನ ಕೊರಗಿನಲ್ಲಿ ಆರೋಗ್ಯ ಹದಗೆಟ್ಟಿತ್ತು. ವಿಷಯ ತಿಳಿದು ಭಾರತಕ್ಕೆ ಬಂದ ವಿಶ್ವ ಮತ್ತು ಪದ್ಮ ತಮ್ಮ ಮಗನನ್ನು ನೋಡಿ ಕಂಗಾಲಾದರು. ಬೆಳೆದು ದೊಡ್ಡವನಾಗಿದ್ದ! ಐದು ವರ್ಷ ತುಂಬಿತ್ತು! ಆದರೆ ಎಲ್ಲಾ ಮಕ್ಕಳ ರೀತಿ ಇರಲಿಲ್ಲ. ವಿಪರೀತವಾಗಿ ನಡೆದುಕೊಳ್ಳುತ್ತಿದ್ದು! ಹಾಸಿಗೆಯಲ್ಲೇ ಮಲ-ಮೂತ್ರ ಮಾಡಿಕೊಳ್ಳುತ್ತಿದ್ದ. ಕಣ್ಣಾರೆ ನೋಡಿದ ದಂಪತಿಗಳಿಗೆ ಯೋಚನೆ ಶುರುವಾಯಿತು. ಇವನನ್ನು ಹೇಗೆ ಸಾಕುವುದು ಎಂಬ ಚಿಂತೆ ಕಾಡಲಾರಂಭಿಸಿತು. ಸ್ನೇಹಿತರು, ಸಂಬಂಧಿಕರ ಮುಂದೆ ತಮ್ಮ ಮಗು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದರು! ಅಭಿಜಿತ್ ಭಾರವಾದ ಶಿಶು!      ಈ ನಡುವೆ ಶಾಂತಮ್ಮ ಸಹ ಕೊನೆಯುಸಿರೆಳೆದರು. ಆಗಷ್ಟೇ ಅಭಿಜಿತ ಐದು ವರ್ಷ ಪೂರೈಸಿದ್ದ! ಅವನ ಸಂಪೂರ್ಣ ಜವಾಬ್ದಾರಿ ವಿಶ್ವ ಮತ್ತು ಪದ್ಮಳ ಹೆಗಲಿಗೇರಿತ್ತು!       ತಜ್ಞ ವೈದ್ಯರ ಬಳಿ ಸಲಹೆಪಡೆದರು. ಚಿಕಿತ್ಸೆ ಮಾಡಿಸುವುದು ವ್ಯರ್ಥ! ಎಂದು ಅಭಿಪ್ರಾಯಪಟ್ಟರು! ಜೀವಮಾನ ಪೂರ್ತಿ ಹೀಗೆ ಆದರೆ ಹೇಗೆ? ಆಕಾಶವೇ ಕಳಚಿಬಿದ್ದ ಅನುಭವವಾಯಿತು. ಕಣ್ಣೀರು ಹಾಕಿದರು. ಶಪಿಸಿದರು! "ಪ್ರಾರಬ್ಧ ಕರ್ಮ" ಎಂದು ಮನಬಂದಂತೆ ಥಳಿಸಿದರು! ಕರುಳ ಬಳ್ಳಿಯನ್ನು ಕತ್ತರಿಸಿ ಬಿಸಾಡುವ ಮನಸ್ಥಿತಿಗೆ ತಲುಪಿದ್ದಳು ಪದ್ಮ!  ಜೊತೆಗೆ ವಿಶ್ವನಾಥನ ಒತ್ತಡ!       ದಿನದಿಂದ ದಿನಕ್ಕೆ ರೋಸಿಹೋದರು ದಂಪತಿಗಳು. ಈ ಪರಿಸ್ಥಿತಿಯಲ್ಲಿ ಅಮೆರಿಕಾಕ್ಕೆ ಕರೆದುಕೊಂಡು ಹೋಗುವುದು ಸಾಧುವಲ್ಲ ಎಂಬ ತೀರ್ಮಾನಕ್ಕೆ ಬಂದರು. ಆದರೆ ಅಭಿಜಿತನನ್ನು ಎಲ್ಲಿ ಬಿಡುವುದು? ತಂದೆತಾಯಿ ಇದ್ದ ಕಾರಣ ಅನಾಥಾಶ್ರಮದಲ್ಲೂ ಬಿಡಲು ಸಾಧ್ಯವಾಗಲಿಲ್ಲ. ಬೆನ್ನಿಗಂಟಿದ ಶನಿ ಎಂಬ ಭಾವನೆ ಬಲವಾಗಿ ಮೂಡಿತು!       ಮನಸ್ಸು ಕಲ್ಲಾಗಿತ್ತು! ಸ್ವಚ್ಛಂಧ ಜೀವನಕ್ಕೆ ಅಭಿಜಿತ್ ಮುಳ್ಳಾಗಿದ್ದಾನೆ. ಇವನ ಲಾಲನೆ ಪಾಲನೆಯಲ್ಲಿ ಅಮೂಲ್ಯವಾದ ಜೀವನ ಹಾಳುಮಾಡಿಕೊಳ್ಳುವುದೇ? ಕಷ್ಟಪಟ್ಟು ದುಡಿದ ಹಣವನ್ನು ಕೆಲಸಕ್ಕೆ ಬಾರದ ಮಗನಿಗಾಗಿ ಖರ್ಚು ಮಾಡುವುದು ವ್ಯರ್ಥ! ಇವನನ್ನು ಅಮೆರಿಕಾಕ್ಕೆ ಕರೆದುಕೊಂಡು ಹೋದರೆ ನೋಡಿಕೊಳ್ಳುವುದು ಹೇಗೆ?  ಅಮೆರಿಕಾದಲ್ಲಿ ನ್ಯಾನಿ ಇಟ್ಟುಕೊಂಡು ಅಭಿಜಿತನನ್ನು ಸಾಕುವುದು ಕಷ್ಟ. ಜೊತೆಗೆ ವಿಪರೀತ ಖರ್ಚು! ಇವನಿದ್ದರೆ ತಮ್ಮ ಸುಖ ಸಂತೋಷಕ್ಕೆ ಎಂದಿದ್ದರೂ ಅಡ್ಡಿ ಎಂಬ ತೀರ್ಮಾನಕ್ಕೆ ಬಂದ ದಂಪತಿಗಳು, ಅಭಿಜಿತನನ್ನು ಶಾಶ್ವತವಾಗಿ ದೂರಮಾಡಲು ನಿರ್ಧರಿಸಿದರು.     ಪೂರ್ವ ನಿರ್ಧಾರದಂತೆ ನಾಗರಹೊಳೆ ಅಭಯಾರಣ್ಯದಲ್ಲಿ ಬಿಟ್ಟು ಬಂದರೆ ಮೃಗಗಳಿಗೆ ಆಹಾರವಾಗುತ್ತಾನೆ, ಯಾರಿಗೂ ಅನುಮಾನ ಬರುವುದಿಲ್ಲ ಎಂದು ಆಲೋಚಿಸಿ, ಪ್ರವಾಸ ಹೊರಟರು! ಎಲ್ಲವೂ ಪೂರ್ವ ನಿರ್ಧಾರ!  ಕತ್ತಲೆಗಾಗಿ ಕಾದರು. ಪದ್ಮ ಹೆದರಿದ್ದಳು... ಅರಿವಿಲ್ಲದಂತೆ ಮಗನನ್ನು ಅಪ್ಪಿಕೊಂಡಳು. ಮನಸ್ಸು ಕಲಕಿತ್ತು! ಹೆಂಡತಿಯ ಕಣ್ಣೀರು ಗಮನಿಸಿದ ವಿಶ್ವ, "ಇಷ್ಟೊಂದು ಎಮೋಷನಲ್ ಫೂಲ್ ಆದರೆ ಜೀವನ ಪೂರ್ತಿ ಕಷ್ಟದ ಕೋಟಲೆಯಲ್ಲೇ ಕಳೆಯಬೇಕು,ಯೋಚಿಸು," ಎಂದು ಎಚ್ಚರಿಕೆ ನೀಡಿದ.       ಯಾವುದೇ ನಿರ್ಧಾರಕ್ಕೆ ಬರಲಾಗದೆ ಪರಿತಪಿಸಿ,    "ನನಗೆ ಹೆದರಿಕೆ ಆಗ್ತಿದೆ, ಹೇಳಿಕೊಳ್ಳಲಾಗದ ವೇದನೆ ಆಗ್ತಿದೆ,"  ಎಂದು ತನ್ನ ತಳಮಳ ವ್ಯಕ್ತಪಡಿಸಿದಳು ಪದ್ಮ.       "ಅಭಿಜಿತ್ ಜೀವಂತ ಶವ, ಅವನಿದ್ದರೆ ನಮಗಿಂತಲೂ ಅವನಿಗೆ ಹೆಚ್ಚು ಕಷ್ಟ! ನಾವು ತಾನೇ ಎಷ್ಟು ದಿವಸಾಂತ ಅವನನ್ನು  ನೋಡ್ಕೊಳ್ಳೋಕ್ಕೆ ಸಾಧ್ಯ? ಇವನು ಇದ್ದಷ್ಟೂ ದಿನವೂ ಕಷ್ಟ ಅನುಭವಿಸಬೇಕಲ್ವಾ? ನಾವು ಏನೇ ಮಾಡಿದ್ರೂ ಅದರಲ್ಲಿ ಅವನ ಹಿತಾಸಕ್ತಿ ಸಹ ಇದೆ ಅಲ್ವಾ? ಹೆದರಬೇಡ. ಒಂದು ರೀತಿಯಲ್ಲಿ ಅವನಿಗೆ ಮುಕ್ತಿ ಕರುಣಿಸುವ ಕೆಲಸಕ್ಕೆ ಕೈ ಹಾಕಿದ್ದೀವಿ, ಅರ್ಥ ಮಾಡ್ಕೊ,"  ಧೈರ್ಯ ತುಂಬಿದ. ಗಂಡನ ಮಾತಿಗೆ ಮರು ಮಾತಾಡಲಿಲ್ಲ.      ಸಫಾರಿ ಮುಗಿಸಿದ್ದರು. ಸಮಯ ಮೀರಿತ್ತು! ಹೊರಗೆ ಹೋಗದೆ ಕಾಡಿನೊಳಗೆ ಇದ್ದ  ವಿಶ್ವ ಮತ್ತು ಪದ್ಮ ಅವರನ್ನು ನೋಡಿದ ಸಿಬ್ಬಂದಿ "ಬೇಗಬೇಗ ಹೊರಗೆ ಹೋಗಿ, ಗೇಟ್ ಕ್ಲೋಸ್ ಆಗುತ್ತೆ," ಎಂದ.     ಸಿಬ್ಬಂದಿ ಮಾತಿಗೆ ತಲೆ ಅಲ್ಲಾಡಿಸಿ ಹೊರಟು, ಫೋಟೋ ತೆಗೆಯುವ ನೆಪದಲ್ಲಿ ಅರಣ್ಯದ ಒಳಹೊಕ್ಕರು. ಕತ್ತಲು ಆವರಿಸಿತ್ತು. ನಿರ್ಜನ ಪ್ರದೇಶ! ಅಭಿಜಿತನನ್ನು ಬಿಟ್ಟು ಬಂದು, ತಪ್ಪಿಸಿಕೊಂಡಿದ್ದಾನೆ ಎಂಬ ನಾಟಕವಾಡಿದರು.   ಕಚೇರಿಗೆ ಬಂದು ಮಗ ತಪ್ಪಿಸಿಕೊಂಡಿದ್ದಾನೆ ಎಂದು ಕಣ್ಣೀರು ಹಾಕಿದರು. ಅಲ್ಲಿನ ಕಚೇರಿ ಅಧೀಕ್ಷಕರು ಕಂಗಾಲಾಗಿ ಕೂಗಾಡಿದರು. "ಯಾರ ಅನುಮತಿ ಪಡೆದು, ಕತ್ತಲೆಯಲ್ಲಿ ತಿರುಗಾಡಿ ಫೋಟೋ ತೆಗೆಯಲು ಹೋಗಿದ್ದು? " ಎಂದು ಆಕ್ಷೇಪಿಸಿದರು.    "ತಪ್ಪಾಯ್ತು! ಕ್ಷಮಿಸಿ... ಮಗನನ್ನು ಹುಡುಕಿಕೊಡಿ, " ಎಂದು ಕೇಳಿಕೊಂಡರು .ವನಪಾಲಕರಿಗೆ ಮಗನನ್ನು ಬಿಟ್ಟು ಬಂದ ಜಾಗದ ಬದಲು ಬೇರೆ ಸ್ಥಳವನ್ನು ತೋರಿಸಿ, 'ಇದೆ ಜಾಗದಲ್ಲಿ ಮಗ ತಪ್ಪಿಸಿಕೊಂಡಿದ್ದು,' ಎಂದು ದಾರಿ ತಪ್ಪಿಸುವ ಕೆಲಸ ಮಾಡಿದರು! ಆದರೆ ದೇವ ಸಂಕಲ್ಪ ಬೇರೆಯೇ ಆಗಿತ್ತು!    ಅಲ್ಲಿ ಇಲ್ಲಿ ಅಡ್ಡಾಡುತ್ತಿದ್ದ ಅಭಿಜಿತ್ ವನಪಾಲಕರ ಕಣ್ಣಿಗೆ ಬಿದ್ದಿದ್ದ. ಈ ವಿಷಯವನ್ನು ಅಧಿಕಾರಗಳ ಗಮನಕ್ಕೆ ತಂದಾಗ, ವಿಧಿಯಿಲ್ಲದೆ, ಮನೆಗೆ ಕರೆದುಕೊಂಡು ಹೋಗಬೇಕಾಯಿತು!        ಕೊಲ್ಲುವ ಪ್ರಯತ್ನ ಕೂಡಾ ಫಲಿಸಲಿಲ್ಲ. ತಮ್ಮ ಪ್ರಯತ್ನ ವಿಫಲವಾಗಿದ್ದರಿಂದ ಕುಪಿತಗೊಂಡರು ವಿಶ್ವ ಮತ್ತು ಪದ್ಮ! ಅಭಿಜಿತನಿಗೆ ಮನಬಂದಂತೆ ಥಳಿಸಿ, 'ನಮ್ಮ ನೆಮ್ಮದಿ ಕಿತ್ತುಕೊಳ್ಳಲು ಹುಟ್ಟಿದ್ದಾನೆ,' ಎಂದು ಶಪಿಸಿ ಕಣ್ಣೀರು ಹಾಕಿದರು. ರೂಮಿನಲ್ಲಿ ಕೂಡಿ ಹಾಕಿದರು! ಪ್ರಯತ್ನ ಬಿಡಲಿಲ್ಲ! ಕೊಲ್ಲುವ ಕೊನೇ ಪ್ರಯತ್ನ ಮಾಡಿದರು!        ಮನೆಯ ಕಂಪೌಂಡ್ನಲ್ಲಿದ್ದ ಗಿಡಗಳಿಗೆ ಕೀಟನಾಶಕ ಸಿಂಪಡಿಸಲು ತಂದಿಟ್ಟಿದ್ದು ನೆನಪಾಯಿತು. ತನ್ನ ಯೋಜನೆಯನ್ನು ವಿಶ್ವ ಹೆಂಡತಿಗೆ ತಿಳಿಸಿದ. ಹೆದರಿದ ಪದ್ಮ, ಸ್ಪಷ್ಟವಾಗಿ ಹೇಳದಿದ್ದರೂ, ಸಮ್ಮತಿ ನೀಡಿದ್ದಳು. ಕಾಡಿನಲ್ಲಿ ಮಗನನ್ನು ಬಿಟ್ಟು ಬಂದಾಗ ಆದಷ್ಟು ತಳವಳ ಈಗ ಇರಲಿಲ್ಲ. ಮನಸ್ಸು ಕಲ್ಲಾಗಿತ್ತು!      ಅಭಿಜಿತ್ ಆಗಷ್ಟೇ ನಿದ್ದೆ ಮಾಡಿ ಎದ್ದಿದ್ದ! ಹಸಿವು ಬಾಧಿಸುತ್ತಿತ್ತು. ಹಸಿವಾದಾಗ ಏನೇ ಕೊಟ್ಟರೂ ತಿನ್ನುತ್ತಿದ್ದ. ಎಷ್ಟು ತಿಂದರೂ ಸಾಲದು.  "ಬಕಾಸುರ, ಇವನಿಗೆ ತಿನ್ನಿಸುವುದರಲ್ಲೇ ನಮ್ಮ ಹಣ ಖಾಲಿ ಆಗುತ್ತೆ, ಜೊತೆಗೆ ನಮ್ಮ ಆಯಸ್ಸು ಮುಗಿದು ಹೋಗುತ್ತೆ!"  ಹೀಗೆ ಅದೆಷ್ಟೋ ಬಾರಿ  ಗೊಣಗಿದ್ದರು ದಂಪತಿಗಳು. ಎದ್ದ ಕೂಡಲೇ ರಂಪಾಟ ಶುರು ಮಾಡಿದ್ದ.       "ಮೊದಲು ಜ್ಯೂಸ್ ಕುಡಿ, ಆಮೇಲೆ ಊಟ ಮಾಡು," ಎಂದ ವಿಶ್ವ ಅವನ ಮುಂದೆ ಕೀಟನಾಶಕ ಔಷಧಿ ಇಟ್ಟ! ಹಸಿವು ಬಾಧಿಸುತ್ತಿತ್ತು. ಏನೂ ಅರಿಯದ ಅಭಿಜಿತ್ ಬಾಟಲಿ ಎತ್ತಿಕೊಂಡು ಗಟಗಟನೆ ಕುಡಿದ! ಆ ಕ್ಷಣದಲ್ಲಿ ವಿಷಕಂಠನೇ ಆಗಿದ್ದ! ಉರಿ ಉರಿ ಎಂದು ಬೊಬ್ಬೆ ಹೊಡೆದ! ವಾಂತಿ ಮಾಡತೊಡಗಿದ! ಉರುಳಾಡಿ, "ಅಮ್ಮಾ! ಅಮ್ಮಾ!!" ಎಂದು ಬೊಬ್ಬೆ ಹೊಡೆದ! ಮಗನ ಆಕ್ರಂದನ ನೋಡಲಾರದೆ ರೂಮು ಸೇರಿಕೊಂಡರು ದಂಪತಿಗಳು. ನಿತ್ರಾಣಗೊಂಡ ಅಭಿಜಿತ್ ವಾಂತಿಯ ಮಡುವಿನಲ್ಲೇ ಮಲಗಿದ್ದ! ಸಮಯ ಕಳೆದಂತೆ ಧ್ವನಿ ಕ್ಷೀಣಿಸುತ್ತಿತ್ತು! ಉಸಿರು ನಿಂತಿತ್ತು! ಅಪ್ಪ- ಅಮ್ಮನ ಸ್ವೇಚ್ಛಾಚಾರದ ಬದುಕಿನ ಹುಚ್ಚಾಟಕ್ಕೆ ಬಲಿಯಾಗಿದ್ದ ಅಭಿಜಿತ್!         ಏನೂ ತಿಳಿಯದಂತೆ, ಆಸ್ಪತ್ರೆಗೆ ಸೇರಿಸಿ, ಬೊಬ್ಬೆ ಹಾಕಿದರು. ಮೊಸಳೆ ಕಣ್ಣೀರಿಗೆ ಕೊನೆಯೇ ಇರಲಿಲ್ಲ. ಅಭಿಜಿತ್ ಇಹಲೋಕ ತ್ಯಜಿಸಿದ್ದ! ಅಪ್ಪ ಅಮ್ಮನ ಸ್ವಚ್ಛಂದ ಬದುಕಿನ ವಿಕೃತಿಗೆ ತುತ್ತಾಗಿ ಚಿರನಿದ್ರೆಗೆ ಜಾರಿದ್ದ ಅಭಿಜಿತ್!       ಹಣದ ಪ್ರಭಾವ... ಕಾಟಾಚಾರದ ತನಿಖೆ ಮುಗಿಯಿತು. ಆಕಸ್ಮಿಕ ಘಟನೆ ಎಂದು ಪ್ರಕರಣಕ್ಕೆ ಅಂತ್ಯಹಾಡಿದ್ದರು ಪೊಲೀಸರು.       ವಿಶ್ವ ಮತ್ತು ಪದ್ಮ ಅವರ ದಾರಿಯಲ್ಲಿ ಯಾವುದೇ ಅಡಚಣೆ ಇರಲಿಲ್ಲ. ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಮುಂದಾದರು! ತಮ್ಮದೇ ಪ್ರಪಂಚ! ಪಬ್, ರೆಸಾರ್ಟ್, ಮೋಜು ಮಸ್ತಿಯಲ್ಲಿ ತೊಡಗಿದರು!      ಪಾಪದ ಮೂಟೆ ಹೊತ್ತು ಎಷ್ಟು ದಿನ ಇರಲು ಸಾಧ್ಯ? ಕರ್ಮ ಹಿಂಬಾಲಿಸುತ್ತದೆ ಎಂಬ ಅರಿವೂ ಇರಲಿಲ್ಲ! ಅಭಿಜಿತ್ ಕೊನೆಯುಸಿರೆಳೆದು ತಿಂಗಳು ಕಳೆದಿತ್ತು. ಅಮೆರಿಕಾಕ್ಕೆ ಹೊರಡುವ ತಯಾರಿ ನಡೆಸಿದ್ದರು! ಹೊರಡುವ ಒಂದು ವಾರ ಮೊದಲು ಜೋಗ ಜಲಪಾತದ ವೈಭವವನ್ನು ಸವಿಯುವ ಮನಸ್ಸಾಯಿತು! ಆಗಷ್ಟೇ ಮಳೆ ಬಂದು ಶರಾವತಿ ಮೈ ದುಂಬಿ ಹರಿಯುತ್ತಿದ್ದಳು. ಜೋಗಜಲಪಾತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿತ್ತು!    ಲಾಂಗ್ ಡ್ರೈವ್ ಮಾಡುವ ಹುಚ್ಚು ವಿಶ್ವನಿಗೆ.  ಬೆಳಿಗ್ಗೆ ಎದ್ದು ಬಾಡಿಗೆ ಕಾರನ್ನು ತೆಗೆದುಕೊಂಡು ಹೋಗಲು ನಿರ್ಧರಿಸಿದರು.      ಸುಮಧುರ ಗೀತೆಗಳನ್ನು ಕೇಳುತ್ತಾ ಡ್ರೈವ್ ಮಾಡುತ್ತಿದ್ದ ವಿಶ್ವ. ಸುಂದರ, ರಮಣೀಯ ದೃಶ್ಯಗಳನ್ನು ನೋಡುತ್ತಾ ರೋಮಾಂಚನಗೊಂಡಿದ್ದಳು ಪದ್ಮ.  ಸ್ವಚ್ಚಂದ ಜೀವನ! ಯಾವುದೇ ಬಂಧನಗಳು ಇರಲಿಲ್ಲ. ಮಾನಸಿಕ ಹಾಗೂ ಭೌತಿಕ ಬಂಧನಗಳಿಂದ ಮುಕ್ತರಾಗಿ ಹಕ್ಕಿಯಂತೆ ಹಾರುತ್ತಿದ್ದರು! ಉನ್ಮತ್ತನಾಗಿದ್ದ ವಿಶ್ವ ಒಂದು ಕೈಯಲ್ಲಿ ಸ್ಟಿಯರಿಂಗ್ ಹಿಡಿದು, ಮತ್ತೊಂದು ಕೈಯಲಿ ಪದ್ಮಳ ಕೈ ಹಿಡಿದು ಮೃದುವಾಗಿ ಅದುಮಿದ! ಮೊದಲೇ ರೋಮಾಂಚನಗೊಂಡಿದ್ದ ಪದ್ಮ,  ಗಂಡನ ಕೈ ಹಿಡಿದು ತಲೆ ನೇವರಿಸಿದಳು! ಮನಸ್ಸು ತೇಲುತ್ತಿತ್ತು! ಗಾಡಿ ಓಡುತ್ತಿತ್ತು. ಒಂದು ಕ್ಷಣ ವಿಶ್ವ ಮೈ ಮರೆತ! ಮತ್ತಷ್ಟೂ ವೇಗವಾಗಿ ಕಾರು ಓಡುತ್ತಿತ್ತು! ಸರಸದಲ್ಲಿನಿರತನಾಗಿ ಕಾರು ಓಡಿಸುತ್ತಿದ್ದ ಕಾರಣ ನಿಯಂತ್ರಣ ತಪ್ಪಿತು. ಎದುರಿನಿಂದ ಬರುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆಯಿತು. ಹೊಡೆತದ ರಭಸಕ್ಕೆ ಸುಮಾರು ದೂರ ಕಾರು ಹೋಗಿ ಬಿದ್ದಿತು! ದಂಪತಿಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು! ಜನ ಸೇರಿ ರಕ್ಷಿಸುವ ಪ್ರಯತ್ನ ಮಾಡುತ್ತಿದ್ದರು. ಹೆದ್ದಾರಿ ಗಸ್ತು ಪಡೆಯವರು ಆಂಬುಲೆನ್ಸ್ ತರಿಸಿ, ಹತ್ತಿರದ ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು!      ಐಸಿಯು ವಾರ್ಡಿನಲ್ಲಿ ಮಲಗಿದ್ದ ವಿಶ್ವನಿಗೆ ಬಾಹ್ಯ ಪ್ರಪಂಚದ ಅರಿವು ಇರಲಿಲ್ಲ.  ತಾನೆಲ್ಲಿದ್ದೇನೆ ಎಂಬುದೂ ಸಹ ತಿಳಿದಿರಲಿಲ್ಲ. ಬಾಹ್ಯ ಜಗತ್ತನ್ನು ಮರೆತಿದ್ದ... ಅವನ ಪಕ್ಕದಲ್ಲೇ ಪದ್ಮ ಮಲಗಿದ್ದಳು... ಸಾವು ಬದುಕಿನ ಹೋರಾಟ! ಯಾವುದೂ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ! ಪಕ್ಕದಲ್ಲೇ ಮಲಗಿದ್ದ ಹೆಂಡತಿಯ ಪರಿಸ್ಥಿತಿ ಏನಾಗಿದೆ ಎಂಬ ಅರಿವು ಇರಲಿಲ್ಲ! ಹೆಂಡತಿಗಾಗಿ ಮನ ಮಿಡಿಯುತ್ತಿತ್ತು! ಬಾಯ್ಬಿಟ್ಟು ಕೇಳುವ ಸ್ಥಿತಿಯಲ್ಲಿರಲಿಲ್ಲ! ನಿತ್ರಾಣಗೊಂಡಿದ್ದ ವಿಶ್ವ ಕಷ್ಟಪಟ್ಟು ಗೋಣು ತಿರುಗಿಸಿದ! ಯಾರೋ ಮಲಗಿರುವುದು ಮಸುಕು ಮಸುಕಾಗಿ ಕಂಡಿತು! "ಜೀವ ಹೋಗಿದೆ, ಶವಾಗಾರಕ್ಕೆ ಹಾಕಿ," ಎಂದು ಹೇಳಿದ್ದು ಎಲ್ಲಿಂದಲೂ ಹೇಳಿದಂತೆ ಕೇಳಿಸಿತು.  ಧ್ವನಿ ಕ್ಷೀಣಿಸಿತ್ತು... ಕೊರಡಿನಂತೆ ಬಿದ್ದಿದ್ದ ವಿಶ್ವ... ಜೀವಂತ ಶವ!  ಉಸಿರು ನಿಲ್ಲುವ ಕೋನೇ ಕ್ಷಣದಲ್ಲಿ ನೂರಾರು ಘಟನೆಗಳು ಸ್ಮತಿ ಪಟಲವನ್ನು ಆವರಿಸಿತ್ತು! ಕರ್ಮ ಹಿಂಬಾಲಿಸಿತ್ತು! ಮಗನ ನೆನಪಾಯಿತು! ಕಣ್ಣಂಚಿನಿಂದ ಹನಿಯೊಂದು ಕೆನ್ನೆ ಮೇಲೆ ಉರುಳಿತ್ತು! ಹೌದು ಅದು ಕೊನೇ ಹನಿಯಾಗಿತ್ತು!      ಹಕ್ಕಿಯಂತೆ ಹಾರಾಡುವ ಕನಸು ಕಂಡಿದ್ದ ದಂಪತಿಗಳ ಪ್ರಾಣ ಪಕ್ಷಿ ಹಾರಿಹೋಗಿತ್ತು!! - ರಾಮಮೂರ್ತಿ ಸೋಮನಹಳ್ಳಿ  


Rate this content
Log in

Similar kannada story from Classics