ದೈವಶಕ್ತಿ
ದೈವಶಕ್ತಿ
ಅಂದು ಆಫೀಸಿನಲ್ಲಿ ಮೇಲಧಿಕಾರಿಗಳಿಂದ ಆದ ಕಿರಿಕಿರಿಯಿಂದ ಸುಸ್ತಾಗಿ, ತಲೆನೋವು ಬಂದಂತೆ ಆಗಿತ್ತು. ಮನೆಗೆ ಹೋಗಿ ಅರ್ಧ ಗಂಟೆ ಮಲಗಿದರೆ ಸಾಕು, ಎಂದು ಆಫೀಸು ಬಿಟ್ಟ ತಕ್ಷಣ ಕಾರನ್ನು ತೆಗೆದುಕೊಂಡು ಜೋರಾಗಿ ಡ್ರೈವ್ ಮಾಡಲು ಶುರುಮಾಡಿದೆ. ಮನದ ಮೂಲೆಯಲ್ಲಿ, ನನ್ನ ಕೆಲಸಕ್ಕೆ ಇಲ್ಲಿ ಬೆಂಬಲವೇ ಸಿಗುತ್ತಿಲ್ಲವಲ್ಲ! ಅಷ್ಟು ಕಷ್ಟಪಟ್ಟು ಹಗಲಿರುಳೆನ್ನದೆ ಮಾಡಿ ಮುಗಿಸಿದ ಪ್ರಾಜೆಕ್ಟ್ ವರ್ಕ್ ಅನ್ನು ಒಪ್ಪಲಿಲ್ಲವಲ್ಲ ಇವರು!! ಇಲ್ಲದ ನೆಪ ಹೇಳಿ, ತಪ್ಪುಗಳನ್ನು ಹುಡುಕಿ ಮತ್ತೆ ಸರಿ ಮಾಡಿಕೊಂಡು ಬರಲು ಹೇಳಿದರಲ್ಲ. ದೇವರಿಗೆ ಎಂದೂ ಪೂಜೆ ಮಾಡದವ, ಇಂದು ಪೂಜಿಸಿಯೂ ಬಂದಿದ್ದೆ. ಏಕೆ ಹೀಗಾಯ್ತು?! ಎಂದುಕೊಳ್ಳುತ್ತಿರುವಾಗಲೇ ರೋಡಿನ ಮಧ್ಯೆ ಸಿಕ್ಕ ಅಜ್ಜಿಯನ್ನು ನೋಡಿ ತಟ್ಟನೆ ಬ್ರೇಕ್ ಒತ್ತಿದೆ! ಆ ಮುದುಕಿ ಬಯ್ಯುತ್ತಲೇ "ನನ್ನ ನೋಡಿ ನೀನು ಬ್ರೇಕ್ ಒತ್ತದಿದ್ದರೆ, ಸೀದಾ ಹೋಗಿ ಕಾರಿನ ಸಮೇತ ಕೆರೆಗೆ ಬೀಳುತ್ತಿದ್ದೆ. ಮೆಲ್ಲಗೆ ಕಾರನ್ನು ಓಡಿಸಲು ನಿನಗೇನು ದಾಢಿ?" ಎಂದು ಕಿರುಚಿದಳು. ದೈವಶಕ್ತಿಯ ಅರಿವು ಆ ಕೂಡಲೇ ನನಗಾಯಿತು!!
