ಕಾಣೆಯಾದ ಟಫಿ
ಕಾಣೆಯಾದ ಟಫಿ
ಮನೆಯ ಅಂಗಳದಲ್ಲಿ ಓಡಾಡಿಕೊಂಡು ಮಹಡಿ ಏರಿ ಇಳಿದು ಮಾಡುತ್ತಾ ಇದ್ದ ಟಫಿ(ನಾಯಿಮರಿ)
ಇದ್ದಕ್ಕಿದ್ದಂತೆ ಮಧ್ಯಾಹ್ನ ಊಟದ ವೇಳೆಯಲ್ಲಿ ಕಾಣಿಸದಿದ್ದಾಗ, ಮನೆಯಲ್ಲಿ ಎಲ್ಲರಿಗೂ ಗಾಬರಿ ಆಯಿತು. ಅದರಲ್ಲೂ ಹತ್ತು ವರ್ಷದ ಪುಟ್ಟ ನಿಗೆ ತನ್ನ ಮುದ್ದು ಟಫಿ ಕಾಣಿಸದೇ ಇದ್ದಾಗ, ತುಂಬಾ ಬೇಸರವಾಗಿ ಕಣ್ಣಿನಲ್ಲಿ ನೀರು ತುಂಬಿ ಕೊಂಡಿತ್ತು. ಅವನು ದಡದಡನೆ ಮಹಡಿಯಿಂದ ಕೆಳಕ್ಕೆ ಬಂದು, ಟಫಿಯನ್ನು ಹುಡುಕಲು ಹೊರಟ. ಅವನ ಜೊತೆ ಅವನ ಸ್ನೇಹಿತರ ದಂಡೇ ಹೊರಟಿತು.
ಈ ಕಡೆ ಪುಟ್ಟ ನ ಅಪ್ಪ ಅಮ್ಮ ಇಬ್ಬರೂ ಮನೆಯ ಸುತ್ತಲೂ ಟಫಿಗಾಗಿ ಹುಡುಕಾಡಿದರು.
ಯಾವಾಗಲೂ ಅದಕ್ಕೆ ಚೈನ್ ಹಾಕಿ ಒಂದು ಕಡೆ ಕಟ್ಟಿಹಾಕಿರು ತ್ತಿದ್ದ ಪುಟ್ಟನ ಅಪ್ಪ, ಅದೇಕೋ ಮರೆತು ಬಿಟ್ಟಿದ್ದರು.
ಬೆಳ್ಳಗೆ ಮುದ್ದಾಗಿದ್ದ ಆರು ತಿಂಗಳ ಲ್ಯಾಬ್ರಡಾರ್ ನನ್ನು ಕಂಡರೆ ಆ ಬೀದಿಯ ಎಲ್ಲಾ ಮಕ್ಕಳಿಗೂ ತುಂಬಾ ಇಷ್ಟ. ಸಾಯಂಕಾಲ ಬಂತೆಂದರೆ ಸಾಕು, ಎಲ್ಲರೂ ಟಫಿಯ ಜೊತೆ ಆಟವಾಡುತ್ತಾ ನಕ್ಕು ನಲಿಯುತ್ತ ಇದ್ದರು.
ಆ ದಿನವಿಡೀ ಹುಡುಕಿದರೂ ಟಫಿ ಪತ್ತೆ ಆಗದಿದ್ದಾಗ ಪುಟ್ಟ ಜೋರಾಗಿ ಅಳುವುದಕ್ಕೆ ಶುರು ಮಾಡಿದ.
ಅವನನ್ನು ಸಮಾಧಾನ ಮಾಡುವ ವೇಳೆಗೆ ಅವನ ಅಪ್ಪ ಅಮ್ಮ ನಿಗೆ ಸಾಕಾಗಿ ಹೋಯಿತು.
ನಿಜ ಎರಡು ತಿಂಗಳ ಟಫಿ ಮನೆಗೆ ತಂದಾಗ ಮೊಲದ ಮರಿಯಂತೆ ಮನೆಯಲ್ಲಿ ಓಡಾಡಿಕೊಂಡು ಎಲ್ಲರೂ ಪ್ರೀತಿ ಗಳಿಸಿತ್ತು. ಅದನ್ನು ಮನೆಯ ಮಗುವಿನಂತೆ ಸಾಕಿದ್ದರು.ಹೀಗಾಗಿ ಈಗ ಅದು ಮನೆ ಬಿಟ್ಟು ಹೋದಾಗ ಎಲ್ಲರಿಗೂ ಒಂದು ರೀತಿಯ ಬೇಸರ .
"ಅಯ್ಯೋ ಮುಂಡೆದು ಎಲ್ಲಿ ಕೂತುಕೊಂಡು ಇದೆಯೋ?" ಅಂತ ಪುಟ್ಟನ ಅಜ್ಜಿಯೂ ಪೇಚಾಡಿಕೊಳ್ಳುತ್ತಾ ಕುಳಿತಿದ್ದರು.
ಇನ್ನೇನು ಈಗ ರಾತ್ರೆ. ಬೆಳಿಗ್ಗೆ ನೋಡಿದರಾಯಿತು ಎಂದುಕೊಳ್ಳುತ್ತಾ ಎಲ್ಲರೂ ಮಲಗಿಕೊಂಡರು.
ಇದ್ದಕ್ಕಿದ್ದಂತೆ ಬಾಗಿಲು ತಟ್ಟಿದ ಶಬ್ದ ವಾದಾಗ, ಪುಟ್ಟ ನ ತಂದೆ ಎದ್ದು ಹೋಗಿ ಬಾಗಿಲು ತೆಗೆದು ನೋಡಿದರೆ ಅವರಿಗೆ ಆಶ್ಚರ್ಯ. ಟಫಿ ಬಾಲ ಆಡಿಸುತ್ತಾ ನಿಂತಿದೆ. ಗೇಟ್ ನ ಹೊರಗೆ ಒಬ್ಬ ನಿಂತಿದ್ದಾನೆ.
"ಇದು ಎಲ್ಲಿ ಸಿಕ್ಕಿತೆನ್ನಿ?" ಅಂತ ಅವನನ್ನು ಕೇಳಿದರು ಪುಟ್ಟ ನ ತಂದೆ.
ಆಗ ಅವನು,
"ಸ್ವಾಮಿ, ಈ ನಾಯಿ ಕೆರೆಯ ಏರಿಯ ಮೇಎ ಒಂದೇ ನಿಂತಿತ್ತು. ನಾನು ಆಗ ಕಡೆ ಹೋದಾಗ ನನ್ನ ಹಿಂದೆ ಹಿಂದೆ ಬರುತ್ತಲೇ ಇತ್ತು. ಕಡೆಗೆ ನಾನು ಈ ರಸ್ತೆಯಲ್ಲಿ ಹೋಗುತ್ತಿದ್ದೆ. ನನ್ನ ಹಿಂದೆ ಬರುತ್ತಿದ್ದ ಇದು, ತಾನೇ ಮುಂದೆ ಮುಂದೆ ಓಡಿತು. ಕಡೆಗೆ ಈ ಮನೆಯ ಹತ್ತಿರ ನಿಂತು, ಗೇಟ್ ಜಗ್ಗಿಸಲು ಶುರು ಮಾಡಿದಾಗ, ನಾನೇ ಗೇಟ್ ತೆಗೆದೆ. ಇದು ನಿಮ್ಮ ಮನೆಯ ನಾಯಿನಾ?"
ಎಂದು ಆ ಅಪರಿಚಿತ ವ್ಯಕ್ತಿ ಕೇಳಿದಾಗ,
"ಹೌದಪ್ಪ ಬೆಳಗ್ಗಿನಿಂದ ಇದಕ್ಕಾಗಿ ಹುಡುಕಾಟ ಮಾಡಿ ಸಾಕಾಗಿ ಹೋಗಿತ್ತು. ಕಡೆಗೆ ಆದರೂ
ಸಿಕ್ಕಿತಲ್ಲಾ ಬಿಡು, '"ಎಂದರು ಪುಟ್ಟನ ಅಪ್ಪ.
"ಸ್ವಾಮಿ ಇತ್ತೀಚೆಗೆ ಇಂತಹ ಬೆಲೆ ಬಾಳುವ ನಾಯಿಯನ್ನು ಕದಿಯುವ ನಾಯಿಗಳ್ಳರು
ಹೆಚ್ಚಾಗುತ್ತಿದ್ದಾರೆ.ನೀವು ಇನ್ನು ಮುಂದೆ ಇದನ್ನು ಜೋಪಾನವಾಗಿ ಕಾಪಾಡಿಕೊಳ್ಳಿ"ಎಂದು ಹೇಳಿದ ಅವನು ಮುಂದೆ ಹೋದ.
ಟಫಿಯ ಬೆನ್ನಿನ ಮೇಲೆ ಮೃದುವಾಗಿ ಏಟು ಕೊಟ್ಟು ಅದನ್ನು ಒಳಗೆ ಕರೆದು ಕೊಂಡು ಹೋಗಿ ಕುತ್ತಿಗೆ ಕೆಂಪು ಬೆಲ್ಟ್ ಹಾಕಿ ಒಂದು ಕಡೆ ಕಟ್ಟಿಹಾಕಿದರು ಪುಟ್ಟ ನ ಅಪ್ಪ.
ಬೆಳಿಗ್ಗೆ ಎದ್ದ ಪುಟ್ಟ, ತನ್ನ ಟಫಿಯನ್ನು ನೋಡಿ ಖುಷಿಯಿಂದ ಕುಣಿದಾಡಿದ.
