ಕನಸಿನರಮನೆ
ಕನಸಿನರಮನೆ
ರಾಮಪ್ಪ ಮತ್ತು ಮಂಜಮ್ಮರಿಗೆ ಇಬ್ಬರು ಗಂಡು ಮಕ್ಕಳು. ಊರಿನಲ್ಲಿ ಅವರೂ ಶ್ರೀಮಂತರ ಸಾಲಿಗೆ ಸೇರಿದವರೇ ಎನ್ನಬಹುದು. ಹೊಲ, ತೋಟ, ಗದ್ದೆಗಳನ್ನು ಚೆನ್ನಾಗಿ ಮಾಡಿಕೊಂಡಿದ್ದರು. ಆದರೆ ಅದೇಕೋ ಮಕ್ಕಳು ದೊಡ್ಡವರಾದಂತೆ ಹಳ್ಳಿಯ ಜೀವನ ಸಾಕೆನಿಸಿತು ಅವರಿಗೆ. ಸಿಟಿಗೆ ಹೋಗಿ ಅಲ್ಲೇ ಸಿಕ್ಕ ಕೆಲಸ ಮಾಡಿಕೊಂಡು ಅರಮನೆಯಂತಹ ಮನೆಯಲ್ಲಿ ಜೀವನ ಸಾಗಿಸಬೇಕೆಂಬ ಮಹಾದಾಸೆ ಆಯಿತು ಎಲ್ಲರಿಗೂ. ಇದ್ದ ಆಸ್ತಿಪಾಸ್ತಿಯನ್ನೆಲ್ಲ ಮಾರಿದರು. ಆದರೆ ಪುಟ್ಟದಾದ ತೋಟದ ಮನೆಯೊಂದನ್ನು ಹಾಗೆಯೇ ಉಳಿಸಿಕೊಂಡರು. ಕಾರಣ ಅದು ರಾಮಪ್ಪನ ಪ್ರೀತಿಯ ತಾತನಿಂದ ಬಂದ ಬಳುವಳಿ!! ಹಾಗಾಗಿ ಎಲ್ಲರಿಗೂ ಅದರ ಮೇಲೆ ಏನೋ ಒಂದು ವಿಶೇಷವಾದ ಪ್ರೀತಿ ಇದ್ದುದ್ದರಿಂದ ಆ ಮನೆಯನ್ನು ಹಾಗೆಯೇ ಉಳಿಸಿಕೊಂಡರು.
ಪೇಟೆಗೆ ಬಂದ ರಾಮಪ್ಪನ ಕುಟುಂಬ ಒಂದು ದಿನಸಿ ಅಂಗಡಿಯನ್ನು ಹಾಕಿದರು. ಚಿಕ್ಕ ಮಗ ಅದಾಗಲೇ ಇಂಜಿನಿಯರ್ ಆಗಿದ್ದ. ಹಾಗಾಗಿ ಅವನಿಗೆ ಈ ವ್ಯಾಪಾರದ ಮೇಲೆ ಆಸಕ್ತಿಯೂ ಇರಲಿಲ್ಲ, ಸಮಯವೂ ಇರಲಿಲ್ಲ. ಅಂಗಡಿಯನ್ನು ನೋಡಿಕೊಳ್ಳುತ್ತಿದ್ದದ್ದು ರಾಮಪ್ಪ ಮತ್ತು ಅವನ ಹಿರಿಯ ಮಗ ಮಾತ್ರ. ಹೇಗೋ ಜೀವನ ಸಾಗುತ್ತಿತ್ತು. ಜೊತೆಗೆ ಅವರ ಆಸೆಯೂ ಒಂದು ರೀತಿಯಲ್ಲಿ ಕೈಗೂಡಿತ್ತು ಎನ್ನಬಹುದು. ಕಾರಣ ಅವರು ಖರೀದಿಸಿದಂಥ ಮನೆ. ಹಳ್ಳಿಯಲ್ಲಿದ್ದ ಅವರ ಹೆಂಚಿನ ಮನೆಗೂ ಈಗ ತಾವಿರುವ ತಾರಸಿಯ ಮನೆಗೂ ಅಜಗಜಾಂತರ ವ್ಯತ್ಯಾಸವಿತ್ತು! ಇಷ್ಟು ವರ್ಷಗಳು ತಾವು ದಿನಪೂರ್ತಿ ತೋಟ-ಗದ್ದೆಗಳಲ್ಲಿ ಕಷ್ಟಪಟ್ಟಿದ್ದಕ್ಕೂ ಪ್ರತಿಫಲವೆಂಬಂತೆ ತಮ್ಮ "ಕನಸಿರಮನೆ" ಸಿಕ್ಕಿತು ಎಂದು ರಾಮಪ್ಪ ದಂಪತಿ ಬಹಳ ಖುಷಿಪಟ್ಟರು.
ಮಹಲಿನಂತೆ ಇರದಿದ್ದರೂ ಎರಡು ಅಂತಸ್ತಿನ ಚಿಕ್ಕ ಸೈಟ್ ನಲ್ಲಿಯೇ ಕಟ್ಟಿದ ಮನೆ ಅದಾಗಿತ್ತು. ಎದುರುಗಡೆ ಒಂದು ದೊಡ್ಡ ಪಾರ್ಕು. ಎರಡು ಬೀದಿಯಾಚೆ ಅಂಗಡಿ ಮುಂಗಟ್ಟುಗಳು. ಜೊತೆಗೆ ಸದಾ ಗಿಜಿಗುಡುವ ರಸ್ತೆಗಳು. ಕುಟುಂಬದವರೆಲ್ಲರಿಗೂ ಆ ಮನೆಯೇ ಇಷ್ಟವಾಗಿದ್ದರಿಂದ ಅದನ್ನೇ ಕೊಂಡಿದ್ದರು. ಊರಲ್ಲಿ ಯಾವಾಗಲೂ ಪ್ರಶಾಂತವಾಗಿರುತ್ತಿದ್ದ ವಾತಾವರಣವನ್ನೇ ನೋಡಿ ನೋಡಿ ಸಾಕಾಗಿದ್ದ ಅವರಿಗೆಲ್ಲ ಈಗ ಈ ಹೊಸ ಮನೆ ಅತೀವ ಸಂತಸವನ್ನು ನೀಡಿತ್ತು. ಪೇಟೆ ಜೀವನದ ಬಗ್ಗೆ ಆಸೆಪಟ್ಟಿದ್ದ ಕುಟುಂಬಕ್ಕೆ ಅಂತೂ ಖುಷಿಯಾಗಿತ್ತು.
ಈ ಮಧ್ಯೆ ಮೊದಲನೇ ಮಗನ ಮದುವೆಯು ನಗರದ ಪ್ರತಿಷ್ಠಿತ ಮಂಟಪದಲ್ಲಿ ಸಾಂಗವಾಗಿ ನೆರವೇರಿತು. ಸೊಸೆಯು ಸಂತೋಷದಿಂದಲೇ ರಾಮಪ್ಪನ ಮನೆ ಸೇರಿದಳು. ರಾಮಪ್ಪನ ಹೆಂಡತಿ ಮಂಜಮ್ಮನಿಗಂತೂ ಸೊಸೆ ಎಂದರೆ ಏನೋ ಅಕ್ಕರೆ ಮತ್ತು ಪ್ರೀತಿ. ಮೊದಲೇ ಅವಳಿಗೆ ಸ್ವಂತ ಮಗಳಿಲ್ಲ. ಹಾಗಾಗಿ ತನ್ನ ಸೊಸೆಯನ್ನು ಮಗಳಿಗಿಂತ ಹೆಚ್ಚು ಎನ್ನುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ಅವರ ಸೊಸೆ ಇದಕ್ಕೆ ತದ್ವಿರುದ್ಧ. ಏಕಾದರೂ ಈ ಕೂಡು ಕುಟುಂಬಕ್ಕೆ ಬಂದೆನೋ ಎಂಬಂತೆ ದಿನವೂ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಳು. ಅದೆಷ್ಟೇ ಅತ್ತೆ ಮನೆಗೆಲಸಗಳನ್ನು ಮಾಡಿ ಸೊಸೆಯನ್ನು ಮಗಳಂತೆ ನೋಡಿಕೊಳ್ಳುತ್ತಿದ್ದರೂ ದಿನೇ ದಿನೇ ಸೊಸೆಯ ನಡೆವಳಿಕೆ ಬದಲಾಗುತ್ತಲೇ ಹೋಯಿತು.
ಮಾತೆತ್ತಿದರೆ ಜಗಳ, ತಾನಾಯ್ತು ತನ್ನ ಪಾಡಾಯಿತು ಎನ್ನುವಂತೆ ಇರುವುದು, ತವರು ಮನೆಗೆ ಹೋಗಿ ತಿಂಗಳುಗಟ್ಟಲೆ ಅಲ್ಲೇ ಇದ್ದು ಬಿಡುವುದು, ಗಂಡನಿಗೆ ಮತ್ತೊಂದು ಮನೆ ಮಾಡಿ ಎಂದು ಹೇಳುವುದು, ನಿಮ್ಮಮ್ಮನ ಕಾಟ ತಡೆಯುವುದಕ್ಕೆ ಆಗುತ್ತಿಲ್ಲ ಎಂದು ಚಾಡಿ ಚುಚ್ಚುವುದು, ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಮನೆಯ ನೆಮ್ಮದಿಗೆ ಭಂಗ ತರುತ್ತಿದ್ದಳು. ಕಣ್ಣಿಗೆ ಬಟ್ಟೆ ಕಟ್ಟಿದಂತೆ ಆಡುತ್ತಿದ್ದ ಮಗನೂ ಸಹ ಹೆಂಡತಿಯ ಮಾತಿನಂತೆ ಕುಣಿಯುತ್ತಿದ್ದನು. ಒಂದು ದಿನವಂತೂ ಮನೆಯನ್ನು ಪಾಲು ಮಾಡಿ ಇಲ್ಲವೇ ಆಸ್ತಿಯನ್ನು ಹಂಚಿ ಬಿಡಿ ಎಂದು ಜಗಳ ತೆಗೆದುಬಿಟ್ಟನು.
ತಾನು ಬದುಕಿದ್ದಾಗಲೇ ಆಸ್ತಿಯ ಹಂಚಿಕೆಯ ಬಗ್ಗೆ ಮಾತನಾಡಿದ ಮಗನ ಬಗ್ಗೆ ರಾಮಪ್ಪನವರಿಗೆ ಅತೀವ ಬೇಸರವಾಯಿತು. ಮುಂದೆ ತಾವು ಗಳಿಸಿದ ಆಸ್ತಿ ಇಬ್ಬರೂ ಮಕ್ಕಳಿಗೆ ಸಮ ಪ್ರಮಾಣದಲ್ಲಿ ಹಂಚಿಕೆಯಾಗುತ್ತದೆ ಎಂದು ಗೊತ್ತಿದ್ದರೂ, ಹಿರಿಯ ಮಗ ಈ ರೀತಿ ಮಾತಾಡಿದ್ದು ಅವರಿಗೆ ಬೇಸರ ಮಿಶ್ರಿತ ಆಶ್ಚರ್ಯವನ್ನು ಉಂಟು ಮಾಡಿತ್ತು. ದಿನಪೂರ್ತಿ ದುಡಿಯುತ್ತಾ ಪ್ರಕೃತಿಯ ಮಡಿಲಲ್ಲಿ ಕಳೆಯುತ್ತಿದ್ದ ಹಿಂದಿನ ಹಳ್ಳಿಯ ಜೀವನವೇ ನೆಮ್ಮದಿಯಿಂದ ಕೂಡಿತ್ತು. "ದೂರದ ಬೆಟ್ಟ ನುಣ್ಣಗೆ" ಎನ್ನುವ ರೀತಿ ಈ ಪೇಟೆಗೆ ಬಂದು ತಾವು ಸಾಧಿಸಿದ್ದಾದರೂ ಏನು ಎಂದು ಸಂಕಟಪಟ್ಟರು.
'ಕನಸಿನರಮನೆ' ಎಂದು ಈ ಮನೆಗೆ ಬಂದೆವು. ಆದರೆ ಸುಖವನ್ನು ಕಿತ್ತುಕೊಂಡು ಕಳವಳ, ಕಷ್ಟಗಳನ್ನೇ ಕೊಟ್ಟ ಈ ಮನೆಯಲ್ಲಿ ಮತ್ತೆ ತಾವಿರುವುದು ಸರಿಯಲ್ಲ, ಎಂದು ಒಂದು ದಿನ ರಾಮಪ್ಪ ತೀರ್ಮಾನಿಸಿಯೇ ಬಿಟ್ಟರು. ತಾವು ಈ ಮನೆಯನ್ನು ಬಿಟ್ಟು ಮತ್ತೆ ಊರಿಗೆ ವಾಪಸ್ಸು ಆಗುತ್ತೇವೆ ಎಂದು ಹೇಳಿದಾಗ, ಇಬ್ಬರೂ ಮಕ್ಕಳು ಬೇಡ ಎಂದೇನು ಹೇಳಲಿಲ್ಲ. ಸೊಸೆಗಂತೂ ತುಂಬಾ ಖುಷಿಯಾಯಿತು. "ಅಂತೂ ಅತ್ತೆ ಮಾವ ಹೊರ ಹೋಗುತ್ತಿದ್ದಾರೆ, ಇನ್ನು ಈ ಮನೆಯಲ್ಲಿ ತನ್ನದೇ ಅಧಿಪತ್ಯ" ಎಂದು ಒಳಒಳಗೆ ಸಂಭ್ರಮಿಸಿದಳು. ತಾವು ಖರೀದಿಸಿದ ಮನೆ ಮತ್ತು ವ್ಯಾಪಾರಕ್ಕೆ ಎಂದು ಹಾಕಿದ ದಿನಸಿ ಅಂಗಡಿಯನ್ನು ಇಬ್ಬರು ಮಕ್ಕಳಿಗೆ ಬಿಟ್ಟುಕೊಟ್ಟರು. ಇನ್ನೇನಿದ್ದರೂ ತನಗೆ ಮತ್ತು ತನ್ನ ಹೆಂಡತಿಗೆ ಹಳ್ಳಿಯ ತೋಟದ ಮನೆಯೇ ಸರಿ. ಚಿಕ್ಕದಾದರೂ ಪರವಾಗಿಲ್ಲ ಆಶ್ರಯ ಕೊಟ್ಟು, ನಮ್ಮನ್ನು ನೆಮ್ಮದಿಯಿಂದ ಸಲಹುವ ಪುಟ್ಟದಾದ ಗೂಡೆ ನಮಗೆ ಅರಮನೆಯ ಸಮಾನ ಎಂದು ದಂಪತಿಗಳಿಬ್ಬರು ಹಳ್ಳಿಯ ಹಾದಿ ಹಿಡಿದರು!!
