ಜೀವನ
ಜೀವನ
ಜೀವನವೆಂಬುದು ಏಳುಬೀಳಿನ ಕಥೆ, ನೋವು-ನಲಿವಿನ ಜೊತೆ, ಸೋಲು-ಗೆಲುವಿನ ಕಂತೆ. ಅನುಭವವೆಂಬ ವಿಶಾಲ ಸಾಗರದುದ್ದಕ್ಕೂ ಈಜುತ್ತಾ, ಸಿಹಿ-ಕಹಿ ನೆನಪುಗಳೊಂದಿಗೆ, ಮಾಡಿದ ತಪ್ಪು ತಿದ್ದಿಕೊಂಡು ಸರಿ ಮಾರ್ಗದಲ್ಲಿ ನಡೆಯುವುದೇ ನಿಜವಾದ ಜೀವನ.
ಈ ಜೀವನ ನಾವು ಅಂದುಕೊಂಡಂತೆ ಖಂಡಿತಾ ಇರುವುದಿಲ್ಲ ! ಆದರೆ ಉತ್ತಮ ಜೀವನ ರೂಪಿಸಿಕೊಳ್ಳುವ ಮುಖ್ಯ ರೂವಾರಿ ನಾವೇ ಆಗಿರುತ್ತೇವೆ ಎಂಬುದು ಸತ್ಯ. ನಮ್ಮ ಸುಂದರ ಜೀವನ ಹಾವು-ಏಣಿಯಂತೆ. ಕೆಲವೊಮ್ಮೆ ಸಿರಿತನ ಹುಡುಕಿ ನಮ್ಮ ಮನೆ ಬಾಗಿಲ ತಟ್ಟಬಹುದು, ನಮ್ಮ ಹಣೆಬರಹ ಬದಲಾದರೆ ಒಂದು ತುತ್ತಿನ ಒಂದು ಹೊತ್ತಿನ ಊಟಕ್ಕೂ ಅಲೆದಾಡಬೇಕಾಗಬಹುದು. ಅದಕ್ಕೆ ತಿಳಿದವರು ಹೇಳುತ್ತಾರೆ ಜೀವನ ಒಂದು ಮಾಯಾಲೋಕದಂತೆ. ಇಲ್ಲಿ ಮೆರೆದವರು ನಾಳೆ ವ್ಯಥೆಪಡುವರು. ಬಡತನದ ಕುಲುಮೆಯಲ್ಲಿ ಬೆಂದವರು ಮುಂದೆ ಸಿರಿವಂತರಾಗಬಹುದು. ಇಲ್ಲಿ ಎಲ್ಲವೂ ಸಾಧ್ಯ.
ನಾವು ಇತರರ ತಾಳ ಮೇಳಕ್ಕೆ ದಾಳವಾಗಿ ಕುಣಿಯಬಾರದು. ಅವರ ಮಾತಿಗೆ ಕುಗ್ಗದೆ, ವ್ಯಂಗ್ಯ ನಡತೆಗೆ ಬಗ್ಗದೆ ಮುಂದೆ ಸಾಗಬೇಕು. ಒಂದು ವೇಳೆ ನಾವು ಅವರ ಮಾತಿಗೆ ವ್ಯಥೆಪಟ್ಟರೆ, ನಮ್ಮಿಂದ ಗೆಲುವು ಅಸಾಧ್ಯ. ನಮ್ಮಿಂದ ಏನೂ ಮಾಡಲು ಆಗದೆಂದು ಕುಳಿತರೆ ಜೀವನಚಕ್ರ ನಿಂತಂತೆ. ಸಹಾಯಕ್ಕೆ ಯಾರೂ ಬರರು, ಅನುಕಂಪವೂ ದಕ್ಕದು. ನಾವು ತೆಗೆದುಕೊಳ್ಳುವ ದುಡುಕು ನಿರ್ಧಾರ ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಡಬಹುದು.
ಮಾನವ ಜನ್ಮ ಸೃಷ್ಟಿಯಲ್ಲಿ ಶ್ರೇಷ್ಠ ಎನ್ನುತ್ತಾರೆ ಬಲ್ಲವರು. ಎಂತೆಂತಾ ಸಾಧಕರು ನಮ್ಮೊಡನೆಯಿದ್ದಾರೆ. ಅವರು ಹೂವಿನ ಹಾದಿಯಲ್ಲಿ ನಡೆದವರಲ್ಲ. ಸುಖದ ಸುಪ್ಪತ್ತಿಗೆಯಲ್ಲಿ ಮೆರೆದವರಲ್ಲ. ಅವರ ಬಾಳಲ್ಲೂ ಇಂತಹ ಮಹಾನ್ ತೊಂದರೆಗಳನ್ನು ಎದುರಿಸಿ ಅದನ್ನು ಮೆಟ್ಟಿನಿಂತು ಸಮಾಜ ಹಾಕಿದ ಸವಾಲುಗಳನ್ನು ಗಟ್ಟಿತನದಿಂದ ಹಿಮ್ಮೆಟ್ಟಿಸಿದ್ದರು. ಸಮಾಜದಲ್ಲಿ ಬೃಹತ್ ಮರದಂತೆ ಬೇರು ಬಿಟ್ಟರು. ಅವರು ಅನುಭವಿಸಿದ ನೋವು ತೊಂದರೆಗಳ ಮುಂದೆ ನಮ್ಮ ಜೀವನದಲ್ಲಿ ಅನುಭವಿಸುವ ನೋವು ಏನೇನೂ ಅಲ್ಲ. ಕಮ್ಮಾರನು ಬಂಗಾರಕ್ಕೆ ಕೊಟ್ಟಂತೆ. ಮಣ್ಣಿಗೆ ಕುಂಬಾರನು ಜೀವ ಕೊಟ್ಟಂತೆ, ನಮ್ಮ ಜೀವನವನ್ನು ಮಿನುಗುವ ದ್ರುವ ನಕ್ಷತ್ರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದೇ ಆಗಿರುತ್ತದೆ.
ಬರುವ ಅವಕಾಶಗಳನ್ನು ಕೈಚೆಲ್ಲದೆ ಸದುಪಯೋಗಪಡಿಸಿಕೊಳ್ಳಬೇಕು. ನಾವು ಯಾರನ್ನು ನೋಯಿಸದೆ ಮನ ನಿಂದಿಸದೆ ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಬೇಕು. ಪರರಿಗೆ ಉಪಕಾರ ಮಾಡದಿದ್ದರೂ ಉಪದ್ರ ಮಾಡಬಾರದು. ಜೀವನ ಎಂಬ ಕಾಲಚಕ್ರದಲ್ಲಿ ನಾವೇ ಎಲ್ಲಾ ವಿಷಯದಲ್ಲಿ ಗೆಲುವನ್ನು ಸಾಧಿಸುತ್ತೇವೆ ಎಂದರೆ ಅದು ನಮ್ಮ ಮೂರ್ಖತನ. ನಾನು ಯಾವುದಕ್ಕೂ ಯೋಗ್ಯನಲ್ಲ ನನ್ನ ಜೀವನ ಇಷ್ಟೇ ಎಂದರೆ ಅವನಷ್ಟು ದಡ್ಡನಿಲ್ಲ. ನಾವು ಸೋತ ರಿದ್ದು ಹಿಂದೆ ಸರಿಯದೆ ಧೈರ್ಯ ಆತ್ಮವಿಶ್ವಾಸ ಕಳೆದುಕೊಳ್ಳದೆ ಏನೇ ಆಗಲಿ ಯಾರೇ ಬರಲಿ ಗೆಲ್ಲುತ್ತೇನೆ ಎಂಬ ಭರವಸೆ ನಮ್ಮೊಳಗೆ ಬೇಕು. ಸಮಾಜದಲ್ಲಿನ ಆದರ್ಶಪುರುಷರು ಜೀವನ ಎಂದರೇನು ಎಂಬ ತಮ್ಮ ಸುವರ್ಣ ತತ್ವಗಳನ್ನು ನಾಡಿನ ಉದ್ದಗಲಕ್ಕೂ ಪಸರಿಸಿದ್ದಾರೆ. ಈ ಸಂದರ್ಭದಲ್ಲಿ ದಾಸರ ಕೀರ್ತನೆಗಳಲ್ಲಿ ಒಂದಾದ ಈಸಬೇಕು ಇದ್ದು ಜೈಸಬೇಕು ಎಂಬ ಭಕ್ತಿಯ ಸಾರ ನಿಜ ಜೀವನದ ಬಗ್ಗೆ ತಿಳಿಸುತ್ತದೆ.
ಹಿರಿಯರ ಪ್ರಕಾರ ಜೀವನ ಕಲಿಸುವ ಪಾಠ ಪ್ರವಚನ ಯಾವ ವಿಶ್ವವಿದ್ಯಾಲಯವೂ ಬೋಧಿಸಲು ಸಾಧ್ಯವಿಲ್ಲ. ಅದು ಸಮಾಜ ನಮಗೆ ಕಲಿಸುವ ಪಾಠ. ಜೀವನದಲ್ಲಿ ನಾವು ಅನುಭವಿಸುವ ಸುಖ-ದುಃಖಗಳು ನಮ್ಮಯ ಪಾಲಿನ ಸುಂದರ ಅನುಭವಗಳು. ಈ ಲೋಕದಲ್ಲಿ ಹುಟ್ಟಿ ಇಲ್ಲೇ ಬೆಳೆದ ನಾವು ಏನಾದರೂ ಸಾಧಿಸಬೇಕು. ನಾನು ಹುಟ್ಟಿದ ಈ ನೆಲಕ್ಕೆ ಏನಾದರೂ ಕೊಡುಗೆ ನೀಡಬೇಕು. ನಮ್ಮ ಜೀವನ ಎಲ್ಲರಿಗೂ ಆದರ್ಶವಾಗಬೇಕು. ಕೊನೆಗಳಿಗೆ ಮಣ್ಣಲ್ಲಿ ಮಣ್ಣಾದ ಮೇಲೆ ನಾಲ್ಕು ಮಂದಿ ನುಡಿಯುವಂತಹ ಪುಣ್ಯ ಕಾಯಕ ಮಾಡಬೇಕು. ತಮ್ಮನ್ನು ಪ್ರೀತಿಸಿ ತಮ್ಮವರನ್ನು ಪ್ರೀತಿಸಿ. ಜೀವನದ ಉದ್ದಕ್ಕೂ ಹೊಸಹೊಸ ಸಜ್ಜನ ಆಲೋಚನೆಗಳ ಬೆಳೆಸಿ. ಕೆಟ್ಟ ಆಲೋಚನೆ, ಸಂಪತ್ತಿನ ಅತಿಯಾದ ಮೋಹ ಅಹಂಕಾರ, ಅಂಧಕಾರವನ್ನು ಮನದಿಂದ ಅಳಿಸಿ. ನಿಮ್ಮೊಳಗಿನ ಸುಂದರ ಅಮೂಲ್ಯ ಪ್ರೀತಿಯ ಮುಖವನ್ನು ಎಲ್ಲರೂ ನೋಡಲಿ. ಬಾಳುವ ದಿನಗಳನ್ನು ನಗು ನಗುತ ಬಾಳುವ. ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡುವ. ಬೇವು-ಬೆಲ್ಲ ಸವಿದಂತೆ ಜೀವನದ ಸಾರ ಎಂದು ತಿಳಿಯುವ......
ಗಿರೀಶ್ ಪಿಎಂ
ಪರೇಕಡವು
ಕಾಸರಗೋಡು
