STORYMIRROR

Ramamurthy Somanahalli

Classics Inspirational

4  

Ramamurthy Somanahalli

Classics Inspirational

ಪಾರ್ಕ್ ಬೆಂಚುಗಳು ಹೇಳಿದ ಕಥೆ!? - ರಾಮಮೂರ್ತಿ ಸೋಮನಹಳ್ಳಿ

ಪಾರ್ಕ್ ಬೆಂಚುಗಳು ಹೇಳಿದ ಕಥೆ!? - ರಾಮಮೂರ್ತಿ ಸೋಮನಹಳ್ಳಿ

8 mins
17

*ಪಾರ್ಕ್ ಬೆಂಚುಗಳು ಹೇಳಿದ ಕಥೆ!?*            (ಸಣ್ಣ ಕಥೆ)           ವಿಶಾಲ್, IAS.,  ಆಗಷ್ಟೇ ನಿವೃತ್ತರಾಗಿದ್ದರು. ಪ್ರತಿದಿನ ಹತ್ತುಹಲವಾರು ಸಮಸ್ಯೆಗಳ ಕಡತಗಳನ್ನು ವಿಲೇವಾರಿ ಮಾಡುತ್ತಾ, ಜಿಲ್ಲೆಯ ಆಡಳಿತ ವ್ಯವಸ್ಥೆ ನೋಡಿಕೊಂಡು, ಜನರ ಪ್ರೀತಿಗೆ ಪಾತ್ರರಾಗಿದ್ದರು. ಖಡಕ್ ಜಿಲ್ಲಾಧಿಕಾರಿ ಎಂಬ ಅಗ್ಗಳಿಕೆ. ಇದು ಸ್ವಲ್ಪ ಅವರ ತಲೆಗೇರಿತ್ತು.      ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಮುಂದೆ ಕೈಕಟ್ಟಿ ನಿಂತು ಸಲಾಂ ಹೊಡೆದಾಗ ಹೇಳಲಾರದ ಆನಂದ! ಊರಿನ ಪ್ರತಿಷ್ಠಿತ ವ್ಯಕ್ತಿಗಳು ತಮ್ಮ ಕೆಲಸ ಕಾರ್ಯಕ್ಕೆ ಕಚೇರಿಗೆ ಬಂದಾಗ ಗಂಟೆ ಗಟ್ಟಲೆ ಕಾಯಿಸಿ, ಭೇಟಿಗೆ ಅವಕಾಶ ನೀಡುತ್ತಿದ್ದರು. ಇದರಿಂದ ತನ್ನ ಪ್ರತಿಷ್ಠೆ ಹೆಚ್ಚುತ್ತದೆ ಎಂದು ನಂಬಿದ್ದರು.    "ಸರ್, ಜಿಲ್ಲಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷರು ತಮ್ಮನ್ನು ಭೇಟಿ ಮಾಡಲು ಬಂದಿದ್ದಾರೆ," ಎಂದು ಆಪ್ತ ಸಹಾಯಕ ತಿಳಿಸಿದಾಗ, ತಲೆ ಎತ್ತಿ ನೋಡಿ, "ಅವರ ಭೇಟಿ ಈ ಮೊದಲೇ ನಿಗದಿ ಆಗಿತ್ತಾ," ಎಂದು ಪ್ರಶ್ನಿಸಿ ಕಡತದತ್ತ ಕಣ್ಣು ಹಾಯಿಸುತ್ತಿದ್ದರು.     ವಿಶಾಲ್ ಅವರನ್ನು ಭೇಟಿ ಮಾಡಲು ಪೂರ್ವಾನುಮತಿ ಅಗತ್ಯವಿತ್ತು.  ಹಾಗಿದ್ದರೂ ಸುಲಭವಾಗಿ ಭೇಟಿ ಆಗುತ್ತಿರಲಿಲ್ಲ.  ಅವರ ಭೇಟಿಗಾಗಿ ಕಾಯಬೇಕಿತ್ತು. ಇದರ ಮಧ್ಯೆ, ಶಾಸಕರು, ಉಸ್ತುವಾರಿ ಸಚಿವರು ಬಂದರೆ, ಅವರಿಗೆ ಆದ್ಯತೆ ನೀಡಬೇಕಿತ್ತು. ಗಂಟೆಗಟ್ಟಲೆ ಕಾಯಿಸುವ ವಿಷಯದಲ್ಲಿ ಜಿಲ್ಲೆಯ ಪ್ರಮುಖರಿಗೆ ಸ್ವಲ್ಪ ಅಸಮಾಧಾನ ಇತ್ತಾದರೂ, ಅವರ ಕಷ್ಟ ಸುಖಕ್ಕೆ ಸ್ಪಂದಿಸಿ, ನೆರವಾಗುತ್ತಿದ್ದರಿಂದ, ಅವರ ಬಗ್ಗೆ ಗೌರವ ಇತ್ತು.       ನಿವೃತ್ತಿಯಾದ ನಂತರ ತಮ್ಮ ಹುಟ್ಟೂರಾದ ಮಂಗಳೂರಿಗೆ ಬಂದು ನೆಲಸಿದರು. ಮಕ್ಕಳು ತಮ್ಮ ತಮ್ಮ ಉದ್ಯೋಗ ಅರಸಿ ಹೋಗಿದ್ದರು. ಮಗ ವಿದೇಶದಲ್ಲಿದ್ದರೆ, ಮಗಳು ದೆಹಲಿಯಲ್ಲಿ ಗಂಡನ ಜೊತೆ ವಾಸಮಾಡುತ್ತಿದ್ದಳು.  ಹಾಗಾಗಿ, ಅವರು ಹೆಂಡತಿ ಜೊತೆ ಮಂಗಳೂರಿನಲ್ಲೇ ವಾಸ ಮಾಡಲು ನಿರ್ಧರಿಸಿದರು. ಮನೆಯಲ್ಲಿ ಒಂಟಿತನ... ಕಾಲ ಕಳೆಯಲು ಒಂದು ನಾಯಿ ಸಾಕಿದ್ದರು... ಹೆಸರು ಜೂಲಿ. ದಿನಕಳೆದಂತೆ ಅದು ಕುಟುಂಬದ ಸದಸ್ಯರಲ್ಲಿ ಒಂದಾಗಿತ್ತು.    ಈ ಹಿಂದೆ ಎಂದೂ ಸಹ ಮಂಗಳೂರಿನಲ್ಲಿ ಕೆಲಸ ಮಾಡದ ಕಾರಣ ಅಷ್ಟೇನೂ ಜನ ಸಂಪರ್ಕವಿರಲಿಲ್ಲ. ಆತ್ಮೀಯ ಸ್ನೇಹಿತರೂ ಇರಲಿಲ್ಲ. ದೂರದ ಸಂಬಂಧಿಕರು ಇದ್ದರೂ ವಿಶಾಲ್ ಅವರಿಗೆ, ಅವರ ಒಡನಾಟ ಹೆಚ್ಚಾಗಿ ಇರಲಿಲ್ಲ.  ಕಾಲಕಳೆಯಲು ಕದ್ರಿ ಪಾರ್ಕಿಗೆ ಜೂಲಿಯೊಂದಿಗೆ  ಹೋಗಿ, ಸ್ವಲ್ಪ ವಾಕಿಂಗ್ ಮಾಡಿ ಅಲ್ಲೇ ಕುಳಿತು ಮನಸ್ಸಾದಾಗ ಮನೆಗೆ ಹಿಂದಿರುಗುತ್ತಿದ್ದರು.      ವಿಶಾಲ್ ರವರಿಗೆ ತಮ್ಮನ್ನು ತಾವು ಬಣ್ಣಿಸಿಕೊಳ್ಳುವ ಚಟ ಮೊದಲಿನಿಂದಲೂ ಇತ್ತು. ಜಿಲ್ಲೆಗೆ ಸಂಬಂಧಿಸಿದಂತೆ ಯಾವುದಾದರೂ ಕ್ಲಿಷ್ಟಕರ ಸಮಸ್ಯೆಗಳನ್ನು ಪರಿಹರಿಸಿದಾಗ ಟಿ ವಿ, ಪತ್ರಿಕೆಯವರನ್ನು ಕರೆಸಿ ಬೈಟ್ ಕೊಡುತ್ತಿದ್ದರು. ಇನ್ನು ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಪ್ರಶಂಸಿದರೆ ಸಾಕು ಉಬ್ಬಿಹೋಗುತ್ತಿದ್ದರು. ತನ್ನಂತಹ ಸಮರ್ಥ ಅಧಿಕಾರಿ ಯಾರೂ ಇಲ್ಲ ಎಂಬ ಮನೋಭಾವ ಅವರಲ್ಲಿ ಮೂಡಿತ್ತು.      ನೆನೆಗುದಿಗೆ ಬಿದ್ದಿದ್ದ ಕಡತ ವಿಲೇವಾರಿ ಮಾಡಿದಾಗ ಅಥವಾ ಜಿಲ್ಲೆಯ ಸಮಸ್ಯೆಗಳನ್ನು ಪರಿಹರಿಸಿದಾಗ ಅದೇನೋ ಸಾಧನೆ ಮಾಡಿದ್ದೇನೆ ಎಂಬ ತೃಪ್ತಿ! "ಮಹಾದೇವ! ಎಷ್ಟೋ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆನಾ ಕ್ಷಣಮಾತ್ರದಲ್ಲಿ ಪರಿಹರಿಸಿದ್ದೀನಿ, ಜನ ಏನು ಹೇಳ್ತಾರೆ? ಈ ಹಿಂದಿನ ಜಿಲ್ಲಾಧಿಕಾರಿಗಳಿಗೆ ಈ ಸಮಸ್ಯೆನಾ ಪರಿಹರಿಸಲು ಏಕೆ ಸಾಧ್ಯವಾಗಲಿಲ್ಲ," ಎಂದು ತಮ್ಮ ಆಪ್ತ ಸಹಾಯಕರನ್ನು ಕೇಳಿ, ತಾನೋರ್ವ ದಕ್ಷ ಅಧಿಕಾರಿ ಎಂದು ಬಿಂಬಿಸಿಕೊಳ್ಳುತ್ತಿದರು.    "ಹೌದು ಸಾರ್! ತಮ್ಮಷ್ಟು ಸುಲಭವಾಗಿ ಸಮಸ್ಯೆ ಪರಿಹರಿಸಲು ಯಾರಿಗೂ ಸಾಧ್ಯವಾಗಿರಲಿಲ್ಲ. ಇಡೀ ಜಿಲ್ಲೆಯ ಜನ ನಿಮ್ಮನ್ನ ಹೊಗಳುತ್ತಾರೆ, ಟಿ.ವಿ, ಪತ್ರಿಕೆಗಳಲ್ಲಿ ನಿಮ್ಮದೇ ಸುದ್ಧಿ," ಎಂದಾಗ ಇನ್ನಿಲ್ಲದ ಸಂತೋಷ. ಆನಂದ ಸಾಗರದಲ್ಲಿ ತೇಲುತ್ತಿದ್ದರು. ಹೊಗಳಿ ಅಧಿಕಾರಿಗಳ ಮನ ಗೆಲ್ಲುವ ಕಲೆ ಮಹಾದೇವನಿಗೆ ಕರಗತವಾಗಿತ್ತು!      ಪಾರ್ಕಿಗೆ ಹೋಗಿ ಬಂದು ಮಾಡುತ್ತಿದ್ದಾಗ ಅಲ್ಲಿಗೆ ಬರುತ್ತಿದ್ದ ವೃದ್ಧರ ಸಂಪರ್ಕ ಹೆಚ್ಚಾಯಿತು. ಮೊದಲೇ ಪ್ರತಿಷ್ಠೆಗೆ ಜೋತುಬಿದ್ದ ವಿಶಾಲ್, ಅಲ್ಲೂ ಸಹ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದವರನ್ನೇ ಹೆಚ್ಚಾಗಿ ಮಾತಾಡಿಸುತ್ತಿದ್ದರು. ಮಾತಾಡಿಸುವುದೆಂದರೆ, ಏಕಮುಖ ಮಾತು. ವಿಶಾಲ್ ಹೇಳಿದ್ದನ್ನು ಕೇಳಬೇಕು ಅಷ್ಟೇ. ಅವರ ಮುಂದೆ ತಾವು ವಿವಿಧ ಜಿಲ್ಲೆಗಳಲ್ಲಿ, ನಿರ್ವಹಿಸಿದ ಕೆಲಸಗಳ ಬಗ್ಗೆ, ಸಾಧನೆಗಳ ಬಗ್ಗೆ ಹೇಳುತ್ತಿದ್ದರು. ಎಷ್ಟೇ ಆಗಲಿ ನಿವೃತ್ತ ಜಿಲ್ಲಾಧಿಕಾರಿ! ಗೌರವ ನೀಡಿ ಅವರ ಮಾತನ್ನು ಉಳಿದವರು ಕೇಳಿಸಿಕೊಳ್ಳುತ್ತಿದ್ದರು. ಅವರಿಗೆ ಮಾತಾಡಲು ಅವಕಾಶವನ್ನೇ ಕೊಡುತ್ತಿರಲಿಲ್ಲ.    ದಿನ ಕಳೆದಂತೆ ವಿಶಾಲ್ ಅವರ ಆರೋಗ್ಯ ಹದಗೆಡುತ್ತಿತ್ತು. ಜೊತೆಗೆ ಹೆಂಡತಿ ಸರೋಜ ಅವರ ಆರೋಗ್ಯ ಸಹ ಸರಿ ಇರಲಿಲ್ಲ.    ವಿದೇಶದಲ್ಲಿದ್ದ ಮಗ ರಮೇಶ ವರ್ಷಕ್ಕೊಮ್ಮೆ ಬಂದು ಹೋಗುತ್ತಿದ್ದ. ಪೂರ್ಣಿಮಾ ದೆಹಲಿಯಲ್ಲಿ ಗಂಡನ ಜೊತೆ ಇದ್ದಳು. ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಿದ್ದಳು.     ದಿನದಿಂದ ದಿನಕ್ಕೆ ಹೆಂಡತಿಯ ಆರೋಗ್ಯ ಬಿಗಡಾಯಿಸಿದ್ದರಿಂದ ಊಟ ತಿಂಡಿಗೂ ಕಷ್ಟವಾಗುತ್ತಿತ್ತು. ಕಷ್ಟದಲ್ಲೆಯೇ ದಿನ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿತ್ತು!     ಅದೊಂದು ದಿನ ಸರೋಜ ಅವರಿಗೆ ತಲೆ ಸುತ್ತಿದ ನೆಪವಷ್ಟೇ! ನೆಲದಮೇಲೆ ಬಿದ್ದ ಪರಿಣಾಮ ಜ್ಞಾನ ತಪ್ಪಿದರು.  ಮನೆ ಕೆಲಸದ ಜಯಮ್ಮನ ಸಹಾಯ ಪಡೆದು ಆಸ್ಪತ್ರೆಗೆ ಸೇರಿಸಿ, ಹೆಂಡತಿಯ ಚಿಕಿತ್ಸೆ ಮುಂದುವರಿಸಿದ್ದರು. ಒಂದೇ ಒಂದು ದಿನವೂ ಅಡುಗೆ ಮನೆ ನೋಡದ ವಿಶಾಲ್ ಅವರಿಗೆ ಇನ್ನಿಲ್ಲದ ಸಮಸ್ಯೆಗಳು ಕಾಡತೊಡಗಿದವು. ಸಂಬಳ ಹೆಚ್ಚು ನೀಡುವುದಾಗಿ ಹೇಳಿ, ಮನೆ ಕೆಲಸದ ಜಯಮ್ಮನಿಗೆ ಅಡುಗೆ ಮನೆ ಜವಾಬ್ದಾರಿ ವಹಿಸಿದ್ದರು.       ಹೆಂಡತಿ ತೀವ್ರವಾಗಿ ಬಳಲಿ ದಿನದಿಂದ ದಿನಕ್ಕೆ  ಆರೋಗ್ಯ ಹದಗೆಟ್ಟಿದ್ದನ್ನು ಗಮನಿಸಿ, ಮಗಳು ಪೂರ್ಣಿಮಾ ಮತ್ತು ಮಗ ರಮೇಶನಿಗೆ ವಿಷಯ ತಿಳಿಸಿದರು.    ರಮೇಶ ವಿದೇಶದಿಂದ ಬಂದಿಳಿದ.  ಪೂರ್ಣಿಮಾ ಸಹಾ ದೆಹಲಿಯಿಂದ ಬಂದು ಅಪ್ಪ ಅಮ್ಮನ ಪರಿಸ್ಥಿತಿ ಕಂಡು ನೊಂದುಕೊಂಡಳು.  ಆದರೆ ಅವಳೇನೂ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಕಾರಣ ಅವಳೂ ಸಹ ಕೆಲಸಕ್ಕೆ ಹೋಗುತ್ತಿದ್ದಳು. ಕೆಲಸ ಬಿಟ್ಟು ಅಪ್ಪ ಅಮ್ಮನನ್ನು ನೋಡಿಕೊಳ್ಳುವುದಾದರೂ ಹೇಗೆ? ಚಿಂತೆ ಹೆಚ್ಚಾಯಿತು.      ಸರೋಜಮ್ಮನ ಪರಿಸ್ಥಿತಿ ಚಿಂತಾಜನಕವಾಯಿತು. ಚಿಕಿತ್ಸೆ ಫಲ ನೀಡಲಿಲ್ಲ. ಕೊನೆಯುಸಿರೆಳೆದರು.      ಹೆಂಡತಿಯ ಮರಣದ ನಂತರ ವಿಶಾಲ್ ಅಕ್ಷರಶಃ ಒಂಟಿಯಾಗಿದ್ದರು. ಏನು ಮಾಡಬೇಕೆಂದು ತಿಳಿಯಲಿಲ್ಲ. ಮಗಳ ಜೊತೆ ಇರಲು ಮನಸ್ಸು ಒಪ್ಪಲಿಲ್ಲ. ರಮೇಶ ಹಲವಾರು ತಾಂತ್ರಿಕ ಕಾರಣ ನೀಡಿ, ತನ್ನ ಜೊತೆ ಇಟ್ಟುಕೊಳ್ಳಲು ಆಗುವುದಿಲ್ಲವೆಂದು ತನ್ನ ಅಸಹಾಯಕತೆ ವ್ಯಕ್ತಪಡಿಸಿದ.        ಅಣ್ಣನೊಂದಿಗೆ ಚರ್ಚಿಸಿದಳು ಪೂರ್ಣಿಮಾ. ಈಗಿನ ಪರಿಸ್ಥಿತಿಯಲ್ಲಿ, ತನ್ನ ಮನೆಯಲ್ಲಿ, ಅಪ್ಪನನ್ನು ನೋಡಿಕೊಳ್ಳಲು ಕಷ್ಟವಾಗುತ್ತದೆ, ಮೊದಲೇ ಅವರ ಆರೋಗ್ಯ ಹದಗೆಟ್ಟಿದೆ, ತಾನು ಕೆಲಸಕ್ಕೆ ಹೋಗುವುದರಿಂದ ನೋಡಿಕೊಳ್ಳುವುದು ಕಷ್ಟ ಎಂದು ತನ್ನ ಸಮಸ್ಯೆ ಹೇಳಿಕೊಂಡಳು.     ಅಣ್ಣಾ ತಂಗಿ ಚರ್ಚಿಸಿ, ಈಗಿನ ಪರಿಸ್ಥಿತಿಯಲ್ಲಿ ಅಪ್ಪನನ್ನು ಯಾವುದಾದರೂ, ಎಲ್ಲಾ ರೀತಿಯ ಸೌಕರ್ಯವುಳ್ಳ ಒಳ್ಳೆಯ ವೃದ್ಧಾಶ್ರಮಕ್ಕೆ ಸೇರಿಸುವುದೆ ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದರು.      ಮಂಗಳೂರಿನಲ್ಲಿರುವ ಪ್ರತಿಷ್ಠಿತ ವೃದ್ಧಾಶ್ರಮದಲ್ಲಿ ವಿಚಾರಿಸಿ, ಯಾವುದಕ್ಕೂ ಕೊರತೆ ಇಲ್ಲದ, ಎಲೈಟ್ ಸೇವಾಶ್ರಮದ ವ್ಯವಸ್ಥಾಪಕರನ್ನು ಸಂಪರ್ಕಿಸಿ ಚರ್ಚಿಸಿದರು.      ಊಟ ತಿಂಡಿ, ಧ್ಯಾನಮಂದಿರ, ಪ್ರತ್ಯೇಕ ಕೊಠಡಿ, ಟಿ ವಿ ವ್ಯವಸ್ಥೆ, ಧ್ಯಾನ ಕೇಂದ್ರ ಇತ್ಯಾದಿ ವ್ಯವಸ್ಥೆ ಇತ್ತು. ಐಷಾರಾಮಿ ಜೀವನ. ಯಾವುದಕ್ಕೂ ಕೊರತೆ ಇಲ್ಲ ಎನಿಸಿತು.      ಎಲೈಟ್ ಸೇವಾಶ್ರಮಕ್ಕೆ ಸೇರಿಸುವ ವಿಷಯವನ್ನು ಮಕ್ಕಳು ತಿಳಿಸಿದಾಗ ವಿಶಾಲ್ ಅವರ ನಿಂತ ನೆಲ ಕುಸಿಯಿತು. ತೀವ್ರ ಆಘಾತಕ್ಕೊಳಗಾದರು. ಏಕಾಂತವಾಗಿ ಕುಳಿತು ಕಣ್ಣೀರು ಸುರಿಸಿದರು. ಗತ ಜೀವನ ಕಣ್ಮುಂದೆ ಸುಳಿದು ಅಣಕಿಸಿತು. ಎಲ್ಲವೂ ಕನಸು ಎನಿಸಿತು. ವಿಧಿಯಿಲ್ಲದೆ ಒಪ್ಪಿದರು ವಿಶಾಲ್!        ಅಪ್ಪ ವೃದ್ಧಾಶ್ರಮದಲ್ಲಿ ಇರಲು ಒಪ್ಪಿದ್ದರಿಂದ ನಾಯಿ ಜೂಲಿಯನ್ನು ಪ್ರಾಣಿಗಳನ್ನು ಸಾಕುವ ಕೇಂದ್ರಕ್ಕೆ ಬಿಟ್ಟು ಬಂದರು.      ತಮ್ಮ ಅಚ್ಚುಮೆಚ್ಚಿನ ಜೂಲಿಯನ್ನು ತೊರೆಯುವಾಗ ಸಹಿಸಲಾರದ ನೋವು ಕಾಡಿತು. ದುಃಖ ತಡೆದುಕೊಳ್ಳಲಾಗದೆ ಅತ್ತುಬಿಟ್ಟರು. ಮನೆಯಲ್ಲಿ ತನಗೇ ಜಾಗವಿಲ್ಲ, ಇನ್ನು ನಾಯಿಗೆ ಎಲ್ಲಿ ಬೆಲೆ? ಹೃದಯ ಭಾರವಾಯಿತು.    ಮನೆ ಬಿಡುವಾಗ ನಾಲ್ಕಾರು ಬಟ್ಟೆ ಇದ್ದ ಸೂಟ್ಕೇಸ್ ಬಿಟ್ಟರೆ ಏನೂ ಇರಲಿಲ್ಲ. ಎಲ್ಲವನ್ನೂ ಬಿಟ್ಟು ತೆರಳಬೇಕು! ಗೋಡೆ ಮೇಲೆ ನೇತು ಹಾಕಿದ್ದ ಸನ್ಮಾನದ ಫೋಟೋಗಳು, ಗಣ್ಯರಿಂದ ಹಾರ ಹಾಕಿಸಿಕೊಂಡ ಪೋಟೋ, ಮೈಸೂರು ಪೇಟ, ಸನ್ಮಾನಪತ್ರಗಳು! ಒಮ್ಮೆ ನೋಡಿ ಶುಷ್ಕ ನಗೆ ಬೀರಿದರು! ಆತ್ಮಾಭಿಮಾನವನ್ನೇ ತೊರೆದು ಹೋಗುತ್ತಿರುವಾಗ ಈ ಪ್ರಶಸ್ತಿ ಪತ್ರಗಳಿಗೆ, ಫೋಟೋಗಳಿಗೇನು ಬೆಲೆ? ಮಕ್ಕಳ ದೃಷ್ಟಿಯಲ್ಲಿ ಅವೆಲ್ಲವೂ ಕಸ! ಕಣ್ಣುಗಳು ತೇವಗೊಂಡವು!        ಆಶ್ರಮಕ್ಕೆ ಮಕ್ಕಳ ಜೊತೆ ಪ್ರವೇಶ ಮಾಡುವಾಗ ಹೃದಯ ಹಿಂಡಿದಂತಾಗುತ್ತಿತ್ತು! ಒಳಗೆ ಹೊಕ್ಕಾಗ ವ್ಯವಸ್ಥಾಪಕರು ಕುರ್ಚಿ ಮೇಲೆ ಕುಳಿತು, ನಗುತ್ತಲೇ "ಬನ್ನಿ," ಎಂದರು.       ಒಳ ಹೊಕ್ಕಾಗ ಏನು ಮಾಡಬೇಕೆಂದು ತಿಳಿಯಲಿಲ್ಲ. ಕೈ ಮುಗಿದು ನಿಂತರು.     "ಇವರು ನಮ್ಮ ತಂದೆ, ವಿಶಾಲ್! " ಪರಿಚಯಿಸಿದ ರಮೇಶ.     "ಹೌದಾ?  ನಿಮಗೆ ಒಪ್ಪಿಗೆಯಾದರೆ, ಮುಂದಿನ ಫಾರ್ಮಲಿಟೀಸ್ ಮುಂದುವರಿಸೋಣ," ಎಂದು ಹೇಳಿದ ಮೇನೇಜರ್, ಯಾರೊಂದಿಗೋ ಮಾತಾಡಲು ಫೋನ್ ಎತ್ತಿಕೊಂಡರು.     ತಾನೊಬ್ಬ, ನಿವೃತ್ತ ಜಿಲ್ಲಾಧಿಕಾರಿ ಎಂದು ತಿಳಿದಿದ್ದರೂ ಸಹ ಕುಳಿತುಕೊಳ್ಳಲು ಹೇಳುವಷ್ಟು ಕನಿಷ್ಠ ಸೌಜನ್ಯ ತೋರದ ಮೇನೇಜರ್ ಅವರ ಕೆನ್ನೆಗೆ ಬಾರಿಸಬೇಕೆನಿಸಿತು. ಆದರೆ, ಏನೂ ಮಾಡುವ ಹಾಗಿರಲಿಲ್ಲ.  ಒಳಮನಸ್ಸು ಜಾಗೃತವಾಯಿತು!  'ಅವರ ಕಚೇರಿ. ಅವರ ಅಧೀನದಲ್ಲಿರಬೇಕು!'     ಹಳೆಯ ಘಟನೆಗಳು ಕಣ್ಮುಂದೆ ಸುಳಿದು ಹೋದವು. ಅದೆಷ್ಟು ಜನ ತನ್ನ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದರು! ಅದೆಷ್ಟು ಸಂಘ ಸಂಸ್ಥೆಗಳು ತನ್ನ ಸಾಧನೆ ಮೆಚ್ಚಿ ಸನ್ಮಾನ ಮಾಡಿ, ಪ್ರಶಂಸಾ ಪತ್ರವನ್ನು ನೀಡಿದ್ದರು! ನಿರೀಕ್ಷೆಗೂ ಮೀರಿ ಗೌರವ ನೀಡುತ್ತಿದ್ದ ದಿನಮಾನಗಳು ನೆನಪಿನ ಬುತ್ತಿಯಿಂದ ಇಣುಕಿ ಹೋದವು! ಸ್ವಾಭಿಮಾನ, ಪ್ರತಿಷ್ಠೆ ಎಲ್ಲವನ್ನೂ ಬದಿಗಿಟ್ಟು ಇಂದು ಓರ್ವ ಸಾಮಾನ್ಯ ವ್ಯಕ್ತಿಯ ಮುಂದೆ ಕೈ ಕಟ್ಟಿ ನಿಂತುಕೊಳ್ಳಬೇಕಾದ ಪರಿಸ್ಥಿತಿ!  ಅಪಮಾನದ ಜೊತೆಗೆ ಮನಸ್ಸಿಗೆ ನೋವಾಯಿತು. ಆದರೆ ಯಾರಲ್ಲಿ ಹೇಳಿಕೊಳ್ಳುವುದು? ಪ್ರತಿಷ್ಠೆಯನ್ನು ಬದಿಗೊತ್ತಿ, ಯಾರ ಅನುಮತಿಗೂ ಕಾಯದೆ, ತಮ್ಮ ಮುಂದಿದ್ದ ಕುರ್ಚಿಯ ಮೇಲೆ ಕುಳಿತು,    "ನಾನು ವಿಶಾಲ್, IAS, ನಿವೃತ್ತ ಜಿಲ್ಲಾಧಿಕಾರಿ, " ಎಂದು ಗಡುಸಾಗಿಯೇ ಹೇಳಿದರು.     ಇವರ ಮಾತಿಗೆ ಅಷ್ಟೇನೂ ಮನ್ನಣೆ ನೀಡದ ಮೇನೇಜರ್, ಮಾತಾಡುತ್ತಿದ್ದ ಫೋನ್ ಕೆಳಗಿಟ್ಟು, "ok ಸರ್... ಈ ಫಾರ್ಮ್ಸ್ ಗೆ ಸಹಿ ಮಾಡಿ," ಎಂದು ನಿರ್ಲಕ್ಷಿಸಿದರು.     ವಿಶಾಲ್ ಅವರಿಗೆ ವ್ಯವಸ್ಥಾಪಕರ ಮನಸ್ಥಿತಿ ಅರ್ಥವಾಯಿತು. ಅವನ ದೃಷ್ಟಿಯಲ್ಲಿ ಆಶ್ರಮಕ್ಕೆ ತಾನೋರ್ವ ಗಿರಾಕಿ ಅಷ್ಟೇ! ವ್ಯವಹಾರಿಕವಾಗಿ ನಡೆದುಕೊಂಡಿದ್ದರು.        ವಿಶಾಲ್  ಅವರಿಗೆ ಪರಿಸ್ಥಿತಿ ಪಾಠ ಕಲಿಸುತ್ತಿತ್ತು. ಅಧಿಕಾರ ಇದ್ದಾಗ ಮಾತ್ರ ಹಾರ ತುರಾಯಿಗಳ ಸ್ವಾಗತ! ಗೌರವ! ನಿವೃತ್ತಿ ನಂತರ ಎಲ್ಲವೂ ಮರೀಚಿಕೆ.      ಮನಸ್ಸಿಲ್ಲದ ಮನಸ್ಸಿನಿಂದ ಆಶ್ರಮದಲ್ಲಿದ್ದರು ವಿಶಾಲ್. ಪ್ರತೀ ದಿನ ಸಂಜೆ ಆಶ್ರಮದ ಹತ್ತಿರದ ಪಾರ್ಕಿಗೆ ಹೋಗಿಬರಲು ಅನುಮತಿ ಇತ್ತು.      ವಿಶಾಲ್ ಪಾರ್ಕಿಗೆ ಹೋಗಿಬರುತ್ತಿದ್ದರು. ಅಲ್ಲಿಗೆ ಬರುತ್ತಿದ್ದ ವೃದ್ಧರ ಪರಿಚಯ ಆಗಿತ್ತು! ಮೊದಲಿನಂತೆ ಮಾತು ಇರಲಿಲ್ಲ. ಅವರಿವರು ಮಾತಾಡುವುದಕ್ಕೆ ಗೋಣು ತೂಗುತ್ತಿದ್ದರು ವಿಶಾಲ್.      ಆ ಪಾರ್ಕಿಗೆ ಹೆಚ್ಚಿನವರು ನಿವೃತ್ತ ಅಧಿಕಾರಿಗಳೇ ಬರುತ್ತಿದ್ದರು. ಅವರವರ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಎಲ್ಲರಿಗೂ ಒಂದಲ್ಲ ಒಂದು ಸಮಸ್ಯೆ! ಎಲ್ಲರದೂ ವಿಭಿನ್ನ ಕಥೆ! ಎಲ್ಲವನ್ನೂ ತೊರೆದು ಬಂದವರೇ ವಿನಃ ಸಂತೋಷದಿಂದ ಇರಲು ಒಬ್ಬರೂ ಬಂದಿರಲಿಲ್ಲ. ಅನಿವಾರ್ಯತೆ ವೃದ್ಧಾಶ್ರಮವನ್ನು ಅವಲಂಬಿಸುವಂತೆ ಮಾಡಿತ್ತು!      ಒಂದು ದಿನ ಪಾರ್ಕಿನ ಬೆಂಚಿನ ಮೇಲೆ ವಿಶಾಲ್ ಅವರು ಒಬ್ಬರೇ ಕುಳಿತು  ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುತ್ತಿದ್ದರು. ಆ ವೇಳೆಗೆ ವೃದ್ಧರೊಬ್ಬರು ಒಂದೊಂದೇ ಹೆಜ್ಜೆ ಹಾಕುತ್ತಾ, ವಿಶಾಲ್ ಕುಳಿತಿದ್ದ ಕಲ್ಲು ಬೆಂಚಿನ ಬಳಿ ಬಂದು, ಆಕಾಶದತ್ತ ಶೂನ್ಯ ದೃಷ್ಟಿಬೀರಿ, ಕಣ್ಮುಚ್ಚಿ ಕುಳಿತರು. ಅತ್ತಿತ್ತ ನೋಡದೆ ಮೌನವಹಿಸಿದ್ದರು!   ಆಗಾಗ ಕೆಮ್ಮುತ್ತಿದ್ದರು  ಅವರನ್ನು ನೋಡಿ ವಿಶಾಲ್ ಮುಗುಳ್ನಗೆ ಬೀರಿ. ನಿಮ್ಮನ್ನು ನೋಡಿದ್ರೆ, ಆರೋಗ್ಯ ಸರಿಯಿಲ್ಲ ಅನ್ಸುತ್ತೆ! ಆಸ್ಪತ್ರೆಗೆ ಹೋಗೋದು ಬಿಟ್ಟು ಈ ಚಳಿಯಲ್ಲಿ ಪಾರ್ಕಿಗೆ ಯಾಕೆ ಬಂದಿದ್ದೀರಿ? ಪ್ರಶ್ನಿಸಿದರು.     ನಿಧಾನವಾಗಿ ಕಣ್ತೆರೆದು ತದೇಕ ಚಿತ್ತದಿಂದ ನೋಡಿ      "ಏನ್ಮಾಡೋದು ಸ್ವಾಮಿ! ಮನೆಯಲ್ಲಿ ನಾನೀಗ ಮುದಿ ಗೂಬೆ, ಕೆಲಸಕ್ಕೆ ಬಾರದವನು... " ಎಂದು ಹೇಳಿ ಮತ್ತೆ ಮೌನಕ್ಕೆ ಶರಣಾದರು.       ಮತ್ತೆ ಮತ್ತೆ ಅವರನ್ನು ದಿಟ್ಟಿಸಿ ನೋಡಿದರು ವಿಶಾಲ್...  ಎಲ್ಲೋ ನೋಡಿದ ನೆನಪು. ಮಸುಕು ಮಸುಕು! ಸರಿಯಾಗಿ ನೆನಪಿಗೆ ಬರುತ್ತಿಲ್ಲ. ಕುತೂಹಲ ಹೆಚ್ಚಾಯಿತು. ಮನಸ್ಸು ತಡೆಯದೆ ಪ್ರಶ್ನಿಸಿದರು...    "ನಾನು ನಿಮ್ಮನ್ನು ಎಲ್ಲೋ ನೋಡಿದ್ದೀನಿ... ಸರಿಯಾಗಿ ನೆನಪಾಗ್ತಿಲ್ಲ!"      ಆ ವೃದ್ಧ ವ್ಯಕ್ತಿ ನಕ್ಕರು. ಆ ನಗುವಿನಲ್ಲಿ ತುಂಬಾ ಅರ್ಥವಿದೆ ಎನಿಸಿತು.     "ಯಾಕೆ? ಈ ನಗು?"      "ನೆನಪಾಗ್ತಿಲ್ಲ ಅಂದ್ರಲ್ವೇ ತಾವು? ಅದಕ್ಕೆ ನಗು ಬಂತು!"    "ತಪ್ಪು ತಿಳಿಯಬೇಡಿ, ನಿಮ್ಮನ್ನು ನೋಡಿದ ನೆನಪಿದೆ ನನಗೆ. ಅದಕ್ಕೆ ಕೇಳ್ದೆ."      "ನಿಮಗೊಬ್ಬರಿಗೇನು, ಇಡೀ ರಾಜ್ಯಕ್ಕೆ ನಾನು ಚಿರಪರಿಚಿತನಾಗಿದ್ದೆ... ಆದರೆ ಈಗ ಎಲ್ಲಾ ಮರೆತಿದ್ದಾರೆ! ಕಾಲನ ಮಹಿಮೆ!"    ವೃದ್ಧರ ಮಾತು ಮತ್ತಷ್ಟೂ ಒಗಟಾಗಿಯೇ ಕಂಡಿತು. ಅರ್ಥವಾಗಲಿಲ್ಲ. ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸಲು ಇವರಿಗೇನು ಕಷ್ಟ ಎನಿಸಿತು ವಿಶಾಲ್ ಅವರಿಗೆ.    "ಹೀಗೆ ಒಗಟೊಗಟಾಗಿ ಮಾತಾಡುವ ಬದಲು ನೇರವಾಗಿಯೇ ಹೇಳಬಹುದಲ್ಲವೇ?" ಪ್ರಶ್ನಿಸಿದರು ವಿಶಾಲ್.        ತಲೆಮೇಲೆ ಕೈ ಹೊತ್ತು, ಆಕಾಶವನ್ನು ದಿಟ್ಟಿಸಿ ನೋಡಿದ ವೃದ್ಧರು ನೊಂದುಕೊಂಡು ಹೇಳಿದರು...    "ದೇಶ ಕಾಲವೇ ಹಾಗೆ. ಅಧಿಕಾರವಿದ್ದಾಗ ನಮ್ಮ ಸುತ್ತಮುತ್ತ ಜನ ಸುತ್ತುವರಿದು ಕೈ ಮುಗಿಯುತ್ತಾರೆ, ಜೈಕಾರ ಹಾಕ್ತಾರೆ. ಇನ್ನು ಕರಟಕ ದಮನಕರು, ನಮ್ಮನ್ನು ಉಪಾಯವಾಗಿ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡು, "ಸಾಯುವವರೆಗೂ ನಿಮ್ಮ ಉಪಕಾರ ಮರೆಯುವುದಿಲ್ಲ ಅಂತಾರೆ, ಆದರೆ... ಅಧಿಕಾರ ಹೋದ ಮರುಕ್ಷಣದಲ್ಲೇ ನಮ್ಮನ್ನು ಬಿಟ್ಟು ಅಧಿಕಾರಸ್ಥರ ಹಿಂದೆ ಹೋಗ್ತಾರೆ, ಇದೇ ಪ್ರಪಂಚ!"       ವೃದ್ಧರ ಮಾತು ಕೇಳಿ, ವಿಶಾಲ್ ಅವರಿಗೆ ತಮ್ಮದೇ ಪರಿಸ್ಥಿತಿ ಇವರಿಗೆ ಬಂದಿದೆ ಎಂದು ಭಾಸವಾಗುತ್ತದೆ. ಇಬ್ಬರೂ ಸಮಾನ ಮನಸ್ಕರು ಎಂದು ಭಾಸವಾಗುತ್ತದೆ. ಅವರು ಯಾರು? ಎಂಬುದನ್ನು ತಿಳಿದುಕೊಳ್ಳುವ ಹಂಬಲ, ಕುತೂಹಲ ಮತ್ತಷ್ಟೂ ಹೆಚ್ಚಾಗುತ್ತದೆ.    "ನೀವು ಹೇಳಿದ ಒಂದೊಂದೂ ಮಾತೂ ನಿಜ. ನಿಮ್ಮ ಅನುಭವ ನನಗೂ ಆಗಿದೆ. ಅಧಿಕಾರ ಇದ್ದಾಗ ಎಲ್ಲವೂ ನಮ್ಮ ಕೈ ಅಳತೆಯಲ್ಲಿದೆ ಅನಿಸುತ್ತೆ... ಅಧಿಕಾರ ಹೋದ ನಂತರ ಎಲ್ಲವೂ ಶೂನ್ಯ ಎನಿಸುತ್ತದೆ... ನೀರಸ ಬದುಕು."     "ನಿಮಗೊಬ್ಬರಿಗೇ ಅಲ್ಲ... ಎಲ್ಲರ ಅನುಭವವೂ ಹೀಗೆಯೇ? ಹೊರಗಿನವರ ವಿಷಯ ಬಿಡಿ... ನಮ್ಮ ಮನೆಯವರೇ, ನಮ್ಮಿಂದ ಏನೂ ಉಪಯೋಗ ಇಲ್ಲಾ ಅಂತ ಗೊತ್ತಾದ ಮರುಕ್ಷಣವೇ ಕಾಲ ಕಸದಂತೆ ಕಾಣುತ್ತಾರೆ..." ವೃದ್ಧರು ನೊಂದು ನುಡಿಯುತ್ತಾರೆ.       ಎಷ್ಟೇ ಪ್ರಯತ್ನಿಸಿದರೂ ಆ ವೃದ್ಧರು ತಮ್ಮ ಪರಿಚಯ ಮಾಡಿಕೊಳ್ಳದೆ, ಬದುಕಿನ ಸತ್ಯವನ್ನು ಮನದಟ್ಟು ಮಾಡುತ್ತಿರುವಂತೆ ವಿಶಾಲ್ ಅವರಿಗೆ ಭಾಸವಾಗುತ್ತದೆ. ಅವರು ಯಾರೆಂದು ತಿಳಿದುಕೊಳ್ಳುವ ಉತ್ಕಟ ಬಯಕೆ ನಿಯಂತ್ರಿಸಲಾಗದೆ, ಮಾತು ಮುಂದುವರಿಸುತ್ತಾರೆ.      "ಜಗತ್ತಿನ ಪರಮ ಸತ್ಯವನ್ನು ತಾವು ಹೇಳುತ್ತಿದ್ದೀರಿ. ಸಮಯ ಆಗ್ತಾ ಇದೆ... ನಾನು ಹೋಗಬೇಕು. ಹೋಗುವ ಮುನ್ನ ಪರಿಚಯ ಮಾಡಿಕೊಂಡೇ ಹೋಗಬೇಕು ಎನ್ನುವ ಆಸೆ. ತಮ್ಮ ಅಭ್ಯಂತರವಿಲ್ಲದೆ ಹೋದರೆ...?" ಎಂದು ಅನುಮತಿ ಕೇಳುತ್ತಾರೆ ವಿಶಾಲ್.      "ಅಭ್ಯಂತರವಿಲ್ಲ... ಮನಸ್ಸಿನಲ್ಲಿ ಏನಿದೆಯೋ ಅದನ್ನು ಹೇಳಿಬಿಡಿ... ಕಾಲ ನಿಲ್ಲೋದಿಲ್ಲ. ನಾನೂ ಸಹ ಹೋಗಬೇಕು..." ವೃದ್ಧರು ಮಾರ್ಮಿಕವಾಗಿ ನುಡಿಯುತ್ತಾರೆ.       ಅವರ ಮಾತಿನ ಅರ್ಥವನ್ನು ವಿಶಾಲ್ ಗ್ರಹಿಸುತ್ತಾರೆ. ಹೋಗುವ ಮುನ್ನ ಹೇಳಿ ಹೋಗುವುದು ಸಮಂಜಸ ಎಂದು ಒಳಧ್ವನಿ  ಹೇಳುತ್ತದೆ. ತಡಮಾಡದೆ ವೃದ್ಧರಿಗೆ ಹೇಳುತ್ತಾರೆ... "ನಾನು ವಿಶಾಲ್.. IAS., ನಿವೃತ್ತ ಜಿಲ್ಲಾಧಿಕಾರಿ. ಖಡಕ್  ಡಿ ಸಿ ಅಂತಾನೆ ಹೆಸರುವಾಸಿಯಾಗಿದ್ದೆ...  ತಾವೂ? "      "ತುಂಬಾ ಸಂತೋಷ ಖಡಕ್ ಡಿಸಿ ಸಾಹೇಬ್ರೆ! ನನ್ನ ಹೆಸರು ಶಂಕರ ನಾರಾಯಣ! ಮಾಜಿ ಮಂತ್ರಿ!"    ಶಂಕರ ನಾರಾಯಣ ಎಂಬ ಹೆಸರು ಕೇಳಿ ರೋಮಾಂಚನಗೊಳ್ಳುತ್ತಾರೆ ವಿಶಾಲ್.  ಈ ರಾಜ್ಯ ಕಂಡ ಓರ್ವ ದಕ್ಷ ರಾಜಕಾರಣಿ, ಜನಪರ ಕೆಲಸ ಮಾಡಿ ಸೈ ಎನಿಸಿಕೊಂಡವರು. ಜೊತೆಗೆ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾಗ,  ಆ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದವರು! ಅವರ ಸುತ್ತಮುತ್ತ ನೂರಾರು ಜನ! ಮುಗಿಲುಮುಟ್ಟುವ ಜೈಕಾರ.. ಸೆಕ್ಯೂರಿಟಿಗಳ ದಂಡು! ಆಳುಕಾಳು, ಸರ್ಕಾರದ ವತಿಯಿಂದ ಐಷಾರಾಮಿ ಕಾರು, ಬಂಗಲೆ, ರಾಜಮಹಾರಾಜರಿಗಿಂತ ಒಂದು ಕೈ ಮೇಲು ಎಂಬಂತೆ ಜೀವನ ಸಾಗಿಸಿದವರು! ಇಂದು ಏಕಾಂಗಿಯಾಗಿ ಈ ಪಾರ್ಕಿನ  ಬೆಂಚಿನ ಮೇಲೆ ಕುಳಿತು ಅನುಭವದ ಪಾಠ ಹೇಳುತ್ತಿದ್ದಾರೆ!     ಮೈ ಮರೆತಿದ್ದ ವಿಶಾಲ್ ತಕ್ಷಣ ಎಚ್ಚೆತ್ತು,   "ನಮಸ್ಕಾರ ಸರ್! ಬೇಸರ ಮಾಡ್ಕೋಬೇಡಿ, ತಮ್ಮ ಗುರುತು ಸಿಕ್ಕಲಿಲ್ಲ!" ಸೌಜನ್ಯದ ಪ್ರದರ್ಶಿಸಿದರು.     "ಛೇ... ನೀವು ಬೇಸರ ಮಾಡ್ಕೋಬೇಡಿ, ಇದೇ ಜೀವನ!" ಎಂದಷ್ಟೇ ಹೇಳಿ ಹೊರಡಲು ಎದ್ದು ನಿಂತರು. ಅವರು ಎದ್ದ ಕೂಡಲೇ ವಿಶಾಲ್ ಸಹ ಎದ್ದು ನಿಂತರು.     ಶಂಕರ ನಾರಾಯಣ ಅವರು ವಿಶಾಲ್ ಅವರ ಕೈ ಹಿಡಿದು,    "ತಮಗೆ ಹೊರಡುವ ಸಮಯ ಆಗಿದೆ, ಬೇಗ ಹೋಗಬೇಕು ಅಂತ ಹೇಳಿದ್ರಿ... ಆದರೆ ನನ್ನಿಂದ ತಮಗೆ ಹೊರಡಲು ತಡವಾಯಿತು... ನೀವಿನ್ನು ಹೊರಡಿ, ನಾನೂ ಹೊರಡುವ ಸಮಯ ಬಂತು!" ಎಂದು ಕೈ ಮುಗಿದು ಒಂದೊಂದೇ ಹೆಜ್ಜೆ ಹಾಕುತ್ತಾ ಸಾಗಿದರು!      ಶಂಕರ ನಾರಾಯಣ...  ಅವರು ಹೋದತ್ತಲೇ ಕಣ್ಣು ಹಾಯಿಸಿ ನಿಧಾನವಾಗಿ  ಬೆಂಚಿನ ಮೇಲೆ ಕುಳಿತುಕೊಂಡ ವಿಶಾಲ್ ಅವರ  ಕಣ್ಣಂಚಿನಲ್ಲಿ ನೀರು ಸುರಿಯುತ್ತಿತ್ತು... ಮಂತ್ರಿಗಳ ಮಾತು ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು....    "ಪಡೆದ ಅಧಿಕಾರ, ಗಳಿಸಿದ ಪ್ರಶಸ್ತಿಗಳು,  ಸನ್ಮಾನ, ಹಾರತುರಾಯಿಗಳೆಲ್ಲವೂ ಕೇವಲ ನೆನಪು ಮಾತ್ರ! ಅವು ನಮ್ಮ ಹಿಂದೆ ಬರುವುದಿಲ್ಲ. ಅಷ್ಟೇ ಅಲ್ಲ ನಮ್ಮವರು ಎನಿಸಿಕೊಂಡವರು ಯಾರೂ ಸಹ ನಮ್ಮ ಜೊತೆ ಬರುವುದಿಲ್ಲ! ಏಕಾಂಗಿಯಾಗಿ ಬಂದ ನಾವು, ಏಕಾಂಗಿಯಾಗಿಯೇ ಹೋಗಬೇಕು.  ನಮ್ಮನ್ನು ಸಮಾಜ ಮರೆತುಬಿಡುತ್ತದೆ! "        ಪಶ್ಚಿಮದಲ್ಲಿ ಸೂರ್ಯ ಅಸ್ತಂಗತನಾಗುತ್ತಿದ್ದ! ಪಾರ್ಕಿನ  ಬೆಂಚುಗಳನ್ನು ದಿಟ್ಟಿಸಿ ನೋಡಿದರು ವಿಶಾಲ್! ಪ್ರತಿಯೊಂದು  ಬೆಂಚುಗಳೂ ಒಂದೊಂದು ಕಥೆಯನ್ನು ಹೇಳುತ್ತಿದ್ದವು!  ಕಥೆ ಕೇಳುತ್ತಾ ಕುಳಿತಿದ್ದ ವಿಶಾಲ್ ಕಣ್ಮುಚ್ಚಿದ್ದರು.          ಮರುದಿನ ಪತ್ರಿಕೆಯ ಮುಖಪುಟದಲ್ಲಿ  ವರದಿಯಾಗಿತ್ತು!      ಮಾಜಿ ಮಂತ್ರಿ ಶಂಕರನಾರಾಯಣ ಅಸ್ತಂಗತ!       ಮಾಜಿ ಖಡಕ್ ಜಿಲ್ಲಾಧಿಕಾರಿ ವಿಶಾಲ್ ಇನ್ನಿಲ್ಲ!   - ರಾಮಮೂರ್ತಿ ಸೋಮನಹಳ್ಳಿ  


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Classics