Vaman Acharya

Abstract Romance Others

4  

Vaman Acharya

Abstract Romance Others

ಎರಡು ಹೃದಯಗಳ ಮಿಡಿತ

ಎರಡು ಹೃದಯಗಳ ಮಿಡಿತ

5 mins
304



 ಅಂದು ಭಾನುವಾರ ರಾಘವಪುರ ನಗರದಲ್ಲಿ ಬೆಳಗ್ಗೆ ಆರು ಗಂಟೆಗೆ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತ ವಾಯಿತು. ಮೂವತ್ತೈದು ವರ್ಷ ವಯಸ್ಸಿನ ಸೌಮ್ಯಾ ಹಿಂದಿನ ರಾತ್ರಿ ತಡವಾಗಿ ಕೆಲಸ ಮಾಡುವದರಿಂದ  ಹಾಗೂ ಹೊರಗಿನ ಹವಾಮಾನ ಪ್ರಭಾವದಿಂದ ಬೆಳಗ್ಗೆ ಹತ್ತು ಗಂಟೆಯಾದರೂ ಹಾಸಿಗೆಯಿಂದ ಎದ್ದೇಳಲಿಲ್ಲ. ತಾಯಿ ಅನ್ನಪೂರ್ಣ ಮೇಲಿಂದ ಮೇಲೆ ಎಚ್ಚರಿಕೆ ಗಂಟೆ ಬಾರಿಸಿದ ಮೇಲೆ ಆಕೆ ಎದ್ದಳು.  ತಾಯಿ ತಿಂಡಿ ಮತ್ತು ಮಧ್ಯಾಹ್ನದ ಊಟ ಸಿದ್ಧಮಾಡಿ ಸ್ನೇಹಿತೆ ಮನೋರಮೆ ಯನ್ನು ಭೇಟಿ ಆಗಲು ಬೇರೆ ಊರಿಗೆ ಹೋದಳು.

 ಅಮ್ಮ ಬರುವವರಿಗೆ ಮಗಳು ಸೌಮ್ಯ ಮನೆಯಲ್ಲಿ ಒಬ್ಬಳೇ.  ಕಾಫಿಯ ಸ್ವಾದವನ್ನು  ಹೀರುತ್ತಾ, ಆಕೆಯ ಗಮನವು ಗೋಡೆಯ ಮೇಲೆ ಹಾಕಿದ ತನ್ನ ಮದುವೆಯ ಫೋಟೋಗಳ ಕಡೆಗೆ ಹೋಯಿತು. ಒಂದು ದಶಕದ ಹಿಂದೆ ಆಗಿರುವ ಸಿಹಿ ಕಹಿ ನೆನಪುಗಳು ಆಕೆಯ ಸ್ಮೃತಿ ಪಟಲದಮೇಲೆ ಹಾದು ಹೋದವು. 

ಸೌಮ್ಯಾ ಹಾಗೂ ಸುನೀಲ್ ಶಾನುಭೋಗ್ ರಾಘವಪುರದ ಮಾತೋಶ್ರೀ ರಮಾದೇವಿ ಕಾನೂನು ಕಾಲೇಜಿನ ಮುಂಭಾಗದಲ್ಲಿ ಇರುವ ಕಾರಿಡಾರ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದರು. ಮೊದಲ ವರ್ಷದ ಕಾನೂನು ಕೋರ್ಸ್‌ಗೆ ಪ್ರವೇಶಕ್ಕಾಗಿ ಆಯ್ಕೆ ಸಮಿತಿಯಿಂದ ಸಂದರ್ಶನದ ಕರೆಗಾಗಿ ಅವರು ಕಾಯುತ್ತಿದ್ದರು.  ಎಲ್ಲಾ ಅಭ್ಯರ್ಥಿಗಳ ಸಂದರ್ಶನ ಮುಗಿದು ಸೌಮ್ಯ ಹಾಗೂ ಸುನಿಲ್ ಇಬ್ಬರಿಗೆ ಮಾತ್ರ ಹತ್ತು ನಿಮಿಷ ಕಾಯಲು ಹೇಳಿದರು.  ಈ ಸಮಯದಲ್ಲಿ, ಅವರಿಬ್ಬರು ಪರಸ್ಪರ ಪರಿಚಯ ಮಾಡಿಕೊಂಡರು. ಸಂಭಾವ್ಯ ಪ್ರಶ್ನೆಗಳು ಹಾಗೂ ಅವುಗಳ ಸರಿಯಾದ ಉತ್ತರಗಳು ಎನ್ನುವ ಬಗ್ಗೆ ಮಾತನಾಡಿದರು. ಇದು ಅವರಿಗೆ ಫಲಪ್ರದ ವಾಯಿತು. ಸಂದರ್ಶನ ಕರೆ ಬಂದ ಕೂಡಲೇ ಒಬ್ಬೊಬ್ಬರಾಗಿ ಹತ್ತು ನಿಮಿಷಗಳಲ್ಲಿ ಮುಗಿಸಿದರು. ಹದಿನೈದು ದಿವಸದ ನಂತರ ಬಂದ ಪರಿಣಾಮದಲ್ಲಿ ಇಬ್ಬರೂ ಆ ಕೋರ್ಸ್‌ಗೆ ಆಯ್ಕೆಯಾದರು. 

 ಇಬ್ಬರೂ ಒಂದೇ ತರಗತಿಗೆ ಪ್ರವೇಶ ಪಡೆದು ದಿನಾಲು ಅಕ್ಕಪಕ್ಕದಲ್ಲಿ ಸೀಟ್ ಮೇಲೆ  ಕೂಡುವದರಿಂದ ಇಬ್ಬರ ಸ್ನೇಹ ಅನ್ಯೋನತೆ ಆಗಿ ಅವರು ಒಂದಲ್ಲ ಒಂದು ಕಾರಣಕ್ಕಾಗಿ ಮೇಲಿಂದಮೇಲೆ ಪರಸ್ಪರ ಭೇಟಿಯಾಗುತ್ತಿದ್ದರು.  ಕಾಲೇಜು ಮತ್ತು ಹೊರಗಡೆ ಇಂತಹ ಭೇಟಿ ಸಾಮಾನ್ಯವಾಯಿತು. ಅಂತಿಮ ವರ್ಷದವರೆಗೆ ಗಾಢವಾದ ಸ್ನೇಹ ಪ್ರೀತಿಯಲ್ಲಿ ಮಾರ್ಪಾಟಾಯಿತು. ಕೆಲ ಕಾಲ ಅದನ್ನು ರಹಸ್ಯವಾಗಿ ಇಟ್ಟರು. ಅಂತಿಮ ವರ್ಷದ ಕಾನೂನು ಪರೀಕ್ಷೆ ಮುಗಿದು ಇಬ್ಬರೂ ಕಾನೂನು ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಮುಂದೆ ಅದೇ ಕಾಲೇಜಿನಲ್ಲಿ ಇಬ್ಬರೂ ಸ್ನಾತಕೋತ್ತರ ಪದವಿಯಲ್ಲಿ ಡಿಸ್ಟಿಂಗಶನ್ನಲ್ಲಿ ಪಾಸಾಗಿ ಅಲ್ಲಿಯೇ  ಲೆಕ್ಚರರ್ ಎಂದು ಇಬ್ಬರಿಗೂ      ನೇಮಕ ಮಾಡಿದರು.

ಒಂದು ದಿವಸ ಸೌಮ್ಯಾ ತನ್ನ ತಾಯಿಗೆ ಸುನಿಲ್‌ನನ್ನು ಮದುವೆಯಾಗುವ ಇಚ್ಛೆಯನ್ನು ಬಹಿರಂಗಪಡಿಸಿದಳು. ಅನ್ನಪೂರ್ಣ ಮಗಳಿಗೆ ಒಂದು ವಾರ ಸಮಯ ಕೊಡಲು ಕೇಳಿದಳು. ಅದರಂತೆ ತಾಯಿ, ಸುನೀಲ್ ಬಗ್ಗೆ ವಿವರ ವಾದ ಮಾಹಿತಿ ಸಂಗ್ರಹಿಸಿ ತನಗೆ ಆಗಿರುವ ಕೆಲವು ಸಂಶಯಗಳನ್ನು ಪರಿಹಾರ ಕಂಡುಕೊಂಡ ನಂತರ ಅನ್ನಪೂರ್ಣ ಅವರು ಈ ಸಂಬಂಧವನ್ನು ಅನುಮೋದಿಸಿದರು.

 ಸುನಿಲ್‌ ಅನಾಥ ಇದ್ದು ಅಕ್ಕ ಭಾನುಮತಿ ಅವರ ಪೋಷಣೆ ಯಲ್ಲಿ ಬೆಳೆದು ಕಾನೂನು ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿದ. ಸುನಿಲನಿಗೆ  ಅಕ್ಕ ಭಾನುಮತಿ ಎಂದರೆ ತುಂಬಾ ಗೌರವ. ಭಾನುಮತಿ ಕೂಡಾ ಸೌಮ್ಯಗೆ ಅನೇಕ ಪ್ರಶ್ನೆಗಳನ್ನು ಕೇಳಿ ಸಮರ್ಪಕ ಉತ್ತರ ಸಿಕ್ಕಮೇಲೆ ಶುಭ ಮುಹೂರ್ತದಂದು ಸರಳ ಸಮಾರಂಭದಲ್ಲಿ ಮದುವೆ ಶಾಸ್ತ್ರಮುಗಿಸಿದರು. ಮೂರು ವರ್ಷಗಳ ಕಾಲ ಸುನಿಲ್ ಸೌಮ್ಯ ಅವರ ದಾಂಪತ್ಯ ಜೀವನ ಸುಖಮಯವಾಗಿತ್ತು. ನಾಲ್ಕನೇ ವರ್ಷದ ಆರಂಭದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಉದ್ಭವ ಆದವು.  ಸಮಸ್ಯೆಯನ್ನು ಪರಿಹರಿಸಲು ಅಸಾಧ್ಯವಾಗಿ ದಂಪತಿ ಮಧ್ಯ ಸಂಬಂಧದಲ್ಲಿ ಬಿರುಕು ಬಂದಿತು.  ಸೌಮ್ಯಾ ತನ್ನ ತಾಯಿ ಮನೆಗೆ ಹೋಗುವ ಅನಿವಾರ್ಯತೆ ಬಂದಿತು.

ಆಗಿರುವದಾದರೂ ಏನು?


ಸೌಮ್ಯಾ ಪ್ರತಿಭಾವಂತ ವಿದ್ಯಾರ್ಥಿನಿ ಇದ್ದು  ಕಾನೂನು ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದಿರುವದರಿಂದ ಆಕೆಗೆ ಚಿನ್ನದ ಪದಕ ಸಿಕ್ಕಿತು. ಸುನೀಲ ಕೂಡಾ  ಪ್ರತಿಭಾವಂತ. ಆತನ ಮನೆಯಿಂದ ಐದು  ಕಿಲೋಮೀಟರ್ ದೂರ ಇರುವ ಹನುಮನಹಳ್ಳಿಯಲ್ಲಿ ಭಾನುಮತಿ ಮನೆ. ಮದುವೆ ಆದ ವರ್ಷವೇ ಭಾನುಮತಿ ವಿಧವೆ ಆಗುವ ದೌರ್ಭಾಗ್ಯ.

 ಸುನೀಲ ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಸೌಮ್ಯಗೆ ಮಕ್ಕಳು ಆಗಲಿಲ್ಲ. ಶಾನುಭೋಗ ವಂಶ ಸಮಾಪ್ತಿ ಆಗುವದು ಎನ್ನುವ ಚಿಂತೆ ಭಾನುಮತಿಗೆ ಕಾಡತೊಡಗಿತು.  


ಸೌಮ್ಯ ಬಂಜೆ ಇದ್ದರೇ ಹೇಗೆ?  ಸ್ತ್ರೀ ರೋಗತಜ್ಞರೊಂದಿಗೆ ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ಸೌಮ್ಯಳಿಗೆ ಹೇಳಿದಳು.  ಸುನಿಲ್  ಈ ತಪಾಸಣೆಯನ್ನು ವಿರೋಧಿಸಿದ್ದ.  ಆಗಲೇ ವೈದ್ಯರ ಅಭಿಪ್ರಾಯ ಪಡೆದಿದ್ದರು.  ವೈದ್ಯರ ಪ್ರಕಾರ, ಅವಳು ಗರ್ಭಿಣಿಯಾಗಲು ಸಾಧ್ಯವಿಲ್ಲ.  ಅವನು ತನ್ನ ಹೆಂಡತಿಯೊಂದಿಗೆ ಹೆಚ್ಚು ಸಂತೋಷದಿಂದ ಇದ್ದನು.  ಸುನಿಲ್ ಮತ್ತು ಸೌಮ್ಯ ಈಗಾಗಲೇ ಒಂದು ಗಂಡು ಮಗುವನ್ನು ಅನಾಥಾಶ್ರಮದದಿಂದ  ತರುವ ನಿರ್ಧಾರ ಮಾಡಿದ್ದರು. ಈ ವಿಚಾರವನ್ನು ಭಾನುಮತಿ ಖಡಾಖಂಡಿತವಾಗಿ ವಿರೋಧಿಸಿದಳು.  ಎರಡನೇ ಮದುವೆಯಾಗಲು ತಮ್ಮನಿಗೆ  ಹೇಳಿದಳು.  ಸುನಿಲ್ ಎರಡನೇ ಮದುವೆಯನ್ನು ಕಟುವಾಗಿ ವಿರೋಧಿಸಿದ.

ಒಂದು ದಿವಸ ಭಾನುಮತಿ  ಸೌಮ್ಯಾಗೆ ವಿಚ್ಛೇದನ ನೀಡುವಂತೆ ತಿಳಿಸು ಎಂದು ತಮ್ಮನಿಗೆ ಹೇಳಿದಳು. ಇದನ್ನು ಕೇಳಿದ ಸೌಮ್ಯ ವಿಚ್ಛೇದನಕ್ಕೆ ಸಾಧ್ಯ ಇಲ್ಲ ಎಂದಳು. ಸಹೋದರನಿಗೆ ಬೇಗನೆ ಇದನ್ನು ಇತ್ಯರ್ಥ ಮಾಡುವಂತೆ ಆಗ್ರಹಿಸಿದಳು. ಮನಸ್ಸು ಇಲ್ಲದೇ ಇದ್ದರೂ ಅಕ್ಕನಿಗೆ ಸಮಾಧಾನ ಮಾಡಲು ಸೌಮ್ಯಗೆ ವಿವಾಹ ವಿಚ್ಛೇದನ ಮಾಡಿ ಎರಡನೇ ಮದುವೆ ಆಗಲು ಸುನಿಲ ಒಪ್ಪಿದ. ಇದು ಆಗುವದಿಲ್ಲ ಎಂದು ಗೊತ್ತಿದ್ದರೂ ಹಾಗೆ ಹೇಳಿದ.  ಆಗ ಸುನಿಲ್ ಸಂದಿಗ್ಧ ಸ್ಥಿತಿಯಲ್ಲಿದ್ದ. ಒಂದು ಕಡೆ ಅವನ ಪ್ರೀತಿಯ ಸಹೋದರಿ ಇನ್ನೊಂದು ಕಡೆ ಅವನ ಅತ್ಯಂತ ಪ್ರೀತಿಯ ಹೆಂಡತಿ.  


 ಕೊನೆಗೆ ಮನಸ್ಸು ಮಾಡಿ ಧೈರ್ಯದಿಂದ  ಸೌಮ್ಯಾಗೆ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ. ಸೌಮ್ಯ ಮತ್ತು ಭಾನುಮತಿ ನಡುವೆ ಮಾತಿನ ಚಕಮಕಿ ಆರಂಭವಾಯಿತು.


 “ಭಾನು ಅಕ್ಕ, ಸುನಿಲ್  ನನ್ನನ್ನು ಪ್ರೀತಿಸುವವರೆಗೂ ವಿಚ್ಛೇದನದ ಪ್ರಶ್ನೆಯೇ ಉದ್ಭವಿಸುವುದಿಲ್ಲ, ನಾನು ನಿಮ್ಮ ಆಸೆಗೆ ಸಂಪೂರ್ಣವಾಗಿ ವಿರುದ್ಧವಾಗಿದ್ದೇನೆ. ನಿಮಗೆ ಗೊತ್ತಿರುವಂತೆ ನಾನು  ಕಾನೂನು ತಜ್ಞೆ ಎಂದು ತಿಳಿದಿದೆ.  ದಯಮಾಡಿ ನನ್ನನ್ನು ಹೀಗೆ ಒತ್ತಾಯಿಸ  ಬೇಡಿ,’’ ಎಂದಳು  ಸೌಮ್ಯಾ. 


 ಇದನ್ನು ಕೇಳಿದ ಭಾನುಮತಿ ನಿಜವಾಗಿಯೂ ವಿಚಲಿತನಾದಳು.  ಸುನೀಲನಿಗೆ ಮನದಾಳದಲ್ಲಿ ಸಂತೋಷವಾಯಿತು. ಆದರೆ ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ.


 "ಸೌಮ್ಯಾ, ನೀನು ಯಾರ ಜೊತೆ ಮಾತನಾಡುತ್ತಿದ್ದೀಯ ಗೊತ್ತಾ? ನಾನು ಬಯಸಿದರೆ, ನಿನ್ನನ್ನು ಈಗಲೇ ಈ ಮನೆಯಿಂದ ಹೊರಗೆ ಕಳುಹಿಸುತ್ತೇನೆ,"ಎಂದು ಸುನಿಲ್ ಕೋಪ ಬಂದಹಾಗೆ ನಟಿಸಿದ.


 ಎಂತಹದೇ ಸಂದರ್ಭ ಬಂದರೂ ಎದುರಿಸುವ ಸೌಮ್ಯಗೆ ಧೈರ್ಯವಿತ್ತು.  ಮನೆಯಿಂದ ಹೊರಟು ಭಾರವಾದ ಹೃದಯದಿಂದ ತಾಯಿಯ ಮನೆಗೆ ಬಂದಳು.


 "ಅಮ್ಮಾ, ನನಗೆ ಸದ್ಯ ಕಷ್ಟಗಳು ಎದುರಾಗುತ್ತಿವೆ. ಗರ್ಭಿಣಿ ಆಗದೇ ಇರುವದು ನನ್ನ ತಪ್ಪೇ? ಎಲ್ಲಾ ಸಮಸ್ಯೆಗಳಿಂದ ಹೊರಗೆ ಬರುವ ಧೈರ್ಯ ನನಗೆ ಇದೆ. ನೀನು ಚಿಂತೆ ಮಾಡಬೇಡ," ಎಂದಳು. 


 "ಸೌಮ್ಯ, ನನಗೆ ದೇವರಲ್ಲಿ ಅಪಾರ ನಂಬಿಕೆಯಿದೆ. ಅವನು ಖಂಡಿತವಾಗಿಯೂ ನಿನಗೆ ಮಾರ್ಗದರ್ಶನ ಮಾಡುತ್ತಾನೆ,: ಎಂದು ತಾಯಿ ಹೇಳಿದರು.


"ಅಮ್ಮಾ, ನೀನು ಈ ಮೊದಲು ಹೇಳಿದ್ದು ಸರಿ. ಸುನೀಲ್ ನಿಜವಾಗಿಯೂ ಒಳ್ಳೆಯ ವ್ಯಕ್ತಿ" ಎಂದು ಸೌಮ್ಯ ಹೇಳಿದರು.


 ಆರು ತಿಂಗಳು ಕಳೆದರೂ ಸೌಮ್ಯಾ  ಸುನಿಲ್‌ನನ್ನು ಭೇಟಿಯಾಗಲಿಲ್ಲ.


****


ಹೊರಗಡೆ ಇನ್ನೂ ಮಳೆ ಸುರಿಯುತ್ತಿತ್ತು. ಆಕೆ ಕಾಫಿ ಕುಡಿದ ಕಪ್ ಅಲ್ಲಿಯೇ ಇತ್ತು.  ಇದ್ದಕ್ಕಿದ್ದಂತೆ, ಬಾಗಿಲು ಬಡೆದ ಶಬ್ದ. ಸೌಮ್ಯಾ ತನ್ನ ನೆನಪುಗಳಿಂದ ಹೊರಬಂದು ಬಾಗಿಲು ತೆರೆದಳು.  ಸುನಿಲ್ ಮತ್ತು ಭಾನುಮತಿ ಇಬ್ಬರ ಬಟ್ಟೆ ಸಂಪೂರ್ಣ ಒದ್ದೆಯಾಗಿ ಇಬ್ಬರೂ ನಡುಗುತ್ತ ಹೊರಗೆ ಕಾಯುತ್ತಿರುವುದು ಸೌಮ್ಯಳಿಗೆ ಆಶ್ಚರ್ಯ ಹಾಗೂ ಅವರ ಮೇಲೆ ಕನಿಕರ ಕೂಡಾ ಬಂದಿತು. 


 "ಸೌಮ್ಯಾ ನೀನು ನನ್ನನ್ನು ಕ್ಷಮಿಸು.  ಒಳಗೆ ಬರುವ ಅನುಮತಿ ಕೊಡು. ನನಗೆ ಈಗ ನನ್ನ  ಮೂರ್ಖತನದ ಅರಿವಾಯಿತು, ಎಂದು ಕೈಮುಗಿದು ಕೇಳಿದಳು ಭಾನುಮತಿ.


ಸೌಮ್ಯ ಮೊದಲು ಅವರಿಗೆ ಒಳಗೆ ಕರೆದು ಟವೆಲ್ ಕೊಟ್ಟು ನಂತರ ಬಟ್ಟೆ ಬದಲಾಯಿಸಲು ಹೇಳಿದಳು. 

 "ಭಾನು ದೀದಿ, ನೀವು ಹಿರಿಯರು. ನಾನು ನಿಮ್ಮನ್ನು ತುಂಬಾ ಗೌರವಿಸುತ್ತೇನೆ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಿಮಗೆ ಎಲ್ಲಾ ಹಕ್ಕಿದೆ. ನಿಮಗೆ ವಸ್ತು ಸ್ತಿತಿ ಅರಿವಾಗಿರುವದು ತುಂಬಾ ಸಂತೋಷ,"ಎಂದಳು.


 "ಇದು ನಿನ್ನ ಹಿರಿಮೆ ಸೌಮ್ಯಾ" ಎಂದು ಭಾವುಕರಾಗಿ ನುಡಿದ ಭಾನುಮತಿ, ಸೌಮ್ಯಳನ್ನು ಆಲಿಂಗನ ಮಾಡಿದಳು.

ಸೌಮ್ಯಾ, ಭಾನುಮತಿಗೆ ನಮಸ್ಕಾರ ಮಾಡುವದು ಮರೆಯಲಿಲ್ಲ. ಆಗ ಸಂತೋಷದ ವಾತಾವರಣ ನಿರ್ಮಾಣವಾಯಿತು.


 "ಸೌಮ್ಯಾ ನೀನು ನನ್ನ ಸಂವೇದನಾಶೀಲ ಹೆಂಡತಿ. ನೀನು ನನಗೆ ಸ್ಫೂರ್ತಿ. ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ಸುನೀಲ್ ಅವಳ ಕೈಗಳನ್ನು ಹಿಡಿದನು. ಆಗ ಅವನ ಕಣ್ಣಲ್ಲಿ ಆನಂದಭಾಷ್ಪ ಬಂದಿತು.


"ಸುನಿಲ, ನನಗೆ ಪ್ರಶಂಸೆ ಬೇಡ," ಎಂದಳು ಸೌಮ್ಯ .


ಆಗ ಭಾನುಮತಿ, "ಸೌಮ್ಯ, ಬೇಗ ಒಂದು ಸುಂದರ ಗಂಡು ಮಗುವನ್ನು ಅನಾಥಾಶ್ರಮದದಿಂದ ತೆಗೆದುಕೊಂಡು ಬನ್ನಿ." ಎಂದಳು

ಎಲ್ಲರೂ  ನಗುತ್ತ ಮನೆ ಒಳಗೆ ಪ್ರವೇಶ ಮಾಡಿದರು.


ಸೌಮ್ಯ ಎಲ್ಲರಿಗೂ ಸೋಫಾದ ಮೇಲೆ ಕೂಡಲು ಹೇಳಿ ಕಾಫಿ, ಬಿಸ್ಕತ್ ತಂದು ಕೊಟ್ಟಳು. 

"ನಿಮ್ಮಿಬ್ಬರ ಬಾಳು ಬಂಗಾರವಾಗಲಿ" ಎಂದು ಹರಿಸಿದಳು ಭಾನುಮತಿ.



ಎರಡು ಹೃದಯಗಳ ಮಿಡಿತ ಹಿರಿಯರು ಅರ್ಥ ಮಾಡಿಕೊಳ್ಳದೇ ಇದ್ದರೇ ಪರಿಸ್ಥಿತಿ ಗಂಭೀರವಾಗದೇ ಮತ್ತೇನು ಆಗುವದು?   



Rate this content
Log in

Similar kannada story from Abstract