ಒಂಟಿ ಮನೆ
ಒಂಟಿ ಮನೆ
ಧನುವಿಗೆ ಆಫೀಸ್ ಕೆಲಸದ ಮೇಲೆ ಬೇರೆ ಊರಿಗೆ ವರ್ಗ ಆಗುತ್ತದೆ. ಅವನು ವರ್ಗವಾಗಿ ಹೋದ ಊರಿನ ಪೇಟೆಯಲ್ಲಿ ಬಾಡಿಗೆ ಮನೆ ಸಿಗದೆ. ಅವನು ಊರಿನ ಹೊರಗೆ ಅಂದರೆ ಪೇಟೆ ಬಿಟ್ಟು ಸ್ವಲ್ಪ ಹೊರಗೆ ಅದು ತುಂಬಾ ಕಡಿಮೆ ಬಾಡಿಗೆಯಲ್ಲಿ ಮನೆ ಸಿಗುತ್ತದೆ. ಒಂದು ನಾಲ್ಕೈದು ಬಾಡಿಗೆ ಮನೆಗಳಿವೆ ಆ ಕಟ್ಟಡದಲ್ಲಿ ನೀರಿನ ವ್ಯವಸ್ಥೆ ಮತ್ತು ಕರೆಂಟ್ ವ್ಯವಸ್ಥೆ ಅಷ್ಟಕ್ಕೆ ಅಷ್ಟೇ. ಆದರೂ ಪರವಾಗಿಲ್ಲ ಇನ್ನೇನು ಮಾಡೋದು ಪಟ್ಟಣದಲ್ಲಿ ಬಾಡಿಗೆ ಮನೆ ಸಿಗುವುದು ತುಂಬಾ ಕಷ್ಟ ಸದ್ಯ ಇಲ್ಲಾದರೂ ಬಾಡಿಗೆ ಮನೆ ಸಿಕ್ಕಿತ್ತಲ್ಲ ಅದೇ ನನ್ನ ಪುಣ್ಯ ಇರಲಿ ಏನಾದರೂ ಅಡ್ಜಸ್ಟ್ ಮಾಡಿಕೊಳ್ಳುವುದು ಇರೋದ್ರಲ್ಲೇ ಎಂದು ಮನದಲ್ಲಿ ಆ ಬಾಡಿಗೆ ಮನೆಯನ್ನು ಪ್ರವೇಶಿಸಿ ಮನೆಯ ಮೂಲೆ ಮೂಲೆಯನ್ನು ನೋಡುತ್ತಾನೆ .ಚಿಕ್ಕದಾದರೂ ಸಹ ತುಂಬಾ ಚೊಕ್ಕವಾಗಿದೆ ಮನೆ ತುಂಬಾ ಇಷ್ಟವಾಯಿತು ಮನೆ ತುಂಬಾ ಚೆನ್ನಾಗಿದೆ. ಒಂದು ಪುಟ್ಟ ಅಡುಗೆ ಕೋಣೆ ಪುಟ್ಟ ಹಾಲ್ ಮತ್ತು ಒಂದು ಪುಟ್ಟ ಮಲಗುವ ಕೋಣೆ ಒಬ್ಬನಿಗೆ ಸಾಕು.ಎಂದು ತನ್ನ ಎಲ್ಲಾ ವಸ್ತುಗಳನ್ನು ಜೋಡಿಸಲು ಶುರು ಮಾಡಿದ. ತನ್ನ ಮಲಗುವ ಕೋಣೆಗೆ ಹೋಗಿ ತನ್ನ ಬಟ್ಟೆಗಳನ್ನು ಬೆಂಚ್ ಮೇಲೆ ಜೋಡಿಸಿಟ್ಟ. ತನ್ನ ಆಫೀಸಿನ ವಸ್ತುಗಳನ್ನು ಸಹ ತನ್ನ ಕೋಣೆಯ ಕಿಟಕಿಯ ಬದಿಯಲ್ಲಿ ಜೋಡಿಸಿಟ್ಟು ಕಿಟಕಿಗಳನ್ನು ತೆರೆದ ಒಳ್ಳೆಯ ಗಾಳಿ ಬೆಳಕು ಬಂತು. ಸುತ್ತಲೂ ಹೊರಗಡೆ ನೋಡಿದ. ಸ್ವಲ್ಪ ದೂರದಲ್ಲಿ ಒಂಟಿ ಮನೆಯೊಂದಿತ್ತು ಅದು ಸಹ ದಟ್ಟಕಾಡಿನ ಮಧ್ಯೆ ಅವರ ಧೈರ್ಯ ಆಗಬಹುದು ಎಂದು ತನ್ನ ಕೆಲಸ ಮಾಡಲು ಹೋದನು. ಅಡುಗೆ ಮಾಡಿ ಊಟ ಮಾಡಿದವನಿಗೆ ನಿದ್ರೆ ಬೇಗನೇ ಬಂತು ಬಹುಶಃ ಸ್ವಲ್ಪ ಸುಸ್ತಾಗಿ ಅನಿಸುತ್ತದೆ ಯಾವತ್ತೂ 12ಗಂಟೆಗೆ ಮಲಗುವವನು ಇಂದು 9ಗಂಟೆಗೆ ಮಲಗಿಬಿಟ್ಟ. ಸುಮಾರು 12.30ರವರೆಗೆ ಆ ಒಂಟಿ ಮನೆಯಿಂದ ಯಾರೋ ಒಬ್ಬ ಹೆಂಗಸು ಜೋರಾಗಿ ಅಳುವ ಸದ್ದು ಕೇಳುತ್ತದೆ. ಗಾಢ ನಿದ್ರೆಯಲ್ಲಿದ್ದ ಧನುವಿಗೆ ಆ ಕೂಗು ಕೇಳಿತು ಯಾವುದೋ ಬೆಕ್ಕು ಇರಬೇಕು ಎಂದು ಮತ್ತೆ ಮಲಗಿದ. ಮತ್ತೆ ಅದೇ ಹೆಂಗಸಿನ ಕೂಗು ಈ ಸಲ ತುಂಬಾ ಭಯಾನಕವಾಗಿತ್ತು. ದೊಡ್ಡದಾಗಿ ಅರಚಿದಳು ಒಮ್ಮೆಗೇ ಗಾಬರಿಯಾಗಿ ಭಯಬಿದ್ದು ಎದ್ದು ಕುಳಿತ. ತುಂಬಾ ಹೊತ್ತು ಕಾದ ಮತ್ತೆ ಆ ಶಬ್ಧ ಬರಲಿಲ್ಲ. ಎಲ್ಲೋ ನನ್ನ ಭ್ರಮೆ ಇರಬೇಕು ಎಂದು ಧನು ವಾಪಾಸು ಮಲಗಿದ.ಈಗ ಧನು ಮಲಗಿದ ಕಿಟಕಿಯ ಬಾಗಿಲುಗಳನ್ನು ಜೋರಾಗಿ ಬಡಿದು ಬಡಿದು ಅರಚುತ್ತ ಬಾಗಿಲು ತೆಗೆಯಿರಿ ನನ್ನ ಮಗು ನಿಮ್ಮ ಮನೆಗೆ ಬಂದಿದೆ ನಾನು ಕರೆದುಕೊಂಡು ಹೋಗಲು ಬಂದಿದ್ದೇನೆ ಎಂದು ಆ ಹೆಂಗಸು ಗಡಸುಧ್ವನಿಯಲಿ ಭಯಂಕರವಾಗಿ ಕೂಗಿದಳು ಕಿಟಕಿಯನ್ನು ಆದಷ್ಟು ಜೋರಾಗಿ ಬಡಿಯುತ. ಗಾಢನಿದ್ರೆಯಲ್ಲಿದ್ದ ಧನುವಿಗೆ ಜೀವವೇ ಬಾಯಿಗೆ ಬಂದ ಹಾಗೇ ಆಯಿತು. ಕೈಕಾಲು ಸ್ವಾಧೀನ ಕಳೆದುಕೊಂಡ ಹಾಗೇ ಆಗಿ ಗಂಟಲು ಒಣಗಿ ಮಾತೇ ಹೊರಡದೆ ತಲೆಸುತ್ತು ಬಂತು ಅಲ್ಲೇ ಹಾಸಿಗೆ ಮೇಲೆ ಬಿದ್ದವನಿಗೆ ಎಚ್ಚರವಾದದ್ದು ಮಾರನೇ ದಿನ ಮಧ್ಯಾಹ್ನ. ಎದ್ದವನೇ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿ ಹೊರಗಡೆ ಹೋಟೆಲ್ ನಲ್ಲಿ ಊಟ ಮಾಡಿ ಬಂದು ರಾತ್ರಿ ನಡೆದ ಘಟನೆಯನ್ನು ಅಕ್ಕಪಕ್ಕದ ಮನೆಯವರಿಗೆ ಹೇಳಿದ. ಅವರು ಸಹ ಹೌದು ನಿನ್ನೆ ರಾತ್ರಿ ಭಯಂಕರವಾದ ಶಬ್ಧ ಕೇಳಿಸಿತ್ತು ನಮಗೂ. ನಾವು ಭಯದಲ್ಲಿ ಮಲಗಲೇ ಇಲ್ಲ ಧನು ಅವರೇ ನಿಮಗೂ ಹೀಗೇ ಆಗಿರಬೇಕು ಅಲ್ವಾ. ಅದಕ್ಕೆ ಧನು ಹೌದು ನನಗೆ ಆ ಭಯಂಕರ ಶಬ್ಧಕ್ಕೆ ನನಗೆ ತಲೆ ಸುತ್ತು ಬಂದು ಬಿದ್ದು ಎದ್ದದ್ದು ಇವತ್ತು ಮಧ್ಯಾಹ್ನ ಎಂದು ತನ್ನ ಕೋಣೆಗೆ ಹೋದ ಕಿಟಕಿ ತೆರೆದು ನೋಡಿದ ಆ ಮನೆ ಇನ್ನು ಹತ್ತಿರ ಬಂದಂತೆ ಕಾಣಿಸಿತು. ಅಲ್ಲಿ ಯಾರೋ ಓಡಾಡುವ ಹಾಗೆ ಕಾಣಿಸಿತು. ಅಲ್ಲಿಗೆ ಹೋಗಿ ನೋಡುವ ಧೈರ್ಯ ಅವನಲ್ಲಿ ಇರಲಿಲ್ಲ. ಏನಾದರೂ ಆ ಭೂತದ ಕೈಯಲ್ಲಿ ಸಿಕ್ಕರೆ ಎಂದು ಇವತ್ತೇ ಈ ಬಾಡಿಗೆ ಮನೆಯನ್ನು ಬಿಟ್ಟು ಹೋಗುತ್ತೇನೆ. ಪೇಟೆಯಲ್ಲಿ ಎಲ್ಲಾದರೂ ಮನೆ ಇದ್ದರೆ ಅಲ್ಲೇ ನಿಲ್ಲುತ್ತೇನೆ. ಮೆಟ್ಟಿಲ ಕೆಳಗೆ ವಾಸಮಾಡಿದರು ಪರವಾಗಿಲ್ಲ ಆ ನಿರ್ಜನವಾದ ಪ್ರದೇಶದಲ್ಲಿ ಅದು ಕಾಡಿನ ಮಧ್ಯೆ ಪಾಳುಬಿದ್ದ ಒಂಟಿ ಮನೆಯ ಹತ್ತಿರ ಮನೆ ಬೇಡಪ್ಪ ದೇವರೇ ಸಾಕು ನಾನು ಹೊರಡುತ್ತೇನೆ. ಒಂದೇ ದಿನಕ್ಕೆ ಸಾಕಾಗಿ ಹೋಯಿತು. ಧನು ಜೊತೆಗಿದ್ದ ನಾಲ್ಕೈದು ಮನೆಯವರು ಸಹ ಭಯದಲ್ಲಿ ಮನೆ ಖಾಲಿ ಮಾಡಿ ಹೊರಟು ನಿಂತರು ಬದುಕಿದ್ದರೇ ಎಲ್ಲೂ ಬದುಕಬಹುದು. ಈ ತರ ಅರ್ಧಂಬರ್ಧ ಭಯದಲ್ಲಿ ಜೀವನ ಮಾಡುವುದು ಬೇಡವೆಂದು ಎಲ್ಲರೂ ಪೇಟೆ ಕಡೆಗೆ ಹೊರಟರು.
✍️ರಮ್ಯಕೃಷ್ಣಪ್ರಭು
ಮೂಡಬಿದಿರೆ

