ಸಮಯ
ಸಮಯ
ಸಮಯವೆಂದರೆ ಬರೀ ಸಮಯವಲ್ಲ ಅದು ಜೀವನವನ್ನು ರೂಪಿಸುವ ಅಮೂಲ್ಯ ಸಾಧನ. ಅದ್ಯಾವತ್ತೂ ನಮಗೆ ಕಾಯುವುದೇ ಇಲ್ಲ. ಓಡುವ ಸಮಯದ ಜೊತೆ ನಾವೂ ಹೆಜ್ಜೆ ಹಾಕಿದರಷ್ಟೇ ಬಂತು. ಟೈಮಿಲ್ಲ ಎಂದು ದೂರುತ್ತಾ ಕುಳಿತರೆ ಫಲವಿಲ್ಲ.
ನೆನಪಿಡಿ ಸಮಯ ಯಾವತ್ತೂ ನಮ್ಮ ಹಿಂದೆ ಬರುವುದಿಲ್ಲ. ಹಾಗಂದುಕೊಂಡರೆ ಅದು ಮೂರ್ಖತನವಷ್ಟೆ. ನಮಗೆ ಯಶಸ್ಸು, ಕೀರ್ತಿ ಬೇಕಾದರೆ ಇರುವ ಸಮಯದ ಜೊತೆ ಹೆಜ್ಜೆ ಹಾಕಲು ಕಲಿಯಲೇಬೇಕು. ಸಮಯಪ್ರಜ್ಞೆ ಎಂಬ ಕಲೆ ಕರಗತವಾದರೆ ನಮ್ಮ ಯೋಜನೆಗಳೆಲ್ಲವೂ ಸಫಲ, ಇಲ್ಲವಾದರೆ ಕೈ ಹಾಕಿದ ಕೆಲಸವೆಲ್ಲಾ ಬರೀ ವಿಫಲ. ಅದರಲ್ಲೂ ಸಾಧಿಸುವ ವಯಸ್ಸಲ್ಲಿ ಸಮಯ ಅತ್ಯಮೂಲ್ಯ. ಇದರ ಸದ್ಭಳಕೆ ಮಾಡಿಕೊಂಡರೆ ಬಾಳೆಲ್ಲಾ ಬಂಗಾರವಾಗಬಹುದು. ಅದೇ ʼಟೈಮಿಲ್ಲʼ ಎಂದು ಕೂತರೆ ಮುಂದೆ ʼಟೈಮ್ʼ ಬರುವಾಗ ವಯಸ್ಸು, ಆಯಸ್ಸು ಎರಡೂ ಇರುವುದಿಲ್ಲ!
ಈ ಓಡುವ ಸಮಯದ ಮಹತ್ವ ನನಗೂ ತಿಳಿದಿರಲಿಲ್ಲ. ʼಸಮಯ ವ್ಯರ್ಥ ಮಾಡಬೇಡʼ ಎಂದು ಮನೆಯಲ್ಲಿ ಹಿರಿಯರು ಎಷ್ಟೇ ತಿಳಿಹೇಳಿದರೂ ಅವರೆದುರು ನಾಟಕವಾಡುತ್ತಿದ್ದೆನೇ ಹೊರತು ಸಮಯ ಪಾಲಿಸುತ್ತಿರಲಿಲ್ಲ. ಓದಬೇಕಾದ ಸಮಯದಲ್ಲಿ ಕಂಪ್ಯೂಟರ್, ಮೊಬೈಲ್ ಎಂದು ಕಾಲಹರಣ ಮಾಡುತ್ತಿದ್ದೆ. ಊಟೋಪಚಾರದ, ಆಟದ ಸಮಯವನ್ನು ಮಾತ್ರ ಸರಿಯಾಗಿ ಪಾಲಿಸುತ್ತಿದ್ದೆ. ಹೀಗಾಗಿ ಓದಲು ʼಸಮಯವಿಲ್ಲದೆʼ ಎಸ್ಎಸ್ಎಲ್ಸಿಯಲ್ಲಿ ಕಡಿಮೆ ಅಂಕ ಪಡೆದೆ. ಮನಸ್ಸಿಗೆ ಬೇಸರವಾದರೂ ಸಮಯ ಮೀರಿತ್ತು.
ಇನ್ನೆಂದೂ ಸಮಯ ವ್ಯರ್ಥ ಮಾಡಿ ಹೆತ್ತವರಿಗೆ ನಿರಾಸೆ, ನೋವು ತರಬಾರದೆಂದೂ ದೃಢನಿಶ್ಚಯ ಮಾಡಿಕೊಂಡೆ. ಆಗಿಂದಲೇ ಸಮಯಪಾಲನೆ ಶುರುಮಾಡಿದೆ. ಮನೋರಂಜನೆಗಿಂತ ಓದಿನ ಕಡೆಗೆ ಹೆಚ್ಚಿನ ಗಮನ ಕೊಟ್ಟೆ. ಇದರ ಫಲವಾಗಿ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದುಕೊಳ್ಳಲು ಸಾಧ್ಯವಾಯಿತು.
ನನಗಾದ ಅನುಭವ ಹಲವರಿಗೆ ಆಗಿರಬಹುದು, ಆದರೆ ಅಂತಹ ಸಮಯದಲ್ಲಿ ಎಚ್ಚೆತ್ತುಕೊಂಡು ಸಮಯದ ಮಹತ್ವ ಅರಿಯುವವರು ಕೆಲವರಷ್ಟೇ. ನನ್ನ ಸಮಯಪಾಲನೆಯಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಲ್ಲೆ ಎಂಬ ಭರವಸೆಯಿದೆ. ಸಮಯವೆಂಬುದು ಸದಾ ಖಾಲಿಯಾಗುತ್ತಲೇ ಇರುವ ಅಮೂಲ್ಯ ಖಜಾನೆ. ಈ ಖಜಾನೆ ಖಾಲಿಯಾಗುವುದರೊಳಗಾಗಿ ಸರಿಯಾಗಿ ಬಳಸಿಕೊಳ್ಳಬೇಕಷ್ಟೆ. ನಾವು ಸಮಯಪಾಲನೆ ರೂಢಿಸಿಕೊಂಡು ಒಳ್ಳೆಯ ಬದುಕು ರೂಪಿಸಿಕೊಳ್ಳೋಣ.
