STORYMIRROR

Ramamurthy Somanahalli

Classics Inspirational Others

4  

Ramamurthy Somanahalli

Classics Inspirational Others

ಅಪ್ಪ ಎಂದರೆ ಏನಪ್ಪ?

ಅಪ್ಪ ಎಂದರೆ ಏನಪ್ಪ?

10 mins
1

*ಅಪ್ಪ ಎಂದರೆ ಅಪ್ಪ!?*

     ಹತ್ತನೇ ತರಗತಿಯ ಮಕ್ಕಳಿಗೆ ಪ್ರತಿಭಾ ಪ್ರದರ್ಶನ ಏರ್ಪಡಿಸಿ ಭಾಗವಹಿಸಲು  ಅವಕಾಶವಿತ್ತ ಉಪಾಧ್ಯಾಯರು, "ಮಕ್ಕಳೇ, ನಿಮ್ಮ ದೃಷ್ಟಿಯಲ್ಲಿ  ರಕ್ಷಕರು ಎಂದರೇನು?" ನಿಮ್ಮ ಅಭಿಪ್ರಾಯವನ್ನು ಸಂಕ್ಷಿಪ್ತವಾಗಿ ಬರೆದು ಹೇಳಿ ಎಂದು ತಾಕೀತು ಮಾಡಿದರು.
     ತಾ ಮುಂದೆ ನಾ ಮುಂದೆ ಎಂಬಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸಿ, ತಾಯಿ ದೇವರು, ತಂದೆ ರಕ್ಷಕ ಎಂದು ಬರೆದು ತಮ್ಮದೇ ರೀತಿಯಲ್ಲಿ ಅಭಿಪ್ರಾಯ ಮಂಡಿಸಿದರು. ತಂದೆಗಿಂತ ಹೆಚ್ಚಾಗಿ ತಾಯಿ ಬಗ್ಗೆಯೇ ಎಲ್ಲರೂ ಬರೆದಿದ್ದರು. ಆದರೆ ರಂಗ ಮಾತ್ರ ಮೌನವಾಗಿಯೇ ಕುಳಿತಿದ್ದ. ತನ್ನ ಅಭಿಪ್ರಾಯ ತಿಳಿಸಲು ಮುಂದೆ ಬಂದಿರಲಿಲ್ಲ. ಗಮನಿಸಿದ ಉಪಾಧ್ಯಾಯರು ಕೇಳಿದರು.
   "ರಂಗ ನಿನಗೇನಾಗಿದೆ? ಎಲ್ಲರೂ ಒಂದೊಂದು ರೀತಿ ಉತ್ತರ ಕೊಟ್ಟಿದ್ದಾರೆ, ನೀನು ನಿನ್ನ ಅಭಿಪ್ರಾಯವನ್ನು ಬರೆದು ತಿಳಿಸು," ಗದರಿದರು. ವಿಚಲಿತನಾದ ರಂಗ. ತಾಯಿ ಬಗ್ಗೆ ಎಲ್ಲರೂ ಬರೆದಂತೆ ತಾಯಿ ದೇವರು, ಕರುಣಾಮಯಿ, ತ್ಯಾಗದೇವತೆ, ಮೊದಲ ಗುರು,  ಸಂಸಾರದ ಕಣ್ಣು, ತಂದೆ ಸಂಸಾರದ ರಕ್ಷಕ, ದುಡಿವ ಎತ್ತು, ಎಂದು ಹೇಳಿ ಮುಗಿಸಬಹುದಿತ್ತು. ಆದರೆ ಮನಸ್ಸು ಬರಲಿಲ್ಲ. ಮೌನವಾಗಿಯೇ ಇದ್ದ.  ಅವನ ಪರಿಸ್ಥಿತಿ ನೋಡಿ ಕೆಲವರು ನಕ್ಕು ಗೇಲಿ ಮಾಡಿದರು.  ಆದರೆ ಉಪಾಧ್ಯಾಯರು ಮಾತ್ರ ಬಿಡಲಿಲ್ಲ. "ಗೊತ್ತಿರುವಷ್ಟು ಬರೆದು ತಿಳಿಸು," ಎಂದು ಒತ್ತಾಯಿಸಿದರು.
      ಗುರುಗಳ ಒತ್ತಾಯಕ್ಕೆ ಹೆದರಿ ಬರೆಯಲು ನಿರ್ಧರಿಸಿದ. ಆದರೆ ಏನೆಂದು ಬರೆಯುವುದು? ಪ್ರಶ್ನೆ ಎದುರಾಯಿತು.  ಏನನ್ನೂ ಬರೆಯದೆ ಎಲ್ಲರನ್ನೂ ನೋಡುತ್ತಾ ನಿಂತ. ಅವನ ಮನಸ್ಸಿನಲ್ಲಿ ಅದೇನು ಓಡುತ್ತಿದೆ ಎಂದು ಉಪಾಧ್ಯಾಯರಿಗೆ ಅರ್ಥ ಆಗಲಿಲ್ಲ.
   "ಯಾಕೆ ರಂಗ? ಏನಾಯ್ತು?" ಮೆಲು ಧ್ವನಿಯಲ್ಲಿ ಕೇಳಿದರು.
   "ಒಂದು ಪದದಲ್ಲಿ, ಒಂದು ಸಾಲಿನಲ್ಲಿ ಅಥವಾ ಪುಟದಲ್ಲಿ ರಕ್ಷಕರ ಬಗ್ಗೆ ಬರೆಯಲು ಸಾಧ್ಯವಿಲ್ಲ. ಅವಕಾಶವಿತ್ತರೆ ಒಂದು ಕಥೆ ಬರೆದು ಹೇಳುತ್ತೇನೆ."
     ಪ್ರತಿಭೆಯನ್ನು ಗುರುತಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದ್ದರಿಂದ ಉಪಾಧ್ಯಾಯರು ತಮ್ಮೊಳಗೆ ಚರ್ಚಿಸಿ ರಂಗನಿಗೆ ಕಥೆ ಬರೆದು ಒಪ್ಪಿಸಲು ಸಮ್ಮತಿಸಿದರು.
     ಕಥೆ ಬರೆಯಲು ಆರಂಭಿಸಿದ ರಂಗ... ಅವನ ಆಲೋಚನೆಗಳು ಪದಗಳ ರೂಪದಲ್ಲಿ ಬರುತ್ತಿರಲಿಲ್ಲ... ಆದರೆ ಅಜ್ಜ ಹೇಳಿದ ಕಥೆ ನೆನಪಿಗೆ ಬಂತು...
          ಸೋಮಣ್ಣ ಸಣ್ಣ ರೈತ.  ತುಂಬಿದ ಸಂಸಾರ. ನಾಲ್ಕು ಜನ ಹೆಣ್ಣು ಮಕ್ಕಳು ಒಂದು ಗಂಡು. ಹೆಣ್ಣು ಮಕ್ಕಳಿಗೂ ಪ್ರಾಥಮಿಕ ವಿದ್ಯೆ ಕೊಡಿಸಿದ್ದ. ಮಗ ಶಿವನಿಗೂ ವಿದ್ಯೆ ಕೊಡಿಸಿ ಹೊಲದಲ್ಲಿ ತನ್ನ ಜೊತೆ ಕೆಲಸಕ್ಕೆ ತೊಡಗಿಸಿಕೊಂಡಿದ್ದ. ಅಪ್ಪ ಸೋಮಣ್ಣ ಹೇಳಿದಂತೆ  ಮಗ ಶಿವು ದನಕರುಗಳಿಗೆ ನೀರು ಕುಡಿಸುವುದು, ಮೇವು ಹಾಕುವುದು, ಸಗಣಿ ಎತ್ತಿ ಹಾಕುವುದರ ಜೊತೆಗೆ ಹೊಲದಲ್ಲಿ ಕಳೆ ಕೀಳುವುದು, ಅಪ್ಪನಿಗೆ ಮನೆಯಿಂದ ಬುತ್ತಿ ತೆಗೆದುಕೊಂಡು ಹೋಗಿ ಕೊಡುವ ಕೆಲಸ ಮಾಡುತ್ತಿದ್ದ. ಬಿಡುವಿದ್ದಾಗ ಅಕ್ಕಂದಿರು ಮತ್ತು ಸ್ನೇಹಿತರ ಜೊತೆ ಆಟವಾಡುತ್ತಿದ್ದ.
   ಒಂದು ದಿನ ಆಟವಾಡುವಾಗ ಓಡುತ್ತಾ ಕಲ್ಲು ಹಾಸಿನ ಮೇಲೆ ಬಿದ್ದ. ಅವನು ಬಿದ್ದ ರಭಸಕ್ಕೆ ಎಡಗಾಲಿನ ಮೂಳೆ ಮುರಿಯಿತು. ಆಗ ಶಿವನಿಗೆ ಸುಮಾರು ಹತ್ತು ವರ್ಷ!  ಮೊದಲೇ ಕುಗ್ರಾಮ! ಮಳೆ ಆಶ್ರಯದಲ್ಲಿ ವ್ಯವಸಾಯ ಮಾಡುತ್ತಿದ್ದ ಸೋಮಪ್ಪನಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಹತ್ತಿರದಲ್ಲಿ ಆಸ್ಪತ್ರೆ ಸಹ ಇರಲಿಲ್ಲ. ಸುಮಾರು ಹತ್ತು ಮೈಲಿ  ನಡೆದುಕೊಂಡು ಪೇಟೆಗೆ ಹೋಗಿ ಚಿಕಿತ್ಸೆ ಕೊಡಿಸಬೇಕಿತ್ತು. ಕೈಯಲ್ಲಿ ಹಣವಿರಲಿಲ್ಲ. ಚಿಂತೆಗೊಳಗಾದ ಸೋಮಪ್ಪ.
  "ಆಸ್ಪತ್ರೆ ಅಂತ ಹೋದರೆ ಅದೂ ಇದೂ ಅಂತ ಹಣ ಜಾಸ್ತಿ ಖರ್ಚಾಗುತ್ತೆ, ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗೋಲ್ಲ, ಅದರ ಬದಲು ಪೇಟೆಯಲ್ಲಿ ಪಟ್ಟು ಹಾಕೋ ತ್ಯಾಂಪಣ್ಣ ಇದ್ದಾರೆ, ಅವರು ಎಂತಹದೇ ಮೂಳೆ ಮುರಿದಿದ್ರು ಪಟ್ಟು ಹಾಕಿ ಸರಿಪಡಿಸ್ತಾರೆ, ಅಷ್ಟೇನೂ ಖರ್ಚು ಆಗೋಲ್ಲ," ಎಂದು ಕೆಲವರು ಸಲಹೆ ನೀಡಿದ್ದರು. ಅದರಂತೆ ತ್ಯಾಂಪಣ್ಣ ಅವರ ಬಳಿ ಚಿಕಿತ್ಸೆ ಕೊಡಿಸಲು ಮುಂದಾದ ಸೋಮಣ್ಣ. ಆದರೆ ಅಲ್ಲೂ ಒಂದು ಸಮಸ್ಯೆ ಇತ್ತು. ಹೋಗಿ ಬರಲು ಬಸ್ಸಿನ ವ್ಯವಸ್ಥೆ ಇರಲಿಲ್ಲ. ಇಡೀ ಹಳ್ಳಿಗೆ ಒಂದೇ ಒಂದು ಬಸ್ಸು ಇತ್ತು! ಅದು ಬಂದೇ ಬರುತ್ತದೇ ಎಂಬ ಖಾತರಿ ಇರಲಿಲ್ಲ. ಸಮಯಕ್ಕೆ ಸರಿಯಾಗಿ ಎಂದೂ ಬಂದಿರಲಿಲ್ಲ. ಆದರೆ ಮಗನ ಮುರಿದ ಕಾಲನ್ನು ಸರಿಪಡಿಸಲೇ ಬೇಕಿತ್ತು.
     ಸೋಮಣ್ಣ ಮಗನನ್ನು ಕಾಲಿನ ಚಿಕಿತ್ಸೆಗಾಗಿ ಹೆಗಲ ಮೇಲೆ ಹೊತ್ತು ಪೇಟೆಗೆ ನಡೆದ. ಹೋಗಲು ಹತ್ತು ಮೈಲಿ, ಬರಲು ಹತ್ತು ಮೈಲಿ... ಬರುವಾಗ ಮನೆಗೆ ಬೇಕಾಗುವ ದಿನಸಿ ಸಹ ತರಬೇಕಿತ್ತು. ಒಂದು ಹೆಗಲ ಮೇಲೆ ಶಿವ, ಮತ್ತೊಂದು ಹೆಗಲ ಮೇಲೆ ದಿನಸಿ ಸಾಮಾನು! ಮನೆ ಮುಟ್ಟುವ ವೇಳೆಗೆ ಬಸವಳಿದು ಹೋಗುತ್ತಿದ್ದ ಸೋಮಣ್ಣ! ಆದರೆ ಒಂದೇ ಒಂದು ದಿನವೂ ಮಗನ ಮುಂದೆಯಾಗಲೀ ಅಥವಾ ಮನೆಯವರ ಮುಂದೆಯಾಗಲೀ ತನ್ನ ನೋವು, ದಣಿವು, ಕಷ್ಟಗಳನ್ನು ಹೇಳುತ್ತಿರಲಿಲ್ಲ. ಗಾಣದ ಎತ್ತಿನಂತೆ ದುಡಿಯುತ್ತಿದ್ದ. ಮೂಕ ವೇದನೆ! ಯಾರಲ್ಲಿ ಹೇಳಿಕೊಳ್ಳುವುದು? ಆದರೆ ಹತ್ತು ವರ್ಷದ ಶಿವನಿಗೆ ಅಪ್ಪನ ಕಷ್ಟ ಅರ್ಥವಾಗುತ್ತಿತ್ತು.
  "ಅಪ್ಪ ಒಂದು ಊರುಗೋಲು ಕೊಡು, ಕಷ್ಟಪಟ್ಟು ನಡೆಯುತ್ತೇನೆ!"
   "ಬೇಡ ಶಿವ! ನಿಂಗೆ ಕಷ್ಟ ಆಗುತ್ತೆ, ನನ್ನ ಹೆಗಲ ಮೇಲೆ ಕೂತ್ಕೋ," ಸೋಮಣ್ಣ ಹೆಗಲ ಮೇಲೆ ಕೂರಿಸಿಕೊಂಡು ಪೇಟೆಗೆ ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದ. ಮೂಳೆ ಮುರಿದಿರುವುದರಿಂದ ಹತ್ತು ದಿನಕ್ಕೊಮ್ಮೆ ಪಟ್ಟಿ ಕಟ್ಟಲು ಬರಬೇಕೆಂದು ತ್ಯಾಂಪಣ್ಣ ಹೇಳಿದ್ದರು.
     "ಕಾಲು ಸರಿ ಹೋಗುತ್ತಾ?" ಆತಂಕದಿಂದಲೇ ಪ್ರಶ್ನಿಸಿದ್ದ ಸೋಮಣ್ಣ.
     "ಮೂಳೆ ಮುರಿದಿರುವುದರಿಂದ ಕೂಡಿಕೊಳ್ಳಲು ಕನಿಷ್ಠ ಮೂರು ತಿಂಗಳು ಬೇಕು, ಪ್ರತಿನಿತ್ಯ ಎಣ್ಣೆ ತಿಕ್ಕಬೇಕು," ಎಂದು ತ್ಯಾಂಪಣ್ಣ ಎಚ್ಚರಿಸಿದ್ದರು.
      ಅಪ್ಪನ ಕಷ್ಟ ನೋಡಿ ಅದೆಷ್ಟೋ ಬಾರಿ ಕಣ್ಣೀರು ಹಾಕಿದ್ದ ಶಿವು. ಮುರಿದ ಕಾಲು ಇಟ್ಟುಕೊಂಡು ಒಂದು ಹೆಜ್ಜೆ ಹಾಕುವುದೂ ಕಷ್ಟವೇ ಆಗಿತ್ತು!   ಪ್ರತೀ ದಿನ ತ್ಯಾಂಪಣ್ಣ ಕೊಟ್ಟ ನೋವಿನ ಎಣ್ಣೆ ತಿಕ್ಕಿ ಸ್ನಾನ ಮಾಡಿಸಿ ಹೊಲದ ಕೆಲಸಕ್ಕೆ ಹೋಗುತ್ತಿದ್ದ ಅಪ್ಪ.
      ಶಿವನ ಚಿಕಿತ್ಸೆ ಮುಂದುವರಿದಿತ್ತು. ಯುಗಾದಿ ಹಬ್ಬ ಹತ್ತಿರ ಬಂದಿತ್ತು. ಮಕ್ಕಳಿಗೆ ಹೊಸ ವರ್ಷಕ್ಕೆ ಹೊಸ ಬಟ್ಟೆ ಖರೀದಿಸಲು ಅಮ್ಮ ಅಪ್ಪನಿಗೆ ಹೇಳಿದ್ದಳು.
     ಬೆಳಿಗ್ಗೆ ಐದು ಗಂಟೆಗೆ ಶಿವನನ್ನು ಹೆಗಲ ಮೇಲೆ ಕೂರಿಸಿಕೊಂಡು ಪೇಟೆಗೆ ಹೊರಟಿದ್ದ ಅಪ್ಪ, ಮುಕ್ಕಾಲು ದೂರ ನಡೆದುಕೊಂಡು ಹೋದ ನಂತರ ಒಂದು ಕೆರೆ ದಂಡೆ ಮೇಲಿದ್ದ ಮರದ ಬುಡದಲ್ಲಿ ಕುಳಿತು ಬುತ್ತಿ ತಿನ್ನಲು ಕುಳಿತರು! ಅಪ್ಪ ಬುತ್ತಿ ಬಿಚ್ಚಿ ಕೊಟ್ಟಿದ್ದನ್ನು ತಿನ್ನುತ್ತಿದ್ದ ಶಿವು,  ಅಪ್ಪನನ್ನು ನೋಡಿದ. ಅಪ್ಪ ಬುತ್ತಿ ತಿನ್ನದೆ ಆಕಾಶ ನೋಡುತ್ತಾ ಕುಳಿತಿದ್ದನ್ನು ನೋಡಿ ಹೇಳಿದ,  
   "ಅಪ್ಪ! ನೀನೂ ಬುತ್ತಿ ತಿನ್ನು!"
   "ನಿಂದು ಆಗಲಿ ಶಿವ! ಮತ್ತೆ ನಾನು ತಿಂತೀನಿ,"
    ಅಪ್ಪನ ಉತ್ತರ ಕೇಳಿ ದುಃಖವಾಯಿತು.
    "ಯಾಕಪ್ಪ! ಸಾಕಾಗುವಷ್ಟು ಬುತ್ತಿ ಇಲ್ವಾ?"
    "ಹಾಗೇನಿಲ್ಲ ಮಗಾ! ನಿನ್ನ ಅಮ್ಮ ಸಾಕಾಗೋವಷ್ಟು ಕಟ್ಟಿ ಕೊಟ್ಟಿದ್ದಾಳೆ."
     ಅಪ್ಪ ಸುಳ್ಳು ಹೇಳುತ್ತಿದ್ದಾನೆ ಎನಿಸಿತು. ಪೇಟೆಗೆ ಹೊರಡುವಾಗ ಅಮ್ಮ ಹೇಳಿದ್ದು ನೆನಪಾಯಿತು.
    "ಇದ್ದಷ್ಟನ್ನು ಅಣಿ ಮಾಡಿ ಎರಡು ಹೊತ್ತಿಗೂ ಬುತ್ತಿ ಕಟ್ಟಿದ್ದೀನಿ, ನೋಡ್ಕೊಂಡು ಸುಧಾರಿಸಿ, ಬರೋವಾಗ ದಿನಸಿ ತನ್ನಿ, ಮರೆಯದೆ ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ ತರಲು ಮರೆಯಬೇಡಿ," ಎಂದು ಹೇಳಿ ಪಟ್ಟಿ ಕೊಟ್ಟಿದ್ದಳು.
     ಅಪ್ಪನ ಮನಸ್ಸಿನಲ್ಲಿ ಏನಿದೆ ಎಂದು ಶಿವುಗೆ ಅರ್ಥವಾಯಿತು. ತನಗಾಗಿ  ಹಸಿವನ್ನೂ ಸಹ  ಮುಚ್ಚಿಡುವ ಅಪ್ಪ!
     "ನಂಗೆ ಸಾಕಪ್ಪ! ಹೊಟ್ಟೆ ತುಂಬಿದೆ. ನೀನು ತಿನ್ನು," ನೋವು ತುಂಬಿದ ಧ್ವನಿಯಿಂದ ಒತ್ತಾಯಿಸಿದ ಶಿವು.
   ಸ್ವಲ್ಪ ತಿಂದು ನೀರು ಕುಡಿದು ತೇಗಿದ. ಪೇಟೆಯಿಂದ ಹಿಂದೆ ಬರುವಾಗ ದಾರಿಯಲ್ಲಿ ತಿನ್ನಲು ಬೇಕಾಗುವಷ್ಟನ್ನು ಪ್ರತ್ಯೇಕವಾಗಿ ಕಟ್ಟಿಟ್ಟು, "ಶಿವು ನಿನ್ನ ಅಮ್ಮ ಜಾಸ್ತಿ ಬುತ್ತಿ ಕಳುಹಿಸಿದ್ದಾಳೆ! ಹೊಟ್ಟೆ ಬಿರಿಯುವಷ್ಟು ತಿಂದೇ," ಎಂದು ಹೇಳಿ ನಕ್ಕ.
     ಅಪ್ಪನ ಮಾತು ಕೇಳಿ ಕರುಳು ಹಿಂಡಿದಂತಾಯಿತು. ಕಣ್ಣು ತೇವವಾಯಿತು. ಅರೆಹೊಟ್ಟೆ ತಿಂದು, ನೀರು ಕುಡಿದು ತೇಗುತ್ತಿದ್ದಾನೆ ಎನಿಸಿತು . ಆದರೂ ಅಪ್ಪನಿಗೆ ಬೇಸರವಾಗಬಾರದೆಂದು ಕಷ್ಟಪಟ್ಟು ದುಃಖವನ್ನು ನುಂಗಿಕೊಂಡ ಶಿವು.
     ತ್ಯಾಂಪಣ್ಣ ಅವರಲ್ಲಿ ಚಿಕಿತ್ಸೆ ಪಡೆದ ನಂತರ, ದಿನಸಿ, ಜವಳಿ ಖರೀದಿಸಲು ಅಂಗಡಿ ಹೋದರು.
     ಅಮ್ಮ ಮತ್ತು ಮಕ್ಕಳಿಗೆ ಬಟ್ಟೆ ಖರೀದಿಸಿದ ಅಪ್ಪ. ಆದರೆ  ಅವರಿಗಾಗಿ ಏನನ್ನೂ ಖರೀದಿಸದೆ ಬಿಲ್ಲು  ಪಾವತಿಸಲು ಮುಂದಾದ. ಇದನ್ನು ಗಮನಿಸಿದ ಶಿವು ಪ್ರಶ್ನಿಸಿದ.
"ಅಪ್ಪ! ನಿಂಗೆ ಏನೂ ಬೇಡ್ವಾ?"
   "ಈಗ ಬೇಡ ಮಗ! ಮುಂದಿನ ಸಲ ಬಂದಾಗ ನೋಡೋಣ."
    ಅಪ್ಪನ ಉತ್ತರ ಕೇಳಿ ಮತ್ತಷ್ಟೂ ಕುಸಿದು ಹೋದ ಶಿವು. ಖರೀದಿಸಲು ಒತ್ತಾಯಿಸಿದ. ಮಗನ ಒತ್ತಾಯಕ್ಕೆ ಮಣಿದು, ಕಡಿಮೆ ಬೆಲೆಯ ಅಂಗಿ ಖರೀದಿಸಿ, ಜವಳಿ ಮತ್ತು ದಿನಸಿಯ ಚೀಲವನ್ನು ಒಂದಕ್ಕೊಂದು ಕಟ್ಟಿ ಬೆನ್ನಿಗೆ ಹಾಕಿಕೊಂಡ.  ಶಿವನನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಊರಿನತ್ತ ಹೊರಟ.
       ಕಲ್ಲು ಮುಳ್ಳುಗಳ ಕೊರಕಲು ದಾರಿ. ಹಾಕಿಕೊಳ್ಳಲು ಚಪ್ಪಲಿ ಇಲ್ಲ, ಬರಿಗಾಲು... ಉರಿ ಬಿಸಿಲು, ಅಪ್ಪನ ಮುಖದಲ್ಲಿ ಬೆವರು ಸುರಿಯುತ್ತಿತ್ತು. ಜೊತೆಗೆ ಏದುಸಿರು! ಅಪ್ಪ ಬಳಲಿದಂತೆ ಕಾಣುತ್ತಿದ್ದ. ಮನಸ್ಸು ಕರಗಿತು.
     "ಅಪ್ಪ! ಎಲ್ಲಾದ್ರೂ ನೆರಳಲ್ಲಿ ಸ್ವಲ್ಪ ಹೊತ್ತು ಕೂತ್ಕೊಳ್ಳೋಣ,"
   "ಬೇಡ ಮಗ... ಬೇಗ ಮನೆಗೆ ಹೋಗೋಣ. ಹೊಲಕ್ಕೆ ಹೋಗಿ ಹಸುಗಳಿಗೆ ಹುಲ್ಲು ತರಬೇಕು, ತುಂಬಾ ಕೆಲಸ ಇದೆ," ಎನ್ನುತ್ತಾ ಹೆಜ್ಜೆ ಹಾಕುತ್ತಿದ್ದ.
     ಸಮಯ ಮೀರಿತ್ತು! ಶಿವನಿಗೆ ಹೊಟ್ಟೆ ಹಸಿದಿತ್ತು, ಜೊತೆಗೆ ಬಾಯಾರಿಕೆ. ದೂರದಲ್ಲಿ ಆಲೆ ಮನೆ ಕಾಣಿಸಿತು. ಕಬ್ಬನ್ನು ಗಾಣಕ್ಕೆ ಹಾಕಿ ರಸ ತೆಗೆದು ಬೆಲ್ಲ ಮಾಡುತ್ತಿದ್ದರು.  ಮರದ ಕೆಳಗೆ ಕುಳಿತು ಬುತ್ತಿ ಊಟ ಮಾಡಿ, ಕಬ್ಬಿನ ಹಾಲು ಕುಡಿಯಲು ಹೋದರು.
     ಗಾಣದ ಎತ್ತುಗಳು ಕಬ್ಬನ್ನು ಅರೆಯುತ್ತಿದ್ದವು. ಕಬ್ಬಿನ ಹಾಲನ್ನು ಕುದಿಸಿ ಬೆಲ್ಲ ಮಾಡುತ್ತಿದ್ದರು. ಕುತೂಹಲದಿಂದ ನೋಡುತ್ತಿದ್ದ ಶಿವ. ಎತ್ತುಗಳು ದಣಿವರಿಯದೆ ತಿರುಗುತ್ತಿದ್ದವು! ಕಬ್ಬನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದವು!
   ಆಲೆ ಮನೆಯಲ್ಲಿ ಕಬ್ಬಿನ ಹಾಲನ್ನು ಸೇವಿಸಿ ಹೊರಟರೂ ಗಾಣದ ಮನೆಯ ದೃಶ್ಯ ಶಿವನನ್ನು ಕಾಡುತ್ತಿತ್ತು! ಕಬ್ಬಿನ ಜಲ್ಲೆ ಗಾಣಕ್ಕೆ ಸಿಲುಕಿ ಸಿಪ್ಪೆಯಾಗಿತ್ತು! ಆದರೂ ಅದರ ರಸ ಅದೆಷ್ಟು ಸಿಹಿ!
     'ಅಪ್ಪ'  ಕಬ್ಬಿನ ಜಲ್ಲೆಯಂತೆ ಕಂಡುಬಂದ!
    ಹೆಗಲ ಮೇಲೆ ಕುಳಿತಿದ್ದ ಶಿವನಿಗೆ ಅಪ್ಪನ ಮುಖವನ್ನು ನೋಡಬೇಕೆನಿಸಿತು. ಶಿವ ಬಗ್ಗಿ ಅಪ್ಪನನ್ನು ನೋಡಿದ. ಅಪ್ಪನನ್ನು ಇದೇ ಮೊದಲ ಬಾರಿ ದಿಟ್ಟಿಸಿ ನೋಡಿದ ಶಿವು! ಬಿಸಿಲಿನ ಝಳಕ್ಕೆ ಸಿಕ್ಕಿ ಚರ್ಮ ಸುಟ್ಟಿತ್ತು...  ಕಪ್ಪಿಟ್ಟ ಮುಖ! ನೆರಿಗೆ ಮೂಡಿತ್ತು! ಕಣ್ಣಿನ ಸುತ್ತ ಕಪ್ಪು! ಕುರುಚಲು ಗಡ್ಡ! ಎಣ್ಣೆ ಕಾಣದ ತಲೆ ಕೂದಲು, ಹೊಲದಲ್ಲಿ ಕೆಲಸಮಾಡುವಾಗ ಅಂಟಿಕೊಂಡ ಕಲೆಯ ಮಾಸಿದ ಅಂಗಿ! ಹರಿದು ಹೋದ ಬಿಳಿಯ ಪಂಚೆ ಕಂದು ಬಣ್ಣಕ್ಕೆ ತಿರುಗಿತ್ತು! ಬರಿಗಾಲಿನಲ್ಲಿ ನಡೆಯುತ್ತಿದ್ದ ಅಪ್ಪ!
     ಅಳು ತಡೆಯಲಾಗಲಿಲ್ಲ. ಕಣ್ಣೀರು ಹರಿಯುತ್ತಿತ್ತು. ಹೆಗಲ ಮೇಲೆ ಕುಳಿತಿದ್ದ ಶಿವು ಕಣ್ಣಿಂದ ಒಂದೆರಡು ಹನಿಗಳು ಅಪ್ಪನ ಮೇಲೆ ಬಿದ್ದವು!
    "ಬಿಸಿಲು ಜಾಸ್ತಿ! ಬೆವರು ಬರ್ತಿದ್ಯಾ ಮಗ? ಮರದ ನೆರಳಲ್ಲಿ ಕೂತ್ಕೋಬೇಕಾ?" ಹೆಜ್ಜೆ ಹಾಕುತ್ತಲೇ ಪ್ರಶ್ನಿಸಿದ ಅಪ್ಪ.
    ಅಪ್ಪನ ಮಾತು ಕೇಳಿ ಮತ್ತಷ್ಟೂ ದುಃಖ ಉಮ್ಮಳಿಸಿ ಬಂತು!  ಅಪ್ಪ ತನ್ನ ಕಷ್ಟವನ್ನು ಲೆಕ್ಕಿಸದೆ, ಮಗನ ಕಷ್ಟಕ್ಕೆ ಮರುಗುತ್ತಿರುವುದನ್ನು ಸಹಿಸಿಕೊಳ್ಳಲಾಗಲಿಲ್ಲ. ನೊಂದುಕೊಂಡ. ಮನಸ್ಸಿಗಾದ ನೋವನ್ನು ತೋರ್ಪಡಿಸಿಕೊಳ್ಳದೆ ಕಣ್ಣೀರು ಹಾಕಿದ.
     "ಅಪ್ಪ! ನಿನ್ನ ಕಷ್ಟ ನೋಡೋಕ್ಕೆ ಆಗೋಲ್ಲ!  ನೀನು ಯಾಕೆ ಇಷ್ಟೊಂದು ಕಷ್ಟ ಪಡಬೇಕು?"
     ಶಿವು ಮಾತು ಕೇಳಿ ನಕ್ಕ ಅಪ್ಪ!
    "ನನಗೇನು ಕಷ್ಟ! ಅದು ಕಷ್ಟ ಅಲ್ಲ. ನನ್ನ ಕರ್ತವ್ಯ! ಕಷ್ಟ ಅಂತ ಕೂತ್ರೆ ಕೂಳಿಗೆ ಏನ್ಮಾಡೋದು?"
     "ಅಂದ್ರೆ ಜೀವನ ಪೂರ್ತಿ ನೀನೇ ನಮ್ಮನ್ನ ಸಾಕಬೇಕಾ?"
    "ಸಾಕೋದಾ? ಹಾಗಂದರೇನು ಮಗಾ? ಅದು ಅಪ್ಪನಾದವನ ಕರ್ತವ್ಯ! ಮಳೆ, ಬಿಸಿಲು, ಚಳಿ ಅಂತ ಹೆದರಿ ಕೂರಬಾರದು! ಸಂಸಾರ ಸಾಗಬೇಕು ಅಂದ್ರೆ ಕರ್ತವ್ಯ ಮರೆಯಬಾರದು! ಕಷ್ಟಪಟ್ಟರೆ ಸುಖ!"
   "ಸುಖ ಯಾರಿಗೆ? ಗಾಣದ ಎತ್ತಿನ ಹಾಗೆ! ಮಾತಾಡದೆ ದುಡಿಯಬೇಕಾ? ವಿಶ್ರಾಂತಿ ಬೇಡ್ವಾ?" ನೊಂದು ಪ್ರಶ್ನಿಸಿದ ಶಿವು.
   ಮಗನ ಮಾತಿಗೆ ಹೇಗೆ ಉತ್ತರಿಸಬೇಕೆಂದು ಅರ್ಥವಾಗಲಿಲ್ಲ.
     "ವಿಶ್ರಾಂತಿ ಬೇಕು! ಆದರೆ ಸಮಯವಿಲ್ಲ! ಇರುವ ಸಮಯದಲ್ಲಿ ಎಲ್ಲವನ್ನೂ ಮಾಡಿ ಮುಗಿಸಬೇಕು. ಇದು ಅಪ್ಪನಾದವನ ಕರ್ತವ್ಯ!"
    "ಕರ್ತವ್ಯ ಅಂದರೇನಪ್ಪ? ನೀನೊಬ್ಬನೇ ದುಡಿಬೇಕಾ? ನೀನು ದುಡಿದರೆ ಮಾತ್ರ ಸಂಸಾರ ಸಾಗೋದಾ? "
    "ನೀನು ಆಲೆ ಮನೆಯಲ್ಲಿ ನೋಡಿಲ್ವಾ! ಕಬ್ಬನ್ನು ಹಿಂಡ್ತಾ ಇದ್ರೂ ಕಬ್ಬು ಸಿಹಿ ಕೊಡ್ತಾ ಇರಲಿಲ್ವಾ? ಹಾಗೆಯೇ ಸಂಸಾರದಲ್ಲಿ ಅಪ್ಪ ಕಬ್ಬು ಇದ್ದ ಹಾಗೆ! ಎಷ್ಟು ಕಷ್ಟಪಡ್ತಾನೆ ಅಷ್ಟು ಸುಖ ಕುಟುಂಬಕ್ಕೆ!"
   "ಅಂದರೆ ಅಪ್ಪ ಆದವನಿಗೆ  ವೈಯುಕ್ತಿಕ ಹಿತಾಸಕ್ತಿ ಏನೂ ಇಲ್ವಾ?  ಸುಖ ಸಂತೋಷ ಬೇಡ್ವಾ!?" ಶಿವು ಅಪ್ಪನನ್ನು ಕೇಳಿದ.
   "ಕುಟುಂಬದ ಸಂತೋಷದಲ್ಲಿಯೇ ತನ್ನ ಸುಖ ಸಂತೋಷ ಕಾಣುವವನೇ ಅಪ್ಪ!"
    ಅಪ್ಪನ ವ್ಯಾಖ್ಯಾನ ಅರ್ಥಮಾಡಿಕೊಳ್ಳಲು ತುಂಬಾ ಕಷ್ಟ ಎನಿಸಿತು.
    "ಅರ್ಥ ಆಗ್ತಾ ಇಲ್ಲ. ಬಿಡಿಸಿ ಹೇಳಪ್ಪ!"
"ಹೇಳಿದ್ನಲ್ಲ ಮಗ... ನನಗೆ ಸಮಯವಿಲ್ಲ. ಇರುವಷ್ಟು ಸಮಯದಲ್ಲೇ ಎಲ್ಲಾ ಕರ್ತವ್ಯಗಳನ್ನು ಮಾಡಿ ಮುಗಿಸಿ ಹೋಗಬೇಕು,"
    ಅಪ್ಪನ ಮಾತು ತೀರಾ ಒಗಟಾಗಿ ಕಾಡಿತು.
      "ಎಲ್ಲಾ ಅಪ್ಪಂದಿರೂ ನಿನ್ನ ಹಾಗೆಯೇ ಯೋಚಿಸ್ತಾರ?"
   "ಎಲ್ಲರೂ ಅಂತ ಹೇಳಲಾರೆ ಮಗ. ಹೆಚ್ಚಿನ ಅಪ್ಪಂದಿರು, ಮನೆಯ ಜವಾಬ್ದಾರಿ ಹೊತ್ತವರು ಹೀಗೆಯೇ ಯೋಚಿಸ್ತಾರೆ."
    ಶಿವು ಮಾತಾಡದೇ ಯೋಚಿಸುತ್ತಾ ಹೆಗಲ ಮೇಲೆ ಕುಳಿತಿದ್ದ. ಮೌನದಲ್ಲೇ ಹಾದಿ ಸವೆಯುತಿತ್ತು. ಅಪ್ಪನ ಕಷ್ಟ ನೋಡಿ ಮನಸ್ಸು ನೊಂದಿತ್ತು. ಹೃದಯ ಹಿಂಡಿದಂತಾಗುತ್ತಿತ್ತು. ಹೆಗಲಿನ ಭಾರ ಕಡಿಮೆ ಮಾಡಿ ಇಳಿದು ನಡೆಯಬೇಕೆನಿಸಿತು! ಆದರೆ ಒಂದೇ ಒಂದು ಹೆಜ್ಜೆ ಇಡಲು ತಾನು ಅಸಮರ್ಥ ಎಂದೆನಿಸಿತು. ವಿಧಿಯಿಲ್ಲದೆ ಅಪ್ಪನ ಹೆಗಲ ಮೇಲೆ ಕುಳಿತೇ ಮೌನ ಮುರಿದ.
"ಇಲ್ಲ ಅಪ್ಪ! ನಿನಗೆ ವಿಶ್ರಾಂತಿಯ ಅಗತ್ಯವಿದೆ. ಸ್ವಲ್ಪ ಹೊತ್ತು ಇಲ್ಲಿಯೇ ಯಾವುದಾದರೂ ಮರದಡಿ ಮಲಗಿ ಮತ್ತೆ ಪ್ರಯಾಣ ಮಾಡೋಣ,"
    ಮಗನ ಮಾತು ಕೇಳಿ ನಗುತ್ತಾ ಮೈದಡವಿ ಹೇಳಿದ...
  "ಸಮಯ ತುಂಬಾ ಕಡಿಮೆ ಇದೆ. ಹೊತ್ತು ಹೋದಷ್ಟೂ ಬೆಳಗುವ ಸೂರ್ಯ ಮುಳುಗಿ ಕತ್ತಲಾಗುತ್ತದೆ,"
     ಅಪ್ಪನ ಮಾತಿನ ಮರ್ಮ ಅರ್ಥವಾಗದಿದ್ದರೂ ಮನೆಗೆ ಹೋಗಿ ಹಸುಗಳಿಗೆ ಬೇಕಾದ ಮೇವು ಹೊಂದಿಸಬೇಕು, ಕತ್ತಲಾದರೆ ಹಸುಗಳಿಗೆ ಮೇಯಲು ಹುಲ್ಲು ಸಿಗುವುದಿಲ್ಲ, ಉಪವಾಸವಿರಬೇಕು. ಹಾಗಾಗಿ ಅಪ್ಪ, ತನ್ನ ದಣಿವನ್ನು ಮರೆತು ಕರ್ತವ್ಯದ ಬೆನ್ನು ಹತ್ತಿದ್ದಾನೆಂದು ಭಾವಿಸಿ, "ಸರಿ ಅಪ್ಪ! ನಿನಗೆ ನಿನ್ನ ಕರ್ತವ್ಯವೇ ಮುಖ್ಯ! ದಣಿವಾರಿಸಿಕೊಳ್ಳಲು ನಿನಗೆ ಸಮಯವಿಲ್ಲ," ಎಂದು ನೊಂದು ನುಡಿದ ಶಿವು.
   ಮಗನಿಗೆ ಬೇಸರವಾಗಿದೆಯೆಂದು ಅಪ್ಪನಿಗೆ ಅವನ ಮಾತಿನ ದಾಟಿಯಿಂದಲೇ ಅರ್ಥವಾಯಿತು. ಆದರೇನು ಮಾಡುವುದು? ಸಮಯವಿಲ್ಲ!
     ಎಷ್ಟೊತ್ತಾದರೂ ಮನೆ ಮುಟ್ಟಲು ಆಗಿಲ್ಲ! ಕ್ರಮಿಸಬೇಕಾದ ದಾರಿ ಇನ್ನೂ ಇದೆ. ಇಬ್ಬರೂ ಮೌನ! ಸುಡು ಬಿಸಿಲು! ಬರಿಗಾಲು ಸುಡುತ್ತಿರುವುದನ್ನು ಲೆಕ್ಕಿಸದೆ ಸಾಗುವಾಗ ಕಾಲಿಗೆ ಮುಳ್ಳು ಚುಚ್ಚಿಕೊಳ್ಳುತ್ತದೆ. ಮಗನನ್ನು ಹೆಗಲಿನಿಂದಿಳಿಸಿ, ದಿನಸಿ ಚೀಲವನ್ನು ಪಕ್ಕಕ್ಕೆ ಇಟ್ಟು, ಅಲ್ಲೇ ಇದ್ದ ಬೂತಾಳೆ ಮುಳ್ಳಿನ ಸಹಾಯದಿಂದ ಕಾಲಿಗೆ ಹೊಕ್ಕಿದ್ದ ಮುಳ್ಳನ್ನು ತೆಗೆಯುತ್ತಾನೆ ಅಪ್ಪ. ಮುಳ್ಳು ಹೊರಬಂದ ಜಾಗದಿಂದ ರಕ್ತ ಒಸರುತ್ತದೆ. ಅದನ್ನು ಬೆರಳಿನಿಂದ ಅದುಮಿ, ಮತ್ತೆ ಮಗನನ್ನು ಹೆಗಲಿನ ಮೇಲೆ ಕುಳ್ಳಿರಿಸಿ ದಿನಸಿ ಚೀಲ ಹೊತ್ತು ಮುಂದೆ ಹೋಗುತ್ತಾನೆ.
     ಅಪ್ಪನ ಪರಿಸ್ಥಿತಿ ನೋಡು ಶಿವು ಜೋರಾಗಿ ಅಳುತ್ತಾನೆ. ಮಗನನ್ನು ಸಮಾಧಾನ ಮಾಡಿ, "ಇಷ್ಟೊಂದು ಸಣ್ಣ ವಿಚಾರಕ್ಕೆ ಹೆದರಿ ಅಳಬಾರದು, ಜೀವನದಲ್ಲಿ  ಇಂತಹ ಅದೆಷ್ಟೋ ನೋವುಗಳ ಜೊತೆಗೆ ಕಷ್ಟಗಳು ಬರುತ್ತವೆ .ಸಹಿಸಿಕೊಳ್ಳಬೇಕು, ಧೈರ್ಯದಿಂದ ಎದುರಿಸಿ ಮುಂದೆ ಸಾಗಬೇಕು. ಹಾಗಿದ್ದಾಗಲೇ ಅಪ್ಪ ಎಂದು ಕರೆಸಿಕೊಳ್ಳಲು ಸಾಧ್ಯ!" ಪರೋಕ್ಷವಾಗಿ ಜೀವನದ ಪಾಠ ಹೇಳಿದ್ದ ಅಪ್ಪ!
     ಅಪ್ಪನ ಮನೋ ಧೈರ್ಯ ಮತ್ತು ಬದ್ಧತೆಯನ್ನು ನೋಡಿ ದಿಗ್ಬ್ರಾಂತನಾದ ಶಿವು. ಕಷ್ಟಗಳನ್ನು ಲಘುವಾಗಿ ಸ್ವೀಕರಿಸಿ ನಗುನಗುತ್ತಾ ಎದುರಿಸುವ ಪರಿ ನೋಡಿ ಆಶ್ಚರ್ಯಗೊಂಡ. ಅಪ್ಪ ಎಂದರೆ ದೊಡ್ಡ ಆಲದ ಮರದಂತೆ! ಕಬ್ಬಿನ ಜಲ್ಲೆ! ಆಕಾಶ! ಏನೇನೂ ಕಲ್ಪನೆ ಮೂಡಿ ಕೇಳಿದ.
   "ಅಪ್ಪ ಎಂದರೆ ಏನಪ್ಪ?"
  "ಅಪ್ಪ ಎಂದರೆ.... " ಎನ್ನುತ್ತಾ ಮಾತು ನಿಲ್ಲಿಸಿ ಹೆಜ್ಜೆಯ ವೇಗವನ್ನು ಹೆಚ್ಚಿಸಿದ ಅಪ್ಪ. ಒಂದು ಮಾತಿನಲ್ಲಿ ಹೇಳುವುದು ಹೇಗೆ? ಮನೆ ಹತ್ತಿರ ಬಂದಾಗಿದೆ... ಹೇಳಲು ಸಮಯವಿಲ್ಲ.
     "ಮಗಾ! ಅಪ್ಪ ಎಂದರೇನು? ಅದರ ಆಳ ಅಗಲ ತಿಳಿಸಿ ಹೇಳುವುದು ಕಷ್ಟ! ಈಗ ಸಮಯವಿಲ್ಲ. ಖಂಡಿತಾ ಸಮಯ ಬಂದಾಗ ತಿಳಿಸುತ್ತೇನೆ," ಎಂದು ಹೇಳಿ ಮನೆ ಸೇರಿದ.
     ಅಪ್ಪ ಎಂದರೇನು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಯತ್ನಿಸುತ್ತಾನೆ ಶಿವು! ಸಂವತ್ಸರಗಳು ಕಳೆದು ಹೋಗುತ್ತವೆ. ಅಪ್ಪನ ಎಣ್ಣೆ ಕಾಣದ ಕೂದಲು ಮತ್ತಷ್ಟೂ ಬಿಳಿಯಾಗಿರುತ್ತದೆ. ಬಿಸಿಲಿನ ಹೊಡೆತಕ್ಕೆ ಸಿಕ್ಕ ಮುಖ ಸುಟ್ಟು ಸುಕ್ಕಾಗಿರುತ್ತದೆ! ಕರಕಲು ಖಳಾಹೀನ ಮುಖ! ಬೆನ್ನು ಸ್ವಲ್ಪ ಬಾಗಿರುತ್ತದೆ! ಮೊದಲಿನ ಉತ್ಸಾಹ ಬತ್ತಿಹೋಗಿದೆ! ಆದರೂ ಗಾಣದ ಎತ್ತಿನಂತೆ ಅಪ್ಪ ದುಡಿಯುತ್ತಲೇ ಇದ್ದಾನೆ!
    ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆ ಸೇರಿರುತ್ತಾರೆ. ಶಿವು ತನ್ನ ಮಡದಿಯೊಂದಿಗೆ ನಗುನಗುತ್ತಾ ವರ್ಷ ಕಳೆದಿದ್ದು ಅಪ್ಪನಾಗುವ ನಿರೀಕ್ಷೆಯಲ್ಲಿರುತ್ತಾನೆ! ಆದರೆ ಅಪ್ಪ ಎಂದರೇನು! ಪ್ರಶ್ನೆಗೆ ಶಿವನಿಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ. ಅರ್ಥವೂ ಆಗಿರಲಿಲ್ಲ ! ಇದೇ ಯೋಚನೆಯಲ್ಲಿ ಮಲಗಿದ್ದ ಶಿವು, ಬೆಳಿಗ್ಗೆ ಎದ್ದ ಕೂಡಲೇ ಅಪ್ಪನನ್ನು ಸಂಪರ್ಕಿಸಿ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಲು ಮನಸ್ಸು ಮಾಡುತ್ತಾನೆ.
    ಬೆಳಿಗ್ಗೆ ಎಂದಿನಂತೆ ಎಚ್ಚರವಾದರೂ ಕೊರೆಯುವ ಚಳಿಯ ಕಾರಣ ಏಳಲು ಮನಸ್ಸಾಗುವುದಿಲ್ಲ. ಕಂಬಳಿ ಹೊದ್ದು ಮಲಗುತ್ತಾನೆ. ಕೋಳಿ ಕೂಗಿ ಹೊತ್ತು ಮೇಲೇರುತ್ತಿದ್ದರೂ ಚಳಿಗೆ ಹೆದರಿ ಶಿವು ಬೆಚ್ಚಗೆ ಕಂಬಳಿ ಹೊದ್ದು ಮಲಗಿರುವುದನ್ನು ಗಮನಿಸಿದ ಅಮ್ಮ, "ಶಿವು! ಕೋಳಿ ಕೂಗಿ ಎಷ್ಟೋ ಹೊತ್ತಾಯ್ತು..  ಎದ್ದು ದನಕರು ನೋಡು," ಎನ್ನುತ್ತಾಳೆ. ಅಮ್ಮನ ಧ್ವನಿ ಕೇಳಿ ವಾಸ್ತವ ಸ್ಥಿತಿಗೆ ಮರಳಿದ ಶಿವುಗೆ ಅಪ್ಪನ ನೆನಪಾಗುತ್ತದೆ. ಗಡಿಬಿಡಿಯಿಂದ ಎದ್ದು ಅಪ್ಪನನ್ನು ಕಾಣಲು ಅತ್ತಿತ್ತಾ ನೋಡುತ್ತಾನೆ. ಅಪ್ಪ ಕಾಣದೆ ಇದ್ದಾಗ ಅಮ್ಮನನ್ನು ಕೇಳುತ್ತಾನೆ.
     "ತುಂಬಾ ಕೆಲಸ ಇದೆ, ಹೊಲಕ್ಕೆ ಹೋಗಬೇಕೂಂತ ಕೊರೆವ ಚಳಿಯನ್ನು ಲೆಕ್ಕಿಸದೆ ಹೊಲದ ಕಡೆ ಹೋಗಿದ್ದಾರೆ," ಎನ್ನುತ್ತಾಳೆ ಅಮ್ಮ.
    ಶಿವುಗೆ ನಾಚಿಕೆ ಆಗುತ್ತದೆ. ಬಿಸಿರಕ್ತದ ತರುಣ ಮನೆಯಲ್ಲಿ!  ಕುಗ್ಗಿದ ದೇಹದ ವಯೋ ವೃದ್ಧ ಅಪ್ಪ ಹೊಲದಲ್ಲಿ! ತನ್ನ ವರ್ತನೆ ಬಗ್ಗೆ ಅಸಹ್ಯ ಮೂಡುತ್ತದೆ. ಅಪ್ಪನ ಬಳಿ ಕ್ಷಮೆ ಕೋರಬೇಕೆನಿಸುತ್ತದೆ. ಅಪ್ಪನನ್ನು ಕಾಣಲು ಹೊಲದತ್ತ ಓಡೋಡಿ ಹೋಗುತ್ತಾನೆ.
     ದೂರದಿಂದಲೇ ಅಪ್ಪನನ್ನು ನೋಡುತ್ತಾನೆ ಶಿವು! ಹೊಲದಲ್ಲಿ ಅಪ್ಪ ಎತ್ತುಗಳಿಗೆ ನೊಗ ಕಟ್ಟಿ ಉಳುತ್ತಿರುತ್ತಾನೆ! ದೇಹದಲ್ಲಿ ದುಡಿಯಲು ಶಕ್ತಿಯಿಲ್ಲ... ಆದರೆ ವಿಶ್ರಾಂತಿ ಪಡೆಯಲು ಮನಸ್ಸು ಒಪ್ಪುತ್ತಿಲ್ಲ! ಅಪ್ಪ ಒಂದೊಂದು ಹೆಜ್ಜೆ ಇಡಲು ಕಷ್ಟಪಡುತ್ತಿರುವುದನ್ನು ದೂರದಿಂದಲೇ ಗಮನಿಸುತ್ತಾನೆ ಶಿವು.  ಅಪ್ಪನ ಕಾಲಿನಲ್ಲಿ ಶಕ್ತಿಯಿಲ್ಲ... ಕ್ಷೀಣ ದ್ವನಿಯಲ್ಲಿ ಎತ್ತುಗಳನ್ನು ಗದರಿಸುತ್ತಾ ಸಾಗುವ ಅಪ್ಪನ ಪರಿಸ್ಥಿತಿ ನೋಡಿ ಮನಸ್ಸಿಗೆ ನೋವಾಗುತ್ತದೆ! ಓಡೋಡಿ ಅಪ್ಪನ ಬಳಿ ಹೋಗಿ "ಅಪ್ಪಾ! ' ಎನ್ನುವಷ್ಟರಲ್ಲಿ ಅಪ್ಪ ಕುಸಿದು ಬೀಳುತ್ತಾನೆ! ಎತ್ತುಗಳು ನಿಂತಲ್ಲಿಯೇ ನಿಲ್ಲುತ್ತವೆ! ಗಾಬರಿಯಿಂದ "ಅಪ್ಪಾ! ಅಪ್ಪಾ!" ಎನ್ನುತ್ತಾ, ಬಸವಳಿದು ಮಣ್ಣಿನ ಮೇಲೆ ಬಿದ್ದಿದ್ದ ಅಪ್ಪನನ್ನು ಎತ್ತಿ ತೊಡೆಯ ಮೇಲೆ ಮಲಗಿಸಿಕೊಳ್ಳುತ್ತಾನೆ.  ತೇಲುವ ಕಣ್ಣುಗಳು! ಗಂಟಲಿನಿಂದ ಮಾತುಗಳೇ ಹೊರಡುತ್ತಿಲ್ಲ.  ಕೇವಲ ತುಟಿಗಳ ಚಲನೆ! ಚಳಿಗೆ ಧರಿಸಿದ್ದ ಹರಿದು ಹೋಗಿದ್ದ ದಪ್ಪ ಶರ್ಟಿನ ಜೇಬಿನಿಂದ ಕಷ್ಟಪಟ್ಟು ಪತ್ರವೊಂದನ್ನು ತೆಗೆದು ಮಗನ ಕೈಗಿಟ್ಟು, ತೃಪ್ತಿಯ ನಗೆ ಬೀರಿ ಕಣ್ಣುಗಳನ್ನು ತೇಲಿಸುತ್ತಾನೆ ಅಪ್ಪ.
     ಅಪ್ಪ ಕೈಗಿತ್ತ ಪತ್ರವನ್ನು ನಿಧಾನವಾಗಿ ಬಿಚ್ಚಿ ಓದುತ್ತಾನೆ ಶಿವು....
ಮಗ ಶಿವು
    ಅಪ್ಪ ಎಂದರೆ ಏನಪ್ಪ? ಎಂದು ಅಂದು ನೀನು ಕೇಳಿದ ಪ್ರಶ್ನೆಗೆ ಸಮಯವಿಲ್ಲ ಎಂದು ಉತ್ತರಿಸಿ, ಸೂಕ್ತ ಸಮಯ ಬಂದಾಗ ತಿಳಿಸುವುದಾಗಿ ಹೇಳಿದ್ದೆ. ಸೂಕ್ತ ಸಮಯ ಎಂದು ಬರುತ್ತದೆ ಎಂದು ನನಗೆ ತಿಳಿದಿಲ್ಲ, ಅನಿಶ್ಚಿತ ಬದುಕು! ನೀರಿನ ಮೇಲಿನ ಗುಳ್ಳೆ! ಹಾಗಾಗಿ ಈ ಪತ್ರ ಬರೆದು ನನ್ನ ದಪ್ಪ ಅಂಗಿಯ ಜೇಬಿನಲ್ಲಿ ಇಟ್ಟುಕೊಂಡಿದ್ದೇನೆ. ಇದು ಯಾವಾಗಲೂ ಈ ಅಂಗಿಯ ಜೇಬಿನಲ್ಲೇಯೇ ಇರುತ್ತದೆ... ನಾನು ಇರಲಿ, ಬಿಡಲಿ ನೀನು ಓದುತ್ತೀಯಾ ಎಂಬ ನಂಬಿಕೆ ನನ್ನದು.
     ನಾನು, ನನ್ನ ಮಕ್ಕಳಿಗೆ ಅಕ್ಷರ ಜ್ಞಾನ ಕೊಟ್ಟು ಸಂಸ್ಕಾರ ನೀಡಿದ್ದೇನೆ. ದುಡಿದು ಬದುಕಲು ದಾರಿ ತೋರಿಸಿದ್ದೇನೆ ಎಂಬ ತೃಪ್ತಿ ನನಗಿದೆ.
    ಮಗ! ನನಗೆ ಹೃದಯ ಸಂಬಂಧಿ ಖಾಯಿಲೆ ಇದೆ. ನಿನ್ನ ಅಮ್ಮ ಮತ್ತು ನಿಮಗೆ ಗೊತ್ತಾದರೆ ಚಿಕಿತ್ಸೆಗೆ ಒತ್ತಾಯಿಸುತ್ತೀರಿ ಎಂಬ ಭಯ!  ನನ್ನ ಇಂದಿನ ಪರಿಸ್ಥಿತಿಯಲ್ಲಿ  ದುಬಾರಿ ಚಿಕಿತ್ಸೆಯ ವೆಚ್ಚ ಭರಿಸಲು ಸಾಧ್ಯವಿಲ್ಲ. ನಾಲ್ಕು ಜನ ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಕು, ಜೊತೆಗೆ ನಿನಗೊಂದು ದಾರಿ ತೋರಬೇಕು. ಹೀಗಿರುವಾಗ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯಲು ಹೇಗೆ ಸಾಧ್ಯ? ಅನಿಶ್ಚಿತ ಬದುಕು! ಸಮಯವಿರಲಿಲ್ಲ. ದುಡಿದು ಸಂಸಾರದ ದಡ ಸೇರಿಸಬೇಕಿತ್ತು! ಹಾಗಾಗಿ ನನಗಿರುವ ಖಾಯಿಲೆಯನ್ನು ನಿಮಗೆ ತಿಳಿಸದೆ ಮುಚ್ಚಿಟ್ಟೆ.
   ನಿನ್ನ ಅಜ್ಜ ನನಗೆ ಎರಡು ಎಕರೆ ಜಮೀನು ಬಿಟ್ಟು ಹೋಗಿದ್ದರು! ನಾನು ಅದನ್ನು ಕಳೆಯದೆ ಇದೀಗ ಮೂರು ಎಕರೆ ಜಮೀನು ಬಿಟ್ಟು ಹೋಗುತ್ತಿದ್ದೇನೆ. ನನಗೆ ಮೊಮ್ಮಗನನ್ನು ನೋಡುವ ಆಸೆ! ಆದರೆ ಕಾಲನ ಕರೆ ಯಾವಾಗ ಬರುವುದೋ ಏನೋ ಗೊತ್ತಿಲ್ಲ. ಅಮ್ಮನಿಗೆ ನೋವಾಗದಂತೆ ನೋಡಿಕೊಳ್ಳುವೆ ಎಂಬ ಭರವಸೆ ನನಗಿದೆ.
   ಅಪ್ಪ ಎಂದರೆ ಏನಪ್ಪ...? ಈ ನಿನ್ನ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ, ಅಪ್ಪ ಎಂದರೆ ಅಪ್ಪ ಅಷ್ಟೇ! ಎಂದು ಮಾತ್ರ ಹೇಳಬಲ್ಲೆ. ಇದಕ್ಕಿಂತ ಹೆಚ್ಚು ನನಗೆ ಗೊತ್ತಿಲ್ಲ. ಸಾಧ್ಯವಾದರೆ ನೀನು ನನ್ನ ಮೊಮ್ಮಗನಿಗೆ ತಿಳಿಸಿ ಹೇಳು!
  ಇಂತಿ ನಿನ್ನ ಅಪ್ಪ.
       ಪತ್ರ ಓದಿ ಶಿವುಗೆ ದುಃಖದ ಕಟ್ಟೆ ಒಡೆಯುತ್ತದೆ. ಸಂಸಾರಕ್ಕಾಗಿ ತನ್ನ ಸುಖ, ಸಂತೋಷವನ್ನು ತ್ಯಾಗ ಮಾಡಿ, ಹಿಂಡಿದರೂ ಸಿಹಿಯನ್ನೇ ಕೊಡುವ ಕಬ್ಬಿನಂತೆ ತನ್ನ ದೇಹವನ್ನು ಹಿoಡಿ ಸೋತಿದ್ದ ಅಪ್ಪನನ್ನು ನೋಡಿ ಜೋರಾಗಿ "ಅಪ್ಪಾ!" ಎನ್ನುತ್ತಾ ತಬ್ಬಿಕೊಂಡು ಅಳುತ್ತಾನೆ. ಆದರೆ ಮಗನ ಆಕ್ರಂದನಕ್ಕೆ ಸ್ಪಂದಿಸಲು ಅಪ್ಪನಿಗೆ ಸಮಯವೇ ಇರಲಿಲ್ಲ! ಶಾಶ್ವತ ವಿಶ್ರಾಂತಿ! ಚಿರ ನಿದ್ರೆಗೆ ಜಾರಿದ್ದ! "ಅಪ್ಪ ಎಂದರೆ ಅಪ್ಪ!" ಎಂದಷ್ಟೇ ಹೇಳಿ ಹೋಗಿದ್ದ.
      ರಂಗ ಬರೆದು ಓದಿ ಹೇಳಿದ ಕಥೆ ಕೇಳಿ ಇಡೀ ಸಭಾಭವನದಲ್ಲಿ ನೀರವ ಮೌನ ಆವರಿಸಿತ್ತು! ಕಣ್ಣಿನಿಂದ ನೀರು ಸುರಿಯುತ್ತಿತ್ತು! ಎಲ್ಲರ ಮನದಲ್ಲೂ ಅದೇ ಪ್ರಶ್ನೆ! ಅಪ್ಪ ಎಂದರೆ...?

-ರಾಮಮೂರ್ತಿಸೋಮನಹಳ್ಳಿ



Rate this content
Log in

Similar kannada story from Classics