ನಗು ಮೊಗದ ಹಿಂದೆ
ನಗು ಮೊಗದ ಹಿಂದೆ
ಅನುಕೂಲಸ್ಥರ ಮನೆಯಲ್ಲಿ ಹುಟ್ಟಿ ಬೆಳೆದವಳು ಸ್ಮಿತಾ. ಒಬ್ಬಳೇ ಮಗಳು. ಜೊತೆಗೆ ಆಸ್ತಿವಂತರು ಬೇರೆ. ಹಾಗಾಗಿ ಅವಳ ತಂದೆ ತಾಯಿ ಅವಳಿಗೆ ಯಾವುದೇ ರೀತಿಯ ಕಷ್ಟವನ್ನು ತೋರಿಸದೆ ಬಲು ಮುದ್ದಿನಿಂದ ಸಾಕಿ ಬೆಳೆಸಿದ್ದರು. ಎಲ್ಲವನ್ನು ಕೇಳುವುದಕ್ಕೆ ಮುಂಚಿತವಾಗಿಯೇ ತಂದುಕೊಡುತ್ತಿದ್ದರು. ಆದ್ದರಿಂದ ಅವಳಿಗೆ ಬಾಲ್ಯ, ಯೌವನಾವಸ್ಥೆ ಎಲ್ಲ ಸುಖದಲ್ಲಿಯೇ ಕಳೆಯಿತು.
ನಗುನಗುತ್ತಾ ಗೆಳತಿಯರೊಂದಿಗೆ ಕಾಲ ಕಳೆಯುತ್ತಾ, ಕಾಲೇಜಿನ ದಿನಗಳನ್ನು ಸುಂದರವಾಗಿಯೇ ಕಳೆದಳು ಸ್ಮಿತಾ. ಇನ್ನು ಮದುವೆಯೊಂದೇ ಬಾಕಿ. ಮದುವೆಯನ್ನು ಮಾಡಿ ಮುಗಿಸಿದರೆ ತಮ್ಮ ಜವಾಬ್ದಾರಿ ಹೆಗಲ ಮೇಲಿಂದ ಇಳಿಯುತ್ತದೆ ಎಂದು ಯೋಚಿಸಿ, ಗಂಡನ್ನು ಹುಡುಕಲು ಪ್ರಾರಂಭಿಸಿಯೇಬಿಟ್ಟರು ಸ್ಮಿತಾಳ ತಂದೆ ತಾಯಿ.
ಸ್ಮಿತಾಳಿಗೆ ಅಂತಹ ಯೋಚನೆಗಳೇನೂ ಇಲ್ಲ. ಹೇಗಿದ್ದರೂ ಕೈಯಲ್ಲಿ ಕೆಲಸವಿದೆ. ಈಗಲ್ಲದಿದ್ದರೂ ಮುಂದೆ ಮದುವೆ ನಡೆಯುತ್ತದೆ. ತನಗೇಕೆ ಬೇಡದ ಚಿಂತೆ ಎಂದು ಆರಾಮಾಗಿ ಕೆಲಸಕ್ಕೆ ಹೋಗಿ ಬರುತ್ತಿದ್ದಳು. ಬಂದ ಗಂಡುಗಳನ್ನು ನಗುಮುಖದಿಂದಲೇ ನೋಡಿ, ಮಾತಾಡಿಸಿ, ತನಗೆ ಸರಿಯಾಗಿ ಹೊಂದಿಕೆಯಾಗುತ್ತಿಲ್ಲ ಎಂದು ತಿರಸ್ಕರಿಸುತ್ತಿದ್ದಳು. ಅವಳೋ ಇಂದಿನ ಫೇಸ್ಬುಕ್ ಇನ್ಸ್ಟಾಗ್ರಾಂ ಕಾಲದವಳು..!! ಹಾಗಾಗಿ ತನ್ನ ಗಂಡನಾಗುವವನು ಹೀಗಿರಬೇಕು, ಹಾಗಿರಬೇಕು ಎಂದು ಕನಸು ಕಟ್ಟಿಕೊಂಡಿದ್ದಳು. ಕನಸಿನಂತೆ ಇರದ, ವಾಸ್ತವದಲ್ಲಿ ಸಾಮಾನ್ಯನಂತೆ ಕಾಣುತ್ತಿದ್ದ, ಸಣ್ಣ ಸಂಬಳವನ್ನು ಹೊಂದಿರುತ್ತಿದ್ದ ವರಮಹಾಶಯಗಳನ್ನು ಬೇಡವೆಂದು ಹೇಳಿ ಕಳುಹಿಸುತ್ತಿದ್ದಳು..!!
ಅಂತೂ ಒಂದು ದಿನ ಐದನೇ ವರನ ಆಗಮನವಾಯಿತು. ಹುಡುಗ ನೋಡಲು ಸುರಸುಂದರಾಂಗ. ಪಕ್ಕ ಸಿಟಿ ಹುಡುಗ. ಹೆಸರು ವಿವೇಕ್. ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗ. ಸ್ಮಿತಾ ಅವನನ್ನು ನೋಡಿದ ತಕ್ಷಣವೇ ಅವನನ್ನು ಮನಸ್ಸಿನಲ್ಲಿಯೇ ಒಪ್ಪಿಬಿಟ್ಟಳು. ಕಾರಣ ಅವನಿಗೆ ಸಿಗುವ ಕೈತುಂಬ ಸಂಬಳವಾದರೆ, ಇನ್ನೊಂದು ಕಾರಣ ಅವನ ಸುಂದರ ನಗು ಮುಖದಲ್ಲಿ ಯಾವಾಗಲೂ ಇಣುಕುತ್ತಿದ್ದ ಪುಟ್ಟ ಗುಳಿ. ಆ ಸುಂದರ ಗುಳಿ ಕೆನ್ನೆಯ ನಗುವಿಗೇ ಮಾರುಹೋಗಿದ್ದಳು ಸ್ಮಿತಾ..!!
ಒಂದು ತಿಂಗಳಿನಲ್ಲಿಯೇ ನಿಶ್ಚಿತಾರ್ಥ ಸಹ ಸ್ಮಿತಾಳ ಮನೆಯಲ್ಲಿಯೇ ನೆರವೇರಿತು. ಇನ್ನಾರು ತಿಂಗಳಿಗೆ ಮದುವೆ ಎಂದು ನಿರ್ಧಾರವಾಯಿತು. ಗಂಡು ಹೆಣ್ಣು ಇಬ್ಬರ ಸುತ್ತಾಟ ಶುರುವಾಯಿತು. ಶನಿವಾರ ಭಾನುವಾರ ಬಂತೆಂದರೆ ಸಾಕು ಇಬ್ಬರೂ ಪಾರ್ಕು, ಸಿನಿಮಾ, ಶಾಪಿಂಗ್ ಮಾಲ್, ಲಾಂಗ್ ಡ್ರೈವ್, ಪಿಕ್ನಿಕ್ ಎಂದು ಸುತ್ತಾಡುತ್ತಿದ್ದರು. ಇದಕ್ಕೆ ಯಾರ ಅಭ್ಯಂತರವು ಇರದಿದ್ದರೂ, ಸ್ಮಿತಾಳ ತಾಯಿ ಕೆಲವೊಮ್ಮೆ ಗದರುತ್ತಿದ್ದರು. "ಯಾಕೆ ಸ್ಮಿತಾ? ವೀಕೆಂಡ್ ಅಂದರೆ ಮನೆಯಲ್ಲಿ ಇರುವುದೇ ಇಲ್ಲ ನೀನು! ಬರೀ ಸುತ್ತಾಟ. ಒಂದು ಸ್ವಲ್ಪ ಮನೆಯಲ್ಲೂ ಇದ್ದು ಮನೆಗೆಲಸ ಮಾಡಬಾರದೇ..?" ಎನ್ನುತ್ತಿದ್ದರು.
ಇದಕ್ಕೆ ತಲೆಕೆಡಿಸಿಕೊಳ್ಳದ ಸ್ಮಿತಾ ವಿವೇಕ್ ನೊಂದಿಗೆ ಓಡಾಟವನ್ನು ಮುಂದುವರೆಸಿದಳು. ಹೀಗೆಯೇ ನಾಲ್ಕು ತಿಂಗಳು ಕಳೆದವು. ಈ ಮಧ್ಯೆ ಮದುವೆಗೆ ಬಟ್ಟೆ, ಒಡವೆ ಮದುವೆ ನಡೆಯುವ ಮಂಟಪ, ಊಟದ ವ್ಯವಸ್ಥೆ, ಆಮಂತ್ರಣ ಪತ್ರಿಕೆ, ಇದರ ಬಗ್ಗೆ ಚರ್ಚೆ ಮಾತುಕತೆ ವ್ಯವಸ್ಥೆ ಎಲ್ಲವೂ ಅದರ ಪಾಡಿಗೆ ಅದು ನಡೆಯುತ್ತಿದ್ದವು.
ದಿಢೀರ್ ಎಂದು ಒಂದು ದಿನ ಸ್ಮಿತಾ, ತನ್ನ ಪೋಷಕರನ್ನು ಕರೆದು "ದಯವಿಟ್ಟು ಈ ಮದುವೆಯನ್ನು ಕ್ಯಾನ್ಸಲ್ ಮಾಡಿ" ಎಂದು ಅಳಲು ಶುರು ಮಾಡಿದಳು. ಸ್ಮಿತಾಳ ತಾಯಿಗಂತೂ ತಲೆಸುತ್ತಿ ಬರುವುದೊಂದೇ ಬಾಕಿ. "ಏಕೆ ಸ್ಮಿತಾ ಏನಾಯ್ತು? ಮದುವೆಗೆ ಇನ್ನು ಎರಡೇ ತಿಂಗಳು ಬಾಕಿ ಇರುವುದು..! ಇಷ್ಟು ದಿನ ನಗುನಗುತ್ತ ವಿವೇಕ್ ಜೊತೆ ಸುತ್ತಾಡಲು ಹೋದೆ. ಈಗ ಮದುವೆ ಬೇಡವೆಂದರೆ ಏನರ್ಥ..? ಈ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ ಕಣೆ. ಈಗ ನೆಂಟರಿಷ್ಟರು ಸ್ನೇಹಿತರ ಮುಂದೆ ಹೇಗೆ ನಾವು ತಲೆಯೆತ್ತಿ ತಿರುಗುವುದು..? ಯಾಕೆ ಈ ರೀತಿ ಮಾತಾಡುತ್ತಿದ್ದೀಯ..?!" ಎಂದು ಕಿರುಚಿದರು.
ಗೊಳೋ ಎಂದು ಅಳುತ್ತಾ ಸ್ಮಿತಾ, "ಅಮ್ಮ ಏನೆಂದು ಹೇಳಲಿ? ಮೊದಲೆಲ್ಲ ಸರಿಯೇ ಇತ್ತು. ಈಗ ಒಂದು ತಿಂಗಳಿಂದ ವಿವೇಕನ ವರಸೆಯೇ ಬದಲಾಗಿದೆ. ಅವನ ನಿಜ ಬಣ್ಣ ಗೊತ್ತಾಗಿದ್ದು ನನಗೂ ಇತ್ತೀಚಿಗಷ್ಟೇ..! ಮೊದಲೆಲ್ಲ ಡಿಸೆಂಟ್ ಆಗಿಯೇ ಬಿಹೇವ್ ಮಾಡುತ್ತಾ ಇದ್ದ. ಆದರೆ ಇತ್ತೀಚಿನ ದಿನಗಳಲ್ಲಿ ನನಗೆ ಅಶ್ಲೀಲವಾದ ಮೆಸೇಜ್ ಗಳನ್ನು ಕಳುಹಿಸುವುದು, ಕುಡಿದು ಮಾತನಾಡುವುದು ಮಾಡುತ್ತಾನೆ. ನಾನು ಏನೋ ಒಂದೆರಡು ಸಲ ಸರಿ ಹೋಗುತ್ತಾನೆ ಎಂದು ಸುಮ್ಮನಾದೆ. ಆದರೆ ದಿನೇ ದಿನೇ ಅವನ ಕಾಟ ಜಾಸ್ತಿ ಆಗುತ್ತಲೇ ಇದೆಯಮ್ಮ. ನನ್ನ ಪರ್ಮಿಷನ್ ಇಲ್ಲದೆ ಮೊಬೈಲ್ ತೆಗೆದುಕೊಂಡು ಎಲ್ಲವನ್ನು ಚೆಕ್ ಮಾಡುತ್ತಾನೆ. ನಾನು ಬೇಡವೆಂದರೂ ಕೆಲವು ಫೋಟೋಗಳನ್ನು ಅವನ ಮೊಬೈಲ್ ಗೆ ಕೆಲವು ದಿನಗಳ ಹಿಂದೆ ಕಳುಹಿಸಿಕೊಂಡ ಅಮ್ಮ..!"
"ಈಗ ನೋಡಿದರೆ ನೆನ್ನೆ ಯಾರೋ ಅಪರಿಚಿತನಿಂದ ಕಾಲ್ ಬಂದಿತ್ತು. ನೀವು ಸ್ಮಿತಾ ಅಲ್ವಾ? ನೋಡಲು ತುಂಬಾ ಮುದ್ದು ಮುದ್ದಾಗಿ ಇದ್ದೀರಾ, ಎಂದು ಇನ್ನು ಏನೇನೋ ಮಾತಾಡಲು ಹೋದ. ನಾನೇ ರಾಂಗ್ ನಂಬರ್ ಎಂದು ಕಟ್ ಮಾಡಿದೆ..!!" ಇದೆಲ್ಲ ನೋಡಿದ ಮೇಲೆ ಮತ್ತೂ ಹೇಗೆ ಅವನೊಂದಿಗೆ ಮದುವೆಯಾಗಲಿ ಅಮ್ಮ..? ಹೌದು, ನಾನು ಮಾಡಿದ್ದು ದೊಡ್ಡ ತಪ್ಪು. ಮನುಷ್ಯನನ್ನು ಸೌಂದರ್ಯ, ಸಂಬಳ ಮತ್ತು ಆಸ್ತಿಗಳಿಂದ ಅಳೆದೆ. ಇವನ ನಗು ಮೊಗದ ಹಿಂದೆ ಇಂತಹ ಕಪಟವಾದ ನರಿ ಬುದ್ಧಿ ಇದೆ ಎಂದು ತಿಳಿಯುವಲ್ಲಿ ಎಡವಿದೆ..!! ಪರಿಣಾಮವಾಗಿ ನಾನಿಂದು ಅನುಭವಿಸುತ್ತಿದ್ದೇನೆ" ಎಂದು ಕಣ್ಣೀರನ್ನು ಒರೆಸಿಕೊಂಡಳು.
ಎಲ್ಲವನ್ನು ಕೇಳಿಸಿಕೊಂಡ ಸ್ಮಿತಾಳ ತಂದೆ ಒಂದು ದೀರ್ಘವಾದ ಉಸಿರನ್ನು ಬಿಟ್ಟು, "ಮಗಳೇ ಸ್ಮಿತಾ, ಆಗುವುದೆಲ್ಲ ಒಳ್ಳೆಯದಕ್ಕೆ ಅಂತಾರೆ. ಈಗಾಗಿದ್ದು ಅದೇ ಅಲ್ಲವೇ? ನಿನಗೆ ಮದುವೆಗೆ ಮುಂಚೆ ಆ ದುಷ್ಟನ ಬಗ್ಗೆ ವಿಷಯ ಗೊತ್ತಾಯಿತು. ಒಂದೊಮ್ಮೆ ನೀನು ಮದುವೆಯಾದ ಮೇಲೆ ಈ ವಿಚಾರಗಳು ಗೊತ್ತಾಗಿದ್ದರೆ, ಯೋಚಿಸು ನಿನ್ನ ಪರಿಸ್ಥಿತಿ ಏನಾಗುತ್ತಿತ್ತು ಎಂದು..? ಬಿಟ್ಟಾಕು ಈ ಸಂಬಂಧವನ್ನು. ದೇವರು ನಿನ್ನೊಂದಿಗೆ ಇದ್ದಾನೆ ಎಂದು ನಂಬಿಕೆ ಇಡು".
"ನೀನು ನಂಬಿದ್ದ ವಿವೇಕ್ ನಿನಗೆ ಮೋಸ ಮಾಡಿದ್ದಾನೆ. ಇದ್ದ ನೆಲವೇ ಕುಸಿಯಿತು ಎಂಬ ಭಾವನೆ ನಿನಗೆ ಮೂಡಿದೆ. ನಿನ್ನ ಅವನ ಸ್ನೇಹ ಕಳಚಿಹೋಗಿದೆ. ಅವನು ನಿನ್ನೊಂದಿಗೆ ನಡೆದುಕೊಂಡ ರೀತಿ ವಿಷದ ಹೊಗೆ ಉಸಿರಿನಲ್ಲಿ ಬೆರೆತಂತೆ ನಿನಗನಿಸಿದೆ. ಆದರೆ ಯಾವುದೋ ಒಂದು ದೈವಿಕ ಶಕ್ತಿ ನಿನ್ನ ಕೈಯನ್ನು ಬಿಟ್ಟಿಲ್ಲ. ಮುಗಿಲಿನಿಂದ ಬರುವ ಮಳೆಯಂತೆ ಆ ದೇವರ ಕೃಪೆ ಸದಾ ನಿನ್ನ ಮೇಲೆ ಇದೆ. ಅದೇ ನಿನ್ನನ್ನು ಇಲ್ಲಿಯವರೆಗೂ ಕಾಪಾಡಿದೆ ಮಗಳೇ..!"
"ಭಯಪಡಬೇಡ. ನಾವು ನಿನ್ನೊಂದಿಗೆ ಇದ್ದೇವೆ. ಅದೇನು ಅವನಿಂದ ಪ್ರಾಬ್ಲಮ್ ಆಯಿತು ಎಂದು ಸರಿಯಾಗಿ ಬಿಡಿಸಿ ಹೇಳು. ಪೊಲೀಸ್ ಕಂಪ್ಲೇಂಟ್ ಕೊಟ್ಟು ಅವನನ್ನು ಸರಿ ಮಾಡೋಣ. ಮದುವೆ ಕೂಡ ಕ್ಯಾನ್ಸಲ್ ಮಾಡೋಣ. ಮುಂದೆ ಹುಡುಗನನ್ನು ನೋಡುವಾಗ ಬರಿ ಅವರ ನಗುವಿನ ಮುಖ, ಅವರ ಸೌಂದರ್ಯ, ಸಂಬಳ, ಆಸ್ತಿಪಾಸ್ತಿಗೆ ಮರುಳಾಗದೆ, ದಯವಿಟ್ಟು ಅವರ ಗುಣ-ನಡತೆಗಳನ್ನು ನೋಡಿ ಒಪ್ಪಿಗೆ ಸೂಚಿಸಮ್ಮ" ಎಂದು ಧೈರ್ಯ ತುಂಬಿದರು ಸ್ಮಿತಾಳ ತಂದೆ..!!
