Read a tale of endurance, will & a daring fight against Covid. Click here for "The Stalwarts" by Soni Shalini.
Read a tale of endurance, will & a daring fight against Covid. Click here for "The Stalwarts" by Soni Shalini.

vani shetty

Tragedy

1  

vani shetty

Tragedy

ಬಾಳೊಂದು ಭಾವಗೀತೆ!

ಬಾಳೊಂದು ಭಾವಗೀತೆ!

3 mins
3.1K


ವರ್ಷದ ಮೊದಲನೇ ಮಳೆ ಸುರಿತಿದೆ. ಬೆಂಗಳೂರಿಗೆ ಬಂದ ಮೇಲಿನ ಮೊದಲನೇ ಮಳೆ. ಈ ಮಳೆ ಅಂದ್ರೆ ಅದೇನೋ ಹೇಳಲಾಗದ ಖುಷಿ. ಎಷ್ಟೋ ಸಿಹಿ ಕಹಿ ನೆನಪುಗಳ ಸಾಕ್ಷಿಯಾಗಿ, ಯಾರೂ ಇಲ್ಲದೆ ಪದೇ ಪದೇ ಊರಿನ ನೆನಪಾಗಿ ಕಣ್ಣಂಚು ಒದ್ದೆಯಾದಾಗ ಒಮ್ಮೆಲೇ ಧೋ ಎಂದು ಸುರಿದು ಜೋಗುಳವಾಗಿ, ಮತ್ತೊಮ್ಮೆ ವಯಸ್ಸು ಮರೆತು ಪುಟ್ಟ ಹುಡುಗಿಯಂತೆ ಪೀಜಿಗೆರೆಡು ಸುತ್ತು ಹಾಕಿಸುವ ತುಂಟನಾಗಿ....ಹೀಗೆ....ಮಳೆ ಎಂದರೆ ಅದೇನೋ ಹಿತ!!! ಮತ್ತು ಮಳೆ ಅಂದ್ರೆ ಅದೇನೋ ಶಾಪಗ್ರಸ್ತ ಮೌನ ! ಕಾರಣವಿದೆ..!


ಇವತ್ತಿಗೆ ಸರಿಯಾಗಿ ವರ್ಷದ ಹಿಂದೆ ಮಲೆನಾಡ ಬಿರುಸು ಮಳೆಯಲ್ಲಿ ಅಪ್ಪನ ಮನೆಯ ದಾರಿ ಹಿಡಿದಿದ್ದೆ . ಅಪ್ಪ ಸತ್ತ ನಂತರ ಅವರಿಲ್ಲದ ಮನೆಗೆ ಹೋಗಲಾರದೆ ಇದ್ದುಬಿಟ್ಟಿದ್ದೆ. capmus selection ಆಗಿ ಬೆಂಗಳೂರಿಗೆ ಹೊರಟಾಗ ಒಮ್ಮೆ ಹೋಗಿ ಬರೋಣ ಅನ್ನಿಸಿತ್ತು. ಸುಧೀರ್ಘ ಒಂಭತ್ತು ವರ್ಷಗಳ ನಂತರ ಹೋಗಿದ್ದೆ ಪಪ್ಪನ ಮನೆಗೆ..ಅದೇ ಪರಿಸರ, ಅದೇ ಹಳೆಯ ಕಾಡಿನ ಕಂಪು, ಅದೇ ಜನರು ಸ್ವಲ್ಪ ಬದಲಾವಣೆಯೊಂದಿಗೆ..!

ಇಷ್ಟು ವರ್ಷಗಳ ನಂತರ ಬಂದವಳನ್ನು ಆಶ್ಚರ್ಯದಿಂದ ನೋಡಿ ತಬ್ಬಿ ಅತ್ತಿದ್ದರು ಚಿಕ್ಕಪ್ಪ..ಎಂದೂ ಇಲ್ಲದವಳು ಅವರ ಮುಖದಲ್ಲಿ ಆವತ್ತು ಮಾತ್ರ ಬಿಡದೇ ಹುಡುಕಿದ್ದು ಪಪ್ಪನ ಛಾಯೆಗಾ..? ಗೊತ್ತಿಲ್ಲ..!


ಎದುರಿಗಿದ್ದ ಮಾವಿನ ಮರ ನೋಡಿದಾಗ ಅದೇನೋ ಅಸ್ಪಷ್ಟ ನೆನಪು.. ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳ ಜೊತೆ ಮರಕೋತಿ ಆಡಿದ್ದು,ಜೋಕಾಲಿ ಕಟ್ಟಿ ನನ್ನನ್ನು ಅಕ್ಕ ತೂಗಿದ್ದು.ಪಕ್ಕದ ದೇವಸ್ಥಾನದಲ್ಲಿ ನಾವು ಮನೆ ಆಟ ಆಡಿದ್ದು…

ಈಗ ನೋಡಿದರೆ ಸಾಲು ನೆಲ್ಲಿ ಮರದ ಕೆಳಗೆಲ್ಲ ಕಪ್ಪು ತಾರು..ಕಾಡಿನ ಮಧ್ಯದ ನಾಗರ ಬನದ ಸುತ್ತ ಸಿಮೆಂಟಿನ ಕಟ್ಟೆ …ನಮ್ಮೊಂದಿಗೆ ಎಲ್ಲವು ಬದಲಾದವೇ ??ಎಲ್ಲಿ ಹೋಯ್ತು ಆ ಗದ್ದೆಯ ಮದ್ಯದ ತೊಂಡೆ ಚಪ್ಪರ.. ಬಾಳೆ ತೋಟದ ಬದಿಯಲ್ಲಿದ್ದ ಏತ...ಮನೆ ಹಿಂದಿದ್ದ ದೊಡ್ಡ ಹುಲ್ಲಿನ ಮಾಡು... ಸೀಗೆ ಮರದ ಕೆಳಗಿದ್ದ ಹುಲ್ಲಿನ ಮನೆ….!?????


ಮಧ್ಯಾನ್ಹ ಅಲ್ಲೇ ಸ್ವಲ್ಪ ದೂರದಲ್ಲಿದ್ದ ಪಪ್ಪ ಕಟ್ಟಿಸಿದ್ದ ಮನೆಗೆ ಒಬ್ಬಳೇ ಅಳುಕುತ್ತಲೇ ಹೋಗಿದ್ದೆ..ಯಾರಿದ್ದರು ಅಲ್ಲಿ??..ಪಪ್ಪನ ನೆನಪುಗಳನ್ನು ಬಿಟ್ಟು...:!! ಗಡಿಬಿಡಿಯಲ್ಲಿ ನೆಡೆದು ಮನೆಯ ಹೊಸ್ತಿಲಿಗೆ ಹೆಬ್ಬೆರಳು ಎಡವಿದಾಗ ಏನೋ ಎನಿಸಿ ಹಿಂತಿರುಗಿ ನೋಡಿದೆನಾ??? ಅಂಗಳಕ್ಕೆ ಬಂದ ಕಾಗೆ ಎಷ್ಟು ಓಡಿಸಿದರು ಹೋಗದಿದ್ದಾಗ ,ತೆಂಗಿನ ಹಸಿ ಗರಿ ಜೋರಾಗಿ ಶಬ್ದ ಮಾಡುತ್ತ ಬಿದ್ದಾಗ ಎಂದೂ ಇಲ್ಲದವಳು ಆ ಕ್ಷಣಕ್ಕೆ ಆತ್ಮವನ್ನು ನಂಬಿ ಬಿಟ್ಟೆನಾ?? ಅಲ್ಲಿರುವವರೇ ಒಬ್ಬರೇ ಹೋಗಲು ಹೆದರುವ ಕೆರೆಕೊಡ್ಲದ ದಾರಿ ಹಿಡಿದು ಮುಕ್ಕಾಲು ದೂರ ಹೋಗಿ ಬಂದಿದ್ದು ಚಿಕ್ಕವಳಿದ್ದಾಗ ಪಪ್ಪನ ಹೆಗಲೇರಿ ನಡೆದ ದಾರಿಯನ್ನು ನೆನಪಿಸಲಿಕ್ಕಾ....!??


ಪುನಃ ಒಳಗೆ ಹೋಗಿ ಹಳೆಯ ಟ್ರಂಕಿನ ಪೆಟ್ಟಿಗೆ ತೆಗೆದಾಗ ಅದೇನೋ ತಳಮಳ.. ನಾ 10 ವರ್ಷದವಳಿದ್ದಾಗ ಅಮ್ಮ ನನ್ನಿಂದ ಅವರಿಗೆ ಬರೆಸಿದ ಕಾಗದ! ಆಗ ಅವರು ಬೆಳಗಾವಿಯಲ್ಲಿ ಇರುತಿದ್ದರು.. ಅಸ್ಪಷ್ಟ ಅಕ್ಷರವನ್ನು ಮುಂದೆ ನೋಡಲಾಗದಂತೆ ಕಣ್ಣೇರು ಕೆನ್ನೆಯನ್ನು ತೋಯಿಸಿತ್ತು. ಅದರ ಜೊತೆಗಿದ್ದ ಪಪ್ಪನ ಹಳೆ ಫೋಟೋವನ್ನು ಪಪ್ಪನೆ ಸಿಕ್ಕಿದರೆನೋ ಎಂಬಂತೆ ತಬ್ಬಿ ಹಿಡಿದಿದ್ದೆ..ಸ್ವಲ್ಪ ಹೊತ್ತು ಹಾಗೆ ಇದ್ದಿದ್ದರೆ ಹುಚ್ಚು ಹಿಡಿದಿರುತಿತ್ತೇನೋ...ಹೊರಗಡೆ ಚಿಕ್ಕಮ್ಮ ಬರದಿದ್ದಿದ್ದರೆ!


ಚಿಕ್ಕಮ್ಮ!ಪಪ್ಪನ ಹೆಂಡತಿ!ಊಹ್ಞೂ... ನನ್ನ 2 ನೆ ಅಮ್ಮ??! ಅದೂ ಅಲ್ಲ..ಬೇಡ ಹೆಸರೇ ಬೇಡ ನಮ್ಮ ಸಂಬಂಧಕ್ಕೆ!. ಎದೆಯುದ್ದ ಬೆಳೆದ ಮಗಳು ಇರಬೇಕಾದರೆ ಇವನಿಗೇಕೆ ಇನ್ನೊಂದು ಮದುವೆ ಅಂತ ಎಲ್ಲರು ಆಡಿಕೊಂಡಿದ್ದರು ಇದೇ ಕಾರಣಕ್ಕೆಆಲ್ವಾ ನಮ್ಮ ಮನೆಯಲ್ಲಿ ಪಪ್ಪನನ್ನು ಶಾಶ್ವತವಾಗಿ ಹೊರಗಿರಿಸಿದ್ದು... ಬೆಳೆಯುವ ವಯಸ್ಸಲ್ಲಿ ಅವರ ಸಾಮಿಪ್ಯದಿಂದ ದೂರವಿರಿಸಿದ್ದು...!.. ಮಕ್ಕಳಾಗದ ಹಾಗೆ operation ಮಾಡಿಸಿಕೊಂಡ ಮೇಲೆ ಇನ್ಯಾವ ಸಾಧನೆಗೆ ಮದುವೆ ಆಗ್ತಿದಾನೆ ಅಂತ ಎಲ್ಲರು ಹೇಳಿದ್ದರು. ಆದರೆ ನಮಗೆ ಗೊತ್ತಿರಲಿಲ್ಲ... ಗೊತ್ತೇ ಇರಲಿಲ್ಲ, ಯಾರೂ ಇರದ ಅನಾಥ ಹೆಂಗಸಿಗೆ ಹೆಸರೇ ಇಲ್ಲದ ಸಂಬಂಧ ಕೊಡಲಾಗದು ಅಂತ..Now wheel had come full circle. ಈಗ ನನ್ನ ಮತ್ತು ಅವರ ನಡುವೆ ಇರೋದು ಕೂಡಾ ಅದೇ ಹೆಸರಿಲ್ಲದ ಸಂಬಂಧ!


ಎಲ್ಲೊ ಗದ್ದೆ ಕಡೆ ಇದ್ದವರು ನಾ ಬಂದ ಸುದ್ದಿ ತಿಳಿದು ಓಡಿ ಬಂದಿದ್ದರು.ಯಾವುದೇ ಭಾವ ವಿಲ್ಲದೆ ಬ್ಲಾಂಕ್ ಆಗಿ ನಾ ಅವರ ಮುಖ ನೋಡಿದ್ದೆ.ಏನಿತ್ತು ಅಲ್ಲಿ..?ಕಿಂಚಿತ್ ಮಮಕಾರವೋ…ಅನಾಥ ಪ್ರಜ್ಞೆಯೋ ಅಥವಾ ನಿಸ್ಸಾಹಯಕತೆಯೋ... ಪಪ್ಪನ ಹೆಂಡತಿ ಅನ್ನೋದನ್ನು ಬಿಟ್ಟು ಬೇರೇನೂ ವಿಶೇಷತೆ ಕಾಣಿಸಲಿಲ್ಲ ನನಗೆ.. ಏನೋ ಕೇಳ ಹೋಗಿ ಸುಮ್ಮನಾದರು..ಅಥವಾ ನನಗೆ ಹಾಗೆ ಅನ್ನಿಸಿತ್ತೋ ಏನೋ…ಏನು ಮಾತಾಡಲಿ ಅಂತ ಇಬ್ಬರಿಗೂ ತಿಳಿಯಲಿಲ್ಲ !


ನಾ ಬಾಲ್ಯದಲ್ಲಿ ನನ್ನ ಸುತ್ತ ಬೆಸೆದುಕೊಂಡಿದ್ದ ಆ ಅರೆಕಲ್ಲು ,ದೊಡ್ಡ ಕೆರೆ,ಹಾಳು ಬಾವಿ,ಬನ್ನೇರಳೆ ಮರ,ಎಲ್ಲವೂ ಹಾಗೆ ಇತ್ತು ..ಬದಲಾಗಿದ್ದು ಅದರ ಗಾತ್ರ ಅಷ್ಟೇ .. ಚಿಗುರು ಹುಣಿಸೆಕಾಯಿಗಾಗಿ ಕಿತ್ತಾಡುತಿದ್ದುದು ನೆನಪಾಗಿತ್ತು.. ಮಳೆಗಾಲದಲ್ಲಿ ತೋಡು ದಾಟಲಾಗದೆ ಈಚೆ ಕಡೆ ನಿಂತುಕೊಂಡು ಆ ಕಡೆಯ ಗದ್ದೆಯಲ್ಲಿ ಗಂಡುಮಕ್ಕಳು ಆಟ ಆಡುವುದನ್ನು ನೋಡಿ ಅಸಹಾಯಕತೆಯಿಂದ ಕಣ್ಣೀರು ಬಂದಿರುತಿತ್ತು. ಈಗ ಇದಕ್ಕೂ ಚಿಕ್ಕ ಸೇತುವೆ ಬಂದುಬಿಟ್ಟಿದೆ... ನೆನಪಿಸಿಕೊಳ್ಳಲು ಏನೇನಿತ್ತು, ಏನೇನಿಲ್ಲ ಅಲ್ಲಿ...!!! "ನಾ ಬೆಂಗಳೂರಿಗೆ ಹೋಗ್ತಿದೀನಿ" ಅಂದಾಗ 'ಹೋಗ್ತಿನಿ ಅನ್ನಬಾರದು ,ಹೋಗಿ ಬರ್ತೀನಿ ಅನ್ನಬೇಕು' ಅಂದ ಚಿಕ್ಕಮ್ಮನಲ್ಲಿದ್ದದ್ದು ನಿರ್ಲಿಪ್ತತೆ ಮಾತ್ರ! ಬೆನ್ನು ಹಾಕಿ ನಡೆದವಳ ಮುಂದೆ ಬಂದು ನಿಂತು ನನ್ನ ಅಂಗೈ ಅರಳಿಸಿ ಅವರಿಟ್ಟ 50 ರೂಪಾಯಿ ಯಲ್ಲಿ ಪ್ರೀತಿ ಇರಲಿಲ್ಲ, ಅನುಕಂಪ ಇರಲಿಲ್ಲ, ಆದರೂ ಅಲ್ಲಿ ಒಂಚೂರು ಕೇರ್ ಇತ್ತಾ.?.ಅದೇ ಹೆಸರಿಲ್ಲದ ಸಂಬಂಧದ ಆ ನೋಟು ಇವತ್ತಿಗೂ ಹಾಗೆ ಉಳಿದಿದೆ ನನ್ನಲ್ಲಿ...!!!!


ಹೊರಡಲು ಸ್ವಲ್ಪ ಮೊದಲು ಕೊನೆಯ ಬಾರಿಗೆಂಬಂತೆ ಆ ರೂಮನ್ನೇ ನೊಡಿದ್ದೆ.ಈ ಧೀರ್ಘ ಒಂಭತ್ತು ವರ್ಷಗಳಲ್ಲಿ ಏಷ್ಟೊಂದು ಕುರುಹುಗಳು ಅಳಿದಿದೆಯೋ ಯಾರಿಗ್ಗೊತ್ತು? ಇಷ್ಟಕ್ಕೂ ಪಪ್ಪನ ಹರಿದ ಅಂಗಿಯನ್ನೋ,ಮುರಿದ ಬೆಲ್ಟ್ ನ್ನೋ ಇಟ್ಟುಕೊಳ್ಳಲು ಚಿಕ್ಕಮ್ಮನೇನು ನನ್ನ ಹಾಗೆ ಮೂರ್ಖರಾ? ವಾಸ್ತವಕ್ಕೆ ಬದುಕಿ , ಬದಲಾವಣೆ ಯೊಂದೇ ಶಾಶ್ವತ ಅನ್ನೋ ಸತ್ಯ ಅವರಿಗೆ ಯಾವತ್ತೋ ಮನವರಿಕೆ ಆಗಿರಬೇಕು.. ಮತ್ತೆ ಅದೇ ಸಾಲು ನೆಲ್ಲಿ ಮರದ ನೆರಳಲ್ಲಿ ವಾಪಸ್ಸಾಗುವಾಗ ಮೊಬೈಲಿನ ಮ್ಯೂಸಿಕ್ playerನ ಭಾವಗೀತೆ ತೊದಲುತಿತ್ತು...


"ಹೋದವರೆಲ್ಲಾ ಎತ್ತ ಹೋದರೋ 

ಹೋಗುವ ಮುನ್ನ ಅದೆಷ್ಟು ಕಾದರೋ !"


Rate this content
Log in

More kannada story from vani shetty

Similar kannada story from Tragedy