ನೆನಪುಗಳ ಮೆರವಣಿಗೆಯಲ್ಲಿ
ನೆನಪುಗಳ ಮೆರವಣಿಗೆಯಲ್ಲಿ
ಇಂದು ನೂರಾರು ನೆನಪುಗಳು ನನ್ನನ್ನು ಮುತ್ತಿಕ್ಕುತ್ತಿವೆ. ಹೌದು, ಇಂದಿಗೆ ಸರಿಯಾಗಿ ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಮಗ ಮತ್ತು ಸೊಸೆಯ ಮದುವೆ ನಡೆಯಿತ್ತಲ್ಲವೇ? ಇಂದೇಕೆ ಇಷ್ಟು ಕಾಡುತ್ತಿದೆ ಈ ನೆನಪುಗಳು? ಎಲ್ಲೋ ಗತಕಾಲದಲ್ಲಿ ಹುದುಗಿಹೋಗಿದ್ದ ಆ ಕಹಿ ಸತ್ಯ ಇಂದೇಕೆ ನನಗೆ ಇಷ್ಟು ನೆನಪಿಗೆ ಬರುತ್ತಿದೆ? ಇಂದು ಸಂಜೆ, ಮಗ ಮತ್ತು ಸೊಸೆ ಇಪ್ಪತ್ತೈದನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಮಾಡಿಕೊಳ್ಳುತ್ತಿದ್ದಾರಂತೆ. ನನ್ನ ಮೊಮ್ಮಗ ಚಿರಾಯು ಅವನ ಗೆಳೆಯರೊಟ್ಟಿಗೆ ಸೇರಿ ಒಂದು ದೊಡ್ಡ ಪಾರ್ಟಿಯನ್ನು ಅವರಮ್ಮ ಮತ್ತು ಅಪ್ಪನಿಗೆ ಆಯೋಜಿಸಿದ್ದಾನೆ. ನೀನೂ ಸಹ ಬರಲೇಬೇಕು ತಾತ ಎಂದು ಎರಡೆರಡು ಬಾರಿ ಬಂದು ಕರೆದ. ನನಗೂ ಹೋಗಲಿಕ್ಕೆ ಇಷ್ಟವೇ. ಎಷ್ಟಾದರೂ ನನ್ನ ಮಗ ಸೊಸೆಯ ಕಡೆಯವರೆಲ್ಲ ಬಂದಿರುತ್ತಾರೆ ಅಲ್ಲವೇ? ಚೆನ್ನಾಗಿ ಮಾತಾಡಿ ಸಮಯ ಕಳೆಯಬಹುದು.
ನನ್ನ ವಸು ನಾಲ್ಕು ವರ್ಷಗಳ ಹಿಂದೆ ನನ್ನನ್ನು ಒಬ್ಬಂಟಿ ಮಾಡಿ ಹೋದ ಮೇಲೆ ನನಗೆ ಎಷ್ಟೋ ಸಲ ಜೀವನವೇ ಸಾಕೆನಿಸಿದೆ. ಏನು ಮಾಡೋದು? ಭಗವಂತ ಭೂಮಿಯ ಮೇಲೆ ನಮ್ಮನ್ನು ಇಟ್ಟ ಮೇಲೆ, ಅವನು ಹೇಳಿದಷ್ಟು ದಿನ ನಾವಿಲ್ಲಿ ಇರಲೇಬೇಕಲ್ಲವೇ? ಹಾಗಾಗಿ ಹೇಗೋ ಕಾಲ ಕಳೆಯುತ್ತಿದ್ದೇನೆ, ನನ್ನ ಪ್ರೀತಿಯ ವಸುವಿನ ನೆನಪಲ್ಲೇ! ಕೆಲವೊಮ್ಮೆ ಎಲ್ಲವೂ ಮರೆತಂತೆ ಭಾಸವಾಗುತ್ತದೆ. ಕೆಲವೊಮ್ಮೆ ಎಲ್ಲವೂ ನೆನಪಾದಂತೆ ಎನಿಸುತ್ತದೆ. ಮಲಗಿದಾಗಲೂ ಈ ಹಾಳು ನೆನಪುಗಳು ನನ್ನನ್ನು ಕಾಡುತ್ತಲೇ ಇರುತ್ತವೆ. ಕೆಲವೊಮ್ಮೆ ಸಿಹಿಯಾದ ಘಟನೆಗಳು ಕನಸಿನ ರೂಪದಲ್ಲಿ ಬಂದು ನಿದ್ದೆಯಲ್ಲೂ ನಗುವಂತೆ ಮಾಡಿದರೆ, ಇನ್ನೂ ಕೆಲವೊಮ್ಮೆ ನನ್ನ ಜೀವನದಲ್ಲಿ ನಡೆದ ಕೆಲವು ದುರಂತಗಳು ನೆನಪಾಗಿ ಕಾಡಿ ನನ್ನ ನಿದ್ದೆಯನ್ನು ಕಸಿಯುತ್ತವೆ. ದೇವರೇ ಈ ಹಾಳು ಮುದುಕನನ್ನು ನಿನ್ನ ಹತ್ತಿರ ಕರೆದುಕೊಂಡು ಬಿಡಪ್ಪ, ಸಾಕಾಗಿಹೋಗಿದೆ ಎಂದು ಎಷ್ಟೋ ಸಲ ಅಂದುಕೊಳ್ಳುವುದುಂಟು!
ಬೇಕೆಂದಾಗ ಕೆಲಸವು ತಕ್ಷಣಕ್ಕೆ ಆಗಿಬಿಡುವುದಕ್ಕೆ, ಬೇಡೆಂದಾಗ ಸುಮ್ಮನೆ ಇದ್ದುಬಿಡುವುದಕ್ಕೆ ನಾವೇನು ಮಾಯಾಲೋಕದಲ್ಲಿರುವ ಯಕ್ಷಿಣಿಗಳೇ? ಆಗಬೇಕಾದದ್ದಲ್ಲ ಬೇಕೆಂದರೂ ಬೇಡೆಂದರೂ, ಎಲ್ಲರ ಜೀವನದಲ್ಲೂ ಆಗುತ್ತಲೇ ಇರುತ್ತದೆ. ಅದನ್ನು ತಡೆಯಲು ಯಾವ ಶಕ್ತಿಗೂ ಸಾಧ್ಯವಿಲ್ಲ ಎಂಬುದೇ ಸತ್ಯ. ವಸು ನನ್ನನ್ನು ಬಿಟ್ಟು ಹೋದಾಗಿನಿಂದ ದೈಹಿಕವಾಗಿಯೂ ನಾನು ಸೊರಗಿ ಹೋಗಿದ್ದೇನೆ. ಆದರೂ ಅದು ಹೇಗೋ ದಿನಗಳನ್ನು ಕಳೆಯುತ್ತಿದ್ದೇನೆ. ಕೆಲವೊಮ್ಮೆ ನಡೆಯಲಿಕ್ಕೂ ಕಷ್ಟ, ಇನ್ನೂ ಕೆಲವೊಮ್ಮೆ ಕೂರಲಿಕ್ಕೂ ಕಷ್ಟ. ಆದರೂ ಹೇಗೋ ಕಾಲ ತಳ್ಳುತ್ತಿದ್ದೇನೆ. ಅಡುಗೆ ಮತ್ತು ಮನೆ ಕೆಲಸಗಳನ್ನು ಮಾಡಿಕೊಡಲು ಮನೆಗೆಲಸದವಳು ಬಂದು ಹೋಗುತ್ತಾಳೆ. ಸಹಾಯಕ್ಕಾಗಿ ಅಕ್ಕಪಕ್ಕದವರಿದ್ದಾರೆ. ಹತ್ತಿರದಲ್ಲೇ ಮಗನ ಮನೆ ಸಹ ಇದೆ. ಇನ್ನೇನು ಬೇಕು?
"ಅಪ್ಪ ನೀನು ನಮ್ಮ ಮನೆಗೆ ಬಂದುಬಿಡು" ಎಂದು ಮಗ ಹೊಸ ಮನೆ ಕಟ್ಟಿಸಿ ಎಷ್ಟೋ ಸಲ ಕರೆದರೂ, ನನಗೇಕೋ ಈ ಮನೆಯೇ ಸ್ವರ್ಗಕ್ಕೆ ಸಮಾನ. ಎಷ್ಟೆಂದರೂ ನನ್ನ ವಸುವಿನ ಜೊತೆ ಬಾಳಿ ಬದುಕಿದ ಮನೆಯಲ್ಲವೇ? ನನ್ನ ಮಗ ಶೇಖರನ ಬಾಲಲೀಲೆಗಳು, ತುಂಟಾಟಗಳು ಎಲ್ಲವೂ ಇಲ್ಲಿಯೇ ನಡೆದದ್ದು. ಇಲ್ಲಿರುವ ಪ್ರತಿಯೊಂದು ಗೋಡೆ, ಕಂಬಗಳು, ಅಂಗಳದಲ್ಲಿರುವ ಗಿಡಮರಗಳು ಒಂದೊಂದು ನೆನಪಿನ ಬುತ್ತಿಯನ್ನು ನನಗೆ ಪ್ರತಿದಿನ ತಂದುಕೊಡುತ್ತದೆ. ಇಂತಹ ನೆನಪಿನ ಭಂಡಾರವನ್ನು ಹೊತ್ತ ಮನೆಯನ್ನು ಬಿಟ್ಟು ಹೇಗೆ ಆ ಬಂಗಲೆಗೆ ಹೋಗಲಿ? ನನಗೆ ಸಾವು ಎಂದು ಬಂದರೆ ಅದು ಈ ಮನೆಯಲ್ಲೇ ದೇವರೇ ಎಂದು ಎಷ್ಟೋ ಸಲ ದೇವರಿಗೆ ಮೊರೆಯಿಟ್ಟಿದ್ದೇನೆ.
ಅಂತೂ ಸಂಜೆ ಇರುವುದರಲ್ಲೇ ಒಂದು ಒಳ್ಳೆಯ ಜುಬ್ಬ ಪಂಚೆಯನ್ನು ತೊಟ್ಟು, ಕೈಯಲ್ಲಿ ಕೋಲು ಹಿಡಿದು ಮೊಮ್ಮಗ ತಂದ ಕಾರಿನಲ್ಲಿ ಫಂಕ್ಷನ್ ಹಾಲಿಗೆ ಹೊರಟೇಬಿಟ್ಟೆ. ಇನ್ನು ಒಂದು ಗಂಟೆಯ ಪ್ರಯಾಣ. ಎಷ್ಟೋ ದಿನಗಳ ನಂತರ ಕಾರಿನಲ್ಲಿ ಹೋಗುತ್ತಿದ್ದೆನ್ನಾದರಿಂದ, ಕಿಟಕಿಯಿಂದ ಎಲ್ಲವನ್ನು ವೀಕ್ಷಿಸುತ್ತಿದ್ದೆ. ನನ್ನ ಕಣ್ಣುಗಳು ಸುತ್ತಲೂ ಇರುವ ಪರಿಸರವನ್ನು ನೋಡುತ್ತಿದ್ದರೆ, ನನ್ನ ಮನಸ್ಸು ಮತ್ತೆ ಆ ಕಹಿ ಸತ್ಯ ಗೊತ್ತಾದ ದಿನಕ್ಕೆ ಜಾರಿತು. ಹೌದಲ್ಲವೇ ಅಂದು ನಾನು ಬಹಳ ಸಂಭ್ರಮದಿಂದ ಬಂದು ಹುಡುಗಿಯ ಮನೆಯವರಿಗೆ ಒಪ್ಪಿಗೆ ಇದೆಯಂತೆ ಕಣೆ ಎಂದು ವಸುಗೆ ಹೇಳಿದ್ದೆ. ನನ್ನ ಮಾತುಗಳನ್ನು ಕೇಳಿದ ಅಮ್ಮ- ಮಗ ಇಬ್ಬರೂ ಖುಷಿಪಟ್ಟಿದ್ದರು. ಆದರೆ ನಾನು ಒಳಗೊಳಗೆ ಭಯಮಿಶ್ರಿತ ಸಂದೇಹದಲ್ಲಿ ಮುಳುಗಿಹೋಗಿದ್ದೆ!
ಹೆಣ್ಣಿನ ಮನೆಯವರು ಸೂಕ್ಷ್ಮವಾಗಿ ಇರುವ ವಿಷಯವನ್ನು ನನ್ನ ಕಿವಿಗೆ ತಲುಪಿಸಿದ್ದರು. ವಿಷಯ ತಿಳಿದೇಟಿಗೆ ನಿಜಕ್ಕೂ ಗರಬಡಿದವನಂತೆ ಆಗಿ ಹೋಗಿದ್ದೆ. ಅಯ್ಯೋ ದೇವರೇ! ನೋಡಲು ಇಷ್ಟು ಮುದ್ದು ಮುದ್ದಾಗಿ ಲಕ್ಷಣವಾಗಿರುವ ಈ ಹುಡುಗಿಗೆ ಈ ರೀತಿಯ ಮಾನಸಿಕ ಖಾಯಿಲೆಯೇ? ಖಾಯಿಲೆಯನ್ನು ಕಂಟ್ರೋಲ್ ನಲ್ಲಿ ಇಡಲು ವೈದ್ಯರು ಔಷಧಿಗಳನ್ನು ಕೊಟ್ಟಿದ್ದಾರೆ ಎಂದು ಅವರಪ್ಪ ಹೇಳಿದರು. ಏನೋ ಒಂದೆರಡು ತಿಂಗಳು ಔಷಧಿ ತೆಗೆದುಕೊಂಡು ಸುಮ್ಮನಾಗುವುದು ಎಂದರೆ ಸರಿ. ಆದರೆ ದಿನವೂ ತೆಗೆದುಕೊಳ್ಳಬೇಕೆಂದರೆ ಮುಂದೆ ಏನು ಗತಿ?! ನನ್ನ ಮಗ ಬೇರೆ ಈ ಹುಡುಗಿಯನ್ನು ಆಗಲೇ ಮೆಚ್ಚಿದ್ದಾನೆ. ಹೆಣ್ಣಿನ ಮನೆಯವರು ಇರುವ ವಿಷಯವನ್ನು ಹೇಳಿ ಭಾರ ಇಳಿಸಿಕೊಂಡಿದ್ದಾರೆ. ಈಗ ಮುಂದೇನು ಮಾಡಲಿ ನಾನು?
ವಿಷಯ ಈ ರೀತಿ ಎಂದು ವಸುವಿಗೆ ಹೇಳಿದರೆ, ಖಂಡಿತವಾಗಿ ಆಕೆ ಒಪ್ಪುವುದಿಲ್ಲ. ಸಂಬಂಧಿಕರು ಏನೆಂದುಕೊಂಡಾರು ಎಂದು ಈ ಸಂಬಂಧ ಬೇಡ ಎನ್ನುತ್ತಾಳೆ. ಅದರ ಬದಲು ನಾನೇ ಏನಾದರೂ ಒಂದು ಸುಳ್ಳನ್ನು ಹೇಳಿದರೆ, ಆ ಹೆಣ್ಣಿಗೂ ಬಾಳು ಸಿಗುತ್ತದೆ ಎಂದು ನಿರ್ಧರಿಸಿದೆ. ಮನೆಗೆ ಬಂದ ತಕ್ಷಣ ಅಮ್ಮ ಮಗನಿಗೆ ಹುಡುಗಿಯ ಮನೆಯವರು ಒಪ್ಪಿದ್ದಾರೆ, ಆದರೆ ಹುಡುಗಿಗೆ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಕೊರತೆಯಂತೆ. ಹಾಗಾಗಿ ದಿನವೂ ಮಾತ್ರೆಗಳನ್ನು ತೆಗೆದುಕೊಳ್ಳಿ ಎಂದು ವೈದ್ಯರು ಹೇಳಿದ್ದಾರಂತೆ ಎಂದು ಹೇಳಿದೆ. ಅಂದು ನಾ ಹೇಳಿದ ಆ ಒಂದು ಸಿಹಿ ಸುಳ್ಳು ಎರಡು ಕುಟುಂಬಗಳನ್ನು ಬೀಗರನ್ನಾಗಿ ಮಾಡಿಸಿದವು. ಮದುವೆಯಾದ ನಂತರ ಇಬ್ಬರೂ ಚೆನ್ನಾಗಿಯೇ ಬಾಳುತ್ತಿದ್ದರು. ಯಾರಿಗೂ ನನ್ನ ಸೊಸೆಯ ಮೇಲೆ ಸಂಶಯ ಮೂಡಲಿಲ್ಲ. ಅವಳ ಮಾನಸಿಕ ಖಾಯಿಲೆಯು ಸ್ಥಿಮಿತದಲ್ಲೇ ಇತ್ತು.
ಆದರೆ ಮೊಮ್ಮಗ ಹುಟ್ಟಿದ ಸಮಯದಲ್ಲಿ ತೀರಾ ವಿಪರೀತಕ್ಕೆ ಹೋಗಿ ಇಡೀ ಮನೆಯವರು ತುಂಬಾ ಕಷ್ಟ ಪಡಬೇಕಾಯಿತು. ಆಗಲೇ ಅಮ್ಮ ಮಗನಿಗೆ ನಿಜವಾದ ವಿಷಯ ಗೊತ್ತಾದದ್ದು. ಇಬ್ಬರೂ ನನ್ನ ಮೇಲೆ ಮುನಿಸಿಕೊಂಡರು. ಆ ಮುನಿಸು ಬೇರೆಯದೇ ವಿಧವಾದದ್ದು. ಇಬ್ಬರೂ "ಸತ್ಯವನ್ನು ಏಕೆ ಮುಚ್ಚಿಟ್ಟಿರಿ? ಮೊದಲೇ ನಮಗೆ ತಿಳಿದಿದ್ದರೆ ಅವಳಿಗೆ ಒಳ್ಳೆಯ ಚಿಕಿತ್ಸೆಯನ್ನು ನಾವೇ ಕೊಡಿಸಬಹುದಿತ್ತು. ನಮ್ಮಿಂದ ಏಕೆ ಇರುವ ವಿಷಯವನ್ನು ಮುಚ್ಚಿಟ್ಟಿರಿ?" ಎಂದು ಬೇಸರಿಸಿದರು. ನನ್ನ ಹೆಂಡತಿ ಮಗನ ಮೇಲೆ ನನಗಿದ್ದ ಅಭಿಮಾನ ದ್ವಿಗುಣವಾದದ್ದು ಆ ದಿನವೇ! ಮುಂದೆ ನಮ್ಮ ಜೀವನ ಸರಾಗವಾಯಿತು. ಸೊಸೆಯ ಮಾನಸಿಕ ಆರೋಗ್ಯವು ದಿನದಿಂದ ದಿನಕ್ಕೆ ಸರಿಯಾಗುತ್ತಾ ಹೋಯಿತು. ಈಗಂತೂ ಅವಳಿಗೆ ಯಾವ ತೊಂದರೆಯೂ ಇಲ್ಲ. ಕೆಲಸದಲ್ಲಿ ಇರುವ ಮುದ್ದಾದ ಮಗ ಚಿರಾಯು ಇದ್ದಾನೆ. ನೆಮ್ಮದಿಯ ಜೀವನ ಅವಳದಾಗಿದೆ ಎಂಬುದೇ ನನಗೊಂದು ದೊಡ್ಡ ನೆಮ್ಮದಿಯಾಗಿದೆ!!
ಅಂದೊಮ್ಮೆ ಹೇಳಿದ ಆ ಸುಳ್ಳು ಎಂದಾದರೊಮ್ಮೆ ನನ್ನನ್ನೆಲ್ಲಿ ಇಕ್ಕಟ್ಟಿನಲ್ಲಿ ಸಿಲುಕಿಸುತ್ತದೆ ಎಂದುಕೊಂಡಿದ್ದೆ. ಆದರೆ ನಿಷ್ಕಲ್ಮಷ ವ್ಯಕ್ತಿತ್ವದ ನನ್ನ ವಸು ಮತ್ತು ಅವಳ ಪಡಿಯಚ್ಚು ನನ್ನ ಮಗ, ಇಬ್ಬರೂ ನನ್ನ ಊಹೆಯನ್ನು ಸುಳ್ಳು ಮಾಡಿದರು, ಎಂದುಕೊಳ್ಳುತ್ತಾ ನೆನಪಿನ ಅಂಗಳದಿಂದ ಹೊರಬಂದೆ. ಗಾಡಿಯು ಫಂಕ್ಷನ್ ಹಾಲ್ ಬಳಿ ನಿಂತಿತು. ಹೆಮ್ಮೆಯಿಂದ ಮತ್ತು ಬಲು ಸಂತೋಷದಿಂದ ನನ್ನ ಮಗ ಸೊಸೆ ಇರುವಲ್ಲಿಗೆ ದಾಪುಗಾಲು ಹಾಕುತ್ತಾ ನಡೆದೆ!!
