Prerana Kulkarni

Abstract Children Stories

2  

Prerana Kulkarni

Abstract Children Stories

ಇರೆಸರ್ ಇದೆಯೇ!!!???

ಇರೆಸರ್ ಇದೆಯೇ!!!???

3 mins
82


ಕೆಲವು ತಪ್ಪುಗಳು ಮತ್ತೆಂದೂ ತಿದ್ದಲಾದದ್ದು...ಇನ್ನೂ ಕೆಲವು ಗಂಭೀರ ತಪ್ಪುಗಳಿಂದ ಪಾಠ ಕಲಿಯುವಂಥವುಗಳು. .

ಮತ್ತೂ ಕೆಲವು ಯಾವಾಗಲೂ ನೆನಪು ಉಳಿಯುವಂಥವುಗಳು.


ನಾನಾಗ ನಮ್ಮ ಹಳ್ಳಿಯ ಮೂರನೇ ತರಗತಿಯಲ್ಲಿ ಓದುತ್ತಿದ್ದೆ....ನಮ್ಮ ಶಾಲೆ ಅಂದ್ರೆ ಒಂದು ದೊಡ್ಡ ಹಳೆಯ ಮನೆ.. ರಾತ್ರಿ ನೋಡಿದರೆ ಭೂತದ ಮನೆಯ ಹಾಗೆ ಭೀತಿ ಹುಟ್ಟಿಸುತ್ತಿತ್ತು. ಅಷ್ಟೇ ಅಲ್ಲ,ಅದಕ್ಕೆ ಹತ್ತು ಎತ್ತರದ ಮೆಟ್ಟಿಲುಗಳು ಬೇರೆ. ಸಿಮೆಂಟ್, ಎಲ್ಲಾ ಕಿತ್ತು ಹೋಗಿ ಕೇವಲ ಕರಿಯ ಕಲ್ಲುಗಳೇ ಉಳಿದಿದ್ದವು.


ಒಂದರಿಂದ ಏಳನೇ ತರಗತಿಯವರೆಗಿನ ಎಲ್ಲ ಕ್ಲಾಸ್ ಗಳು ಅಲ್ಲಿಯೇ... ಶಿಕ್ಷಕರು ಕೇವಲ ಮೂವರೇ ಮಾತ್ರ!

ಮಧ್ಯಾನ್ಹ ಮತ್ತು ಸಂಜೆ ಶಾಲೆಯ ಗಂಟೆ ಬಾರಿಸುತ್ತಲೇ ನಾಮುಂದು, ತಾಮುಂದು ಅನ್ನುತ್ತಾ ಬಾಗಿಲಿನ ಕಡೆಗೆ ನುಗ್ಗುತ್ತಿದ್ದ ನಮ್ಮ ಸೈನ್ಯವನ್ನು ಕಂಟ್ರೋಲ್ ಮಾಡಲು ನಮ್ಮ ಅಧ್ಯಾಪಿಕೆಯರು ಹರ ಸಾಹಸ ಪಡುತ್ತಿದ್ದರು. ದಿನವೂ ನಮ್ಮ ಈ ಗದ್ದಲ ರಗಳೆ ಇದ್ದದ್ದೇ.. ನಮ್ಮ ಮುಖ್ಯ ಅದ್ಯಾಪಿಕೆ ತಮ್ಮ ಜೋರಿನ ದ್ವನಿಯಲ್ಲಿ ಮೇಲಿನ ಸೂರು ಹೋಗುವಷ್ಟು ಕಿರಿಚಿದರೂ ಯಾರೂ ಕ್ಯಾರೆ ಅನ್ನುತ್ತಿರಲಿಲ್ಲ.


ಅಂಥ ಒಂದು ಸಂಜೆ ಎಂದಿನಂತೆ ಸಮುದ್ರದ ಅಲೆಯಂತೆ ನುಗ್ಗಿ ಬಂದ ಅಲೆಯೊಳಗೆ ಕುಳ್ಳಿಯಾಗಿದ್ದ ನಾನು ನುಸುಳಿಕೊಂಡಿದ್ದೆ.. ದೊಡ್ಡ ಹುಡುಗಿಯರ ತಳ್ಳಾಟಕ್ಕೆ ನಾನು ತಂತಾನೆ ಹೊರಗೆ ಹೋಗುತ್ತಿದ್ದೆ. ನನ್ನ ಪಕ್ಕದಲ್ಲಿಯೇ ಇನ್ನೊಬ್ಬ ಹುಡುಗಿಯೂ ಇದ್ದಳು. ಅವಳು ನಾಲ್ಕನೇ ತರಗತಿಯವಳು...


ಅವರೆಲ್ಲ ಹಾಗೆ ನನ್ನ ಮುಂದೆ ತಳ್ಳಿದಾಗ  ನಾನು ಅಕಸ್ಮಾತ್ತಾಗಿ ಆ ಹುಡುಗಿಯ ಮೇಲೆ ಬಿದ್ದೆ. ಆದರೆ,ಅವಳು ಮೂರನೇ ಮೆಟ್ಟಿಲಿನಿಂದ ಕೊನೆಯ ಮೆಟ್ಟಿಲಿನವರೆಗೂ ಉರುಳುತ್ತ ಹೋಗಿ ನೆಲದ ಮೇಲೆ ಬಿದ್ದು ಬಿಟ್ಟಳು.


ಅವಳ ತಲೆಗೆ ಮತ್ತೆ ಗದ್ದಕ್ಕೆ ಪೆಟ್ಟು ಬಿದ್ದು ರಕ್ತ ಬರತೊಡಗಿತು.ಅಲ್ಲಿದ್ದ ನಮಗೆಲ್ಲ ಗಾಬರಿಯಾಗತೊಡಗಿತು...

ಅವಳ ಪಕ್ಕದ ಮನೆಯ ಹುಡುಗಿ ಅವಳನ್ನು ಕರೆದುಕೊಂಡು ಹತ್ತಿರವೇ ಇದ್ದ ಅವಳ ಮನೆಗೆ ಹೋದಳು...


ಅಬ್ಬಾ, ಇವಳು ಸ್ಕೂಲ್ ಒಳಗೆ ಬಂದು ನಾನು ಇವಳ ಮೇಲೆ ಬಿದ್ದಿದ್ದಕ್ಕೇ ತನಗೆ ಗಾಯವಾಯಿತು ಅಂತ ಹೇಳುತ್ತಾಳೆ ಟೀಚರ್ ನನ್ನ ಕೋಲಿನಿಂದ ಹೊಡೆಯುತ್ತಾರೆ.ಅಂತೆಲ್ಲ ಕಲ್ಪನೆ ಮಾಡಿಕೊಂಡೇ ಕೈ ಕಾಲುಗಳು ನಡಗುತ್ತಿದ್ದ ನನಗೆ ತಾತ್ಕಾಲಿಕವಾಗಿ ಮನಸ್ಸಿಗೆ ಸಮಾಧಾನವಾಗಿತ್ತು.


ಆದ್ರೆ ಮನೆಗೆ ಹೋದಮೇಲೆ ಅದ್ಯಾಕೋ ನಾನು ತಪ್ಪು ಮಾಡಿದ್ದೀನಿ,ಹಾಗೂ ನನ್ನಿಂದಲೇ ಅವಳಿಗೆ ಹಾಗಾಯಿತು ಅಂತ ಅಪರಾಧಿ ಪ್ರಜ್ಞೆ ಕಾಡತೊಡಗಿತು...ಆದ್ರೆ ಯಾರಿಗೂ ಹೇಳಲು ಆಗದೇ, ಮನಸ್ಸಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದೇ ಒಂಥರಾ ತಳಮಳ... ನಿದ್ದೆ ಕೂಡಾ ಸಮೀಪಕ್ಕೆ ಬರಲು ಸತಾಯಿಸುತ್ತಿತ್ತು... ಆಮೇಲೆ ನಾಳೆ ಸ್ಕೂಲ್ ಗೆ ಹೋಗಿ ನಮ್ಮ ಹೆಡ್ ಮಾಸ್ಟರ್ ಗೆ(ಅವರೇ ನಮ್ಮ ಕ್ಲಾಸ್ ಟೀಚರ್ ಕೂಡಾ ಆಗಿದ್ದರು) ಹೇಳಿ ತಪ್ಪು ಒಪ್ಪಿಕೊಳ್ಳಬೇಕು ಅಂತ ನಿರ್ದಾರಿಸಿದೆ.

ಆಗಲೇ ಸ್ವಲ್ಪ ನೆಮ್ಮದಿ ಎನಿಸಿತು.


ಬೆಳಿಗ್ಗೆ ಏಳಲು ಅದ್ಯಾಕೋ ಒಂಥರ ಸುಸ್ತು ಆಗುತ್ತಿತ್ತು. ನನ್ನನ್ನು ನೋಡಿದ ಅಮ್ಮ ನನ್ನ ಮೈ ಮುಟ್ಟಿ ಜ್ವರ ಇದೆ ನಿನಗೆ ಇವತ್ತು ಸ್ಕೂಲ್ ಗೆ ಹೋಗಬೇಡ ಅಂತ ಹೇಳಿ ,ಹೊಲದಲ್ಲಿ ಕೆಲಸವಿದ್ದುದರಿಂದ ಹೊಲಕ್ಕೆ ಹೋದಳು. ನಂಗೆ ಸ್ಕೂಲ್ ಹೋಗಿ ತಪ್ಪು ಒಪ್ಪಿಕೊಳ್ಳುವದಿತ್ತು. ಹೀಗಾಗಿ ಬ್ಯಾಗ್ ಹಿಡಿದು ಸ್ಕೂಲ್ ಗೆ ಹೋದೆ.


ಸ್ಕೂಲ್ ನಲ್ಲಿ ಕಾಲಿಡುತ್ತಲೇ ಆಗಲೇ ಆ ಹುಡುಗಿಯ ಅಕ್ಕಾ, ಅಮ್ಮ ಬಂದು ಟೀಚರ್ ಹತ್ತಿರ ಜೋರು ಮಾಡುತ್ತಿದ್ದರು. ಕೂಗಾಡುತ್ತಿದ್ದರು. ಅದೇ ವೇಳೆಗೆ ಅಲ್ಲಿಗೆ ಹೋದ ನನ್ನ ನೋಡಿದ ಆ ಹುಡುಗಿ " ಇವಳೇ ಬೇಕಂತೆ ನನ್ನ ಮೆಟ್ಟಿಲಿನಿಂದ ನೂಕಿ ಬಿಟ್ಟಳು"ಅಂತ ಹೇಳಿಯೇ ಬಿಟ್ಟಳು...ನನಗಂತೂ ಅಳುವೆ ಬಂದು ಬಿಟ್ಟಿತು.ಅವರ ಅಕ್ಕ ,ಮತ್ತು ಅಮ್ಮ ನನ್ನ ಹೊಡಿಯಲೇ ಕೈ ಎತ್ತಿದ್ದರು ಆಗಲೇ. ನಾನು ಅಳುತ್ತಲೇ ನಿನ್ನೆ ಏನಾಯಿತು ಅಂತ ಹೇಳಲು ಪ್ರಯತ್ನ ಮಾಡುತ್ತಿದ್ದೆ.ಆದ್ರೆ ನನ್ನ ಅಳುವಿನ ದ್ವನಿಯಲ್ಲಿ ನಾನು ಏನು ಹೇಳುತ್ತಿರುವೆ ಯಾರಿಗೂ ಅರ್ಥ ಆಗುತ್ತಲೇ ಇರಲಿಲ್ಲ.


ಆಗ ನನ್ನ ಹೆಡ್ ಮಾಸ್ಟರ್, ನನ್ನ ಕೈ ಹಿಡಿದಿದ್ದರು. ನಂಗೆ ಜ್ವರವಿದೆ ಅಂತ ಗೊತ್ತಾಗಿ ನನ್ನ ಮೇಲೆ ಕರುಣೆ ಬಂತೋ ಏನೋ ಗೊತ್ತಿಲ್ಲ...ಅಷ್ಟೊತ್ತಿನ ವರೆಗೂ ಸುಮ್ಮನಿದ್ದವರು ಒಮ್ಮೆಲೇ ಸಿಡಿದು ನಿಮ್ಮ ಮಗಳೇ ಸಿಕ್ಕಾಪಟ್ಟೆ ಘಾಟಿ ಇದ್ದಾಳೆ. ನಾ ದಿನ ನೋಡತಾ ಇರುತ್ತಿನಿ, ಅವಳೇ ಎಲ್ಲರನ್ನು ತಳ್ಳುತ್ತಾ ಇರುತ್ತಾಳೆ.ಅವಳೇ ಬಿದ್ದು ನೀವೆಲ್ಲಾ ಬಯ್ಯುತ್ತಿರಿ ಅಂತ ಏನೋ ಒಂದು ಕಥೆ ಕಟ್ಟುತ್ತಿದ್ದಾಳೆ ಅಷ್ಟೇ. ಈ ಹುಡುಗಿ ನನ್ನ ಕ್ಲಾಸ್ ದೇ ನೇ. ಇವಳು ಎಷ್ಟು ಸಮಾಧಾನ ಅಂತ ನಂಗೆ ಗೊತ್ತಿಲ್ಲವಾ!!?? ದಿನ ಇವಳನ್ನೇ ಎಲ್ಲರೂ ಬೀಳಿಸಿಕೊಂಡು ಹೋಗುತ್ತಾ ಇರುತ್ತಾರೆ. ಬಾಯಿ ಮುಚ್ಚಿಕೊಂಡು ಹೋಗತಾ ಇರಿ... ಅಂತ ಗುಡಿಗಿದಾಗ ಅವರೆಲ್ಲ ಜಾಗ ಖಾಲಿ ಮಾಡಿದರು.


ಆಮೇಲೆ ನನ್ನ ಟೀಚರ್ , ನಿನ್ನೆ ಏನಾಯಿತು ಅಂತ ನಂಗೆ ಗೊತ್ತಿದೆ.ಆದ್ರೆ ಅದರಲ್ಲಿ ನಿನ್ನ ತಪ್ಪು ಇಲ್ಲ.ಅವರು ಜೋರಿನ ಜನ.ಆಮೇಲೆ ಎಲ್ಲಾ ತಪ್ಪನ್ನು ನಿನ್ನ ತಲೆಗೆ ಕಟ್ಟುತ್ತಾರೆ.ಅವರ ಮಗಳೇನು ಕಮ್ಮಿ ಇಲ್ಲ. ಆದ್ರೆ ಇನ್ನೊಮ್ಮೆ ಗದ್ದಲದಲ್ಲಿ ಹೀಗೆಲ್ಲಾ ನುಗ್ಗಬೇಡ. ಆಯಿತಾ? ಮತ್ತೆ,ಜ್ವರ ಇಟ್ಟುಕೊಂಡು ಸ್ಕೂಲ್ ಗೆ ಯಾಕೆ ಬಂದೆ? ಮನೆಗೆ ಹೋಗು. ಅಂತ ಕಳುಹಿಸಿಬಿಟ್ಟರು.


ಆಮೇಲೂ ಕೂಡಾ ಅವಳ ಹಣೆಯ ಮೇಲಿನ ಗಾಯದ ಕಲೆ ನೋಡಿದಾಗಲೆಲ್ಲ ನನಗೆ ನನ್ನ ತಪ್ಪು ನೆನಪಿಗೆ ಬರುತ್ತಿತ್ತು...


ಆಮೇಲೆ ನಾನೆಂದೂ ಅಂಥ ಗದ್ದಲದಲ್ಲಿ ಅರ್ಜೆಂಟ್ ಮಾಡಿಕೊಂಡು ಹೋಗಲು ಇಷ್ಟ ಪಡದೆ ಎಲ್ಲರೂ ಹೋದ ಮೇಲೆ ನಿಧಾನವೇ ಮನೆಗೆ ಹೋಗುತ್ತಿದ್ದೆ....ಈಗಲೂ ಕೂಡಾ ಗದ್ದಲವಿದ್ದಾಗ ಅದೇ ನೆನಪಾಗುತ್ತಿರುತ್ತದೆ.


Rate this content
Log in

Similar kannada story from Abstract