ಗೆಳೆಯ ಶ್ಯಾಮಣ್ಣ
ಗೆಳೆಯ ಶ್ಯಾಮಣ್ಣ
ನಮ್ಮ ಮನೆಯ ಬೀದಿಯಲ್ಲಿಯೇ ಇರುವುದು ಈ ಶಾಮಣ್ಣನ ಮನೆ. ನಿವೃತ್ತಿಯಾಗಿ ಐದು ವರ್ಷಗಳಾಗಿವೆ. ನಾವೆಲ್ಲ ವಾಕಿಂಗ್ ಫ್ರೆಂಡ್ಸ್. ದಿನ ಬೆಳಿಗ್ಗೆ ಮತ್ತು ಸಂಜೆ ಒಂದು ರೌಂಡ್ ವಾಕಿಂಗ್ ಮಾಡಿ, ಹತ್ತಿರದಲ್ಲೇ ಇರುವ "ಉಡುಪಿ ಆತಿಥ್ಯದ" ಹೋಟೆಲಿನಲ್ಲಿ ಕಾಫಿ ಕುಡಿದರೆ, ನಮಗೆ ಆ ದಿನ ಪೂರ್ತಿ ತೃಪ್ತಿ ಸಿಕ್ಕಿತು ಎಂದರ್ಥ..! ನಾವು ನಾಲ್ವರು ಸಮವಯಸ್ಕರು. ಎಲ್ಲರೂ ರಿಟೈರ್ಡ್ ಆಗಿದ್ದೇವೆ.
ಒಬ್ಬೊಬ್ಬರು ಒಂದೊಂದು ಕೆಲಸದಲ್ಲಿ ಇದ್ದು ನಿವೃತ್ತಿ ಹೊಂದಿದವರು. ಈಗ ಎಲ್ಲರಿಗೂ ಈ 'ವಾಕಿಂಗ್' ಹುಚ್ಚು ಅಂಟಿಕೊಂಡುಬಿಟ್ಟಿದೆ..! ಬೇಸರವಾದರೂ ವಾಕಿಂಗ್, ಖುಷಿಯಾದರೂ ವಾಕಿಂಗ್, ಮನೆಗೆ ಯಾರಾದರೂ ಅತಿಥಿಗಳು ಬಂದರೆಂದರೂ ವಾಕಿಂಗ್, ಬರಲಿಲ್ಲವೆಂದರೂ ವಾಕಿಂಗ್!! ಹೀಗೆ ವಾಕಿಂಗ್ ದಯೆಯಿಂದ ನಾವು ನಾಲ್ವರು ಆಪ್ತಮಿತ್ರರಾಗಿ ಬಿಟ್ಟಿದ್ದೇವೆ.
ಎಲ್ಲರಿಗೂ ಒಂದೊಂದು ಹವ್ಯಾಸ ಅಚ್ಚುಮೆಚ್ಚು ಎನ್ನಬಹುದು. ರಾಮಣ್ಣನಿಗೆ ದಿನವಿಡೀ ಸಂಗೀತ ಕೇಳುವುದೆಂದರೆ ಇಷ್ಟವಂತೆ. ಮುರಳಿಗೆ ಟೆನಿಸ್ ಆಟ ಬಲು ಪ್ರಿಯ. ಇನ್ನೂ ನನಗೆ ಪುಸ್ತಕಗಳನ್ನು ಓದುವುದು ಅಂದರೆ ಹುಚ್ಚು. ಹಾಗಾಗಿಯೇ ನಮ್ಮ ಮನೆಯಲ್ಲಿ ದೊಡ್ಡ ಗ್ರಂಥಾಲಯವನ್ನು ಮಾಡಿಕೊಂಡು, ಎಲ್ಲಾ ರೀತಿಯ ಪುಸ್ತಕಗಳನ್ನು ಇಟ್ಟುಕೊಂಡಿದ್ದೇನೆ. ಅದರಲ್ಲೂ ಜೀವನಕ್ಕೆ ಹತ್ತಿರವೆನಿಸುವ, ನೀತಿ ಕಥೆಗಳನ್ನು ಹೊಂದಿದಂತಹ, ಪ್ರಸಿದ್ಧ ವ್ಯಕ್ತಿಗಳ ಬಗೆಗಿನ, ವಿಜ್ಞಾನ, ಗಣಿತಕ್ಕೆ ಸಂಬಂಧಪಟ್ಟ, ಭಾರತ ಸ್ವಾತಂತ್ರ್ಯಕ್ಕೆ ಸಂಬಂಧಿತ, ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕಗಳನ್ನು ಓದುವುದು ಎಂದರೆ ನನಗೆ ಅಚ್ಚುಮೆಚ್ಚು.
ಆದರೆ ನಮ್ಮ ಸ್ನೇಹಿತ ಶಾಮಣ್ಣ ಇದ್ದಾನಲ್ಲ, ಅವನು ಒಂಥರಾ ವಿಚಿತ್ರ ವ್ಯಕ್ತಿ. ಯಾವ ಹವ್ಯಾಸವು ಅವನಿಗಿಲ್ಲ. ಯಾವಾಗಲೂ ಮೂಗಿನ ಮೇಲೆಯೇ ಸಿಟ್ಟು! ಬೇರೆಯವರನ್ನು ಆಡಿಕೊಳ್ಳುವುದು ಎಂದರೆ ತುಂಬಾ ಇಷ್ಟದ ಕೆಲಸ ಅವನಿಗೆ. ಹಾಗಾಗಿ ಇತರರನ್ನು ನಿಂದಿಸುವುದೇ ಅವನ ಮುಖ್ಯ ಕಾಯಕ ಎಂದರೂ ತಪ್ಪಿಲ್ಲ..!! ದಿನಪೂರ್ತಿ ಒಬ್ಬರಲ್ಲ ಒಬ್ಬರು ಅವನ ಟೀಕೆಗೆ ಗುರಿಯಾಗುತ್ತಲೇ ಇರುತ್ತಾರೆ. ತಾನೊಬ್ಬನೇ ಸರಿ, ಬೇರೆಯವರೆಲ್ಲ ಹುಳುಕು ಎಂಬುದು ಸಹ ಅವನ ತಲೆಯಲ್ಲಿ ಕುಳಿತುಬಿಟ್ಟಿದೆ..!!
ನಾವು ಎಷ್ಟೋ ಸಲ ಅವನನ್ನು ಎಚ್ಚರಿಸಿದ್ದೇವೆ. "ಬೇಡಪ್ಪ ಶಾಮ, ಅವರವರ ಜೀವನ, ಅವರವರ ಕಷ್ಟ ಅವರಿಗೆ..! ನಿನಗ್ಯಾಕೆ ಬೇಡದ ಉಸಾಬರಿ? ಎರಡು ಬೆರಳು ಬೇರೆಯವರ ಕಡೆ ಕೈಯೆತ್ತಿ ತೋರಿಸಿದಾಗ, ಮೂರು ಬೆರಳು ನಮ್ಮ ಕಡೆ ತೋರಿಸುತ್ತದೆ ಅಂತಾರೆ. ಸುಮ್ಮನೆ ಈ ವಯಸ್ಸಿನಲ್ಲಿ ಆರಾಮಾಗಿ, ಬಯ್ಯದೆ ಚಿಂತೆ ಮಾಡದೆ ಇರಬಾರದೆ...?" ಎನ್ನುತ್ತೇವೆ. ಆದರೂ ಅವನು ಹುಟ್ಟು ಗುಣ ಬಿಡುವುದಿಲ್ಲ. ಮನೆಯಲ್ಲಿರುವ ಹೆಂಡತಿ, ಮಗ, ಸೊಸೆಯಿಂದ ಹಿಡಿದು, ತನ್ನ ಸಾಕು ನಾಯಿಯವರೆಗೂ ಕೋಪದಲ್ಲಿ ಬಯ್ಯುತ್ತಲೇ ಇರುತ್ತಾನೆ..!!
ಒಂದೆರಡು ರೌಂಡ್ ವಾಕಿಂಗ್ ಮಾಡಿ, ಪಾರ್ಕಿನ ಬೆಂಚಿನ ಮೇಲೆ ದಣಿವಾರಿಸಿಕೊಳ್ಳಲು ಕುಳಿತೆವೆಂದರೆ, ಇವನ ವರಾತ ಶುರುವಾಗುತ್ತದೆ. ಅದು ಸರಿಯಿಲ್ಲ, ಇದು ಸರಿಯಿಲ್ಲ, ಅವರು ಹೀಗೆ, ಅವರು ಹಾಗೆ, ಪ್ರಪಂಚ ಹಾಳಾಗಿಬಿಟ್ಟಿದೆ, ಒಳ್ಳೆಯವರಿಗೆ ಇದು ಕಾಲವಲ್ಲ, ಕಲಿಯುಗದಲ್ಲಿ ಎಲ್ಲಾ ಕೆಟ್ಟದ್ದೇ ಆಗುವುದು, ಯಾರನ್ನು ನಂಬಬಾರದು, ಸಾಲ ಕೊಟ್ಟು ಜೀವನ ಹಾಳಾಯಿತು ಹೀಗೆ ಒಂದೇ ಎರಡೇ..? ದಿನ ಬೆಳಗಾದರೆ ಅವನ ಮಾತಿಗೆ ಲಗಾಮು ಹಾಕುವುದು ಕಷ್ಟವಾಗುತ್ತದೆ ನಮಗೆ..!!
ಇತ್ತೀಚಿಗೇಕೋ ಅವನ ಮುಖದಲ್ಲಿರುವ ನಗು ಮಾಯವಾದಂತೆ ಅನಿಸಿದೆ ನಮಗೆ. ನಮಗಿಂತ ವಯಸ್ಸಾದನೇನೋ ಎನ್ನುವ ಹಾಗೆ, ಮುಖದಲ್ಲಿ ಗೆರೆಗಳು ಸ್ಪಷ್ಟವಾಗಿ ಮೂಡಿವೆ. ಇವನ ಬೇಡದ ಕೋಪ, ನಿಂದಿಸುವ ಗುಣ, ಮದ, ಮತ್ಸರ, ಕ್ರೋಧಗಳೆಲ್ಲಾ ಇವನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ನುಂಗಿ ಹಾಕುತ್ತಿವೆ ಎಂದು ನನಗನ್ನಿಸಿತು.
ಏಕೋ "ಚಿಂತೆಯಿಂದ ಚಿತೆಗೆ" ಎಂಬ ಸಾಲು ನನ್ನನ್ನು ಸದಾ ಎಚ್ಚರಿಸುತ್ತಿತ್ತು. ಇನ್ನು ತಡ ಮಾಡುವುದು ಸರಿಯಲ್ಲ ಎಂದೆನಿಸಿ, ಒಂದು ದಿನ ಅವನನ್ನು ನಮ್ಮ ಮನೆಗೆ ಆಹ್ವಾನಿಸಿದೆ. ಖುಷಿಯಿಂದಲೇ ಒಪ್ಪಿಕೊಂಡ ಅವನು ಅಂದು ಸಂಜೆ ನಮ್ಮ ಮನೆಗೆ ಬರುತ್ತಲೇ, ತನ್ನ ಸೂಕ್ಷ್ಮದರ್ಶಕ ಕಣ್ಣುಗಳಿಂದ ಎಲ್ಲರ ತಪ್ಪುಗಳನ್ನು ಕಂಡುಹಿಡಿದು ವ್ಯಂಗ್ಯವಾಡಲು ಶುರುವಿತ್ತ..!!
ಇದಕ್ಕೆ ತಲೆಕೆಡಿಸಿಕೊಳ್ಳದ ನಾನು, ಅವನನ್ನು ನಮ್ಮ ಮನೆಯ ಬಾಲ್ಕನಿಗೆ ಕರೆದುಕೊಂಡು ಹೋದೆ. ನಂತರ "ಏಕೋ ಶಾಮಣ್ಣ, ಇತ್ತೀಚಿಗೆ ಕೃಶವಾದಂತೆ ಕಾಣುತ್ತಿದ್ದೀಯಲ್ಲ? ಏನಾದರೂ ಚಿಂತೆ ನಿನಗೆ ಕಾಡುತ್ತಿದ್ದೀಯಾ? ಹೇಳಬೇಕೆಂದರೆ ನಮ್ಮ ನಾಲ್ಕು ಜನಕ್ಕಿಂತ ನೀನೇ ಸ್ವಲ್ಪ ಚಿಕ್ಕವನು. ಏನೋ ಯೋಚನೆ ನಿನ್ನ ನೆಮ್ಮದಿಯನ್ನು ಹಾಳು ಮಾಡುತ್ತಿದೆ ಅನಿಸುತ್ತೆ" ಎಂದೆ. ಇದಕ್ಕೆ ತಲೆ ಕೆಡಿಸಿಕೊಳ್ಳದ ಶಾಮಣ್ಣ, ಟೀ ಕುಡಿಯಲು ಆರಂಭಿಸಿದ.
ಒಂದೆರಡು ಗುಟುಕು ಕುಡಿಯುತ್ತಲೇ "ಅಯ್ಯಪ್ಪ ಅದ್ಯಾವ ಟೀ ಪುಡಿ ತಂದಿದ್ದೀಯೋ..? ಒಂಚೂರು ರುಚಿ ಇಲ್ಲ. ಒಳ್ಳೆ ಬಿಸಿ ನೀರು ಕುಡಿದಂತೆ ಅನಿಸುತ್ತಾ ಇದೆ..?! ಮನೆಗೆ ಬಂದಿರುವ ಗೆಳೆಯನಿಗೆ ಸರಿಯಾಗಿ ಉಪಚರಿಸಬೇಕೆಂಬ ಜ್ಞಾನ ಇಲ್ಲವಾ ನಿನಗೆ..? ನನಗೆ ಅವಮಾನ ಮಾಡುವುದಕ್ಕೆ ಅಂತಲೇ ಈ ರೀತಿ ಬಿಸಿನೀರಿನ ಟೀ ಮಾಡಿಸಿದ್ದೀಯ ಅನಿಸುತ್ತೆ..!!"ಎಂದು ಮತ್ತೆ ವ್ಯಂಗ್ಯವಾಡಿ, ನನ್ನ ಬಯ್ಯಲು ಶುರುಮಾಡಿದ.
ಇನ್ನು ನನ್ನ ಪ್ರಯತ್ನವನ್ನು ನಾನು ಮಾಡೇಬಿಡೋಣ ಎಂದುಕೊಳ್ಳುತ್ತಾ, "ಶಾಮ, ನಿನ್ನ ಗೆಳೆಯನಾಗಿ, ಹಿತೈಷಿಯಾಗಿ ಹೇಳುತ್ತಿದ್ದೇನೆ ಕೇಳು.... ಇಷ್ಟೊಂದು ಕೋಪ ಒಳ್ಳೆಯದಲ್ಲ ಕಣೋ. ಕೋಪದಿಂದ ಹೊರಬಂದವನಿಗೆ, ಪಾಪಗಳು ಸುತ್ತಿಕೊಳ್ಳುವುದಿಲ್ಲ ಅಂತಾರೆ. ನಮ್ಮ ಮನಸ್ಸು ಪರರನ್ನು ನಿಂದಿಸದಂತೆ ನೋಡಿಕೊಳ್ಳಬೇಕು. ಆಗ ಯಾವ ಮತ್ಸರವು, ಕಾಮ-ಕ್ರೋಧಗಳು ಇರುವುದಿಲ್ಲ. ಸ್ವಚ್ಛವಾದ ಮನಸ್ಸು ನಿರ್ಮಲತೆಯಿಂದ ಕೂಡಿದ್ದು, ಪ್ರತಿನಿತ್ಯವೂ ಸುಖದಿಂದ ಕಂಗೊಳಿಸುತ್ತದೆ ಅನ್ನುತ್ತಾರೆ..!"
ಅದರಂತೆ ನಡೆದರೆ ಈ ಪ್ರಪಂಚವೇ ಎಷ್ಟು ಚೆನ್ನ, ನಾವೆಲ್ಲರೂ ಎಷ್ಟು ಸುಖಿಗಳು ಎಂಬ ಭಾವನೆ ಮೂಡುತ್ತದೆ ಅಲ್ಲವೇ..? ಇಲ್ಲಸಲ್ಲದ ಚಿಂತೆಗಳು, ಒತ್ತಡಗಳು, ಕೋಪ, ಇತರರ ಬಗ್ಗೆ ಹೊಟ್ಟೆಕಿಚ್ಚು, ವ್ಯಂಗ್ಯದ ಮಾತುಗಳು, ನಮಗೆಲ್ಲ ಈ ವಯಸ್ಸಿನಲ್ಲಿ ಏಕೆ ಅಲ್ಲವೇ..? ನೆಮ್ಮದಿಯಿಂದ ಇರುವಷ್ಟು ದಿನ ಎಲ್ಲವೂ ಚೆಂದ, ಎಲ್ಲರೂ ಚೆನ್ನ ಎಂದುಕೊಳ್ಳುತ್ತಾ ಬಾಳುವುದು ಎಷ್ಟು ಜಾಣತನವಲ್ಲವೇ..?!" ಎಂದು ಕೇಳಿದೆ.
ಎಂದೂ ಬೇರೆಯವರ ಮಾತನ್ನು ಪೂರ್ತಿ ಕೇಳಿಸಿಕೊಳ್ಳದ ಶಾಮಣ್ಣ, ಅಂದೇಕೋ ನನ್ನ ಮಾತುಗಳನ್ನು ತದೇಕಚಿತ್ತದಿಂದ ಆಲಿಸಿ, "ಹೌದು ನಿನ್ನ ಮಾತು ಸತ್ಯ. ಒಪ್ಪಿಕೊಳ್ಳುತ್ತೇನೆ" ಎಂದ..!!
ಇಂದಿನಿಂದಾದರೂ ಶಾಮ ಸರಿ ಹೋಗಲಿ, ಎಲ್ಲರೊಂದಿಗೆ ಖುಷಿಯಿಂದ ಬೆರೆತು, ಖುಷಿಯನ್ನು ಹಂಚಲಿ, ನಗುನಗುತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯದಿಂದ ಜೀವನ ಸಾಗಿಸಲಿ ಎಂದು ಮನದುಂಬಿ ಹರಸಿದೆ..!!
