Vaman Acharya

Classics Inspirational Others

4  

Vaman Acharya

Classics Inspirational Others

ಮನಸ್ಸಿದ್ದರೆ ಮಾರ್ಗ

ಮನಸ್ಸಿದ್ದರೆ ಮಾರ್ಗ

4 mins
357


ಚಂದನ ಹಳ್ಳಿಯ ಜನರು ವಿಚಿತ್ರವಾದ ಕಾಯಿಲೆಯಿಂದ ಬಳಲುತ್ತ ಸಾವು ಬದುಕು ಇವುಗಳ ಮಧ್ಯೆ ತೊಳ ಲಾಡುತ್ತಿದ್ದರು. ಎಲ್ಲೆಡೆಯಲ್ಲಿ ಹಾಹಾಕಾರ ತುಂಬಿದ ಹೃದಯ ವಿದ್ರಾವಕ ದೃಶ್ಯಗಳು ವಾಟ್ಸಾಪ್ ವಿಡಿಯೋ ನಲ್ಲಿ ವೀಕ್ಷಿಸುತ್ತ ಇದ್ದ ರಾಘವಪುರ ನಗರದ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಪ್ರಭಂಜನ  ಅವರ ಮನಸ್ಸು ಕರಗಿತು. ಜನರು ಕುಸಿದು ಬಿದ್ದು ಸಾಯುವವರನ್ನು ನೋಡಿ ಡಾಕ್ಟರ್ ಅವರಿಗೆ ಕಣ್ಣೀರು ಬಂದಿತು. ಅವರೆಲ್ಲರೂ ಕಡು ಬಡವರು. ರೋಗದ ಲಕ್ಷಣ ತಿಳಿದು ಚಿಕಿತ್ಸೆ  ಹೇಗೆ ಮಾಡಬೇಕು ಎನ್ನುವುದು ಡಾಕ್ಟರ್ ಅವರಿಗೆ ತಿಳಿಯಿತು. 

ಡಾ.ಪ್ರಭಂಜನ ಅವರು ಬಡ ಕುಟುಂಬದಿಂದ ಬಂದವರು. ಬಡವರ ಕಷ್ಟ ಕಾರ್ಪಣ್ಯಗಳು, ನೋವು  ನಲಿವು ಅವರಿಗೆ ಚೆನ್ನಾಗಿ ಗೊತ್ತು. ಆವರು ಕಷ್ಟ ಪಟ್ಟು ಓದಿ ಹೃದ್ರೋಗ ತಜ್ಞ ರಾದರು. ಹತ್ತು ವರ್ಷದಲ್ಲಿ ಅವರು ರಾಘವಪುರ ದಲ್ಲಿ ಪ್ರಖ್ಯಾತ ಡಾಕ್ಟರ್ ಆಗಿ ಬೇಕಾದಷ್ಟು ಹಣ ಗಳಿಸಿದರು. ಅವರ ಪತ್ನಿ ಡಾ. ಪುಷ್ಪ ಸ್ತ್ರೀ ರೋಗ ತಜ್ಞೆ. 

 ಚಂದನಹಳ್ಳಿ ಎಲ್ಲಿದೆ?  

ವಾಟ್ಸಪ್ ನಲ್ಲಿ ವಿಡಿಯೋ ಫಾರ್ವರ್ಡ್ ಮಾಡಿದ ರಾಘವಪುರದ ಸುವರ್ಣ ಮೆಡಿಕಲ್ ಸ್ಟೋರ್ ಮಾಲೀಕ ಚಕ್ರಪಾಣಿ ಯವರಿಗೆ ಡಾಕ್ಟರ್ ಕರೆಮಾಡಿದರು. 

"ಹಲೋ, ಚಕ್ರಪಾಣಿ, ನೀವು ಕಳಿಸಿದ ವಿಡಿಯೋ ನೋಡಿದೆ. ಆ ದೃಶ್ಯಗಳು ವೀಕ್ಷಿಸಿದ ಮೇಲೆ ಚಂದನಹಳ್ಳಿ ಎಲ್ಲಿದೆ? ಬೇಗನೆ ತಿಳಿಸಿ."

"ಸರ್, ಚಂದನಹಳ್ಳಿ  ರಾಘವಪುರ ದಿಂದ ಇಪ್ಪತ್ತೈದು  ಕಿಲೋಮೀಟರ್ ದೂರ ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿಯಿಂದ ಹತ್ತು ಕಿಲೋಮೀಟರ್ ಒಳಗಡೆ ಇದೆ. ಆ ಹಳ್ಳಿ ಗೆ ಹೋಗುವದು ತುಂಬಾ ಕಷ್ಟ.  ಒಳಗಡೆ ಇರುವ ರಸ್ತೆ ಪರಿಸ್ಥಿತಿ ಗಂಭೀರ. ಹೆಚ್ಚಿನ ಮಾಹಿತಿಗಾಗಿ ಆ ಗ್ರಾಮದ ಪಂಚಾಯತ್ ಚೇರ್ ಮನ್ ಸದಾನಂದ ಮೂರ್ತಿ ಅವರನ್ನು ಸಂಪರ್ಕಿಸಿ. ಅವರ ವಾಟ್ಸಾಪ್ ನಂಬರ್ ಈಗ ಸಧ್ಯ ಶೇರ್ ಮಾಡುತ್ತೇನೆ."

ಅದರಂತೆ ಪ್ರಭಂಜನ ವಾಟ್ಸಾಪ್ ಮೂಲಕ ಮೂರ್ತಿ ಅವರ ಸಂಪರ್ಕ ಮಾಡಿದರು. ಅವರು ಚಂದನ ಹಳ್ಳಿ ತಲಪುವದಕ್ಕೆ ಮಾರ್ಗವನ್ನು ವಾಟ್ಸಾಪ್ ನಲ್ಲಿ ಗೂಗಲ್ ಮ್ಯಾಪ್ ಕೂಡಾ ಕಳಿಸಿದರು. ಇಷ್ಟೆಲ್ಲಾ ಆಗುವದಕ್ಕೆ ಮಧ್ಯಾಹ್ನ ಎರಡು ಗಂಟೆ. ಸದಾನಂದ ಮೂರ್ತಿ ಕೊಟ್ಟ ಮಾಹಿತಿ ಪ್ರಕಾರ ಆ ಗ್ರಾಮದಲ್ಲಿ ಆಸ್ಪತ್ರೆ ಇಲ್ಲ. ಸಮೀಪದ ಆಸ್ಪತ್ರೆ ಇರುವದು ಆರು ಕಿಲೋಮೀಟರ್ ದೂರ ಗಿಜಗನಗೂಡು ಗ್ರಾಮ. ಚಂದನ ಹಳ್ಳಿ ಯಿಂದ ಗಿಜಗನಜೂಡು ಗ್ರಾಮಕ್ಕೆ ಹೋಗಲು ರಸ್ತೆ ಸರಿಯಾಗಿ ಇಲ್ಲ. ಬಸ್ ಸೌಕರ್ಯ ಇಲ್ಲ.  

ಆಗ  ಡಾಕ್ಟರ್ ಸಾಹೇಬರಿಗೆ ಇಂಗ್ಲಿಷ್ ಗಾದೆ ಮಾತು 'where there is a will there's a way' ನೆನಪು ಬಂದಿತು. ಅಲ್ಲಿಗೆ ಹೋಗುವ ನಿರ್ಧಾರ ಮಾಡಿಯೇ ಬಿಟ್ಟರು. ಅವಸರ ದಲ್ಲಿ ಊಟ ಮಾಡುವಾಗ ಡಾಕ್ಟರ್ ಪತ್ನಿ ಪುಷ್ಪ ಅವರ ಆಗಮನ ವಾಯಿತು. 

"ಪ್ರಭು, ಯಾಕೆ ಊಟಕ್ಕೆ ಅವಸರ? ನಿನ್ನ ಮುಖ ನೋಡಿದರೆ ಏನೋ ಚಿಂತೆಯಲ್ಲಿ ಇರುವ ಹಾಗಿದೆ."

"ಹೌದು ಪುಷ್ಪ, ಈಗ ಮಾನವೀಯತೆಯ ಬಗ್ಗೆ ನನ್ನ ಮನಸ್ಸು ವಿಹ್ವಲವಾಗಿದೆ. ಡಾಕ್ಟರ್ ಆದವರ ಪ್ರಪ್ರಥಮ ಕರ್ತವ್ಯ ಸಾವಿನ ದವಡೆಯಲ್ಲಿ ಇರುವ ರೋಗಿಗಳನ್ನು ಶುಶ್ರೂಷೆ ಮಾಡಿ ಬದುಕಿಸುವದು. ಅವರು ಬಡವರು ಇದ್ದರೆ ಪುಕ್ಕಟೆಯಾಗಿ ಆರೈಕೆ ಮಾಡುವದು."

"ನೀನು ಹೇಳುವದು ಅರ್ಥವಾಗುತ್ತ ಇಲ್ಲ. ಸ್ವಲ್ಪ ವಿವರವಾಗಿ ಹೇಳು." 

ಆಗಿರುವದೆಲ್ಲವನ್ನೂ ವಿವರವಾಗಿ ಹೇಳಿ ಅಲ್ಲಿಗೆ ಹೋಗುವ ನಿರ್ಧಾರ ಮಾಡಿದೆ ಎಂದರು.

ಪ್ರಭಂಜನ ಅವರ ಹಠಾತ್ ನಿರ್ಧಾರ ಪತ್ನಿ ಡಾ. ಪುಷ್ಪಾಗೆ ತುಂಬಾ ಕಳವಳವಾಯಿತು. 

"ಅಸಾಧ್ಯವಾದ ಕೆಲಸ ಮಾಡುವ ತೀರ್ಮಾನ ಮಾಡುವ ಮೊದಲು ಸರಿಯಾಗಿ ವಿಚಾರಿಸು. ಆತುರದ ನಿರ್ಧಾರ ಸರ್ವಥಾ ಬೇಡ. ಇಂತಹ ಕೆಲಸಕ್ಕೆ ಸರಕಾರ, ಸಹಕಾರ ಸಂಘ ಸಂಸ್ಥೆಗಳುಗಳು ಇವೆ. ನಿರ್ಧಾರ ತೆಗೆದು ಕೊಳ್ಳುವದು ನಿನ್ನ ವಿವೇಚನೆಗೆ ಬಿಟ್ಟಿದ್ದು," ಎಂದಳು ಗಂಭೀರವಾಗಿ.

"ಪುಷ್ಪ , ನೀನು ಹೇಳಿದಂತೆ ಅವೆಲ್ಲವೂ ಆಗುವದ ರೊಳಗೆ ಗ್ರಾಮದ ಬಹಳಷ್ಟು ರೋಗಿಗಳು ಇಹಲೋಕ ತ್ಯಜಿ ಸುವರು.ಈಗ ಜನರ ಸೇವೆ ಮಾಡುವ ಒಂದು ಸದವಕಾಶ ಒದಗಿ ಬಂದಿದೆ. ಇಲ್ಲಿಯವರೆಗೆ ಬೇಕಾದಷ್ಟು ಹಣ ಗಳಿಸಿದ್ದೇನೆ. ಈಗ ಗಳಿಸಿದ ಹಣ ಸದುಪಯೋಗ ಮಾಡುವ ಕಾಲ ಒದಗಿ ಬಂದಿದೆ."

ಪತ್ನಿಯನ್ನು ಒಪ್ಪಿಸಲು ಪತಿಗೆ ಹರಸಹಾಸ ಮಾಡ ಬೇಕಾಯಿತು. 

ಆಕೆಗೆ ಜ್ಞಾನೋದಯ ವಾಗಿ "ಪ್ರಭು, ನಿನ್ನ ಆದರ್ಶ ವಿಚಾರಗಳಿಗೆ ನನ್ನ ಸಹಮತಿ ಇದೆ. 

'Wish you all the best'," ಎಂದು ಶುಭ ಹಾರೈಸಿದಳು.

ಅಲ್ಲಿಗೆ ಹೋಗಲು ಬೇಕಾಗುವ ಸಿದ್ಧತೆ ಔಷಧ ಸಾಮಗ್ರಿಗಳು ಹಾಗೂ ಮೆಡಿಕಲ್ ಟೀಮ್ ಮಾಡಿ ಟೆಂಪೋ ಟ್ರಾವೆಲ್ ಮೂಲಕ ಸರಿಯಾಗಿ ರಾತ್ರಿ ಏಳು ಗಂಟೆಗೆ ಚಂದನ ಹಳ್ಳಿ ತಲುಪಿದರು. ಚಂದನ ಹಳ್ಳಿ ಒಳಗಡೆ ರಸ್ತೆಯ ಮೇಲೆ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬೇಸಿಗೆ ಇರುವದರಿಂದ ಅನುಕೂಲವಾಯಿತು. 

ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಗಲೇ ಎಲ್ಲ ವ್ಯವಸ್ಥೆ ಮಾಡಿದ್ದರು. ಆ ದಿವಸ ವಿದ್ಯುಚ್ಛಕ್ತಿ ತೊಂದರೆ ಕೊಡಲಿಲ್ಲ. ಆಗಲೇ ರೋಗಿಗಳ ಪರಿಸ್ಥಿತಿ ಗಂಭೀರ ವಾಗಿತ್ತು. ವಿಶ್ರಾಂತಿ ತೆಗೆದು ಕೊಳ್ಳದೇ ನೂರಾರು ರೋಗಿಗಳ ಶುಶ್ರೂಷೆ ಮಾಡುವದಕ್ಕೆ ಬೆಳಗಿನ ಐದು ಗಂಟೆ ಆಯಿತು. ಒಂದೆರಡು ರೋಗಿಗಳನ್ನು ಹೊರತುಪಡಿಸಿ  ಎಲ್ಲರೂ ಗುಣಮುಖ ರಾದರು. ಡಾ.ಪ್ರಭಂಜನ ಸಮಯೋಚಿತ ನಿರ್ಧಾರ ಹಾಗೂ ವಿಶ್ರಾಂತಿ ತೆಗೆದುಕೊಳ್ಳದೆ ಚಿಕಿತ್ಸೆ ಮುಂದುವರೆಸುವದನ್ನು ಗ್ರಾಮಸ್ಥರು ಒಕ್ಕೊರಲಿನಿಂದ ಹರ್ಷೋದ್ಗಾರ ಮಾಡಿದರು. 

ಮರುದಿನ ಪ್ರಭಂಜನ  ಹಾಗೂ ಅವನ ತಂಡದವರು ವಿಶ್ರಾಂತಿ ತೆಗೆದುಕೊಂಡರು. ಬೆಳಗಿನ ಉಪಹಾರ ಮುಗಿಸಿ 9 ಗಂಟೆಗೆ ರಾಘವಪುರಕ್ಕೆ ವಾಪಸ್ ಹೊರಡಲು ಸಿದ್ದ ರಾದರು. ಅವರು ಹೊರಡುವವರೆಗೆ ಬಹಳಷ್ಟು ರೋಗಿಗಳು ನಿರೋಗಿಗಳಾದರು. ಚಂದನಹಳ್ಳಿ ಗೆ ಹೋಗುವ ನಿರ್ಧಾರವು ಮುಂದಿನ ವೃತ್ತಿ ಜೀವನದ ಮೇಲೆ ಪರಿಣಾಮ ಆಗದಂತೆ ನೋಡಿ ಕೊಳ್ಳುವದಾಗಿ ಪತ್ನಿಗೆ ಆಗಲೇ ವಿವರಿಸಿದ್ದರು. ಜೀವನದಲ್ಲಿ ಬಂದ ಇಂತಹ ಸಮಾಜ ಸೇವೆ ಮಾಡುವ ಸದವಕಾಶ ವನ್ನು ಬಿಡಬಾರದು ಎನ್ನುವ ಛಲ ಪ್ರಭಂಜನ ಅವರಿಗೆ ಯಶಸ್ಸು ತಂದುಕೊಟ್ಟಿತು. 

ಸುತ್ತ ಮುತ್ತಲಿನ ಗ್ರಾಮಸ್ಥರು ಡಾ.ಪ್ರಭಂಜನ ಭೇಟಿ ಆಗಲು ಆಗಮಿಸಿದರು. ಅವರೆಲ್ಲರೂ ಉಪಕಾರ ಮಾಡಿರುವದಕ್ಕೆ ಡಾಕ್ಟರ್ ಸಾಹೇಬರಿಗೆ  ಚಿರಋಣಿ ಎಂದರು. ಸದಾನಂದ ಮೂರ್ತಿಯವರ  ಇನ್ನೊಂದು ಬೇಡಿಕೆ ಕೇಳಿ ಪ್ರಭಂಜನ  ತಬ್ಬಿಬ್ಬಾದ. 

"ಡಾಕ್ಟರ್ ಸಾಹೇಬರೇ, ನೀವು ಇನ್ನೊಂದು ಸಹಾಯ ಮಾಡಬೇಕು. ನಮ್ಮ ಪಂಚಾಯತ್ ಆಫೀಸ್ ಪಕ್ಕದಲ್ಲಿ ಒಂದು ಎಕರೆ ಸರ್ಕಾರದ ಭೂಮಿ ಆಸ್ಪತ್ರೆ ಕಟ್ಟಲು ಯೋಗ್ಯವಾಗಿದೆ. ಈಗಾಗಲೇ ಸರ್ಕಾರಕ್ಕೆ ಪ್ಲಾನ್ ಕಳಿಸಿ ಒಂದು ವರ್ಷ ಆಗಿದೆ. ನೀವು ಪ್ರಯತ್ನ ಮಾಡಿ ಸರಕಾರದ ಮೇಲೆ ಒತ್ತಡ ತಂದರೆ ಕೆಲಸ ಬೇಗನೆ ಆಗ ಬಹುದು," ಎಂದರು ಸದಾನಂದ ಮೂರ್ತಿ.

ಗ್ರಾಮದ ಏಕೈಕ ಶತಾಯುಷಿ ನಾಗರತ್ನಮ್ಮ ಅವರು ಬಂದು ಡಾ. ಪ್ರಭಂಜನಿಗೆ ಶುಭ ಹಾರೈಸಿ ಆಶೀರ್ವಾದ ಮಾಡಿದಳು. 

ಜನರ ಪ್ರೀತಿ, ಸೌಹಾರ್ದತೆ, ಹಾಗೂ ನಿಷ್ಕಲ್ಮಷ ಮನಸ್ಸು ಕಂಡು ಪ್ರಭಂಜನನಿಗೆ ಮಾತು ಬರದೇ ಒಂದು ನಿಮಿಷ ಭಾವುಕನಾಗಿ ಕಣ್ಣಲ್ಲಿ ಆನಂದಭಾಷ್ಪ ಬಂದವು.

"ಗ್ರಾಮಸ್ಥರೇ, ನೀವು ನನ್ನ ಮೇಲೆ ಇಟ್ಟುಕೊಂಡ ಪ್ರೀತಿ, ವಿಶ್ವಾಸಕ್ಕೆ  ಏನು ಹೇಳಲಿ ಶಬ್ದಗಳು ಸಿಗುತ್ತ ಇಲ್ಲ. ಇಲ್ಲಿ ಆಸ್ಪತ್ರೆ ಕಟ್ಟುವ ಯೋಜನೆ, ರಾಷ್ಟ್ರೀಯ ಹೆದ್ದಾರಿ ವರೆಗೆ ಪಕ್ಕಾ ರೋಡ್ ಸರಕಾರದ ಮೇಲೆ ಒತ್ತಡ ಹೇರುವ ಕೆಲಸ ಪ್ರಯತ್ನ ಮಾಡುವೆ. ನಿಮ್ಮ ಪ್ರೀತಿ,ವಾತ್ಸಲ್ಯ ನೀವು ನನಗೆ ಕೊಡುವ ಉಡುಗೊರ ಅಷ್ಟೇ ಸಾಕು," ಎಂದರು ಪ್ರಭಂಜನ.

ಭಾರವಾದ ಮನಸ್ಸಿನಿಂದ ಪ್ರಭಂಜನ ಹಾಗೂ ಅವನ ತಂಡದವರು ಹೊರಟರು. ಬೀಳ್ಕೊಡಲು ಇಡೀ ಗ್ರಾಮ ವಾಸಿಗಳು ಇದ್ದರು. ಅವರು ಚಂದನ ಹಳ್ಳಿ  ಬಿಡುವಾಗ ಬೆಳಗಿನ 9.30.

ಪ್ರಭಂಜನ  ಆಗಾಗ ಚಂದನ ಹಳ್ಳಿಗೆ  ಬರುವದಾಗಿ ಹೇಳಿದ. ಒಂದು ಸಲ ಭಾನುವಾರ ಡಾ.ಪ್ರಭಂಜನ ನಿಗೆ ಚಂದನ ಹಳ್ಳಿಯಿಂದ ರಾತ್ರಿ ತಡವಾಗಿ ಬಿಡುವದರಿಂದ ರಾಘವಪೂರ ಬರಲು ಮಧ್ಯ ರಾತ್ರಿ ಆಯಿತು. ಬಹಳ ಶ್ರಮ ಆಗಿರುವದರಿಂದ ಬೇಗನೆ ನಿದ್ರೆ ಬಂದಿತು. 

ಮೂರು ವರ್ಷಗಳ ನಂತರ ಡಾಕ್ಟರ ಪ್ರಭಂಜನ ಅವರ ಅವಿರತ ಪ್ರಯತ್ನ ಫಲಕಾರಿ ಆಗಿ ಮೂರೂ ಇಚ್ಚೆಗಳು ಸಾಕಾರವಾದವು. ಒಂದು, ಭೀಕರ ರೋಗ ದಿಂದ ಬಳಲುತ್ತಿರುವ ಜನರು ಆರೋಗ್ಯ ವಂತರಾದರು. ಎರಡು, ಚಂದನ ಹಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿವರೆಗೆ ಹಾಗೂ ಗಿಜಗನಗೂಡು ಹಳ್ಳಿಯ ವರೆಗೆ ಪಕ್ಕಾ ಸಿಮೆಂಟ್ ರೋಡ ಆಯಿತು. ಮೂರು, ಭವ್ಯವಾದ ಪ್ರಾಥಮಿಕ ಆರೋಗ್ಯ ಕೇಂದ್ರ ಸಿದ್ಧವಾಯಿತು. ಕೆಲವು ಗ್ರಾಮಸ್ಥರರು  ದ್ವಿ ಚಕ್ರ ವಾಹನ ಮತ್ತು ಬೈಸಿಕಲ್ ಗಳನ್ನು ಖರೀದಿ ಸಿದರು. ಸದಾನಂದ ಮೂರ್ತಿ ಅವರು ವ್ಯಾನ್ ಖರೀದಿಸಿದರು. 

"ಪ್ರಭಂಜನ ಅವರು 'ಮನಸ್ಸಿದ್ದರೆ ಮಾರ್ಗ' ಎನ್ನುವದನ್ನು ಮನದಟ್ಟು ಮಾಡಿಕೊಂಡು ಹಿಡಿದ ಕೆಲಸದಲ್ಲಿ ಯಶಸ್ಸು ಸಾಧಿಸಿದರು," ಎಂದರು ಸದಾನಂದ ಮೂರ್ತಿ. 

ಡಾಕ್ಟರ್ ಅವರ ಅನುಪಸ್ಥಿತಿಯಲ್ಲಿ ಎಲ್ಲರೂ ಅವರನ್ನು ಕೊಂಡಾಡಿದರು. ಸಭೆಯಲ್ಲಿ ನೆರೆದ ಗ್ರಾಮಸ್ಥರು ಜೋರಾಗಿ ಕರತಾಡನ ಮಾಡಿದರು.


Rate this content
Log in

Similar kannada story from Classics